Friday 25 October 2013

ಸಂದರ್ಶನ ಮಾಡುವುದು ಒಂದು ಕುಶಲ ಕಲೆ . - Interviewing is an Art and Craft .


ಹಲವಾರು ದಿನಗಳಿಂದ ಕಾರಣಾಂತರಗಳಿಂದ ವಿಜ್ಞಾನ ಸಂವಹನೆಗಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ನೀಡುವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಮೂವರನ್ನು(ಒಟ್ಟು ಎಂಟು ಜನ ಇದ್ದಾರೆ )  ಸಂದರ್ಶಿಸುವ ಅಫೀಷಿಯಲ್ ಕೆಲಸ ಬಾಕಿ ಉಳಿದುಬಿಟ್ಟಿತ್ತು . ಮೂವರ ಅಪಾಯಿಂಟ್ ಮೆಂಟ್ ಅನ್ನು ಸಿನ್ಕ್ರೋನೈಸ್ ಮಾಡಿ ಒಂದೇ ದಿನದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಒಂದು ಸಾಧನೆಯೇ ಸೈ .
 ಈ ಮೂವರು ಹಿರಿಯರ ಮತ್ತು ಅವರ ಡಾಕ್ಟರುಗಳ ಅಪಾಯಿಂಟ್ಮೆಂಟ್ ಅನ್ನು ಅನುಸರಿಸಿ ನಿನ್ನೆಗೆ ಸಮಯ ಹೊಂದಿಕೆಯಾಯಿತು (25-10-2003).  ಭಟ್ಟರು (AKB) 24-10-2013 ರರ ಸಂಜೆ ಫೋನುಮಾಡಿ ಕಮಲಾ ಶನಿವಾರ  (26-10-2013) ನನಗೆ ಸ್ವಲ್ಪ ತೊಂದರೆಯಿದೆ ಶುಕ್ರವಾರವೇ  ಬಂದುಬಿಡು ಉಳಿದ ಇಬ್ಬರನ್ನು ಒಪ್ಪಿಸುವುದು ನನ್ನ ಕೆಲಸ ಎಂದಾಗ , ನನ್ನ ಕೆಲಸ ಸುಲಭವಾಯಿತು ಎಂದುಕೊಂಡು ಮನೆಕಡೆಗೆ ಎಲ್ಲ ವ್ಯವಸ್ಥೆಮಾಡಿ (ದೋಸೆಹಿಟ್ಟು,ಪಲ್ಯ , ಸಾರು ಇತ್ಯಾದಿ ) ಮೈಸೂರಿನ ಬಸ್ಸು ಹತ್ತಿ ಶುಕ್ರವಾರ  ಅಲ್ಲಿದ್ದೆ.

ರಾಯರು, ಭಟ್ಟರು ಮತ್ತು ಶ್ರೀಮತಿ ಇವರುಗಳು ಬರೆದ ವಿಜ್ಞಾನ ಸಾಹಿತ್ಯ ಓದುತ್ತಾ ಬೆಳೆದಿದ್ದ ನನಗೆ ಇದೊಂದು ಸುವರ್ಣ ಅವಕಾಶವಾಗಿತ್ತು .
ಜೆ ಎಲ್ ಲಕ್ಷ್ಮಣ ರಾವ್
ಕನ್ನಡದಲ್ಲಿ ವಿಜ್ಞಾನ ಸಂವಹನೆ ಯಾವ ಸನ್ನಿವೇಶದಲ್ಲಿ ಪ್ರಾರಂಭವಾಯಿತು ? ಆರಂಭದ ದಿನಗಳ ಕಷ್ಟನಷ್ಟಗಳು ಏನು ? ಕನ್ನಡದಲ್ಲಿ ವಿಜ್ಞಾನ ಪ್ರಸಾರದ   ಸಾಂಸ್ಥಿಕರಣವಾದ ಬಗೆ ಇತ್ಯಾದಿ ಇತ್ಯಾದಿ ಕೇಳುತ್ತಾ ಹೋದಂತೆ ನನಗೆ ಬೇಕು ಬೇಕಾದ ಅನೇಕ ವಸ್ತುನಿಷ್ಠ ವಿಷಯಗಳು ಸ್ಪಷ್ಟವಾಗಿ ಮೂಲ ಪುರುಷರಿಂದ ತಿಳಿಯುತ್ತಾ ಹೋಯಿತು . 
ಆದರೆ ಸಂದರ್ಶನ ಮಾಡುವಾಗ ಎಚ್ಚರಿಕೆಯಿಂದ ಚರ್ಚೆಯನ್ನು ಟ್ರಾಕ್ ಮೇಲೆ ಇಡದಿದ್ದರೆ ಸಂದರ್ಶಿಸುವವರಿಗೆ  ಅಷ್ಟರಮಟ್ಟಿಗೆ ಲಾಸ್ ಎಂದೇ ಹೇಳಬಹುದು . ನನ್ನ ಉಪನ್ಯಾಸಕ ವೃತ್ತಿ , ನಿರೂಪಕಿಯ ಪ್ರವೃತ್ತಿ , ಬರವಣಿಗೆಯ ಒಳತುಡಿತ ಇವೆಲ್ಲವೂ ಸೇರಿ ನಾನು ನಡೆಸಿದ ಮೊಟ್ಟ ಮೊದಲ "ಸರಣಿ ಸಂದರ್ಶನ"ದಲ್ಲಿ ಪರವಾಗಿಲ್ಲ ಎನಿಸಬಹುದಾಷ್ಟು ವಿಷಯ ಸಂಗ್ರಹಣೆ  ಮತ್ತು ತೃಪ್ತಿ ಪಡೆದಿದ್ದೇನೆ . 
ಶ್ರೀಮತಿ ಹರಿಪ್ರಸಾದ್


ಅಡ್ಯನಡ್ಕ ಕೃಷ್ಣಭಟ್
ಇನ್ನು ಈ ಮೂವರ ವಿಷಯದಲ್ಲೂ ಸಮಾನವಾಗಿ ಕಂಡ ಅಂಶವೆಂದರೆ ಜೀವನದಲ್ಲಿ ತಮಗೆದುರಾದ ಅನೇಕ ವೈಯುಕ್ತಿಕ ಏರುಪೇರುಗಳ ನಡುವೆಯೂ, ಕನ್ನಡದ ಕಂದಮ್ಮಗಳಿಗೆ , ಕನ್ನಡಿಗರಿಗೆ ವಿಜ್ಞಾನ ಸಾಹಿತ್ಯವನ್ನು ಒದಗಿಸಬೇಕೆಂಬ ಇವರುಗಳ ಕಳಕಳಿ ಮತ್ತು ಬದ್ದತೆ ಅನನ್ಯವಾದದ್ದು . ಇಂತಹ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ನಿಜವಾದರೂ , ಅವರು ಇದನ್ನೆಂದೂ ಕನಸಿನಲ್ಲಿಯೂ ಬಯಸಿ ಕೆಲಸ ಮಾಡಿದವರಲ್ಲ ಎಂಬುದೂ ಸಹ ಅಷ್ಟೇ ನಿಜವಾದುದು . 
ಹಲವುಬಾರಿ ಕ್ಯಾಮೆರಾ ಮುಂದೆ ಸ್ಟೈಲ್ ಆಗಿ ಕುಳಿತು ಸಂದರ್ಶನ ನೀಡಿದ್ದ ನನಗೆ ,ಕೊನೆಗೆ ಅನ್ನಿಸಿದ್ದು ಸಂದರ್ಶಿಸುವುದು ಒಂದು ಕುಶಲಕಲೆ ಎಂದು .