Wednesday 27 February 2019

ಅರಿವಿನ ಪಥದ ಅನ್ವೇಷಕಿಯರು

ಕಣ ಭೌತ ವಿಜ್ಞಾನಿ ರೋಹಿಣಿ

ಅರಿವಿನ ಪಥದ ಅನ್ವೇಷಕಿಯರು

An article published in Vijayavani
ನಮ್ಮ ದೇಶದ ಸಾಕಷ್ಟು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಫೆ. 28 ರಾಷ್ಟ್ರೀಯ ವಿಜ್ಞಾನ ದಿನ. ಇದರ ಅಂಗವಾಗಿ ಇಬ್ಬರು ಮಹಿಳಾ ವಿಜ್ಞಾನಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ. ಒಬ್ಬರು ಅಪ್ಪಟ ಕನ್ನಡತಿಯಾದರೆ, ಇನ್ನೊಬ್ಬರು ಕಳೆದ 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆ ನಿಂತವರು. ಇಬ್ಬರ ಸಾಧನೆಯೂ ಅನನ್ಯ. ಇಬ್ಬರ ಸೇವೆಯೂ ದೇಶಕ್ಕೆ ಮುಡಿಪು.
| ವೈ.ಸಿ. ಕಮಲಾ

2019ರ ಪದ್ಮಶ್ರೀ ಪುರಸ್ಕೃತ ಮಹಿಳಾ ವಿಜ್ಞಾನಿ ಪ್ರೊಫೆಸರ್ ರೋಹಿಣಿ ಗೋಡಬೋಲೆ. ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ‘ಕಬ್ಬಿಣದ ಕಡಲೆ’ ಎಂದೇ ಪರಿಗಣಿಸುವ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ಪರಿಣತಿ ಪಡೆದು ಸಾಧನೆ ಮಾಡಿದವರು. ಕಳೆದ 25 ವರ್ಷಗಳಿಂದ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸೆಂಟರ್ ಫಾರ್ ಹೈ ಎನರ್ಜಿ ಫಿಸಿಕ್ಸ್ ಅಂದರೆ ತಾತ್ವಿಕವಾಗಿ ಕಣ ಭೌತವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತ ವಿಶ್ವಾದ್ಯಂತ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮೂಲತಃ ಪುಣೆಯವರಾದ ರೋಹಿಣಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯವರು. ಬಾಲ್ಯದಿಂದಲೂ ಗಣಿತ, ವಿಜ್ಞಾನದೆಡೆಗೆ ಆಸಕ್ತಿ. ತಮ್ಮ ಅಧ್ಯಾಪಕಿ ಆಗಿದ್ದ ಸೋಹನಿ ಅವರನ್ನು ವಿಶೇಷವಾಗಿ ನೆನೆಯುತ್ತಾರೆ. ಸೋಹನಿ ಅವರ ಪತಿ ತಮಗೆ ಗಣಿತವನ್ನು ವಿನೂತನವಾಗಿ ಬೋಧಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತಾರೆ. ಪಠ್ಯವಷ್ಟೇ ಅಲ್ಲದೆ ನಿಯತಕಾಲಿಕಗಳನ್ನು ಓದುವ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ವಿಜ್ಞಾನ ಕಲಿತಿದ್ದನ್ನು ವಿಶೇಷವಾಗಿ ಸ್ಮರಿಸುತ್ತಾರೆ. ಜ್ಞಾನದ ಅನ್ವೇಷಣೆಯಲ್ಲಿ ಪಠ್ಯದ ಹೊರಗಿನ ಕಲಿಕೆ ಮಹತ್ವದ ಪಾತ್ರ ವಹಿಸುವುದನ್ನು ಒತ್ತಿ ಹೇಳುತ್ತಾರೆ. ಕೇಂದ್ರ ಸರ್ಕಾರದ ಎನ್​ಟಿಎಸ್​ಇ ಪರೀಕ್ಷೆ ಪಾಸು ಮಾಡಿ ಸ್ಕಾಲರ್​ಷಿಪ್ ಗಳಿಸಿದ ರೋಹಿಣಿ ಪುಣೆ ವಿಶ್ವವಿದ್ಯಾಲಯದ ಮೊದಲ ರ್ಯಾಂಕ್​ನೊಂದಿಗೆ ಬಿಎಸ್ಸಿ ಪಾಸು ಮಾಡಿದ ಪ್ರತಿಭಾನ್ವಿತೆ. ಈ ಮಧ್ಯೆ ಬೇಸಿಗೆ ರಜೆಗಳಲ್ಲಿ ಐಐಟಿ ದೆಹಲಿ, ಕಾನ್ಪುರಗಳಲ್ಲಿ ಅಧ್ಯಯನ ಮಾಡುತ್ತ ತಮ್ಮ ಗಮನವನ್ನು ಭೌತವಿಜ್ಞಾನದ ಕಡೆಗೆ ಕೇಂದ್ರೀಕರಿಸಿದರು. ಐಐಟಿ ಮುಂಬೈನಲ್ಲಿ ಎಂಎಸ್ಸಿ ಮುಗಿಸಿದ ನಂತರ ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ ತಮ್ಮ ನೆಚ್ಚಿನ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ಪಿಎಚ್​ಡಿ ಅಧ್ಯಯನ ಮಾಡಿ ಭಾರತಕ್ಕೆ ವಾಪಸಾದರು.
ಮೊದಲ ಮೂರು ವರ್ಷಗಳ ಕಾಲ ಟಿಐಎಫ್​ಆರ್ ಸಂಸ್ಥೆಯಲ್ಲೂ ಅನಂತರ ಮುಂಬೈ ವಿಶ್ವವಿದ್ಯಾಲಯದಲ್ಲೂ ತಮ್ಮ ಕಾರ್ಯ ಮುಂದುವರಿಸಿದರು. ಇದರ ಜತೆಜತೆಗೆ ಸಂಶೋಧನಾ ಅಧ್ಯಯನವನ್ನು ಮುಂದುವರಿಸುತ್ತ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡರು. ಈ ಮಧ್ಯೆ, ಬೆಂಗಳೂರಿನ ಐಐಎಸ್​ಸಿ ಸಂಸ್ಥೆ ಸೇರಿದ ರೋಹಿಣಿ, ಇಂದು ಜಿನೇವಾದಲ್ಲಿರುವ ಸಿಇಆರ್​ಎನ್​ನ ಲಾರ್ಜ್ ಹೇಡ್ರನ್ ಕೊಲೈಡರ್​ನ ಪ್ರಯೋಗಗಳಿಗೆ ಅಗತ್ಯವಿರುವ ಸೈದ್ಧಾಂತಿಕ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಭೌತವಿಜ್ಞಾನವಷ್ಟೇ ಅಲ್ಲದೆ, ‘ಮಹಿಳೆ ಮತ್ತು ವಿಜ್ಞಾನ’ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳ ವಿಜ್ಞಾನ ಅಕಾಡೆಮಿ ಫೆಲೋ, ಭಾರತದ ವಿವಿಧ ಅಕಾಡೆಮಿಗಳ ಸದಸ್ಯತ್ವ, ಅಂತಾರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನ ಸಂಸ್ಥೆಯ ಸದಸ್ಯತ್ವ ಪಡೆದಿರುವ ರೋಹಿಣಿ, 280ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಪುಸ್ತಕಗಳನ್ನೂ ರಚಿಸಿದ್ದಾರೆ. ಕೆಲವನ್ನು ಸಂಪಾದಿಸಿದ್ದಾರೆ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಮುಖ ಭಾಷಣಕಾರ್ತಿಯಾಗಿ ಭಾಷಣಗಳನ್ನೂ ಮಾಡಿದ್ದಾರೆ. ರೋಹಿಣಿ ಮತ್ತವರ ಸಹವರ್ತಿ ನಿರೂಪಿಸಿರುವ ಸಿದ್ಧಾಂತ ‘ಗೋಡಬೋಲೆ-ಪಂಚೇರಿ ಮಾಡೆಲ್’ ಎಂದು ವಿಜ್ಞಾನ ಕ್ಷೇತ್ರದಲ್ಲಿ ನೆಲೆ ನಿಂತಿದೆ. ‘ಇದು ನನಗೆ ಸಂತೋಷ ಮತ್ತು ಸಂತೃಪ್ತಿ ನೀಡಿದೆ’ ಎಂದು ಹೇಳುತ್ತಾರೆ ರೋಹಿಣಿ. ಅಧ್ಯಯನ ಮಾಡಿದ ಮುಂಬೈ ಐಐಟಿ ನೀಡಿದ ‘ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಹೃದಯಕ್ಕೆ ಹೆಚ್ಚು ಅಪ್ಯಾಯಮಾನವಾದದ್ದು’ ಎನ್ನುತ್ತಾರೆ. ತಮ್ಮ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದಾಗ್ಯೂ, ‘ಮಹಿಳೆಯಾಗಿ ವೃತ್ತಿ ಮತ್ತು ಕುಟುಂಬ ಎರಡೂ ಕಡೆ ಯಶಸ್ವಿಯಾಗಲು ಕುಟುಂಬದ ಸಹಕಾರವಷ್ಟೆ ಅಲ್ಲದೆ ಅದೃಷ್ಟವೂ ಇರಬೇಕು’ ಎನ್ನುತ್ತಾರೆ.
ಅಭಿವೃದ್ಧಿಗೆ ಮೂಲವಿಜ್ಞಾನ ಅಗತ್ಯ
ಮೂಲವಿಜ್ಞಾನ ಕ್ಷೇತ್ರ ಯಾವುದೇ ದೇಶದ ಅಭಿವೃದ್ಧಿಗೆ ಅಗತ್ಯ ಎಂದು ನಂಬಿರುವ ಇವರು, ಶಿಕ್ಷಣ ಕ್ಷೇತ್ರದಲ್ಲಿ ಮೂಲವಿಜ್ಞಾನ ಬಲಗೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ವಿಜ್ಞಾನದ ಯಾವುದೇ ಸಂಶೋಧನೆಯು ತತ್​ಕ್ಷಣದಲ್ಲಿ ಅನುಕೂಲಕ್ಕೆ ಬಳಸುವಂತೆ ಅನ್ವಯಿಸಲು ಆಗದಿರಬಹುದು. ಆದರೆ, ಅವು ಒಂದಿಲ್ಲೊಂದು ದಿನ ಪ್ರಯೋಜನಕ್ಕೆ ಬಂದೇ ಬರುತ್ತದೆ ಎನ್ನುತ್ತಾರೆ. ಮ್ಯಾಕ್ಸ್​ವೆಲ್​ನ ವಿದ್ಯುತ್ಕಾಂತೀಯ ಸಿದ್ಧಾಂತವನ್ನು ನಿರಂತರವಾಗಿ ಅನ್ವಯಿಸುವ ಸಂವಹನ ಕ್ಷೇತ್ರವು ನಾವು ಇಂದು ಬದುಕುವ ರೀತಿಯನ್ನೇ ಬದಲಾಯಿಸಿರುವುದನ್ನು ಉದಾಹರಿಸುತ್ತಾರೆ.
(ಲೇಖಕರು ಭೌತಶಾಸ್ತ್ರದ ಸಹ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು)
ಇಸ್ರೋ ಕನ್ನಡತಿ ವಸಂತಕುಮಾರಿ
‘ಸಂಸ್ಥೆಯ ಎಲ್ಲರ ಪರಿಶ್ರಮದಿಂದ ಸಂಯೋಜನೆಗೊಂಡು, ಪರೀಕ್ಷಿಸಲ್ಪಟ್ಟು ಆಕಾಶಕ್ಕೆ ಹಾರಿ ಕಕ್ಷೆಯಲ್ಲಿ ಪ್ರತಿಷ್ಠಾಪನೆಯಾದ ಉಪಗ್ರಹವೊಂದು ತನ್ನ ಕೆಲಸ ಪ್ರಾರಂಭಿಸಿದಾಗ ಆಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎನ್ನುವುದು ಇಸ್ರೋದ ಸ್ಪೇಸ್ ಕ್ರಾಫ್ಟ್ ಚೆಕ್ ಔಟ್ ಗ್ರೂಪ್ (ಉಪಗ್ರಹ ಪರಿವೀಕ್ಷಣಾ ಸಮೂಹ)ನ ಸಮೂಹ ನಿರ್ದೇಶಕಿ ಆಗಿರುವ ಯು. ಎನ್. ವಸಂತಕುಮಾರಿ ಅಭಿಪ್ರಾಯ.
ಬೆಂಗಳೂರಿನ ಎನ್. ಆರ್. ಕಾಲನಿಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ವಸಂತಕುಮಾರಿ ಬಾಲ್ಯದಿಂದಲೂ ಪ್ರತಿಭಾವಂತೆ. ಗಣಿತ-ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದ ಇವರು, ಮುಂದೆ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿಎಸ್ಸಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಎರಡನ್ನೂ ಉನ್ನತ ಶ್ರೇಣಿಯ ರ್ಯಾಂಕುಗಳೊಂದಿಗೆ ಪಾಸು ಮಾಡಿದರು. 1984ರಲ್ಲಿ ವಿಜ್ಞಾನಿಯಾಗಿ ಇಸ್ರೋ ಸಂಸ್ಥೆ ಸೇರಿದರು.
ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿಯೇ ಐಆರ್​ಎಸ್ ಸರಣಿಯ ಉಡಾವಣೆಗಾಗಿ ರಷ್ಯಾ ದೇಶಕ್ಕೆ ಹೋಗಿ ಬಂದರು. ಮುಂದೆ ಐಆರ್​ಎಸ್-ಐಡಿ, ಇನ್ಸಾಟ್-3ಇ ಉಪಗ್ರಹಗಳ ಪ್ರಾಜೆಕ್ಟ್ ಮ್ಯಾನೇಜರ್, ಕಾಟೋಸ್ಯಾಟ್ ಸರಣಿಯ ಉಪಗ್ರಹಗಳಿಗೆ ಉಪನಿರ್ದೇಶಕಿಯಾಗಿದ್ದು ಈಗ ಪ್ರಸ್ತುತ ಎಸ್​ಸಿಜಿ ಸಮೂಹಕ್ಕೆ ನಿರ್ದೇಶಕರಾಗಿದ್ದಾರೆ. ಇಷ್ಟೇ ಹೇಳಿದರೆ ಸಾಲದು, ಆಕಾಶಕ್ಕೆ ಹಾರಬೇಕಾದ ಪ್ರತಿಯೊಂದು ಉಪಗ್ರಹವೂ ಇವರ ಅಂಕಿತ ಬೀಳದೆ ಇಸ್ರೋ ಗೇಟನ್ನು ದಾಟುವಂತಿಲ್ಲ.
ವಸಂತಕುಮಾರಿ, ತಮ್ಮ ದೈನಂದಿನ ಕರ್ತವ್ಯದ ಜತೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಅಧ್ಯಯನಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಮ್ಮೇಳನಗಳಲ್ಲೂ ಉಪಗ್ರಹಕ್ಕೆ ಸಂಬಂಧಿಸಿದ ಭಾಷಣಗಳನ್ನು ಮಾಡಿದ್ದಾರೆ. ಅನೇಕ ಸಮಿತಿಗಳ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಸ್ರೋ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಮಿತಿಗಳ ಅಧ್ಯಕ್ಷೆಯಾಗಿ, ನಾಡಹಬ್ಬವನ್ನು ಆಚರಿಸಿಯೂ ಸಂತೋಷಪಡುತ್ತಾರೆ ಈ ಅಪ್ಪಟ ಕನ್ನಡತಿ.
ಮನೆಯಲ್ಲಿ ಸಿಕ್ಕ ಗೌರವ ಹೆಚ್ಚಿನ ಆತ್ಮಸಂತೋಷ ಕೊಡುತ್ತದೆಯಲ್ಲವೇ? ಮಹಿಳಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್್ಸ, ಕಲ್ಪನಾ ಚಾವ್ಲಾ ಮತ್ತಿತರರ ಸಹಚರ್ಯವೂ ಇವರಿಗೆ ಸಿಕ್ಕಿತ್ತು. ‘ದೇಶದ ವಿವಿಧ ಸಂಸ್ಥೆಗಳು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿದಾಗ ಭಾರತವೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ನಮ್ಮಲ್ಲಿ ಅಪಾರ ಸಂಖ್ಯೆಯ ಬುದ್ಧಿವಂತ ಯುವ ಜನರಿದ್ದಾರೆ’ ಎಂದು ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಾರೆ. ‘ನಾವೆಲ್ಲರೂ ಸೋಮಾರಿತನವನ್ನು ಕೊಡವಿ ಮೇಲೆದ್ದು, ಕಾರ್ಯತತ್ಪರರಾಗಬೇಕು. ಮಹಿಳೆಯರಲ್ಲಿ ಸಾಧಿಸಬೇಕು ಎನ್ನುವ ಛಲ ಮೂಡಬೇಕು. ಆಗ ಸಾಧಿಸುವ ದಾರಿಗಳು ತಮ್ಮಿಂದ ತಾವೇ ತೆರೆದುಕೊಳ್ಳುತ್ತವೆ. ಕೈಲಾಗದು ಎಂದು ಕೈಕಟ್ಟಿ ಕೂರಬಾರದು’ ಎನ್ನುತ್ತಾರೆ. ಇಸ್ರೋದಡಿ ಇರುವ ಅನೇಕ ಸಂಸ್ಥೆಗಳಲ್ಲಿ ಉಪಗ್ರಹ ಪರಿವೀಕ್ಷಣಾ ಸಮೂಹವೂ ಒಂದು. ಇಸ್ರೋ ಇತಿಹಾಸದಲ್ಲೇ, ಅಂಗಸಂಸ್ಥೆಯೊಂದರ ನಿರ್ದೇಶಕಿ ಸ್ಥಾನ ಅಲಂಕರಿಸಿರುವ ಮೊದಲ ಮಹಿಳೆ ಇವರು. ಮುಂಬರುವ ದಿನಗಳಲ್ಲಿ ಇಸ್ರೋ ನಿರ್ದೇಶಕ ಸ್ಥಾನವನ್ನು ಸಹ ಸಮರ್ಥ ಮಹಿಳೆಯರು ಅಲಂಕರಿಸುವಂತಾಗಬೇಕು ಎಂಬ ಆಶಯ ನಮ್ಮದು.
ಕುಟುಂಬದ ಸಹಕಾರ
ಮನೆ ಮಕ್ಕಳನ್ನು ನಿಭಾಯಿಸುತ್ತಲೇ, ವೃತ್ತಿ ಜೀವನದ ಮೆಟ್ಟಿಲುಗಳನ್ನು ಮೇಲೇರಿರುವ ವಸಂತಕುಮಾರಿಯವರು ‘ಸಾಧನೆಗೆ ಹೆಣ್ಣು-ಗಂಡೆಂಬ ಭೇದವಿಲ್ಲ. ಪದೋನ್ನತಿಯ ಸಂದರ್ಭದಲ್ಲಿ ನಮ್ಮ ಸಾಧನೆಯೇ ನಮಗೆ ಶಿಫಾರಸು’ ಎನ್ನುತ್ತಾರೆ. ಹೆಣ್ಣೊಬ್ಬಳು ಯಶಸ್ವಿಯಾಗಬೇಕಾದಲ್ಲಿ ಕುಟುಂಬದ ಸಹಕಾರ ಅತ್ಯಗತ್ಯ ಎಂದು ಹೇಳಲು ಮರೆಯುವುದಿಲ್ಲ. ಅನೇಕ ಹಬ್ಬಗಳನ್ನು ರಾಕೆಟ್ ಉಡಾವಣಾ ಕೇಂದ್ರಗಳಲ್ಲೇ ಆಚರಿಸಿದ್ದೇವೆ. ಕೆಲಸವೇ ನಮ್ಮ ಸರ್ವಸ್ವ. ಕೆಲವು ಬಾರಿ ತಲೆಯ ತುಂಬ ಉಪಗ್ರಹದ ಚಿಂತೆಯೇ ತುಂಬಿಕೊಂಡಾದ ನಿದ್ರೆಯೇ ಮಾಡದ ದಿನಗಳೂ ಇವೆ’ ಎಂದು ವೃತ್ತಿ ಜೀವನವನ್ನು ಮೆಲುಕು ಹಾಕುತ್ತಾರೆ. ವಸಂತಕುಮಾರಿ ಅವರನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಅನೇಕ ಉಪಗ್ರಹಗಳ ಯಶಸ್ವಿ ಉಡಾವಣೆ ಬಳಿಕ ರಾಷ್ಟ್ರಪತಿ, ಪ್ರಧಾನಿಗಳು ತಂಡವನ್ನು ಅಭಿನಂದಿಸಿದ್ದಾರೆ. ಇವೆಲ್ಲವುಗಳ ಮಧ್ಯೆ ‘ಇಸ್ರೋ ಮೆರಿಟ್ ಅವಾರ್ಡ್’ ಇವರಿಗೆ ಹೆಚ್ಚು ಪ್ರಿಯವಾದದ್ದು.
ನಮಗೆ ಕೆಲಸ ಎಂದರೆ ದೇಶಸೇವೆ. ನಮ್ಮ ಒಂದೊಂದು ನಿಮಿಷವನ್ನೂ ದೇಶಕ್ಕಾಗಿ ವಿನಿಯೋಗಿಸುತ್ತಿದ್ದೇವೆ ಎನ್ನುವ ಭಾವನೆ ನಮ್ಮಲ್ಲಿ ಶಕ್ತಿ ತುಂಬುತ್ತದೆ.
| ಯು. ಎನ್. ವಸಂತಕುಮಾರಿ
ಸಮೂಹ ನಿರ್ದೇಶಕಿ, ಉಪಗ್ರಹ ಪರಿವೀಕ್ಷಣಾ ಸಮೂಹ, ಇಸ್ರೋ, ಬೆಂಗಳೂರು

Link: https://www.google.com/search?q=%E0%B2%B5%E0%B3%88.%E0%B2%B8%E0%B2%BF.+%E0%B2%95%E0%B2%AE%E0%B2%B2%E0%B2%BE&rlz=1C1AVNG_enIN699IN699&oq=%E0%B2%B5%E0%B3%88.%E0%B2%B8%E0%B2%BF.+%E0%B2%95%E0%B2%AE%E0%B2%B2%E0%B2%BE&aqs=chrome..69i57&sourceid=chrome&ie=UTF-8

No comments:

Post a Comment