Wednesday 27 February 2019

'ಬೆಂಗಳೂರು ಬಗ್ಗೆ ಅಭಿಮಾನದ ಕೊರತೆ' - Report of my lecture atChamaraja pete Kannada Saahitya sammeLana 28th Ocober 2017

Sunday, 29 Oct, 1.22 amಪ್ರಜಾವಾಣಿ

ಬೆಂಗಳೂರು
'ಬೆಂಗಳೂರು ಬಗ್ಗೆ ಅಭಿಮಾನದ ಕೊರತೆ'





ಬೆಂಗಳೂರು: 'ಬೆಂಗಳೂರು ನನ್ನೂರು ಎಂಬ ಅಭಿಮಾನದ ಕೊರತೆ ನಗರದ ಜನರಲ್ಲಿ ಢಾಳಾಗಿ ಕಾಣುತ್ತಿದೆ' ಎಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುರೇಶ್ ಮೂನ ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಕೂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ '3ನೇ ಕನ್ನಡ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ ಅವರು ಮಾತನಾಡಿದರು.
'ನಗರದ ಸ್ಮಾರಕಗಳ ಹಿಂದೆ ಅದರ ಇತಿಹಾಸ ತಿಳಿಸುವ ಫಲಕಗಳನ್ನು ಅಳವಡಿಸಿ, ಮಕ್ಕಳಿಗೆ ಬೆಂಗಳೂರಿನ ಪರಿಚಯ ಮಾಡಿಸಬೇಕು. ಆಗ ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ' ಎಂದು ವಿವರಿಸಿದರು.
'ಚಾಮರಾಜಪೇಟೆಯಲ್ಲಿ ಐದು ಮುಖ್ಯ ರಸ್ತೆಗಳಿವೆ. ಎಲ್ಲವೂ ಒಂದೊಂದು ಪುಸ್ತಕವಾಗುವಷ್ಟು ಇತಿಹಾಸವನ್ನು ಹೊಂದಿವೆ. ಮಕ್ಕಳ ಕೂಟ ಸ್ಥಾಪನೆ, ಸಾಹಿತ್ಯ ಪರಿಷತ್ತಿನ ಹುಟ್ಟು ಹೀಗೆ ಅವುಗಳ ಹಿನ್ನಲೆ ತಿಳಿದರೆ, ಸಹಜವಾಗಿ ಪ್ರೀತಿ ಹುಟ್ಟುತ್ತದೆ.'




ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು)
'ಬೆಂಗಳೂರು ಎನ್ನುವ ಪದಕ್ಕೆ 1,000 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರಿಂದ ಸ್ಥಾಪನೆಯಾದ ಈ ನಗರವು ಮರಾಠರು, ಮೊಘಲರು, ಮುಸ್ಲಿಮರು, ಮೈಸೂರು ಅರಸರು, ಬ್ರಿಟಿಷರು, ದಿವಾನರು... ಹೀಗೆ ಎಲ್ಲರ ಆಡಳಿತದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಈ ರೀತಿ ನಗರದ ಇತಿಹಾಸವನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು.'
'ಚಾಮರಾಜಪೇಟೆಯಲ್ಲಿ ವಿವಿಧ ದೇವಾಲಯ, ಮಸೀದಿ, ಚರ್ಚ್, ಜೈನ ಮಂದಿರ ಎಲ್ಲವೂ ಇದೆ. ಇದೊಂದು ಕೋಮುಸೌಹಾರ್ದಕ್ಕೆ ಮಾದರಿ ಪ್ರದೇಶ. ಇಲ್ಲಿ ಉತ್ಕೃಷ್ಟ ಸಂಸ್ಕೃತಿ ಇದೆ. ಭವ್ಯ ಪರಂಪರೆ ಇದೆ. ಇಂದು ಕಾಣುವ ಬದಲಾವಣೆ ತಾತ್ಕಾಲಿಕ. ಪರಿವರ್ತನೆಯ ಕಾಲ ಅಂತಾರಲ್ಲ ಹಾಗೆ. ಹೊಸ ತಂತ್ರಜ್ಞಾನ ರೂಪಿಸಿಕೊಂಡು ಮುಂದೆ ಸೊಗಸಾದ ನಗರವಾಗುತ್ತದೆ' ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, 'ಕನ್ನಡದ ವಾತಾವರಣ ಹಬ್ಬಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ 1.15 ಕೋಟಿ ಮಕ್ಕಳಲ್ಲಿ 75 ಲಕ್ಷ ಮಕ್ಕಳು ಕನ್ನಡದಲ್ಲಿಯೇ ಕಲಿಯುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯ ನೀಡುವು ಮೂಲಕ ಹೆಚ್ಚು ಮಕ್ಕಳನ್ನು ಕನ್ನಡದೆಡೆಗೆ ಆಕರ್ಷಿಸಬೇಕು' ಎಂದು ತಿಳಿಸಿದರು.
ಸಂಸದ ಪಿ.ಸಿ. ಮೋಹನ್, 'ಎಲ್ಲಾ ಭಾಷೆಗಳನ್ನೂ ಮಾತನಾಡಲು ಸಾಧ್ಯವಾಗುವ ಏಕೈಕ ತಾಣವೆಂದರೆ ಅದು ಬೆಂಗಳೂರು. ಹೊರ ರಾಜ್ಯಗಳಿಂದ ಬಂದವರನ್ನು ಅವರ ಭಾಷೆಯಲ್ಲಿಯೇ ಮಾತನಾಡಿಸಿ, ಕನ್ನಡ ಕಲಿಯದಂತೆ ಮಾಡುತ್ತಿದ್ದೇವೆ' ಎಂದು ಹೇಳಿದರು.




ಸಮ್ಮೇಳನಾಧ್ಯಕ್ಷ ಸುರೇಶ್ ಮೂನ ಅವರು ಕನ್ನಡ ಬಾವುಟವನ್ನು ಬೀಸಿದರು. ಎಂ.ಎನ್.ವ್ಯಾಸರಾವ್, ಮಾಯಣ್ಣ, ಹಿಂದಿನ ಸಮ್ಮೇಳನದ ಅಧ್ಯಕ್ಷೆ ನಾಗಮಣಿ ಎಸ್.ರಾವ್ ಹಾಗೂ ಪಿ.ಸಿ.ಮೋಹನ್ ಇದ್ದರು)
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, 'ಸ್ಮಾರಕ, ಪ್ರಮುಖ ಕಟ್ಟಡಗಳ ಬಳಿ ಅವುಗಳ ಇತಿಹಾಸ ಕುರಿತ ಫಲಕ ಹಾಕಬೇಕೆಂದು ನಾನೂ ಆಲೋಚಿಸಿದ್ದೆ. ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ನಗರದಲ್ಲಿ ಸುಮಾರು 5,000 ಫಲಕಗಳನ್ನು ಹಾಕಿಸಲು ಅವಕಾಶವಿದೆ' ಎಂದು ಹೇಳಿದರು.
'ಈಗ ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರ ಹೀಗೆ ದಕ್ಷಿಣ ಬೆಂಗಳೂರಿನಲ್ಲಿ ಮಾತ್ರ ಬಹುಸಂಖ್ಯೆಯಲ್ಲಿ ಕನ್ನಡಿಗರನ್ನು ಕಾಣುತ್ತೇವೆ. ಉಳಿದಂತೆ ಕನ್ನಡಿಗರನ್ನು ಹುಡುಕಬೇಕಾದ ಸ್ಥಿತಿ ಇದೆ. ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವವರು ನೆಲ, ಜಲ, ಆಹಾರ ಹಾಗೂ ಕನ್ನಡದ ಋಣ ತೀರಿಸಬೇಕು. ಇಲ್ಲದಿದ್ದರೆ, ಅವರು ಉದ್ಧಾರವಾಗುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಚಾಮರಾಜಪೇಟೆ ಕ.ಸಾ.ಪ ಅಧ್ಯಕ್ಷ ಶ್ರೀಧರ್ ಧ್ವಜಾರೋಹಣ ಕನ್ನಡ ಧ್ವಜಾರೋಹಣ ನೆರವೇರಿಸಿದರು.
**
'ಕಸಾಪ ಕಟ್ಟಡ ನವೀಕರಣಕ್ಕೆ ₹50 ಲಕ್ಷ'
'1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) 100 ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯದ ಪ್ರತಿರೂಪವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ರಾಜ್ಯ, ಹೊರ ರಾಜ್ಯ, ವಿದೇಶದಲ್ಲಿಯೂ ಹೆಸರು ಮಾಡಿದೆ. ಹಾಗಾಗಿ ಇದರ ಕೇಂದ್ರ ಕಚೇರಿಯನ್ನು ಸುಸ್ಥಿರವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಕಟ್ಟಡದ ನವೀಕರಣಕ್ಕೆ ಹಾಗೂ ಪೀಠೋಪಕರಣಗಳ ಖರೀದಿಗಾಗಿ ಸಂಸದರ ನಿಧಿಯಿಂದ ₹ 50 ಲಕ್ಷ ನೀಡುತ್ತೇನೆ' ಎಂದು ಸಂಸದ ಪಿ.ಸಿ. ಮೋಹನ್ ಭರವಸೆ ನೀಡಿದರು.




ಮೆರವಣಿಗೆಗೆ ಮೆರಗು ನೀಡಿದ ಡೊಳ್ಳು ಕುಣಿತ -ಪ್ರಜಾವಾಣಿ ಚಿತ್ರಗಳು)
ಮೊದಲ ಬಾರಿ ವಿಜ್ಞಾನ ಗೋಷ್ಠಿ
ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಸಂವಹನದ ವಿವಿಧ ರೂಪಗಳು ಹಾಗೂ ಕನ್ನಡ ಗ್ರಂಥಗಳ ಅಂಕೀಕರಣ ವಿಷಯದ ಕುರಿತು ಗೋಷ್ಠಿಗಳು ನಡೆದವು.
ವಿಜ್ಞಾನ ಸಂವಹನ ಕುರಿತು ಮಾತನಾಡಿದ ಪ್ರಾಧ್ಯಾಪಕಿ ವೈ.ಸಿ. ಕಮಲಾ, 'ಸಾಕ್ಷರತೆಯಲ್ಲಿ ನಮ್ಮ ದೇಶ 92ನೇ ಸ್ಥಾನದಲ್ಲಿದೆ. ಇನ್ನು ವಿಜ್ಞಾನ ಸಾಕ್ಷರತೆಯನ್ನಂತೂ ಕೇಳುವುದೇ ಬೇಡ. ಹೀಗೆಂದ ಮಾತ್ರಕ್ಕೆ ನಾವು ವಿಜ್ಞಾನದ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿಲ್ಲ ಎಂದಲ್ಲ. ವಿಜ್ಞಾನಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ದೇಶಗಳ ಸಾಲಿನಲ್ಲಿ ಭಾರತ 8ನೇ ಸ್ಥಾನದಲ್ಲಿದೆ' ಎಂದು ಹೇಳಿದರು.
'ವಿಜ್ಞಾನದ ಶಿಕ್ಷಣ, ಅಭಿವೃದ್ಧಿ, ಸಾಕ್ಷರತೆಗೆ ಹೆಚ್ಚು ಒತ್ತು ನೀಡಬೇಕು. ಮಾತೃಭಾಷೆಯಲ್ಲಿ ವಿಜ್ಞಾನವನ್ನು ಕಲಿಸಿದರೆ ಹೆಚ್ಚು ಜನರನ್ನು ತಲುಪಬಹುದು. ವಿಜ್ಞಾನದ ಪರಿಕಲ್ಪನೆಯನ್ನು ಇಂಗ್ಲಿಷ್ನಲ್ಲಷ್ಟೇ ವಿವರಿಸಲು ಸಾಧ್ಯ ಎನ್ನುವ ಮೌಢ್ಯ ನಮ್ಮಲ್ಲಿದೆ. ನ್ಯೂಟನ್ ಚಲನೆಯ ನಿಯಮಗಳನ್ನು ಮೊದಲು ಬರೆದಿದ್ದು, ಮಾತೃಭಾಷೆ ಲ್ಯಾಟಿನ್ನಲ್ಲಿ. ಐನ್ಸ್ಟೀನ್ ಸಾಪೇಕ್ಷತಾ ಸಿದ್ಧಾಂತವನ್ನು ವಿವರಿಸಿದ್ದು ಜರ್ಮನ್ ಭಾಷೆಯಲ್ಲಿ. ನಮ್ಮ ಮಾತೃಭಾಷೆಯ ಮೂಲಕವೂ ವಿಜ್ಞಾನದ ಸಂವಹನ ಸಾಧ್ಯ' ಎಂದರು.
'ಕಥೆ, ಕಾದಂಬರಿ, ಕವನ, ಪ್ರಬಂಧ, ಲೇಖನ, ಬ್ಲಾಗ್ನಲ್ಲಿ ಬರೆದುಕೊಳ್ಳುವುದು, ವಿಡಿಯೊ ರೂಪಿಸುವುದು, ಧ್ವನಿ ಪ್ರಸಾರದ ಮೂಲಕ ವಿಜ್ಞಾನ ಸಂವಹನ ನಡೆಸಬಹುದು. ಪಶ್ಚಿಮ ರಾಷ್ಟ್ರಗಳಲ್ಲಿ ಇದು ಹೆಚ್ಚು ಪ್ರಖ್ಯಾತಿ ಪಡೆದಿದೆ' ಎಂದು ವಿವರಿಸಿದರು.
ಗಣಕ ಪರಿಷತ್ತಿನ ಅಧ್ಯಕ್ಷ ನರಸಿಂಹಮೂರ್ತಿ ಅವರು ಕನ್ನಡ ಗ್ರಂಥಗಳ ಅಂಕೀಕರಣದ ಕುರಿತು ಮಾತನಾಡಿದರು.
**
ಗಮನ ಸೆಳೆದ ಮೆರವಣಿಗೆ
ಬೆಳ್ಳಿ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಾಗಿ ಮಕ್ಕಳ ಕೂಟದಲ್ಲಿ ಮುಕ್ತಾಯಗೊಂಡಿತು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿದ್ಯಾರ್ಥಿಗಳ ಬ್ಯಾಂಡ್ಸೆಟ್ ಗಮನ ಸೆಳೆಯಿತು.

No comments:

Post a Comment