Friday 23 December 2016

ನೀಟ್ ಪರೀಕ್ಷೆ ಕನ್ನಡದಲ್ಲಿ ಬರೆಯುವ ಅವಕಾಶ ಕನ್ನಡ ಮಕ್ಕಳ ಹಕ್ಕು, ಅದು ಯಾರದೋ ದಯಪಾಲನೆಯಲ್ಲ .


ಮಾನ್ಯರೇ ,
ಕರ್ನಾಟಕ ರಾಜ್ಯದ ಜನಸಂಖ್ಯೆ ೨೦೧೧ ರ ಜನಗಣತಿಯ ಮಾಹಿತಿಯಂತೆ ೬ಕೋಟಿ ೧೧ ಲಕ್ಷ . ಈಗ ಇನ್ನು ಹೆಚ್ಚಾಗಿದೆ.
ಒಟ್ಟು ಜನಸಂಖ್ಯೆಯ ಸು.ಶೇಕಡಾ ೩೮ ರಷ್ಟು ಮಾತ್ರ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ . (ಕೆಳಗಿನ ಲಿಂಕ್ ನಲ್ಲಿ ಹೆಚ್ಚಿನ ವಿವರ ತಿಳಿಯಬಹುದು )
ನೀಟ್ ಪರೀಕ್ಷೆಯು ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ನಡೆದರೆ , ಕನ್ನಡದ ಮಕ್ಕಳಿಗೆ ಇದೊಂದು ಮಹಾ ಅನ್ಯಾಯ . ಅಷ್ಟಕ್ಕೂ ನಮ್ಮೆಲ್ಲರಿಗೂ ಬೆರಳ ತುದಿಯಲ್ಲಿ ಸಿಗುವ ಅಂಕಿ ಸಂಖ್ಯೆಗಳು ಸರ್ಕಾರಿ ಅಧಿಕಾರಿಗಳಿಗೆ ತತ್ಕ್ಷಣದಲ್ಲಿ ಸಿಗುವುದಿಲ್ಲವೇ ? ಈ ಅಂಕಿ ಸಂಖ್ಯೆ ನೋಡಿದ ಯಾರೇ ಆದರೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ .ಎಷ್ಟು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಪಿ ಯು ಸಿ ಓದಿದ್ದಾರೆ ಎನ್ನುವುದಕ್ಕಿಂತ , ಎಷ್ಟು ಜನ ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿ ವಿಜ್ಞಾನವನ್ನು ಅಭ್ಯಾಸ ಮಾಡಿದ್ದಾರೆ ಎಂಬುವುದು ಯೋಚಿಸಬೇಕಾದ ಪ್ರಶ್ನೆ . ವಾದ ವಿವಾದ ಏನೇ ಇದ್ದರೂ ,
"ಕನ್ನಡಲ್ಲಿ ಪರೀಕ್ಷೆ ಬರೆಯುವ ಅವಕಾಶ ಕನ್ನಡ ಮಕ್ಕಳ ಹಕ್ಕು, ಬದಲಿಗೆ ಅದು ಯಾರದೋ ದಯಪಾಲನೆಯಲ್ಲ".
ಈ ಘೋರ ದುರಂತ / ಅನ್ಯಾಯಕ್ಕೆ ನಮ್ಮ ಪ್ರತಿಭಟನೆಯನ್ನು ಸೂಚಿಸುತ್ತೇವೆ .
ಕಮಲಾ
http://raitamitra.kar.nic.in/stat/27.htm

http://www.census2011.co.in/census/state/karnataka.html
http://www.neet2017nic.in/

Tuesday 14 June 2016

ಡಿಜಿಟಲ್ ಕ್ರಾಂತಿ ಮತ್ತು ಭಾರತ ಪುಸ್ತಕ ಬಿಡುಗಡೆಯ ಕುರಿತು

ಮಾನ್ಯರೇ ,ನನ್ನ ಅನುವಾದಿತ ಪುಸ್ತಕ    ೧೯/೬/೨೦೧೬ ರರಂದು ಭಾನುವಾರ ಸಂಜೆ ೬ ೩೦ಕ್ಕೆ ಲೋಕಾರ್ಪಣೆ ಗೊಳ್ಳಲಿದೆ . ಈ ಪತ್ರದೊಂದಿಗೆ ಪುಸ್ತಕವನ್ನು ಪರಿಚಯಿಸುವ  ಮತ್ತು ನಿಮ್ಮನ್ನು ವೈಯುಕ್ತಿಕವಾಗಿ ಆಹ್ವಾನಿಸುವ ವಿಡಿಯೋ ಲಗತ್ತಿಸಿರುತ್ತೇನೆ . ದಯವಿಟ್ಟು ಬನ್ನಿ. ಬೆಂಗಳೂರಿನ ಅಗಾಧತೆ ಮತ್ತು ವಾಹನ ದಟ್ಟಣೆಯ ಕಿರಿ ಕಿರಿಯ ನಡುವೆ  ನಿಮ್ಮನ್ನು ಮುಖತಃ ಭೇಟಿಮಾಡಿ ಆಹ್ವಾನಿಸುವ ನನ್ನ ಆಸೆಯು ಕೈಗೂಡುವುದು ಕಷ್ಟವಾಗಿದೆ . ಸಮಯವನ್ನು ಗೌರವಿಸುವ ನೀವೆಲ್ಲರೂ ಅನ್ಯಥಾ ಭಾವಿಸದೆ ಕಾರ್ಯಕ್ರಮಕ್ಕೆ ಬರುವಿರೆಂದು ಆಶಿಸುತ್ತೇನೆ . ಅಂದು ನಿಮ್ಮನ್ನು ಎದುರುಗೊಳ್ಳಲು  ಕಾದಿರುತ್ತೇನೆ . ಬನ್ನಿ . ಕಮಲಾ 

Digital Kranti mattu Bhaarata ನನ್ನ ಅನುವಾದಿತ ಪುಸ್ತಕ "ಡಿಜಿಟಲ್ ಕ್ರಾಂತಿ ಮತ್ತು ಭಾರತ"ದ ಪರಿಚಯ ಈ ವಿಡಿಯೋದಲ್ಲಿ ಲಭ್ಯವಿದೆ .

















Monday 16 May 2016

ವೈಜ್ಞಾನಿಕ ಮನೋಭಾವದ ಬಗೆಗಿನ ಚರ್ಚೆ - Discussion about Scientific temper.







ದಿನಾಂಕ ೯-೩-೨೦೧೬ ರಂದು ಸಂಭವಿಸಿದ ಸೂರ್ಯಗ್ರಹಣ ಹಾಗೂ ವೈಜ್ಞಾನಿಕ ಮನೋಭಾವದ ಬಗೆಗೆ TV -9 ಸ್ಟುಡಿಯೋದಲ್ಲಿ ನಡೆದ   ಚರ್ಚೆ. 

Discussion at TV-9 channel about Total solar eclipse and Scientific temper . 


https://www.youtube.com/watch?v=xX_wvyrHUqc


Sunday 8 May 2016

ಡಿಜಿಟಲ್ ಕ್ರಾಂತಿ ಮತ್ತು ಭಾರತ : Digital kranti mattu Bhaatata



ನಾನು  ಅನುವಾದಿಸಿರುವ  ತಂತ್ರಜ್ಞಾನದ  ಪುಸ್ತಕ "ಡಿಜಿಟಲ್ ಕ್ರಾಂತಿ ಮತ್ತು ಭಾರತ " ವನ್ನು ಕರ್ನಾಟಕ ಸರ್ಕಾರದ ಸಂಸ್ಥೆಯಾದ ಕುವೆಂಪು ಭಾಷಾ ಭಾರತಿಯವರು ಪ್ರಕಟಿಸಿರುವರೆಂದು ತಿಳಿಸಲು ಸಂತೋಷಿಸುತ್ತೇನೆ . 
ಮೂಲ ಲೇಖಕರು : ಶಿವಾನಂದ ಕಣವಿ 
ಮೂಲಕೃತಿ : Sand to Silicon : The  amazing story of digital technology. 
ದಿನಾಂಕ ೧೯-೬-೨೦೧೬ರರಂದು ನ್ಯಾಷನಲ್ ಕಾಲೇಜಿನಲ್ಲಿ ಸಂಜೆ ೬ ಗಂಟೆಗೆ  ಪುಸ್ತಕದ ಬಿಡುಗಡೆ ಕಾರ್ಯಕ್ರಮವಿದೆ.  

Sunday 13 March 2016

ಗುರುತ್ವದ ಅಲೆಗಳು - Gravitational waves

ವಿಜ್ಞಾನಿಗಳು    ' ಕಾಲ - ದೇಶದ ಹರವಿನಲ್ಲಿ' (Space-Time), ಗುರುತ್ವ ಅಲೆಗಳು(Gravitational Waves) ಇರುವಿಕೆಯನ್ನು ಪ್ರಯೋಗಗಳು ಸಾಬೀತು ಪಡಿಸಿರುವ ವಿಷಯವನ್ನು, 11/2/2015 ರಾತ್ರಿ ಕಿಕ್ಕಿರಿದು ತುಂಬಿದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸುವ ಮೂಲಕ   ವಿಶ್ವದ ರಚನೆ ಅಸ್ತಿತ್ವದ  ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆಯನ್ನು ಒದಗಿಸಿದರು  . ಅರ್ಥಾತ್ ಈ ಗುರುತ್ವದ  ಅಲೆಗಳು   ಮೂಲಕ  ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ  ಸಂಭಾಷಿಸಿದೆ.   


 ಐನ್ಸ್ಟೀನ್ ರವರು  1916ನೇ ಇಸವಿಯಲ್ಲಿ ಮಂಡಿಸಿದ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತ , ಕಾಲ -ದೇಶ ಬೇರೆ ಬೇರೆಯಲ್ಲ ಬದಲಿಗೆ ಅವೆರಡೂ ಒಂದರೊಳಗೊಂದು ಹೆಣೆದುಕೊಂಡಿವೆ ಎಂಬ ಸತ್ಯವನ್ನು ನಮ್ಮೆದುರು ತೆರೆದಿಟ್ಟಿತು . ಇದು ಅದುವರೆಗೂ ಅಸ್ತಿತ್ವದಲ್ಲಿದ್ದ  ಕಾಲ-ದೇಶಗಳು ವಿಭಿನ್ನ ಎಂಬ  ಹದಿನೇಳನೆ ಶತಮಾನದಲ್ಲಿ  ಐಸ್ಯಾಕ್ ನ್ಯೂಟನ್  ಮಂಡಿಸಿದ ಸಿದ್ದಾಂತವನ್ನು ಮೇಲ್ದರ್ಜೆಗಗೇರಿಸಿತು . ವಿಶ್ವದ ಬಗೆಗೆ ಹೊಸ ಹೊಳಹುಗಳನ್ನು ನಮಗೆ ನೀಡಿತ್ತು . 1919ರ ಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು  ಆರ್ಥರ್ ಎಡ್ಡಿಂಗ್ಟನ್ ಸಾಬೀತು ಪಡಿಸಿದಾಗ ಐನ್ಸ್ಟೀನ್ ಅವರ ಸಿದ್ಧಾಂತಕ್ಕೆ ಮೊತ್ತಮೊದಲ ಪ್ರಾಯೋಗಿಕ ಪುರಾವೆ ದೊರಕಿತ್ತು .  ಇದಾದ ಸುಮಾರು ಒಂದು ಶತಮಾನದ ನಂತರ ಗುರುತ್ವ ಅಲೆಗಳ ಇರುವಿಕೆಯು  ಸಾಬೀತಾಗಿರುವುದು ಈ ಸಿದ್ದಾಂತಕ್ಕೆ ಸಿಕ್ಕಿರುವ ಎರಡನೇ ಪ್ರಾಯೋಗಿಕ ಪುರಾವೆ . 

The LIGO Scientific collaboration(LSC)    ಹದಿನೈದು ದೇಶಗಳ ಹನ್ನೆರಡಕ್ಕೂ ಹೆಚ್ಚು ಸಂಸ್ಥೆಗಳ ಸಾವಿರಾರು ವಿಜ್ಞಾನಿಗಳ ಒಂದು ಸಮೂಹವಾಗಿದ್ದು 1990ರ ದಶಕದಲ್ಲಿ ರಲ್ಲಿ ಪ್ರಾರಂಭವಾಯಿತು . ಭಾರತವೂ ಈ ಸಮೂಹದಲ್ಲಿ ಭಾಗಿಯಾಗಿದೆ .   ಗುರುತ್ವ ಅಲೆಗಳನ್ನು ಕಂಡು ಹಿಡಿಯುವ   ಭೌತವಿಜ್ಞಾನದ ಬಹು ದೊಡ್ದ  ಮತ್ತು ಸೂಕ್ಷ್ಮ ಪ್ರಯೋಗವನ್ನು  ಪ್ರಯೋಗವನ್ನು ತನ್ನ  Laser Interferometer Gravitational-Wave Observatory (LIGO)ಗಳ ಮೂಲಕ ನಡೆಸುತ್ತಾ ಬಂದಿದೆ.   ಒಂದರಸುತ್ತ ಮತ್ತೊಂದು ಸುತ್ತುವ  ಎರಡು   ಕಪ್ಪುಕುಳಿಗಳು  ಪರಸ್ಪರ ಸಂಯೋಗಗೊಂಡಾಗ ಅವುಗಳು ಸೃಷ್ಟಿಸಿದ ಗುರುತ್ವದ ಅಲೆಗಳು 2015ರ ಸೆಪ್ಟೆಂಬರ್ ಹದಿನಾಲ್ಕರಂದು ಅಮೆರಿಕದ Hanford ನಲ್ಲಿರುವ LIGO ವೇದಶಾಲೆಯಲ್ಲಿ ತಮ್ಮ 'ಸಹಿ ಮೂಡಿಸಿದವು'.  ಈ  ಕಪ್ಪುಕುಳಿಗಳು  ನಮ್ಮಿಂದ 1.3 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ , ಹಾಗಾಗಿ ಈ ಘಟನೆ ನಡೆದು 1.3 ಬಿಲಿಯನ್ ವರ್ಷಗಳಾಗಿವೆ . ಅಂದರೆ ಭೂಮಿಯಮೇಲೆ ಜೀವಿಯ ಉಗಮಕ್ಕೂ ಮುಂಚಿತವಾಗಿ ಜರುಗಿದೆ ! 

ಒಟ್ಟಾರೆಯಾಗಿ ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು , ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪ ನಮಗೆ ನೀಡಿರುವುದಲ್ಲದೆ , ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ .  

ಹೆಚ್ಚಿನ ವಿವರಗಳು :
https://www.theguardian.com/science/across-the-universe/live/2016/feb/11/gravitational-wave-announcement-latest-physics-einstein-ligo-black-holes-live

http://physics.aps.org/articles/v9/17

http://journals.aps.org/prl/abstract/10.1103/PhysRevLett.116.061102

http://journals.aps.org/prl/pdf/10.1103/PhysRevLett.116.061102

Saturday 23 January 2016

ಶಿಕ್ಷಣ ಕ್ಷೇತ್ರದ ಮೇರು ಸಾಧಕ ಡಾ.ಎಂ . ಷಡಾಕ್ಷರ ಸ್ವಾಮಿ








                            ಡಾ . ಎಂ . ಷಡಾಕ್ಷರ ಸ್ವಾಮಿ 

ಬೆಂಗಳೂರಿನ ಹೃದಯಭಾಗದಲ್ಲಿರುವ ಐತಿಹಾಸಿಕ ಕಟ್ಟಡ 'ಸೆಂಟ್ರಲ್ ಕಾಲೇಜು '.  ನೊಬೆಲ್ ಪ್ರಶಸ್ತಿ ವಿಜೇತ ಸಿ ವಿ ರಾಮನ್ ತಮ್ಮ ಸಂಶೋಧನೆಯನ್ನುಸಾರ್ವಜನಿಕವಾಗಿ ಉದ್ಘೋಷಿಸಿದ್ದು  ಇದೇ ಸೆಂಟ್ರಲ್ ಕಾಲೇಜಿನಲ್ಲಿ . ಭಾರತದ ಹಲವಾರು ಪ್ರತಿಭೆಗಳು ಅರಳಿರುವ ಜಾಗ ಈ ಸೆಂಟ್ರಲ್ ಕಾಲೇಜು .ಈ ಸಂಸ್ಥೆಗೆ 12/10/1917ರಲ್ಲಿ ಜನಿಸಿದ ಷಡಾಕ್ಷರ ಸ್ವಾಮಿ  ಸುಮಾರು ಹದಿನೈದು ವರುಷಗಳಿಗೂ ಹೆಚ್ಚು  ಕಾಲ( 1962 - 1977) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು   12/1/2016 ರಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು . ಅವರಿಗೆ 99 ವರ್ಷ ವಯಸ್ಸಾಗಿತ್ತು . 

ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ  ಎಂಎಸ್ಸಿ ಪದವಿ ಪಡೆದಿದ್ದ ಶ್ರೀಯುತರು , ಏಡಿನ್ಬರೋ (Edinburgh) ವಿಶ್ವವಿದ್ಯಾಲಯದಿಂದ  ಪಿಎಚ್. ಡಿ ಪದವಿ ಪಡೆದಿದ್ದರು . 1962 ರಲ್ಲಿ ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರವಹಿಸಿಕೊಂಡರು . 1964ರಲ್ಲಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ಅಂಗವಾಯಿತು . ಉನ್ನತಶಿಕ್ಷಣದ ಸಂಸ್ಥೆಯಾಗಿದ್ದ ಸೆಂಟ್ರಲ್ ಕಾಲೇಜನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಸ್ವಾಮಿಯವರ ಪಾತ್ರ ಅನನ್ಯವಾದದ್ದು . ಆದಾಗ್ಯೂ ಸ್ವಂತಂತ್ರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನ ಅವರ ಕೈತಪ್ಪಿ, ಡಾ ಎಚ್ ನರಸಿಂಹಯ್ಯ ನವರ ಪಾಲಾದದ್ದಕ್ಕೆ ಇವರಿಬ್ಬರೂ ಕಾರಣರಲ್ಲವಾದರೂ , ಅಷ್ಟರ ಮಟ್ಟಿಗೆ ಸ್ವಾಮಿಯವರಿಗಾದ ನಷ್ಟ ಎಂದಷ್ಟೇ ಹೇಳಬಹುದು.  ನರಸಿಂಹಯ್ಯನವರು ಉಪಕುಲಪತಿಗಳಾಗಿದ್ದಾಗ್ಯೂ ಸಹ ವಿಶ್ವವಿದ್ಯಾಲಕ್ಕೆ ಸಂಭಂಧಿಸಿದ ಎಲ್ಲ ಆಡಳಿತಾತ್ಮಕ ವಿಷಯಗಳನ್ನೂ ಸ್ವಾಮಿಯವರೊಂದಿಗೆ ಚರ್ಚಿಸಿದ ನಂತರವೇ ನಿರ್ಧಾರ ಕೈಗೊಳುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ವಾಮಿಯವರ ದೀರ್ಘಕಾಲದ ಒಡನಾಡಿ ಪ್ರೊ . ಜೆ.  ಅರ್ . ವಿಶ್ವನಾಥ್ ಲೇಖಕಿಗೆ  ತಿಳಿಸಿದರು . ಈ ನಡೆ ಈ ಇಬ್ಬರೂ ವ್ಯಕ್ತಿಗಳ ಮಾನಸಿಕ ಪ್ರಭುದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ .ಇವರಿಬ್ಬರೂ ತಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ಸೇವೆಗಾಗಿ ಭಿನ್ನಾಭಿಪ್ರಾಯವನ್ನೂ ಮೀರಿ ಸ್ನೇಹಪರರಾಗಿದ್ದದ್ದನ್ನು ಇವರಿಬ್ಬರೊಂದಿಗೂ ಬಹುಕಾಲ ಕಾರ್ಯನಿರ್ವಹಿಸಿರುವ  ನಾನು  ಕಂಡಿದ್ದೇನೆ .  ಆಡಳಿತದ ನೆಲೆಯಲ್ಲಿ ಮಾದರಿ ಎನಿಸಬಹುದಾದ ಉದಾಹರಣೆ ಇದಾಗಿದ್ದು , ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ . 

ಮೈಸೂರು ಮೂಲದ ಸ್ವಾಮಿಯವರ ಹೆಗ್ಗಳಿಕೆ ಇದ್ದದ್ದು ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ನೀಡಬೇಕೆಂಬ ಅವರ ಕಳಕಳಿ ಮತ್ತು ಬದ್ಧತೆಯಲ್ಲಿ .  ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲ ವೃತ್ತಿಯಿಂದ ವಿಶ್ರಾಂತರಾದ ಮೇಲೆ ಕೆಲವು ವರ್ಷಗಳ  ಕಾಲ ವಿಶ್ರಾಂತ ಜೀವನ ನಡೆಸಿದ ಅವರು, ತಮ್ಮ ಎರಡನೇ ಇನ್ನಿಂಗ್ಸ್ಅನ್ನು 1984ರಲ್ಲಿ  ಏಸ್ . ಜೆ . ಅರ್  ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆರಂಭಿಸಿದರು, ಆಗ ಅವರ ವಯಸ್ಸು ಅರವತ್ತೆಳು ! ಆ ದಿನಗಳಲ್ಲಿ  'ಪುಂಡರ ಕಾಲೇಜು ' ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನ ಆನಂದ ರಾವ್ ವೃತ್ತದ ಏಸ್ . ಜೆ  . ಆರ್ . ಕಾಲೇಜನ್ನು ಅಂದಿನ  ಪ್ರಿನ್ಸಿಪಾಲರಾಗಿದ್ದ ದಿವಂಗತ  ಆರ್  ರಾಚಪ್ಪನವರ ನೇತೃತ್ವದಲ್ಲಿ ಸಂಪೂರ್ಣವಾಗಿ ಪರಿವರ್ತಿಸಿ ಅದನ್ನು ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದರು . ಅನಂತರ ಸಂಸ್ಥೆಯ ಅಡಳಿತ ಮಂಡಳಿಯಲ್ಲಿ ಬಹುಸಂಖೆಯಲ್ಲಿದ್ದ ವ್ಯಾಪಾರಿ ಹಿನ್ನೆಲೆಯ ಸದಸ್ಯರುಗಳು  ಹಾಗೂ ಅಧ್ಯಕ್ಷಸ್ಥಾನದ ಮೇಲಿದ್ದ 'ಪೀಠಸ್ಥರನ್ನು' ನಯವಾಗಿ ಒಲಿಸಿಕೊಂಡು , ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿ, ಖಜಾನೆಯನ್ನು ತುಂಬಿದ್ದು  ಸ್ವಾಮಿಯವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇಪ್ಪತ್ತೆಂಟು ವರುಷಗಳ ಯಶಸ್ವೀ ಆಡಳಿತ ನೀಡಿ  2012ರಲ್ಲಿ ಯಾವುದೇ 'ಸದ್ದುಗದ್ದಲ' ವಿಲ್ಲದೆ, 'ಬಹುಪರಾಕ್'' ಗಳಿಲ್ಲದೆ  ಅಧ್ಯಕ್ಷ ಪೀಠದಿಂದ ನಿರ್ಗಮಿಸಿದರು . 

ಡಾ ಸ್ವಾಮಿ ಹಲವು ವಿಶ್ವ ವಿದ್ಯಾಲಯಗಳ ಸೆನೆಟ್ , ಸಿಂಡಿಕೇಟ್ ಸದಸ್ಯರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ . ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಇವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು  2007ನೇ   ವರ್ಷದಲ್ಲಿ   ಡಾ . ರಾಜಾ ರಾಮಣ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ . 

ಮಹಿಳೆಯರ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸ್ವಾಮಿ , ಮೊದಲಿಗೆ ರಾಜಾಜಿನಗರದಲ್ಲಿ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು , 1989ರಲ್ಲಿ ನಾನು ಆ ಸಂಸ್ಥೆಯನ್ನು ಸೇರಿದಾಗ ಸ್ವಾಮಿಯವರ ದೂರದರ್ಶಿತ್ವ ನನಗೆ ಸ್ಪಷ್ಟವಾಗಿ ತಿಳಿಯಿತು . ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ , ಬದಲಿಗೆ ಅದರಲ್ಲಿರುವ ಕ್ರಿಯಾಶೀಲ ವ್ಯಕ್ತಿಗಳು ಎಂಬುದನ್ನರಿತಿದ್ದ ಸ್ವಾಮಿ , ಕಾಲೇಜಿಗೆ ಅಧ್ಯಾಪಕರನ್ನು ನೇಮಿಸಿಕೊಳ್ಳುವಲ್ಲಿ ಜಾಹಿರಾತನ್ನು ನೀಡಿದ್ದರಾದರೂ , ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ತಮಗೆ ತಿಳಿದಿದ್ದ ಅಧ್ಯಾಪಕರುಗಳ ಮೂಲಕ ಕಣ್ಣಿಟ್ಟಿದ್ದರು . ಕೆಲವರನ್ನು ಅವರ ಸ್ನಾತಕೋತ್ತರ ಪದವಿ ಫಲಿತಾಂಶ ಬರುವ ಮೊದಲೇ ಭೇಟಿಮಾಡಿ ಸೂಕ್ತರು ಎಂದು ಕಂಡುಬಂದರೆ , ಅವರ ಫಲಿತಾಂಶ ಬರುವವರೆಗೂ ಕಾದು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳುತ್ತಿದ್ದುದು ಇಂದಿನ ಕಾರ್ಪೊರೆಟ್ ನಡೆಯನ್ನೂ ಮೀರಿದ್ದಾಗಿತ್ತು . ಮಹಿಳಾ ಕಾಲೇಜನ್ನಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಶಾಲೆಗಳನ್ನೂಸ್ವಾಮಿಯವರು ಸ್ಥಾಪಿಸಿದರು.  ತಮ್ಮ ಸಂಸ್ಥೆಯಲ್ಲಿ ಉದ್ಭವಿಸುತ್ತಿದ್ದ  ಸಮಸ್ಯೆ- ಭಿನ್ನಾಭಿಪ್ರಾಯಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸುತ್ತಿದ್ದ ಅವರ ಜಾಣ್ಮೆ ಅವರ ವಿಶೇಷ ಗುಣವೂ ಆಗಿತ್ತು. 

ಪಾರದರ್ಶಕತೆ , ಪ್ರಾಮಾಣಿಕತೆ ,ಶಿಸ್ತು ,ನೇರವಾಗಿ ನಿಷ್ಟುರವಾಗಿ ಹೇಳುವಿಕೆ , ಜಾತಿ - ಕುಲ ಯಾವುದನ್ನೂ ಗಮನಿಸದೆ ನಿಜವಾದ  'ಪ್ರತಿಭೆ'ಗೆ  ಸೂಕ್ತ ಮನ್ನಣೆ ನೀಡುವುದು ಷಡಾಕ್ಷರ ಸ್ವಾಮಿಯವರ ವ್ಯಕ್ತಿತ್ವ ,ಆಡಳಿತದಲ್ಲೂ ಇವುಗಳನ್ನು ಅವರು ಅಳವಡಿಸಿಕೊಂಡಿದ್ದರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ . ಎಂ . ಎಸ್ . ತಿಮ್ಮಪ್ಪ ಲೇಖಕಿಯೊಂದಿಗಿನ ಸಂಭಾಷಣೆಯಲ್ಲಿ ನೆನೆದರು . 

ಒಟ್ಟಾರೆಯಾಗಿ ಒಬ್ಬ ವಿದ್ವಾಂಸ , ಉತ್ತಮ ಆಡಳಿತಗಾರ , ಸಾಮಾಜಿಕ ಕಳಕಳಿಯುಳ್ಳ ,ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕ್ಷೇತ್ರದ ಮೇರು ಸಾಧಕ ಷಡಾಕ್ಷರ ಸ್ವಾಮಿಯವರ ನಿಧನ ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎನ್ನುವ  ಮಾತು ಉಪಚಾರಕ್ಕೆ ಹೇಳುವುದಲ್ಲ  ಬದಲಿಗೆ ಮೌಲ್ಯಯುತವಾದದ್ದು .