Wednesday 27 February 2019

One of the Report on Digital Kranti mattu Bhaarata Book release program

ಬೆಂಗಳೂರಿನಲ್ಲಿ ಡಿಜಿಟಲ್‌ ತಂತ್ರಜ್ಞಾನದ ಹೃದಯ

kಬೆಂಗಳೂರು: ‘ಡಿಜಿಟಲ್‌ ತಂತ್ರಜ್ಞಾನದ ಹೃದಯ ಇರುವುದು ಬೆಂಗಳೂರಿನಲ್ಲಿ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಶ್ವದ ಪ್ರಮುಖ ಕಂಪೆನಿಗಳೇ ಈ ಮಾತನ್ನು ಒಪ್ಪಿಕೊಂಡಿವೆ’ ಎಂದು ಲೇಖಕ ಶಿವಾನಂದ ಕಣವಿ ಅಭಿಪ್ರಾಯಪಟ್ಟರು.
ತಮ್ಮ ‘ಸ್್ಯಾಂಡ್‌ ಟು ಸಿಲಿಕಾನ್‌: ದಿ ಅಮೇಜಿಂಗ್‌ ಸ್ಟೋರಿ ಆಫ್‌ ಡಿಜಿಟಲ್‌ ಟೆಕ್ನಾಲಜಿ’ ಕೃತಿಯ ಕನ್ನಡಾನುವಾದ ‘ಡಿಜಿಟಲ್‌ ಕ್ರಾಂತಿ ಮತ್ತು ಭಾರತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃತಿಯನ್ನು ಡಾ.ವೈ.ಸಿ.ಕಮಲಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
‘ಡಿಜಿಟಲ್ ಕ್ರಾಂತಿ ಭಕ್ತಿ ಚಳವಳಿ ಇದ್ದಂತೆ. ಕುಲ, ಹಳ್ಳಿ, ರಾಷ್ಟ್ರಗಳನ್ನು ಮೀರಿ ಇದು ವ್ಯಾಪಿಸಿದೆ. ಇದಕ್ಕೆ ಜಾತಿ, ಮತ ಪಂಥಗಳ ಬೇಧವೂ ಇಲ್ಲ. ಜನರ ಒಳಿತಿಗಾಗಿ ಇದನ್ನು ಯಾರು ಬೇಕಾದರೂ ಬಳಸಬಹುದು. ಯಾರು ಬೇಕಾದರೂ ಬೆಳೆಸಬಹುದು’ ಎಂದು ಕಣವಿ ವಿಶ್ಲೇಷಿಸಿದರು.
‘ಭಾರಿ ಪ್ರಮಾಣದ ಸಮಗ್ರ ಸರ್ಕ್ಯೂಟ್‌ (ವೆರಿ ಲಾರ್ಜ್‌ ಸ್ಕೇಲ್‌ ಇಂಟೆಗ್ರೇಟೆಡ್‌ ಸರ್ಕ್ಯೂಟ್‌) ರೂಪಿಸುವ ತಂತ್ರಜ್ಞಾನ ಹೊಂದಿರುವ ವಿಶ್ವದ ಮೂರು ಮುಂಚೂಣಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಈ ತಂತ್ರಜ್ಞಾನದಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದರೆ, ಇಸ್ರೇಲ್‌ ನಂತರದ ಸ್ಥಾನದಲ್ಲಿದೆ. ಫೈಬರ್‌ ಆಪ್ಟಿಕ್ಸ್‌, ಎಂಪಿ3, ಎಚ್‌ಡಿಟಿವಿ, ಮೊಬೈಲ್‌ ಫೋನ್‌ಗಳಲ್ಲಿ ಬಳಸುವ ಕೋಡಿಂಗ್‌ ತಂತ್ರಜ್ಞಾನಗಳ ಮೂಲಕರ್ತೃಗಳು ಭಾರತೀಯರು ಎಂಬುದು ಬಹುತೇಕರಿಗೆ ತಿಳಿದಿಲ್ಲ’ ಎಂದರು.
‘ದೇವಾಲಯವನ್ನು ನಿರ್ಮಿಸುವಾಗ ಯಾರೋ ಕಲ್ಲು ಕಟ್ಟುತ್ತಾರೆ. ಇನ್ನೊಬ್ಬರು ಕಲಶ ಇಡುತ್ತಾರೆ. ಕಲಶ ಇಟ್ಟವರೇ ದೇವಾಲಯ ನಿರ್ಮಿಸಿದರು ಎನ್ನಲಾಗದು. ತಂತ್ರಜ್ಞಾನದ ಕೊಡುಗೆಯೂ ಅದೇ ರೀತಿ. ತಂತ್ರಜ್ಞಾನಗಳ ಅಭಿವೃದ್ಧಿ ನಿಟ್ಟಿನಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಅನೇಕ ಕೆಲಸಗಳು ನಡೆಯುತ್ತಿರುತ್ತವೆ’ ಎಂದು ವಿವರಿಸಿದರು.
ಜವಹರಲಾಲ್‌ ನೆಹರೂ ವೈಜ್ಞಾನಿಕ ಉನ್ನತ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡಾ.ರೊದ್ದಂ ನರಸಿಂಹ ಮಾತನಾಡಿ, ‘ಬೆಂಗಳೂರು ಹಿಂದೆ ವಿಜ್ಞಾನ ನಗರ, ವೈಮಾಂತರಿಕ್ಷ ನಗರ ಎಂದು ಖ್ಯಾತವಾಗಿತ್ತು. ಈಗ ಮಾಹಿತಿ ತಂತ್ರಜ್ಞಾನದ ನಗರ ಎಂದು ಗುರುತಿಸಿಕೊಂಡಿದೆ. ನಗರದ ಮಾತೃ ಭಾಷೆಯಾದ ಕನ್ನಡದಲ್ಲಿ ಇಂತಹ ಕೃತಿಯ ಅಗತ್ಯ ಇತ್ತು’ ಎಂದರು.
‘ಕಿಸೆಯಲ್ಲಿ ಮೊಬೈಲ್‌ ಇಟ್ಟುಕೊಳ್ಳುವ ಕಾಲ ಬರುತ್ತದೆ ಎಂದು 25 ವರ್ಷ ಹಿಂದೆ ಯಾರೂ ಯೋಚಿಸಿಯೂ ಇರಲಿಲ್ಲ. ತಂತ್ರಾಂಶವನ್ನು ಚೆನ್ನಾಗಿ ರೂಪಿಸಬಲ್ಲೆವು ಎಂಬುದನ್ನು ನಾವೇ ಮೊದಲು ಗ್ರಹಿಸಿದ್ದರಿಂದ ಈ ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಸಾಧನೆ ಮಾಡಲು ಸಾಧ್ಯವಾಯಿತು. 1,500 ವರ್ಷಗಳಿಗೂ ಹಿಂದೆ ಗಣಿತಕ್ಕೂ ನಮ್ಮ ಕೊಡುಗೆ ಮಹತ್ತರವಾದುದು. ವಿಜ್ಞಾನದ ಬೆಳವಣಿಗೆಗೆಲ್ಲಾ ಅದೇ ತಳಹದಿ’ ಎಂದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ.ಡಾ.ಎ.ಎಸ್‌.ಕಿರಣ್‌ ಕುಮಾರ್‌ ಮಾತನಾಡಿ, ‘ಡಿಜಿಟಲ್‌ ಕ್ರಾಂತಿಯಿಂದ ತರಕಾರಿ ಮಾರುವವರಿಂದ ಹಿಡಿದು ಬಡಗಿವರೆಗೆ ಎಲ್ಲರ ಬದುಕಿನಲ್ಲೂ ಬದಲಾವಣೆಗಳಾಗಿವೆ. ಮೊಬೈಲ್‌ ಬರುವ ಮುನ್ನ ಬಹುಮಹಡಿ ಕಟ್ಟಡದಲ್ಲಿದ್ದವರು ಒಂದು ಗ್ಲಾಸ್‌ ಚಹ ಬೇಕಿದ್ದರೂ ಇನ್ನೊಬ್ಬರನ್ನು ಚಹಾ ಮಾರುವವನ ಬಳಿ ಕಳುಹಿಸಬೇಕಿತ್ತು’ ಎಂದರು.
ತಂದೆಗೆ ಸಲ್ಲಿಸಿದ ಗೌರವ
‘ಸ್ಯಾಂಡ್‌ ಟು ಸಿಲಿಕಾನ್‌: ದಿ ಅಮೇಜಿಂಗ್‌ ಸ್ಟೋರಿ ಆಫ್‌ ಡಿಜಿಟಲ್‌ ಟೆಕ್ನಾಲಜಿ’ ಕೃತಿಯ ಲೇಖಕ ಶಿವಾನಂದ ಕಣವಿ ಅವರ ತಂದೆ ಚೆನ್ನವೀರ ಕಣವಿ ಹಾಗೂ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಡಾ.ವೈ.ಸಿ.ಕಮಲಾ ಅವರ ತಂದೆ ಪಂಡಿತ ಚನ್ನಪ್ಪ ಎರೋಶೀಮೆ ಅವರಿಬ್ಬರೂ ಕನ್ನಡದ ಹೆಸರಾಂತ ಸಾಹಿತಿಗಳು. ಕೃತಿಯ ಲೇಖಕ ಹಾಗೂ ಅನುವಾದಕಿ ಸೇರಿ ತಂದೆಯಂದಿರ ದಿನ ತಂದೆ ಗೌರವ ಪಡುವಂಥ ಕಾರ್ಯ ಮಾಡಿದ್ದಾರೆ’ ಎಂದು ಸಭಿಕರೊಬ್ಬರು ಹೇಳಿದರು.

No comments:

Post a Comment