Sunday 1 September 2013

ಶಿಕ್ಷಕರ ದಿನಾಚರಣೆಯಂದು ನಿಮಗಿದೋ ನಮಸ್ಕಾರ ಮೇಷ್ಟ್ರೇ ........


ಪಾಠ ಹೇಳಿಕೊಟ್ಟ ಗುರುಗಳನ್ನು ನೆನೆಯಲು ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಎಂದರೆ ಅತಿಶಯೋಕ್ತಿಯೇನಿಲ್ಲ ಬಿಡಿ .  ಆದರೆ ಸೆಪ್ಟೆಂಬರ್   ಐದರಂದು   ಅದಕ್ಕಾಗೆ ಮೀಸಲಿರುವುದರಿಂದ ಎಂದೋ ಬರೆಯಬೇಕಾಗಿದ್ದ ಈ ವಿಷಯವನ್ನು ಇಂದು ಬರೆಯುತ್ತಿದ್ದೇನೆ ಅಷ್ಟೇ .
ನಮ್ಮ ಕಲಿಕೆಯ ವಿವಿದ ಹಂತಗಳಲ್ಲಿ ಹಲವಾರು ಗುರುಗಳು ನಮಗೆ ನೆರವಾಗಿರುತ್ತಾರೆ ಅವರೆಲ್ಲರಿಗೂ ಮೊದಲಿಗೆ ಕೃತಜ್ಞತೆಗಳನ್ನು ಅರ್ಪಿಸಿಬಿಡುತ್ತೇನೆ . ಅನಂತರ ಇಬ್ಬರು ವಿಶೇಷವಾದ ಗುರುಗಳಬಗ್ಗೆ ನಿಮಗೆ ತಿಳಿಸುತ್ತೇನೆ .
ಡಾ . ಸಿ.  ಅರ್.   ರಾಮಸ್ವಾಮಿ  ಮತ್ತು ಡಾ .  ಎಂ.  ಜಿ.   ನರಸಿಂಹನ್ ಅವರೇ ಈ ಇಬ್ಬರು ಗುರುಗಳು . 

PhD ಮಹಾಪ್ರಬಂದವನ್ನು ಸಮರ್ಥಿಸಿಕೊಂಡ ದಿನ (2000,ಸೆಪ್ಟೆಂಬರ್ ), ನನ್ನ ಕುಟುಂಬ, ಗುರುಗಳಾದ  ರಾಮಸ್ವಾಮಿ ಮತ್ತು ನರಸಿಂಹನ್ ಅವರೊಂದಿಗೆ ,ಹಂಪಿ ವಿ ವಿ ಯಲ್ಲಿ . ಅಪ್ಪನ ಹೆಗಲಲ್ಲಿರುವ ಪಲ್ಲವಿ ನಾಲ್ಕು ತಿಂಗಳ ಮಗು .

ರಾಮಸ್ವಾಮಿ ಬೆಂಗಳೂರು ವಿಶ್ವವಿದ್ಯಾಲದಲ್ಲಿ ನ್ಯೂಕ್ಲಿಯಾರ್ ಪಿಸಿಕ್ಸ್ ನ ಪ್ರೊಫೆಸರ್ ಆಗಿದ್ದರೆ  ನರಸಿಂಹನ್ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವವರು . 

1996 ರ ಒಂದುದಿನ .
**********************
1996 ರ ಒಂದು ದಿನ ಕೈಯ್ಯಲ್ಲಿ ಅರ್ಜಿಯೊಂದನ್ನು ಹಿಡಿದ ನಾನು ಬೆಂಗಳೂರು ವಿಶ್ವವಿದ್ಯಾಲಯದ ರಾಮಸ್ವಾಮಿಯವರ ಕೊಠಡಿಗೆ ತೆರಳಿ "ಮೇಷ್ಟ್ರೇ ಇದಕ್ಕೆ ಸೈನು ಮಾಡಿ" ಎಂದೆ . ಅವಕ್ಕಾದ ಮೇಷ್ಟ್ರು "ಏನದು "ಎಂದರು "PhD ಗೆ ಅಪ್ಲೈ ಮಾಡಲು ಅರ್ಜಿ" ಎಂದೆ ." ಯಾವ ವಿಷಯ ,ಯಾವ ವಿಶ್ವವಿದ್ಯಾಲಯ ,ಏನುಕತೆ" ಎಂದು ವಿಚಾರಿಸಿದರು .
"ಹಂಪಿ ಕನ್ನಡ ವಿಶ್ವವಿದ್ಯಾಲಯ , ಭೌತಶಾಸ್ತ್ರ ಮತ್ತು ಇತಿಹಾಸ ಸಮ್ಮಿಲನಗೊಂಡ ವಿಷಯ" ಎಂದೆ . "ನನಗಿದು ಹೊಸದು ಅಷ್ಟಾಗಿ ತಿಳಿಯದು" ಎಂದು ಪ್ರಾಂಜಲ ಮನಸ್ಸಿನಿಂದ ಹೇಳಿದರು . ಆಗ ನಾನು "ಮೇಷ್ಟ್ರೇ ನನಗೂ ಅಷ್ಟಾಗಿ ತಿಳಿಯದು ಅಧ್ಯಯನ ಮಾಡುತ್ತಾ ಸಾಗೋಣ , ಮುಂದಿನದನ್ನು ನೋಡೋಣ" ಎಂದೆ . "ಅಕಸ್ಮಾತ್ ನಿನ್ನ ಕೆಲಸಕ್ಕೆ PhD ಬರದಿದ್ದರೆ" ಎಂದರು ," ಪರವಾಗಿಲ್ಲ"  ಎಂಬ ಉತ್ತರ ಕೊಟ್ಟ ಮೇಲೆ ಅರ್ಜಿಗೆ ಸಹಿ ಮಾಡಿದರು . ವಿಶ್ವವಿದ್ಯಾಲಯಕ್ಕೆ ಅಪ್ಲೈ ಮಾಡಿ ನನ್ನ ಹೆಸರನ್ನು ನೊಂದಾಯಿಸಿ ಕೊಂಡೆ ( ಈ ರಾಮಾಯಣಕ್ಕೆ ಮುಂಚೆ ಪ್ರವೇಶ ಪರೀಕ್ಷೆ ಬರೆದು ಪಾಸು ಮಾಡಿದ್ದೆ ). 


ಹಿನ್ನಲೆ
***********
ನಾನು MSc ಪಾಸು (ಫಸ್ಟ್ ಕ್ಲಾಸು )ಮಾಡಿದ ತರುವಾಯದಲ್ಲಿ ಆಗಾಗ ಸಿಕ್ಕಾಗಲೆಲ್ಲ ರಾಮಸ್ವಾಮಿ ಮೇಷ್ಟ್ರು "ಕಮಲಾ ನೀನು ಇನ್ನೂ ಏಕೆ PhD ಮಾಡಿಲ್ಲ ಬೇಗನೆ ಮಾಡು" ಎಂದು ಹೇಳುತ್ತಿದ್ದರು . ಆಗೆಲ್ಲಾ ನಾನು "ಮೇಷ್ಟ್ರೇ ನೀವು ಗೈಡ್ ಮಾಡುವುದಾದರೆ ನಾನು ಮಾಡುತ್ತೇನೆ" ಎನ್ನುತ್ತಿದ್ದೆ . ಆದರೆ ಮದುವೆ ಮಕ್ಕಳು ಸಂ-ಸಾರ ಎಂದೆಲ್ಲಾ ಸಿಕ್ಕಿಹಾಕಿಕೊಂಡಮೇಲೆ (ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಮಾಡುವ ತಪ್ಪು /ಸರಿ ?)  ಅಧ್ಯಯನಕ್ಕೆ ಪುರುಸೊತ್ತೇ ಸಿಕ್ಕಿರಲಿಲ್ಲ . ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅಧ್ಯಯನದ ಬಗ್ಗೆ ತೀವ್ರ ಆಸಕ್ತಿ ವಹಿಸಿ ನನ್ನ ಫೀಲ್ಡ್ಅನ್ನು ಗುರುತಿಸಿಕೊಂಡು ಅದಕ್ಕೆ ಸ್ಪಂದಿಸಿದ ವಿಶ್ವವಿದ್ಯಾಲಯವನ್ನು ಹುಡುಕಿ ಪ್ರವೇಶ ಪರೀಕ್ಷೆ ಬರೆದು ಪಾಸುಮಾಡಿ ಓದಲು ತಯಾರಾಗಿ ನಿಂತುಬಿಟ್ಟೆ . ಆಗಲೇ ನಾನು ಅರ್ಜಿ ಹಿಡಿದು ಮೇಷ್ಟ್ರ ಬಳಿ ಓಡಿದ್ದು . ನನ್ನ ಹುಂಬತನ ಹುಚ್ಚು ಯಾವುದನ್ನೂ ಪರಿಗಣಿಸದೆ ಈಕೆ ಮಾಡಬಲ್ಲಳು ಎಂಬ ನಂಬುಗೆಯಿಂದ ಒಮ್ಮೆಗೇ ಅರ್ಜಿಗೆ ಸಹಿ ಹಾಕಿದರಲ್ಲ ಅದು ರಾಮಸ್ವಾಮಿ ಮೇಷ್ಟ್ರ ದೊಡ್ಡತನ . 


ಮುನ್ನಲೆ
***********
ಅರ್ಜಿ ಹಾಕಿದರೆ ಮುಗಿಯಿತೇ ? ಇಲ್ಲ ಅದು ಪ್ರಾರಂಭವಷ್ಟೇ .
ಒಂದೆರಡು ಬಾರಿ ನಾನು ಮತ್ತು ರಾಮಸ್ವಾಮಿ ಮೇಷ್ಟ್ರು ಭೇಟಿಯಾಗಿ  ವಿಷಯವನ್ನು ಚರ್ಚಿಸತೊಡಗಿದೆವು .
ಕೊನೆಗೆ ವಸಾಹತುಶಾಹಿ ಸನ್ನಿವೇಶದ ವಿಜ್ಞಾನ ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರದ ಬೆಳವಣಿಗೆಯ ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು . ಆಗ ಮೇಷ್ಟ್ರು ವೃತ್ತಿನಿರತ ವಿಜ್ಞಾನ ಇತಿಹಾಸಕಾರ ಮತ್ತು ತತ್ವಶಾಸ್ತ್ರಜ್ಞರೊಬ್ಬರು ಜೊತೆಗಿದ್ದರೆ ಒಳ್ಳೆಯದು ಎಂದರು . ನನಗೂ ಸರಿ ಎನ್ನಿಸಿತು . ಆಗ ದುರ್ಬೀನು ಹಾಕಿಕೊಂಡು ಇವರನ್ನು ಹುಡುಕಲು ಶುರುಮಾಡಿದೆ . 


1997 ರ ಒಂದುದಿನ
********************

ಬಸವನಗುಡಿಯ ಬಿ ಪಿ ವಾಡಿಯ ರಸ್ತೆಯಲ್ಲಿರುವ Indian Institute Of World Culture ನಲ್ಲಿ Great Experiments In Science ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಜನ ಉತ್ತಮೋತ್ತಮ ವಿಜ್ಞಾನಿಗಳು ಭಾಷಣ ಮಾಡಿದರು . ಆ ದಿನದ ಒಂದು ಭಾಷಣ "ಕ್ವಾಂಟಮ್ ಭೌತಶಾಸ್ತ್ರ" ದ ಬೆಳವಣಿಗೆಯ  ಬಗೆಗೆ ವಿಶ್ಲೇಷಣಾತ್ಮಕವಾದ ಭಾಷಣವಾಗಿತ್ತು . ಅದನ್ನು ಕೇಳಿದ ಕೂಡಲೇ ನಾನು ಹುಡುಕುತ್ತಿರುವ ಗುರು ಈ ಭಾಷಣಕರ್ತ ಎಂಬುದು ಸ್ಪಷ್ಟವಾಗಿ ಹೋಯಿತು . ಕಾರ್ಯಕ್ರಮ ಮುಗಿಯುವವರೆಗೂ ಕಾದಿದ್ದ ನಾನು , ಮುಗಿದ ಕೂಡಲೇ ಅವರ ಬಳಿ ತೆರಳಿ ನನ್ನ ಪ್ರವರ ಹೇಳಿಕೊಂಡೆ . ನನ್ನ ಸಂಶೋಧನಾ ಅಭಿಯಾನಕ್ಕೆ ತಾವೂ ಸಹ ಮಾರ್ಗದರ್ಶಕರಾಗಬೇಕು ಎಂದು ವಿನಂತಿಸಿದೆ . ಹೆಚ್ಚಿನದೇನನ್ನೂ ಕೇಳದೆ ನಿಂತನೆಲದಲ್ಲೇ ಆಯಿತು ಮಾರ್ಗದರ್ಶನ ಮಾಡುತ್ತೇನೆ ಎಂದುಬಿಟ್ಟರು ಡಾ ಎಂ ಜಿ  ನರಸಿಂಹನ್ . ನನಗೆ ಬೇಕಾದ ಗುರು ಯಾವ ವಶೀಲಿ ಬಾಜಿ ಇಲ್ಲದೆ ಗುರುತು ಪರಿಚಯವೂ ಇಲ್ಲದೆ ಸಿಕ್ಕಿಬಿಟ್ಟಿದ್ದರು .
"ಆದರೆ" ಎಂದರು ನರಸಿಂಹನ್  , "ಏನು ಮೇಷ್ಟ್ರೇ", ಎಂದೆ  "ನಾನು Junior college ನಲ್ಲಿ ಪಾಠ ಮಾಡುತ್ತಿರುವ ಮೇಷ್ಟ್ರು ನೀವು Degree College ನಲ್ಲಿ ಪಾಠ ಮಾಡುತ್ತಿದ್ದೀರಿ ಪರವಾಗಿಲ್ಲವೋ" ಎಂದರು . "ನಿಮ್ಮಲ್ಲಿ ವಿದ್ವತ್ತು ಇದೆ ನನಗೆ ಕಲಿಯುವ ಆಸಕ್ತಿಯಿದೆ ಅಲ್ಲಿಗೆ ಮುಗಿಯಿತು" ಎಂದೆ . "ವಿಶ್ವವಿದ್ಯಾಲಯದವರು ಒಪ್ಪುತ್ತಾರೊ ?" ಎಂದರು "ಅದು ನನಗಿರಲಿ" ಎಂದು ಹೇಳಿ ಮನೆಗೆ ಬಂದೆ .  ಇದಾದ ಕೆಲವೇ ದಿನಗಳಲ್ಲಿ ನರಸಿಂಹನ್ National Institute Of Advance Studies ಇಲ್ಲಿಗೆ ನಿಯೋಜನೆಗೊಂಡರು . ಅಲ್ಲಿಂದಾಚೆಗೆ ಎಲ್ಲ ಸಂಕಷ್ಟಗಳೂ ಪರಿಹಾರವಾದವು . 

1997 ರಿಂದ  PhD ಪದವಿಯವರೆಗೆ
************************
ಇಬ್ಬರೂ ಗುರುಗಳು ಸಿಕ್ಕಿದ ಮೇಲೆ ಸಾಕಷ್ಟು ವಿಸ್ತೃತವಾದ ಚರ್ಚೆ ಆದನಂತರ "ಪ್ರಬಂದದ ಸಾರಾಂಶ" ವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಯಿತು . ವಿ ವಿ ಯವರು ನಡೆಸುವ ಸಂಶೋಧನಾ ಕಮ್ಮಟಗಳಲ್ಲಿ ಭಾಗವಹಿಸಿ ಸಣ್ಣ ಪುಟ್ಟ ಪ್ರಭಂದಗಳನ್ನು ಮಂಡಿಸಿ ಆಸ್ತಿತ್ವ ಸ್ಥಾಪಿಸಿದ್ದಾಯಿತು . ನಿದ್ದೆ ಎಂಬುದು ಕನಸಿನ ಗಂಟಾಗಿ ಹೋಗಿತ್ತು . ಒಂದೆಡೆ ಮನೆ ಕೆಲಸ ,ಮತ್ತೊಂದೆಡೆ ಕಾಲೇಜು ಕೆಲಸ ಇದರ ಜೊತೆಗೆ U  K G ಓದುತ್ತಿದ್ದ ನನ್ನ ಪುಟ್ಟ ಕೂಸು ನಿರಂಜನ ಇವೆಲ್ಲದರ ಜೊತೆಗೆ PhD ಅಧ್ಯಯನ ಸಾಗಿತ್ತು . ಹೀಗಿರಲಾಗಿ ಒಂದು ದಿನ ನಾನು  NIAS ಗೆ ತೆರಳಿದ್ದಾಗ ನನ್ನ ಪರಿಪಾಟಲು ಕಂಡು ಮೇಷ್ಟ್ರಿಗೆ ಏನನ್ನಿಸಿತೋ ಏನೋ "ಕಮಲಾ  ಇನ್ನು ಮುಂದೆ ನೀನಿರುವಲ್ಲಿಗೆ ಬಂದು ನಾನು ಪಾಠ ಹೇಳುತ್ತೇನೆ , ನೀನು ಇಷ್ಟೊಂದು ಕಷ್ಟ ಪಡುವುದು ಬೇಡ " ಎಂದು ಬಿಟ್ಟರು . ಒಂದು ಕ್ಷಣ ನನಗೆ ಮಾತು ಹೊರಡದಾಯಿತಾದರೂ , " ಮೇಷ್ಟ್ರೇ ನಿಮಗೇಕೆ ಕಷ್ಟ ಇದು ನನ್ನ ಕೆಲಸ  ನನಗೆ ಯಾವ ತೊಂದರೆಯೂ ಇಲ್ಲ ನಾನೇ ಬಂದು ಪಾಠ ಹೇಳಿಸಿಕೊಳ್ಳುತ್ತೇನೆ " ಎಂದೆ .
ಅದಕ್ಕೆ ಮೇಷ್ಟ್ರು " ಅದು ಹಾಗಲ್ಲ ಕಮಲಾ ಅವರೇ , PhD ಅಧ್ಯಯನ ಎಂಬುದು ಒಂದು ಸೃಜನಶೀಲ ಚಟುವಟಿಕೆ , ಇದಕ್ಕೆ ಮನಸ್ಸು ಆರಾಮವಾಗಿರಬೇಕು , ಓಡಾಡಿಕೊಂಡು ಹೆಚ್ಚು ಸಮಯವನ್ನು ವ್ಯಯಮಾಡಿ ಮಾಡತಕ್ಕದ್ದಲ್ಲ, ನಿಮ್ಮ ಸಮಯವನ್ನು ಅಧ್ಯಯನಕ್ಕೆ ವಿನಿಯೋಗಿಸಿ" ಎಂದು ಖಂಡಿತವಾಗಿ ಹೇಳಿಬಿಟ್ಟರು . ಇದಾದ ನಂತರ ಮುಂದೆ ಪದವಿ ಪಡೆಯುವ ವರೆಗೂ, ಅನಂತರವೂ, ಇಬ್ಬರೂ ಗುರುಗಳು ನಾನು ಓದುವಂತೆ ನೋಡಿಕೊಂಡರು . 

               ಪದವಿ ಪ್ರಧಾನ ಸಮಾರಂಭದ ದಿನ (2000,ಡಿಸೆಂಬರ್ ),ಪಲ್ಲವಿ ಏಳು ತಿಂಗಳ ಮಗು . 

PhD ಎಂಬುದು ಕೆಲವರಿಗೆ ದುಃಸ್ವಪ್ನ ದಂತೆ ಕಾಡಿ ಅಧ್ಯಯನ ಮುಗಿದ ಮೇಲೆ ಇನ್ನೆಂದಿಗೂ ಆ ದಿಕ್ಕಿನಲ್ಲಿ ತಲೆಹಾಕಿ ಮಲಗುವುದಿಲ್ಲ ಎಂಬ ಶಪಥವನ್ನು ಮಾಡಿಸಿಬಿಡುತ್ತದೆ . ಆದರೆ ಈ ಇಬ್ಬರೂ ಗುರುಗಳು ಅದಕ್ಕೆ ವಿರುದ್ದವಾಗಿ PhD ಅಧ್ಯಯನ ಮಾಡುವುದು ದೊಡ್ಡದಲ್ಲ , ಅನಂತರ ಅದರ ಪ್ರಯೋಜನ ಸಮಾಜಕ್ಕೆ ದಕ್ಕಬೇಕು ಎಂಬ ಉದಾತ್ತ ಆಶಯದೊಂದಿಗೆ ಶಿಷ್ಯರ ಮನಸ್ಸನ್ನು ಕಾದು ಅವರನ್ನು ಸಮಾಜಮುಖಿಯಾಗಿ ಆಲೋಚನೆ ಮಾಡುವಂತೆ ಮಾಡಿದ್ದಾರೆ . ಇದಕ್ಕಾಗಿ ಇವರಿಬ್ಬರೂ ಅಭಿನಂದನಾರ್ಹರು .
ನಿಮ್ಮಂತಹ ಗುರುಗಳ ಸಂತತಿ ಹೆಚ್ಚಾಗಲಿ ಎಂದು ಆಶಿಸುತ್ತಾ , ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ನಿಮಗೆ ಮತ್ತೊಮ್ಮೆ ನಮಸ್ಕರಿಸುತ್ತಾ ಈ ಲೇಖನ ಮುಗಿಸಲು ಇಚ್ಚಿಸುತ್ತೇನೆ .

Comments to this article can be sent at my email:yckamala@gmail.com