Saturday 23 January 2016

ಶಿಕ್ಷಣ ಕ್ಷೇತ್ರದ ಮೇರು ಸಾಧಕ ಡಾ.ಎಂ . ಷಡಾಕ್ಷರ ಸ್ವಾಮಿ








                            ಡಾ . ಎಂ . ಷಡಾಕ್ಷರ ಸ್ವಾಮಿ 

ಬೆಂಗಳೂರಿನ ಹೃದಯಭಾಗದಲ್ಲಿರುವ ಐತಿಹಾಸಿಕ ಕಟ್ಟಡ 'ಸೆಂಟ್ರಲ್ ಕಾಲೇಜು '.  ನೊಬೆಲ್ ಪ್ರಶಸ್ತಿ ವಿಜೇತ ಸಿ ವಿ ರಾಮನ್ ತಮ್ಮ ಸಂಶೋಧನೆಯನ್ನುಸಾರ್ವಜನಿಕವಾಗಿ ಉದ್ಘೋಷಿಸಿದ್ದು  ಇದೇ ಸೆಂಟ್ರಲ್ ಕಾಲೇಜಿನಲ್ಲಿ . ಭಾರತದ ಹಲವಾರು ಪ್ರತಿಭೆಗಳು ಅರಳಿರುವ ಜಾಗ ಈ ಸೆಂಟ್ರಲ್ ಕಾಲೇಜು .ಈ ಸಂಸ್ಥೆಗೆ 12/10/1917ರಲ್ಲಿ ಜನಿಸಿದ ಷಡಾಕ್ಷರ ಸ್ವಾಮಿ  ಸುಮಾರು ಹದಿನೈದು ವರುಷಗಳಿಗೂ ಹೆಚ್ಚು  ಕಾಲ( 1962 - 1977) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು   12/1/2016 ರಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು . ಅವರಿಗೆ 99 ವರ್ಷ ವಯಸ್ಸಾಗಿತ್ತು . 

ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ  ಎಂಎಸ್ಸಿ ಪದವಿ ಪಡೆದಿದ್ದ ಶ್ರೀಯುತರು , ಏಡಿನ್ಬರೋ (Edinburgh) ವಿಶ್ವವಿದ್ಯಾಲಯದಿಂದ  ಪಿಎಚ್. ಡಿ ಪದವಿ ಪಡೆದಿದ್ದರು . 1962 ರಲ್ಲಿ ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರವಹಿಸಿಕೊಂಡರು . 1964ರಲ್ಲಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ಅಂಗವಾಯಿತು . ಉನ್ನತಶಿಕ್ಷಣದ ಸಂಸ್ಥೆಯಾಗಿದ್ದ ಸೆಂಟ್ರಲ್ ಕಾಲೇಜನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಸ್ವಾಮಿಯವರ ಪಾತ್ರ ಅನನ್ಯವಾದದ್ದು . ಆದಾಗ್ಯೂ ಸ್ವಂತಂತ್ರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನ ಅವರ ಕೈತಪ್ಪಿ, ಡಾ ಎಚ್ ನರಸಿಂಹಯ್ಯ ನವರ ಪಾಲಾದದ್ದಕ್ಕೆ ಇವರಿಬ್ಬರೂ ಕಾರಣರಲ್ಲವಾದರೂ , ಅಷ್ಟರ ಮಟ್ಟಿಗೆ ಸ್ವಾಮಿಯವರಿಗಾದ ನಷ್ಟ ಎಂದಷ್ಟೇ ಹೇಳಬಹುದು.  ನರಸಿಂಹಯ್ಯನವರು ಉಪಕುಲಪತಿಗಳಾಗಿದ್ದಾಗ್ಯೂ ಸಹ ವಿಶ್ವವಿದ್ಯಾಲಕ್ಕೆ ಸಂಭಂಧಿಸಿದ ಎಲ್ಲ ಆಡಳಿತಾತ್ಮಕ ವಿಷಯಗಳನ್ನೂ ಸ್ವಾಮಿಯವರೊಂದಿಗೆ ಚರ್ಚಿಸಿದ ನಂತರವೇ ನಿರ್ಧಾರ ಕೈಗೊಳುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ವಾಮಿಯವರ ದೀರ್ಘಕಾಲದ ಒಡನಾಡಿ ಪ್ರೊ . ಜೆ.  ಅರ್ . ವಿಶ್ವನಾಥ್ ಲೇಖಕಿಗೆ  ತಿಳಿಸಿದರು . ಈ ನಡೆ ಈ ಇಬ್ಬರೂ ವ್ಯಕ್ತಿಗಳ ಮಾನಸಿಕ ಪ್ರಭುದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ .ಇವರಿಬ್ಬರೂ ತಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ಸೇವೆಗಾಗಿ ಭಿನ್ನಾಭಿಪ್ರಾಯವನ್ನೂ ಮೀರಿ ಸ್ನೇಹಪರರಾಗಿದ್ದದ್ದನ್ನು ಇವರಿಬ್ಬರೊಂದಿಗೂ ಬಹುಕಾಲ ಕಾರ್ಯನಿರ್ವಹಿಸಿರುವ  ನಾನು  ಕಂಡಿದ್ದೇನೆ .  ಆಡಳಿತದ ನೆಲೆಯಲ್ಲಿ ಮಾದರಿ ಎನಿಸಬಹುದಾದ ಉದಾಹರಣೆ ಇದಾಗಿದ್ದು , ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ . 

ಮೈಸೂರು ಮೂಲದ ಸ್ವಾಮಿಯವರ ಹೆಗ್ಗಳಿಕೆ ಇದ್ದದ್ದು ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ನೀಡಬೇಕೆಂಬ ಅವರ ಕಳಕಳಿ ಮತ್ತು ಬದ್ಧತೆಯಲ್ಲಿ .  ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲ ವೃತ್ತಿಯಿಂದ ವಿಶ್ರಾಂತರಾದ ಮೇಲೆ ಕೆಲವು ವರ್ಷಗಳ  ಕಾಲ ವಿಶ್ರಾಂತ ಜೀವನ ನಡೆಸಿದ ಅವರು, ತಮ್ಮ ಎರಡನೇ ಇನ್ನಿಂಗ್ಸ್ಅನ್ನು 1984ರಲ್ಲಿ  ಏಸ್ . ಜೆ . ಅರ್  ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆರಂಭಿಸಿದರು, ಆಗ ಅವರ ವಯಸ್ಸು ಅರವತ್ತೆಳು ! ಆ ದಿನಗಳಲ್ಲಿ  'ಪುಂಡರ ಕಾಲೇಜು ' ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನ ಆನಂದ ರಾವ್ ವೃತ್ತದ ಏಸ್ . ಜೆ  . ಆರ್ . ಕಾಲೇಜನ್ನು ಅಂದಿನ  ಪ್ರಿನ್ಸಿಪಾಲರಾಗಿದ್ದ ದಿವಂಗತ  ಆರ್  ರಾಚಪ್ಪನವರ ನೇತೃತ್ವದಲ್ಲಿ ಸಂಪೂರ್ಣವಾಗಿ ಪರಿವರ್ತಿಸಿ ಅದನ್ನು ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದರು . ಅನಂತರ ಸಂಸ್ಥೆಯ ಅಡಳಿತ ಮಂಡಳಿಯಲ್ಲಿ ಬಹುಸಂಖೆಯಲ್ಲಿದ್ದ ವ್ಯಾಪಾರಿ ಹಿನ್ನೆಲೆಯ ಸದಸ್ಯರುಗಳು  ಹಾಗೂ ಅಧ್ಯಕ್ಷಸ್ಥಾನದ ಮೇಲಿದ್ದ 'ಪೀಠಸ್ಥರನ್ನು' ನಯವಾಗಿ ಒಲಿಸಿಕೊಂಡು , ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿ, ಖಜಾನೆಯನ್ನು ತುಂಬಿದ್ದು  ಸ್ವಾಮಿಯವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇಪ್ಪತ್ತೆಂಟು ವರುಷಗಳ ಯಶಸ್ವೀ ಆಡಳಿತ ನೀಡಿ  2012ರಲ್ಲಿ ಯಾವುದೇ 'ಸದ್ದುಗದ್ದಲ' ವಿಲ್ಲದೆ, 'ಬಹುಪರಾಕ್'' ಗಳಿಲ್ಲದೆ  ಅಧ್ಯಕ್ಷ ಪೀಠದಿಂದ ನಿರ್ಗಮಿಸಿದರು . 

ಡಾ ಸ್ವಾಮಿ ಹಲವು ವಿಶ್ವ ವಿದ್ಯಾಲಯಗಳ ಸೆನೆಟ್ , ಸಿಂಡಿಕೇಟ್ ಸದಸ್ಯರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ . ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಇವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು  2007ನೇ   ವರ್ಷದಲ್ಲಿ   ಡಾ . ರಾಜಾ ರಾಮಣ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ . 

ಮಹಿಳೆಯರ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸ್ವಾಮಿ , ಮೊದಲಿಗೆ ರಾಜಾಜಿನಗರದಲ್ಲಿ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು , 1989ರಲ್ಲಿ ನಾನು ಆ ಸಂಸ್ಥೆಯನ್ನು ಸೇರಿದಾಗ ಸ್ವಾಮಿಯವರ ದೂರದರ್ಶಿತ್ವ ನನಗೆ ಸ್ಪಷ್ಟವಾಗಿ ತಿಳಿಯಿತು . ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ , ಬದಲಿಗೆ ಅದರಲ್ಲಿರುವ ಕ್ರಿಯಾಶೀಲ ವ್ಯಕ್ತಿಗಳು ಎಂಬುದನ್ನರಿತಿದ್ದ ಸ್ವಾಮಿ , ಕಾಲೇಜಿಗೆ ಅಧ್ಯಾಪಕರನ್ನು ನೇಮಿಸಿಕೊಳ್ಳುವಲ್ಲಿ ಜಾಹಿರಾತನ್ನು ನೀಡಿದ್ದರಾದರೂ , ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ತಮಗೆ ತಿಳಿದಿದ್ದ ಅಧ್ಯಾಪಕರುಗಳ ಮೂಲಕ ಕಣ್ಣಿಟ್ಟಿದ್ದರು . ಕೆಲವರನ್ನು ಅವರ ಸ್ನಾತಕೋತ್ತರ ಪದವಿ ಫಲಿತಾಂಶ ಬರುವ ಮೊದಲೇ ಭೇಟಿಮಾಡಿ ಸೂಕ್ತರು ಎಂದು ಕಂಡುಬಂದರೆ , ಅವರ ಫಲಿತಾಂಶ ಬರುವವರೆಗೂ ಕಾದು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳುತ್ತಿದ್ದುದು ಇಂದಿನ ಕಾರ್ಪೊರೆಟ್ ನಡೆಯನ್ನೂ ಮೀರಿದ್ದಾಗಿತ್ತು . ಮಹಿಳಾ ಕಾಲೇಜನ್ನಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಶಾಲೆಗಳನ್ನೂಸ್ವಾಮಿಯವರು ಸ್ಥಾಪಿಸಿದರು.  ತಮ್ಮ ಸಂಸ್ಥೆಯಲ್ಲಿ ಉದ್ಭವಿಸುತ್ತಿದ್ದ  ಸಮಸ್ಯೆ- ಭಿನ್ನಾಭಿಪ್ರಾಯಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸುತ್ತಿದ್ದ ಅವರ ಜಾಣ್ಮೆ ಅವರ ವಿಶೇಷ ಗುಣವೂ ಆಗಿತ್ತು. 

ಪಾರದರ್ಶಕತೆ , ಪ್ರಾಮಾಣಿಕತೆ ,ಶಿಸ್ತು ,ನೇರವಾಗಿ ನಿಷ್ಟುರವಾಗಿ ಹೇಳುವಿಕೆ , ಜಾತಿ - ಕುಲ ಯಾವುದನ್ನೂ ಗಮನಿಸದೆ ನಿಜವಾದ  'ಪ್ರತಿಭೆ'ಗೆ  ಸೂಕ್ತ ಮನ್ನಣೆ ನೀಡುವುದು ಷಡಾಕ್ಷರ ಸ್ವಾಮಿಯವರ ವ್ಯಕ್ತಿತ್ವ ,ಆಡಳಿತದಲ್ಲೂ ಇವುಗಳನ್ನು ಅವರು ಅಳವಡಿಸಿಕೊಂಡಿದ್ದರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ . ಎಂ . ಎಸ್ . ತಿಮ್ಮಪ್ಪ ಲೇಖಕಿಯೊಂದಿಗಿನ ಸಂಭಾಷಣೆಯಲ್ಲಿ ನೆನೆದರು . 

ಒಟ್ಟಾರೆಯಾಗಿ ಒಬ್ಬ ವಿದ್ವಾಂಸ , ಉತ್ತಮ ಆಡಳಿತಗಾರ , ಸಾಮಾಜಿಕ ಕಳಕಳಿಯುಳ್ಳ ,ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕ್ಷೇತ್ರದ ಮೇರು ಸಾಧಕ ಷಡಾಕ್ಷರ ಸ್ವಾಮಿಯವರ ನಿಧನ ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎನ್ನುವ  ಮಾತು ಉಪಚಾರಕ್ಕೆ ಹೇಳುವುದಲ್ಲ  ಬದಲಿಗೆ ಮೌಲ್ಯಯುತವಾದದ್ದು .