Sunday 13 March 2016

ಗುರುತ್ವದ ಅಲೆಗಳು - Gravitational waves

ವಿಜ್ಞಾನಿಗಳು    ' ಕಾಲ - ದೇಶದ ಹರವಿನಲ್ಲಿ' (Space-Time), ಗುರುತ್ವ ಅಲೆಗಳು(Gravitational Waves) ಇರುವಿಕೆಯನ್ನು ಪ್ರಯೋಗಗಳು ಸಾಬೀತು ಪಡಿಸಿರುವ ವಿಷಯವನ್ನು, 11/2/2015 ರಾತ್ರಿ ಕಿಕ್ಕಿರಿದು ತುಂಬಿದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸುವ ಮೂಲಕ   ವಿಶ್ವದ ರಚನೆ ಅಸ್ತಿತ್ವದ  ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆಯನ್ನು ಒದಗಿಸಿದರು  . ಅರ್ಥಾತ್ ಈ ಗುರುತ್ವದ  ಅಲೆಗಳು   ಮೂಲಕ  ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ  ಸಂಭಾಷಿಸಿದೆ.   


 ಐನ್ಸ್ಟೀನ್ ರವರು  1916ನೇ ಇಸವಿಯಲ್ಲಿ ಮಂಡಿಸಿದ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತ , ಕಾಲ -ದೇಶ ಬೇರೆ ಬೇರೆಯಲ್ಲ ಬದಲಿಗೆ ಅವೆರಡೂ ಒಂದರೊಳಗೊಂದು ಹೆಣೆದುಕೊಂಡಿವೆ ಎಂಬ ಸತ್ಯವನ್ನು ನಮ್ಮೆದುರು ತೆರೆದಿಟ್ಟಿತು . ಇದು ಅದುವರೆಗೂ ಅಸ್ತಿತ್ವದಲ್ಲಿದ್ದ  ಕಾಲ-ದೇಶಗಳು ವಿಭಿನ್ನ ಎಂಬ  ಹದಿನೇಳನೆ ಶತಮಾನದಲ್ಲಿ  ಐಸ್ಯಾಕ್ ನ್ಯೂಟನ್  ಮಂಡಿಸಿದ ಸಿದ್ದಾಂತವನ್ನು ಮೇಲ್ದರ್ಜೆಗಗೇರಿಸಿತು . ವಿಶ್ವದ ಬಗೆಗೆ ಹೊಸ ಹೊಳಹುಗಳನ್ನು ನಮಗೆ ನೀಡಿತ್ತು . 1919ರ ಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು  ಆರ್ಥರ್ ಎಡ್ಡಿಂಗ್ಟನ್ ಸಾಬೀತು ಪಡಿಸಿದಾಗ ಐನ್ಸ್ಟೀನ್ ಅವರ ಸಿದ್ಧಾಂತಕ್ಕೆ ಮೊತ್ತಮೊದಲ ಪ್ರಾಯೋಗಿಕ ಪುರಾವೆ ದೊರಕಿತ್ತು .  ಇದಾದ ಸುಮಾರು ಒಂದು ಶತಮಾನದ ನಂತರ ಗುರುತ್ವ ಅಲೆಗಳ ಇರುವಿಕೆಯು  ಸಾಬೀತಾಗಿರುವುದು ಈ ಸಿದ್ದಾಂತಕ್ಕೆ ಸಿಕ್ಕಿರುವ ಎರಡನೇ ಪ್ರಾಯೋಗಿಕ ಪುರಾವೆ . 

The LIGO Scientific collaboration(LSC)    ಹದಿನೈದು ದೇಶಗಳ ಹನ್ನೆರಡಕ್ಕೂ ಹೆಚ್ಚು ಸಂಸ್ಥೆಗಳ ಸಾವಿರಾರು ವಿಜ್ಞಾನಿಗಳ ಒಂದು ಸಮೂಹವಾಗಿದ್ದು 1990ರ ದಶಕದಲ್ಲಿ ರಲ್ಲಿ ಪ್ರಾರಂಭವಾಯಿತು . ಭಾರತವೂ ಈ ಸಮೂಹದಲ್ಲಿ ಭಾಗಿಯಾಗಿದೆ .   ಗುರುತ್ವ ಅಲೆಗಳನ್ನು ಕಂಡು ಹಿಡಿಯುವ   ಭೌತವಿಜ್ಞಾನದ ಬಹು ದೊಡ್ದ  ಮತ್ತು ಸೂಕ್ಷ್ಮ ಪ್ರಯೋಗವನ್ನು  ಪ್ರಯೋಗವನ್ನು ತನ್ನ  Laser Interferometer Gravitational-Wave Observatory (LIGO)ಗಳ ಮೂಲಕ ನಡೆಸುತ್ತಾ ಬಂದಿದೆ.   ಒಂದರಸುತ್ತ ಮತ್ತೊಂದು ಸುತ್ತುವ  ಎರಡು   ಕಪ್ಪುಕುಳಿಗಳು  ಪರಸ್ಪರ ಸಂಯೋಗಗೊಂಡಾಗ ಅವುಗಳು ಸೃಷ್ಟಿಸಿದ ಗುರುತ್ವದ ಅಲೆಗಳು 2015ರ ಸೆಪ್ಟೆಂಬರ್ ಹದಿನಾಲ್ಕರಂದು ಅಮೆರಿಕದ Hanford ನಲ್ಲಿರುವ LIGO ವೇದಶಾಲೆಯಲ್ಲಿ ತಮ್ಮ 'ಸಹಿ ಮೂಡಿಸಿದವು'.  ಈ  ಕಪ್ಪುಕುಳಿಗಳು  ನಮ್ಮಿಂದ 1.3 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ , ಹಾಗಾಗಿ ಈ ಘಟನೆ ನಡೆದು 1.3 ಬಿಲಿಯನ್ ವರ್ಷಗಳಾಗಿವೆ . ಅಂದರೆ ಭೂಮಿಯಮೇಲೆ ಜೀವಿಯ ಉಗಮಕ್ಕೂ ಮುಂಚಿತವಾಗಿ ಜರುಗಿದೆ ! 

ಒಟ್ಟಾರೆಯಾಗಿ ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು , ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪ ನಮಗೆ ನೀಡಿರುವುದಲ್ಲದೆ , ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ .  

ಹೆಚ್ಚಿನ ವಿವರಗಳು :
https://www.theguardian.com/science/across-the-universe/live/2016/feb/11/gravitational-wave-announcement-latest-physics-einstein-ligo-black-holes-live

http://physics.aps.org/articles/v9/17

http://journals.aps.org/prl/abstract/10.1103/PhysRevLett.116.061102

http://journals.aps.org/prl/pdf/10.1103/PhysRevLett.116.061102