Thursday 27 June 2013

ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಹಾಗೂ (ಮಹಾಕೊಳಕಿಯೂ ).

ನಾನು ಮುಂಬೈಗೆ ಮೊತ್ತಮೊದಲ ಭೇಟಿಕೊಟ್ಟದ್ದು 1995 ರಲ್ಲಿ . ಸೌದಿಅರೆಬಿಯ ಹೋಗುವ ದಾರಿಯಲ್ಲಿ ವಿಮಾನ ನಿಲ್ದಾಣದ ನೆಲವನ್ನಷ್ಟೇ ಸ್ಪರ್ಶಿಸಿ ಮತ್ತೆ ಮೇಲೆ ಹಾರಿದ್ದೆ . ಅನಂತರದ ವರ್ಷಗಳಲ್ಲಿ ಹಲವಾರು ಬಾರಿ ಈ ಬೆಡಗಿಯ ಬಳಿ ಬಂದಿದ್ದೆನಾದರೂ ಕೆಲವು ಸನ್ನಿವೇಶಗಳು ಮಾತ್ರ ಸ್ವಾರಸ್ಯಕರ ವಾಗಿವೆ . ಅದರಲ್ಲಿ TIFR ನವರು YISC Young Indian Scientist Colloquium ಆಹ್ವಾನಿಸಿದಾಗ ಬಂದದ್ದೂ ಒಂದು . ಈಗ್ಗೆ ಕೆಲವರ್ಷಗಳ ಹಿಂದೆ YISC ಎಂಬ ಕಾರ್ಯಕ್ರಮ ನಡೆಸಿ ದೇಶಾದ್ಯಂತ ನೂರುಜನ ಕಾಲೇಜು ಅಧ್ಯಾಪಕರನ್ನು ಇದರಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು . ಅದರಲ್ಲಿ ನಾನೂ ಒಬ್ಬಳಾಗಿದ್ದೆ . ನನಗೆ ಪತ್ರಬಂದ ಕೂದಲೆ TIFRಗೆ ಮೇಲ್ ಮಾಡಿದ ನಾನು ಬೆಂಗಳೂರಿನಿಂದ ಬೇರೆಯಾರನ್ನು ಅಹ್ವಾನಿಸಿದ್ದೀರಿ ? ಎಂದು ಕೇಳಿದಾಗ ಶೋಭಾ ಮತ್ತು ಶರ್ಮಿಷ್ಠ ಎಂಬ ಹೆಸರನ್ನು ಕಳುಹಿಸಿದರು . ಅರೆರೆ ಈ TIFR ನವರಿಗೆ ನಮ್ಮ ಹೆಸರನ್ನು ಕೊಟ್ಟವರಾರು? ಅದರಲ್ಲೂ ನಾವು ಮೂವರೂ ಸ್ನೇಹಿತೆಯರೆಂದು ಇವರಿಗೆ ಹೇಳಿದವರಾರು ? (ಗೊತ್ತಿದ್ದರೆ ಕಳಿಸುತ್ತಿರಲಿಲ್ಲ ಬಿಡಿ ) ಎಂದೆಲ್ಲಾ ಯೊಚಿಸಿದೆವರಾದರೂ ಅದನ್ನು ಅಲ್ಲಿಗೆ ಬಿಟ್ಟು ಒಂದೇ ರೈಲಿಗೆ ಮತ್ತು ವಾಪಸು ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದೆವು . ಪ್ರಯಾಣಕ್ಕೆ ಅಗತ್ಯ ವಾದ ತಿಂಡಿ ತೀರ್ಥಗಳನ್ನು ಕಟ್ಟಿಕೊಂಡೆವು (ಹೇಳಿ ಕೇಳಿ ಮೂವರು ಹೆಂಗಸರು ). ಅನಂತರ ರೈಲನ್ನೇರಿದನಾವು ಅದೆಷ್ಟು ಮಾತನಾಡಿದ್ದೇವೆಂದರೆ ನಮ್ಮ "ಬಾಯಿ ಬೊಂಬಾಯಿ " ಯಾ ಮಾತು ನಡೆಯುತ್ತಿರುವಂತೆ ಮುಂಬೈ VT ನಿಲ್ದಾಣ ಬಂದೇ ಬಿಟ್ಟಿತು . ಅಲ್ಲಿನಂದ ನಮಗೆ ಗೊತ್ತು ಮಾಡಿದ್ದ ಮೇಡಂ ಕಾಮ ರಸ್ತೆಯ (ಚರ್ಚ್ ಗೇಟ್ ಪ್ರದೇಶ ) ವಸತಿಯಲ್ಲಿ ಉಳಿದೆವು . ಮಾರನೆಯದಿನ ಕೊಲಾಬದಲ್ಲಿರುವ TIFR ತಲುಪಿ ಉಪನ್ಯಾಸಗಳನ್ನು ಕೇಳಲು ಶುರುಮಾಡಿದೆವು . ಭಾರತದಲ್ಲಿ ಅತ್ಯುತ್ತಮವಾಗಿ ಸಂಶೂದನೆ ಮಾಡುತ್ತಿರುವ ಯುವ ವಿಜ್ಞಾನಿಗಳು 5 ದಿನಗಳ ಕಾಲ ಅವ್ಯಾಹತವಾಗಿ ನೀಡಿದ ಉತ್ತಮೋತ್ತಮ ಉಪನ್ಯಾಸಗಳು ಅವಾಗಿದ್ದವು . ಉಪನ್ಯಾಸದಬಗ್ಗೆ ಹೇಳಿ ನಿಮ್ಮತಲೆ ಕೊರೆಯಲಾರೆ , ಬದಲಿಗೆ ಮುಂಬೈನ ಬೇರೆ ಅನುಭವಗಳನ್ನು ನಿಮಗೆ ಹೇಳುತ್ತೇನೆ . ಅಲ್ಲಿದ್ದ ಐದೂ ದಿನವೂ ಬೆಳಗ್ಗೆ 5ಗಂಟೆಗೆ ಕಾಲಿಗೆ ಬೂಟು ಕಟ್ಟಿಕೊಂಡು ನಾನು ಶೋಭಾ ಊರು ಸುತ್ತಲು ಪ್ರಾರಂಬಿಸಿದರೆ (ಶರ್ಮಿಷ್ಠೆಗೆ ಅದರಲ್ಲಿ ಆಸಕ್ತಿಯಿಲ್ಲ ) 7 ಕ್ಕೆ ವಾಪಸು ಬಂದು ಉಪನ್ಯಾಸಕ್ಕೆ ಹೊರಡುವುದು ದಿನಚರಿಯಾಗಿತ್ತು . ಮುಂಬೈನ ಎಡ ಬಲ ಗಲೆಲ್ಲವನ್ನೂ ಸುತ್ತಿ ಮುಗಿಸಿದೆವು . ಇದೇನೂ ವಿಶೇಷವಲ್ಲ ಬಿಡಿ ಮುಂಬೈಗೆ ಬಂದವರೆಲ್ಲರೂ ನೋಡುತ್ತಾರೆ . ಆದರೆ ಕೆಲ ವಿಶೇಷವಿದೆ ಅದನ್ನು ಮಾತ್ರ ಹೇಳುತ್ತೇನೆ .

 Sea Link ಮತ್ತು ಬಾಂದ್ರ - ಕುರ್ಲಾ ಕಾಂಪ್ಲೆಕ್ಸು . 
------------------------------------------

ಕೊನೆಯದಿನ TIFR ನಲ್ಲಿ ಮದ್ಯಾನ್ಹಕ್ಕೆ ಕೆಲಸ ಮುಗಿಯಿತು . ನಮ್ಮ ವಿಮಾನ ಮರುದಿನ ಬೆಳಗ್ಗೆ ಇದ್ದುದರಿಂದ ಪೂರ ಅರ್ಧದಿನ ನಮ್ಮ ಕೈಯ್ಯಲ್ಲಿತ್ತು . ಶೋಭಾ "ಕಮಲಾ ಏನು ಮಾಡೋಣ ಎಂದರು ?". ಅದಾಗ ತಾನೇ ಕುರ್ಲಾ ಯಿಂದ ಬಾಂದ್ರಾ ಗೆ ಹೋಗುವ ಸಮುದ್ರ ಸೇತುವೆ ಉದ್ಘಾಟನೆ ಗೊಂಡಿದ್ದು ಬೆಂಗಳೂರಿನ ಪೇಪರ್ ಗಳಲ್ಲಿ ಮತ್ತು ಅಂತರಜಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು . ಆದ್ದರಿಂ"ದ "ನಡೆಯಿರಿ ಸಮುದ್ರದ ಸೇತುವೆಮೇಲೆ ಹೋಗೋಣ" ಎಂದೆ . ಕೊಲಬದ TIFR ಮುಂಬಾಗದಲ್ಲಿ ಟ್ಯಾಕ್ಸಿ ಹತ್ತಿ ಸ್ಟೈಲ್ಆಗಿ "ಬಾಂದ್ರಾಗೆ ಸೇತುವೆಮೇಲೆ ಹೋಗು" ಎಂದೆವು .ಆತ "ಸೇತುವೆ ಫೀಸು ನಿಮ್ಮದೇ " ಎಂದ . "ಆಯಿತಪ್ಪ ನಡಿ " ಎಂದು ಮಾತನಾಡುತ್ತಾ ಕುಳಿತೆವು . ಸೇತುವೆಯಮೇಲೆ ಹೋಗುವಾಗ ಮಜಾ ಎನಿಸಿತು . ಬಾಂದ್ರಾ ಬಂದ ಕೂಡಲೆ ಆತ "ಬಾಂದ್ರದಲ್ಲಿ ಎಲ್ಲಿಗೆ ಹೋಗಬೇಕು" ಎಂದ . "ಒಂದು ಕಾಂಪ್ಲೆಕ್ಸ್ ಗೆ ಬಿಡು ಎಂದೆವು "(ಎಲ್ಲಿಗೆ ಹೋಗಬೇಕು ಎಂದು ಯೋಚಿಸಿದ್ದರೆ ತಾನೇ?). ಆತ ಸೀದಾ ತಂದು "ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್ " ಬಳಿ ನಿಲ್ಲಿಸಿ "ಯೇ ಮುಂಬೈ ಕೆ ಸಬ್ ಸೆ ಬಡಾ ಕಾಂಪ್ಲೆಕ್ಸ್ ಹೈ . ಇಸ್ ಕಾ ನಮ್ ಹೈ ಬಾಂದ್ರಾ -ಕುರ್ಲಾ ಕಾಂಪ್ಲೆಕ್ಸ್ ಹೈ " ಎಂದು ಹೇಳಿ ದುಡ್ಡು ಪಡೆದು ಹೋದ . ಇತ್ತ ಶೋಭಾ "ಕಮಲಾ ಇದೇನಿದು ಕಾಂಕ್ರೀಟ್ ಕಾಡು , ಎನೂ ಅಂಗಡಿ ಮುಂಗಟ್ಟು ಕಾಣುತ್ತಿಲ್ಲ ಎಂದರು". ನಾನು ಕತ್ತೆತ್ತಿ ನೋಡಿದೆ National Stock Exchange(NSE) ಬೋರ್ಡ್ ದೊಡ್ಡ ಕಟದದ ಮೇಲೆ ಕಾಣಿಸಿತು . ಇತರೆ ಬ್ಯಾಂಕು ಆಫೀಸು ಗಳ ಬೋರ್ಡು ಕಂಡವು . ಆಗ ಶೋಭಾಗೆ ಹೇಳಿದೆ " ಶೋಭಕ್ಕ ನೀನು ಬ್ಯಾಂಕ್ ಆಫಿಸರನ ಹೆಂಡತಿಯಲ್ಲವೋ ಅದು ಡ್ರೈವರನಿಗೆ ಕನಸು ಬಿದ್ದಿರಬೇಕು ,ಆದ್ದರಿಂದಲೇ ಈ ಲಕ್ಷ್ಮೀ ಪೀಠದ ಮುಂದೆ ತಂದು ನಿಲ್ಲಿಸಿದ್ದಾನೆ , ಬಾ ಈ ಕಾಂಪ್ಲೆಕ್ಸ್ ನಲ್ಲಿ ಏನಿದೆ ನೋಡಿ ಬರೋಣ " ಎಂದೇ . ಆದರೆ ಅಂದು ಕಟ್ಟಡದಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಹುಸಿ ಕರೆ ಬಂದಿತ್ತಂತೆ ಹಾಗಾಗಿ ನಾವು ಒಳ ಹೋಗುವ ಬದಲು ಅಲ್ಲಿದ್ದವರನ್ನೇ ಹೊರ ಕಳುಹಿಸುತ್ತಿದ್ದರು . ಸೇತುವೆ ಮೇಲೆ ಬಂದದ್ದಷ್ಟೆ ಲಾಭ ಎಂದು ಕೊಂಡು ವಾಪಾಸು ಹೊರಟೆವು . 


ಮೊತ್ತಮೊದಲ ಲೋಕಲ್ ಟ್ರೈನ್ ಪ್ರಯಾಣ 
-------------------------------------
 ಮುಂಬೈ ಲೋಕಲ್ ಟ್ರೈನ್ ಬಗ್ಗೆ ಸಾಕಷ್ಟು ಕಥೆ ಕೇಳಿದ್ದೆವಾದರೂ ಅನುಭವ ಇರಲಿಲ್ಲ . ಆದ್ದರಿಂದ " ಶೋಭಾ ನಮಗೆ ಊರು 
 ಕೇರಿ ಸರಿಯಾಗಿ ಗೊತ್ತಿಲ್ಲ , ಆದ್ದರಿಂದ ಸುಮ್ಮನೆ ಬಾಂದ್ರಾದಿಂದ ರೈಲು ಹತ್ತಿ ಚರ್ಚ್ ಗೇಟ್ ಗೆ ಹೋಗೋಣ " ಎಂದೆ . ಶೋಭಾ ಸುಮ್ಮನೆ ತಲೆ ಆಡಿಸಿದರು (ಬೇರೆನು ಮಾಡಲು ಸಾಧ್ಯ ಹೇಳಿ ?). ಬಾಂದ್ರ ನಿಲ್ದಾಣಕ್ಕೆ ಬಂದು ಒಬ್ಬರಿಗೆ 6 ರುಪಾಯಿ ಕೊಟ್ಟು ಚರ್ಚ್ ಗೇಟ್ ರೈಲು ಹತ್ತಿದೆವು . ಕೇವಲ ಹದಿನೈದು ನಿಮಿಷದಲ್ಲಿ ಚರ್ಚ್ ಗೇಟ್ ಗೆ ಬಂದು ಇಳಿದದ್ದು ಬೆಂಗಳೂರಿನ ನಮಗೆ ಸೋಜಿಗದಂತೆ ಕಂಡಿತು . (ಏಕೆಂದರೆ ಬೆಂಗಳೂರಿನಲ್ಲಿ ಕೆಲವೊಮ್ಮೆ 4 ಕಿ ಮಿ ದಾರಿ ಒಂದು ಗಂಟೆ ತೆಗೆದು ಕೊಳ್ಳುತ್ತದೆ!!!!!!!!!! ). ನಾವು ರಾತ್ರಿ ರೂಮಿಗೆ ಬಂದು ಫೋನು ಮಾಡಿ ಹೇಳಿದ್ದೆ ಹೇಳಿದ್ದು (ಕಂಡಿರಲಿಲ್ಲ ವಲ್ಲ ಅದಕ್ಕೆ . ಈಗ ಬಿಡಿ ವಿವಿದ ಲೈನುಗಳು ಸ್ಟೇಷನ್ ಗಳು ಅಲ್ಪ ಸ್ವಲ್ಪ ಗೊತ್ತಾಗಿದೆ ). ಅನಂತರ ನಿದ್ದೆ ಮಾಡಿ ಮೇಲೆದ್ದು ದಡಬಡಾಯಿಸಿ ಪ್ಯಾಕ್ ಮಾಡಿಕೊಂಡು ವಿಮಾನವೇರಿ ಬೆಂಗಳೂರಿಗೆ ಬಂದೆವು . ಹೀಗಿತ್ತು ನಮ್ಮ ವಿಶೇಷ ಅನುಭವ . ಇದೆಲ್ಲಾ ಯಾಕೆ ಜ್ಞಾಪಕಕ್ಕೆ ಬಂತು ಎಂದರೆ ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಮತ್ತು (ಮಹಾಕೊಳಕಿಯ ) ಬಳಿ ಹೋಗುವ ದಿನ ಮತ್ತೆ ಬಂದಿದೆ ಅದಕ್ಕೆ . ದೇಶದ ವಿವಿದ ಪ್ರದೇಶದಿಂದ ಬರುವ ಅಕಾಡೆಮಿಕ್ ಸ್ನೇಹಿತರು , ಬೆಂಗಳೂರಿನ ಸ್ನೇಹಿತರು ಎಲ್ಲರೂ ಸೇರಿ ಕೆಲಸ ಮುಗಿಸಿ ಹರಟೆ ಕೊಚ್ಚುವುದು ಇಲ್ಲಿಯೇ . ಆದ್ದರಿಂದಲೇ ಮುಬೈಗೆ ಬರುವುದೆಂದರೆ ನಮಗೆ ಅಪ್ಯಾಯಮಾನ . ಮುಂಬೈ ಬಗೆಗಿನ ಇನ್ನೂ ಹಲವಾರು ವಿಶೇಷ ಕಥೆಗಳಿವೆ , ಅಮಿತಾಭ್ ಬಚ್ಚನ್ ಮನೆ , ಮುಂಬೈ ಮಳೆ , ಜುಹೂ ಬೀಚು ಇತ್ಯಾದಿ ಇತ್ಯಾದಿ ಮುಂದೊಮ್ಮೆ ಯಾವಾಗಲಾದರೂ ಬರೆಯೋಣ . ಈಗ ಇಷ್ಟೇ ಟೈಪಿಸಲು ಆಗುತ್ತಿರುವುದು . ಟೈಮಾಯಿತ. 











Monday 10 June 2013

ಚಂದ್ರಿಕಾ ಒಂದು ಆಪ್ತ ನೆನಪು

ನಿನ್ನೆ ಸಂಜೆ( 9-6-2013) 6 30 ರಿಂದ 7 ಗಂಟೆ
-----------------------------------------

ನಿನ್ನೆ ಸಂಜೆ (9-6-2013) K R ಆಸ್ಪತ್ರೆಯ I C U ನಲ್ಲಿ ನಿಸ್ತೇಜವಾಗಿದ್ದ ಚಂದ್ರಿಕಳ ಕೈಗಳನ್ನು ಮುಟ್ಟಿ ನೋಡಿದೆ ತಣ್ಣಗಾಗಿತ್ತು . ಹಣೆಯಮೇಲೆ ಕೈಯಿಟ್ಟೆ ಬೆಚ್ಚಗಿತ್ತು . B P 51/33, Pulse 104, ಎಂದು ಮೆಶಿನು ತೋರಿಸುತ್ತಿತ್ತು . ಶೋಭಾ ಕೂಡ ನೋಡಿಬಂದರು . ಶೋಭಾ, ಚಂದ್ರಿಕಾ ನಾಳಿನ "ಬೆಳಕು ಕಾಣುವುದಿಲ್ಲ " ಎಂದೆ . "ಹಾಗೆಲ್ಲ ಅನ್ನಬೇಡಿ ಕಮಲಾ" ಎಂದರು ಶೋಭಾ . ಮನೆಯವರನ್ನು ಮಾತನಾಡಿಸಿ ಹೊರಬಂದೆವು . ಅದೂ ಇದೂ ಮಾತನಾಡಿದೆವು . ಇಬ್ಬರೂ ನಮ್ಮ ನಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಹೊರಟೆವು . ಗಾಡಿನಿಲ್ಲಿಸಿದ ನಾನು ಶೋಭಾ ವಿಷಯಗೊತ್ತಾದರೆ ಕೂಡಲೆ ತಿಳಿಸಿ ಎಂದು ಹೇಳಿ ಮುಂದುವರೆದೆ . ಮನೆಗೆ ಬಂದು ಎಲ್ಲ ಕೆಲಸ ಮುಗಿಸುವ ಹೊತ್ತಿಗೆ ಚಂದ್ರಿಕಾ ಇನ್ನಿಲ್ಲ ಎಂಬ ಸುದ್ದಿ ಅಲೆಯಲ್ಲಿ ತೇಲಿ ಬಂದೇಬಿಟ್ಟಿತು .

ಮಳವಳ್ಳಿ ಯಿಂದ ಬೆಂಗಳೂರಿಗೆ
----------------------------------------

ಚಂದ್ರಿಕಾ ನ್ಯಾಷನಲ್ ಕಾಲೇಜಿನಲ್ಲಿ BSc ಓದಿದ ನಂತರ ಸೆಂಟ್ರಲ್ ಕಾಲೇಜಿನಲ್ಲಿ MSc ಭೌತಶಾಸ್ತ್ರ ಪದವಿ ಪಡೆದ ತರುವಾಯದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕಿಯ ಕೆಲಸ ಪ್ರಾರಂಭಿಸಿದರು . ತಂದೆ ತಾಯಿ , ತಮ್ಮ ತಂಗಿಯರ ದೊಡ್ಡ ಕುಟುಂಬದ ಹಿರಿಯ ಮಗಳಾಗಿ ಮನೆಗೆ ಆಸರೆಯಾಗಿ ನಿಂತರು .
ಉತ್ತಮ ಅಧ್ಯಾಪಕಿಯಾಗಿ ಹೆಸರು ಮಾಡಿದ ಚಂದ್ರಿಕಾ ವಿದ್ಯಾರ್ಥಿ ಮತ್ತು ಅಧ್ಯಾಪಕವರ್ಗ ಇಬ್ಬರಿಗೂ ಸಹಾಯ ವಾಗುವಂತಹ ಕೆಲಸಗಳಲ್ಲಿ ಅಲ್ಲಿಂದಲೇ ತೊಡಗಿಕೊಂಡರು . 1990 ರ ದಶಕದಲ್ಲಿ ದಾ. ಗುರುರಾಜ ಕರಜಗಿ ಯವರ ಕಣ್ಣಿಗೆಬಿದ್ದ ಚಂದ್ರಿಕಾ ಅನಂತರ ಬೆಂಗಳೂರಿನ V V S ಕಾಲೇಜಿನಲ್ಲಿ ಪ್ರತಿಷ್ಟಾಪಿತರಾದರು .

ಬೆಂಗಳೂರಿನಿಂದ ಭಾರತಾದ್ಯಂತ ಚಟುವಟಿಕೆ ವಿಸ್ತರಿಸಿ ಕೊಂಡ ಚಂದ್ರಿಕಾ .
----------------------------------------------------------------------------------

V V S ಕಾಲೇಜಿಗೆ ಬಂದದ್ದು ಚಂದ್ರಿಕಳಿಗೆ ನಾಲ್ಕು ಕೈ ಕಾಲುಗಳು ಹೆಚ್ಚಾಗಿ ಬಂದಂತಾದುವು . ಅದಕ್ಕೆ ಪೂರಕವಾಗಿ ಆಕೆಯ ಕಾರ್ಯಚಟುವಟಿಕೆಯನ್ನು ಅಂದಿನ ಪ್ರಾಂಶುಪಾಲರಾಗಿದ್ದ ಕರಜಗಿಯವರೂ ಪ್ರೋತ್ಸಾಹಿಸಿದರು . ಅದರ ಪರಿಣಾಮವಾಗಿ ಬಸವೇಶ್ವರನಗರ ವಸತಿ ಪ್ರದೇಶದ ಒಂದು ಎಕರೆ ಜಾಗದಲ್ಲಿರುವ ಸಣ್ಣದಾದ V V S ಕಾಲೇಜಿನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಆಯೊಜನೆಗೊಳ್ಳ ತೊಡಗಿದವು . ಆ ಮೂಲಕ ಅಧ್ಯಾಪಕರುಗಳು ಒಂದೆಡೆ ಕಲೆತು ಚರ್ಚಿಸಲು ವೇದಿಕೆ ರೂಪುಗೊಳ್ಳ ತೊಡಗಿತು . ತದನಂತರದ ದಿನಗಳಲ್ಲಿ IAPT ಸಂಘಟನೆಗೆ ಚಳುವಳಿಯ ಮಾದರಿಯಲ್ಲಿ ಸದಸ್ಯತ್ವವನ್ನು ಮಾಡಿಸಿದರು .

IAPT ಯ ರಾಷ್ಟ್ರೀಯ ಅಧಿವೇಶನಗಲ್ಲಿ ಪಾಲ್ಗೊಳ್ಳುವಂತೆ ಅಧ್ಯಾಪಕರನ್ನು ಹುರಿದುಂಬಿಸುತ್ತಿದ್ದ ಚಂದ್ರಿಕಾ , ಅವರಿಂದ ಪ್ರೀತಿಯಿಂದಲೇ ಸಂಶೋಧನಾ ಪ್ರಭಂಧ ಮಂಡಿಸುವಂತೆ ಒತ್ತಾಯಿಸುತ್ತಿದ್ದರು .
ಬೆಂಗಳೂರಿನಿಂದ ಹತ್ತರಿಂದ ಹದಿನೈದು ಪ್ರಭಂದ,ಪೋಸ್ಟರ್ , ಪ್ರಯೋಗಗಳು ಪಾಲ್ಗೊಳ್ಳುವಂತೆ ಮಾಡಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದಿಂದ ಒಳ್ಳೆಯ ಸ್ಫರ್ಧೆಯನ್ನು ಒಡ್ಡುತ್ತಿದ್ದರು .

ಇದರ ಜೊತೆಗೆ IAPT ವಿಧ್ಯಾರ್ಥಿಗಳಿಗೆ ಆಯೋಜಿಸುವ National Graduate Physics Examination, Olympiad ಪರೀಕ್ಷೆಗಳನ್ನು ರಾಷ್ಟ್ರಾದ್ಯಂತ ಆಯೋಜಿಸಿ ಹೆಚ್ಚು ವಿಧ್ಯಾರ್ಥಿಗಳು ಪಾಲ್ಗೊಳ್ಳಲು ಅನೇಕ ಅಧ್ಯಾಪಕರ ಜೊತೆ ಸಂಪರ್ಕದಲ್ಲಿದ್ದು ಸಾಕಷ್ಟು ಕೇಂದ್ರಗಳನ್ನು ತೆರೆಯುವಂತೆ ನೋಡಿಕೊಳ್ಳುತ್ತಿದ್ದರು . IAPT ಯ ಹಲವು ರಾಷ್ಟ್ರಮಟ್ಟದ ಪರೀಕ್ಷೆಗಳು ಪ್ರಾಯೋಗಿಕವಾಗಿದ್ದು ಪ್ರಯೋಗಶಾಲೆ ಬೇಕಾಗುತ್ತಿತ್ತು . ಜೊತೆಗೆ ಸಾಕಷ್ಟು ಅಧ್ಯಾಪಕರ ಉಚಿತ ಸೇವೆಯೂ ಬೇಕಾಗುತ್ತಿತ್ತು . ಇದೆಲ್ಲವನ್ನು ತಮ್ಮ ಕಾಲೇಜಿನಲ್ಲಿ ಮಾಡುತ್ತಿದ್ದ ಚಂದ್ರಿಕಾ ನಂತರ ಬೆಂಗಳೂರಿನ ಇತರೆ ಅಧ್ಯಾಪಕರನ್ನು ಮತ್ತು ಕಾಲೇಜನ್ನು ಇದಕ್ಕೆ ತಯಾರು ಮಾಡಿದರು .

ಚಂದ್ರಿಕಾ ಕಾಲೇಜಿನೊಳಗೆ ಮಾದುವಕೆಲಸವಿದಾದರೆ , ಇನ್ನು ಕಾರ್ಯ ಕಾರಣ ಸಂಭಂಧ ದೇಶ ಸುತ್ತ ಬೇಕಾಗುತ್ತಿತ್ತು . ಆಗೆಲ್ಲಾ ತನ್ನ ಪಾಠ ಪ್ರವಚನಗಳನ್ನು ಮುಗಿಸಿ ಕಾಲೇಜಿನವರ ಜೊತೆ ಮಾತುಕತೆನಡೆಸಿ ರಜೆಹೊಂದಿಸಿಕೊಂಡು ವಯೋವೃದ್ಧ ತಾಯಿಗೆ ನೋಡಿಕೊಳ್ಳುವವರ ವ್ಯವಸ್ಥೆ ಮಾಡಿ ಮೀಟಿಂಗು ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಿದ್ದರು . ಆದರೂ ಭೌತಶಾಸ್ತ್ರ ಸಂಭಂದಿಸಿದ ಯಾವುದೇ ಕೆಲಸವಾದರೂ ಉತ್ಸಾಹದಿಂದ ಪುಟಿದೇಳುತ್ತಿದ್ದರು .

ಹೊಸದಾಗಿ ಕಾರ್ಯಕ್ರಮ ಆಯೋಜಿಸುವ ಯಾರಿಗೇ ಆದರೂ ಮುಂದೆ ನಿಂತು ಎಲ್ಲಾ ರೀತಿಯ ಸಹಾಯ ಒದಗಿಸಿ ಕೊಡುತ್ತಿದ್ದರು . ಒಟ್ಟಾರೆಯಾಗಿ ಇಂದು ಬೆಳಗ್ಗೆ ನಮ್ಮ ರಾಘವೇಂದ್ರ (IISc)
ಹೇಳಿದಂತೆ She was resource person for resource persons.

ನಾನು ಚಂದ್ರಿಕಾ ಮತ್ತು ದೆಹಲಿ
------------------------------------
ನಾನು ಮತ್ತು ಚಂದ್ರಿಕಾ 2009 ರಲ್ಲಿ ಕಾನ್ಪುರಕ್ಕೆ ಒಟ್ಟಿಗೇ ಹೋಗಿದ್ದೆವು( conference ಮತ್ತು ಕೆಲಸದ ಸಂಭಂದ) . ಒಂದುವಾರ ಇಬ್ಬರೂ ಒಂದೇ ರೂಮಿನಲ್ಲಿದ್ದು ಸುತ್ತಾಡಿದ್ದು ಜೀವಂತ ಅನುಭವ . ಕಾನ್ಪುರದಿಂದ ದೆಹಲಿಗೆ ಬಂದ ನಾವಿಬ್ಬರೂ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೆವು . 2012 ರಲ್ಲಿ ನಡೆಯಲಿದ್ದ ಏಶಿಯನ್ ಫಿಸಿಕ್ಸ್ ಒಲಿಂಪಿಯಾಡ್ ನಡೆಸುವ ಸಂಭಂಧದಲ್ಲಿ DST ಯಲ್ಲಿ ಹಣಕಾಸು ಸಂಭಂಧದ ಫೈಲು ಮೂವ್ ಮಾಡಿಸಬೇಕಿತ್ತು . ಕಪಿಲ್ ಸಿಬಲ್ ಅವರ ಕಚೇರಿಗೆ ತೆರಳಿದವು . ಅದಕ್ಕೂ ಮುನ್ನ ದೆಹಲಿಯಲ್ಲಿದ್ದ ನನ್ನ ದೊಡ್ಡಣ್ಣ ನಾನೇನಾದರೂ ಸಹಾಯ ಮಾಡಲೇ ಎಂದು ಚಂದ್ರಿಕಳನ್ನು ಕೇಳಿದಾಗ ಬೇಡ ಸರ್ ನಾನೆಲ್ಲಾ ವ್ಯವಸ್ಥೆ ಮಾದಿದ್ದೇನೆನ್ದರು . ಕೇಂದ್ರ ಸರ್ಕಾರಿ ಕಚೇರಿ ಯೊಳಗೆ ಸಲೀಸಾಗಿ ಓಡಾಡ ಬಲ್ಲವರನ್ನು ಮೊದಲೇ ಗೊತ್ತುಮಾಡಿದ್ದ ಚಂದ್ರಿಕಾ ಅರ್ಧ ದಿನದೊಳಗೆ ಎಲ್ಲ ಕೆಲಸ ಮುಗಿಸಿ ಕೊಂಡರು . ಆಗಲೇ ನನಗೆ ಚಂದ್ರಿಕಳ ಬುದ್ದಿವಂತಿಕೆ ಮತ್ತು ಪವರ್ ಅರ್ಥವಾಗಿದ್ದು . "ಕಮಲಾ ದೂರದ ಊರಿನಿಂದ ಬಂದಿರುತ್ತೇವೆ ಕೆಲಸ ಮುಗಿಸಿಕೊಂಡು ಹೋಗಬೇಕಾಗುತ್ತದೆ ಅದಕ್ಕಾಗಿ ಗೊತ್ತಾದವರನ್ನು ಹಣಕೊಟ್ಟದರೂ ಹೊಂದಿಸಿಕೊಳ್ಳಬೇಕು "ಎಂದು ಹೇಳಿದ್ದು ಇನ್ನು ನನ್ನ ಕಿವಿಯಲ್ಲಿದೆ .
ಚಂದ್ರಿಕಾ ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದರು . ನಿವೃತ್ತಿಯನಂತರ ಪ್ರವೃತ್ತಿಯನ್ನೇ ಪೂರ್ಣ ವೃತ್ತಿಯನ್ನಾಗಿಸಿಕೊಳ್ಳುವ ತಯಾರಿಯಲ್ಲಿದ್ದ ಚಂದ್ರಿಕಾ ಅಕಾಲ ಮರಣವನ್ನಪ್ಪಿದ್ದು ಇದು ಯಾವ ನ್ಯಾಯ ಎಂದು ಕೇಳುವಂತಾಗಿದೆ . ಆದರೆ ಯಾರನ್ನು ಕೇಳೋಣ ?
ಚಂದ್ರಿಕಾ ಮನಸ್ಸು ಮಾಡಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಯಿಯನ್ನು ಪಾಠ ಮಾಡಿ ಸಂಪಾದಿಸ ಬಹುದಾಗಿತ್ತು . ಅದಕ್ಕೆ ಅವರಿಗೆ ಹಲವು corporate tuition center ಗಳಿಂದ ಆಹ್ವಾನವು ಇತ್ತು .

ಚಂದ್ರಿಕಾ ಕಾಫಿ ಕುಡಿಯಲಿಲ್ಲ .
---------------------------------
ಈಗ್ಗೆ ಹತ್ತು ದಿನಗಳ ಹಿಂದೆ ರಾತ್ರಿ ಶೋಭಾ, ಚಂದ್ರಿಕಾಳ ಮನೆಗೆ ತೆರಳಿ, ಚಂದ್ರಿಕಾರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿ, B positive ರಕ್ತ ಬೇಕೆಂದು ನನಗೆ ಬೆಳಗ್ಗೆ ಫೋನು ಮಾಡಿದರು . ಬೆಳಗ್ಗೆ 7 ಗಂಟೆ ಹೊತ್ತಿಗೆ ನನ್ನ ಮಗನನ್ನು ಕರೆದುಕೊಂಡು ಆಸ್ಪತ್ರೆಯಲ್ಲಿದ್ದೆ . ಅಷ್ಟು ಹೊತ್ತಿಗೆ ಸ್ವಲ್ಪ ಚೇತರಿಸಿ ಕೊಂಡಿದ್ದರು . ಈಗಾಗಲೇ ರಕ್ತ ಕೊಟ್ಟಿದ್ದಾರೆ ಬೇಕಾದ ತಕ್ಷಣ ತಿಳಿಸುತ್ತೇನೆ ಎಂದರು . ಸರಿ ಎಂದೆ . ಒಂದು ಗಂಟೆ ಅವರ ಬಳಿ ಕುಳಿತೆ . ಉತ್ಸಾಹ ತುಂಬುವ ಮಾತನಾಡಿದೆ . ಆಕೆ ನನಗೆ "ಕಮಲಾ ಓಡಾಡಿಕೊಂಡಿರಿ ಇದರಿಂದ ಸಂಪರ್ಕ ಇರುತ್ತದೆ ಕೆಲಸ ಕಾರ್ಯಗಳಿಗೆ ಸಂಪರ್ಕ ಬೇಕು " ಎಂದು ನನಗೇ ಉತ್ಸಾಹ ತುಂಬುವ ಮಾತನ್ನು ಹೇಳಿದರು . "ಅದಿರಲಿ ನೀವು ಮೊದಲು ಹುಷಾರಾಗಿ , ಇನ್ನುಮುಂದೆ ದಿನವೂ ಬೆಳಗ್ಗೆ ನಾನು ಕಾಫಿ ಕಳಿಸುತ್ತೇನೆ . ಹೋಟೆಲಿನ ಕಾಫಿ ಕುಡಿಯಬೇಡಿ . ನಿಮ್ಮ ಮನೆಯಿಂದ ಬರುವವರು ಒಟ್ಟಿಗೇ ಉಪಹಾರ ತರಲಿ ಎಂದೆ ". "ಆಗಲಿ, ನನ್ನ ತಮ್ಮ ಜೊತೆಯಲ್ಲಿರುತ್ತಾನೆ ಅವನು ಹಾಲು ಕುಡಿಯುತ್ತಾನೆ ಎಂದರು "." ಆಯಿತು ಅದನ್ನೂ ಕಳಿಸುತ್ತೇನೆ" ಎಂದು ಹೇಳಿದೆ , ನನ್ನ ಮಗನಿಗೆ ಮಗನೆ ದಿನವೂ ಬೆಳಗ್ಗೆ ಬೇಗ ಎದ್ದು ಆಸ್ಪತ್ರೆ ಕಾಫಿ ಸಪ್ಲೈ ಮಾಡು ಎಂದೆ . ಆತನೂ ಒಪ್ಪಿದ . ಆದರೆ ಅಂದು ಮಧ್ಯಾನ್ಹ ಸಂಕೀರ್ಣತೆಗೊಳಗಾದ ಆಕೆಯ ಆರೋಗ್ಯದಿಂದಾಗಿ I C U ಸೇರಿದರು . ನಂತರದ್ದೆಲ್ಲ ಬರೀ ಔಷಧಿ . ನಾನು ಕಾಫಿ ಕಳಿಸುವ ಪ್ರಮೇಯವೇ ಬರಲಿಲ್ಲ. . ಚಂದ್ರಿಕಾ ಕಾಫಿ ಕುಡಿಯಲಿಲ್ಲ .

ವಿಧಿಯೋ ವಿಪರ್ಯಾಸವೋ ?
----------------------------------

ಒಂದು ವರ್ಷದಿಂದ ಆಸ್ಪತ್ರೆಗೆ ತೋರಿಸುತ್ತಲೇ ಇದ್ದ ಚಂದ್ರಿಕಾಳಿಗೆ ಏನಾಗಿತ್ತು ಎಂಬುದು ನಿಖರವಾಗಿ ಗೊತ್ತಾಗಲೇ ಇಲ್ಲ . ಆಸ್ಪತ್ರೆಯ ಫೈಲು ಮಾತ್ರ ದಪ್ಪಗಾಗಿತ್ತು . ಎಲ್ಲವೂ ಸರಿ ಎಂದು ಬರುತ್ತಿತ್ತು .
ಕೊನೆಗಾದದ್ದು ಮಾತ್ರ ಮಲ್ಟಿಪಲ್ ಆರ್ಗನ್ ಫೇಲ್ಯೂರ್ .

ಚಂದ್ರಿಕಳನ್ನು ಮೊದಲದಿನ ಆಸ್ಪತ್ರೆಯಲ್ಲಿ ಮಾತನಾಡಿಸಿದ್ದು ನಾನು ಮತ್ತು ಶೋಭಾ , ಕೊನೆಯ ದಿನ ಕಳಿಸಿಬಂದದ್ದೂ ನಾವಿಬ್ಬರೇ . ಇದು ಇದೆಂಥಹ ವಿಪರ್ಯಾಸ?

ಚಂದ್ರಿಕಾಳ ಸಾವು ನಮ್ಮೆಲ್ಲರಿಗೂ ತುಂಬಲಾರದ ನಷ್ಟ ನಿಜ . ಆದರೆ ತೊಂಭತ್ತರ ವಯೋವೃದ್ಧ ತಾಯಿ ಈ ಹೊತ್ತಲ್ಲಿ ಭಾವನಾತ್ಮಕವಾಗಿ ಅನಾಥಳಾದದ್ದು ಯಾವ ತಂದೆ ತಾಯಿಗೂ ಬರಬಾರದ ಕಷ್ಟ . ಅದನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ದೇವರು ನೀಡಲಿ .

ಇಂದು ಬೇರಾವ ಕೆಲಸವೂ ಮಾಡಲಾಗದ ನನಗೆ , ಚಂದ್ರಿಕಳ ಬಗ್ಗೆ ತೋಚಿದಷ್ಟು ಬರೆದಿದ್ದೇನೆ . ಇದೊಂದು ಆಪ್ತಬರಹವಷ್ಟೇ . ಚಂದ್ರಿಕಾ ಇದಕ್ಕೂ ಮೀರಿದವರು ಎಂಬುದು ನಮ್ಮೆಲ್ಲರ ಅನಿಸಿಕೆ .
ಕಮಲಾ .

Saturday 8 June 2013

ಡಾ . ಎಚ್ . ನರಸಿಂಹಯ್ಯ - 93

1997- 2004
-----------------




ನಾನು ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ್ದು 1997ರಲ್ಲಿ . ಅಲ್ಲಿಯವರೆಗೂ ನನಗೂ H N ಗೂ ಹೇಳುವಂತಾ ಸಂಪರ್ಕವೇನೂ ಇರಲಿಲ್ಲ . ಆದರೆ ಅದೇನೋ ಗೊತ್ತಿಲ್ಲ ಕೆಲಸಕ್ಕೆ ಸೇರಿದಾಕ್ಷಣದಿಂದ ಅವರಿಗೂ ನನಗೂ ಉಂಟಾದ ಸ್ನೇಹ ಮಾತ್ರ ಐತಿಹಾಸಿಕ ವಾದದ್ದು (ಕಾಲೇಜಿನ ಮಟ್ಟಿಗೆ).
ನನ್ನ ಅವರ ಆಲೋಚನಾ ಕ್ರಮಗಳು , ಕೆಲಸ ಮಾಡುವ ವಿಧಾನ ಇಬ್ಬರಿಗೂ ಮೆಚ್ಚುಗೆಯಾಗಿ ದ್ದು ಇದಕ್ಕೆ ಕಾರಣವಿರಬಹುದು . ಮುಂದೆ ಅನೇಕ ಕೆಲಸಗಲ್ಲಿ ಅವರೊಂದಿಗೆ ಕೈ ಜೋಡಿಸಿದ ನನಗೆ ಅವರ ಒಡನಾಟ ಒಂದು ಅಧ್ಬುತ ಜೀವನ ಪಾಠ .

ಆಸ್ಪತ್ರೆಯಲ್ಲಿ ಊಟಮಾಡಿಸಿ ಬಾಯಿತೊಳೆದು ಬರುತ್ತಿದ್ದದ್ದು ಸೇವೆಮಾಡಲು ಒಂದು ನನಗೆ ಸಿಕ್ಕಿದ್ದ ಒಂದು ಅವಕಾಶ . 




2004 ರ (ಸೆಪ್ಟೆಂಬರ್ -ಅಕ್ಟೋಬರ್?) ಒಂದುಸಂಜೆ
-----------------------------------------------------------

ಮೇಲೆ ತಿಳಿಸಿದ ಸಮಯದಲ್ಲಿ ನಾನು ನನ್ನ ಅಣ್ಣನ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದ ಸಮಯ ವದು . ಯಾವುದೇ ಊರಿನಲ್ಲಿದ್ದರೂ ರಾತ್ರಿ ಒಮ್ಮೆ H N ಗೆ ಫೋನು ಮಾಡಿ ಆರೋಗ್ಯ ವಿಚಾರಿಸುವುದು ನನ್ನ ನಿತ್ಯದ ವಾಡಿಕೆಯಾಗಿತ್ತು . ಅದರಂತೆ ಗೋವಾ ದಿಂದಲೇ ಫೋನು ಮಾಡಿದೆ . ಆಕ್ಷಣಕ್ಕೆ ಫೋನು ಎತ್ತಿದ H N ಕೂಡಲೇ " ಕಮಲಾ ಇವತ್ತು ಮೀಟಿಂಗ್ನಲ್ಲಿ(Society A G M ) ನಾನು ಬಿಟ್ಟು ಬಿಡುತ್ತೇನೆಂದು ಹೇಳಿಬಿಟ್ಟೆ ". ಎಂದರು . " ಆಯಿತು ಅದರಬಗ್ಗೆ ಆಮೇಲೆ ಮಾತಾಡೋಣ ಈಗ ನಿಮ್ಮ ಆರೋಗ್ಯ ಹೇಗಿದೆ ಎಂದೇ?"
"ಪರವಾಗಿಲ್ಲ". ಎಂದರು .
ಬೆಂಗಳೂರಿಗೆ ಬಂಡ ಕೂಡಲೇ ಅವರ ಕೊಠಡಿ ಗೆ ತೆರಳಿದಾಗ ಮತ್ತದೇ ಅಧಿಕಾರ ತ್ಯಜಿಸುವ ಮಾತು . ಆಗ ನಾನು "ಒಳ್ಳೆಯ ಕೆಲಸ ಮಾಡಿದಿರಿ ಸ್ವಾಮೀ , ಒಂದೆರಡು ವರ್ಷ ಮೊದಲೇ ಬಿದಬಾರದಿತ್ತೆ ?" ಎಂದಾಗ , ಈ ಉತ್ತರ ನಿರೀಕ್ಷಿಸಿರದಿದ್ದ H N ಆ ಕೂಡಲೇ " ಅಮ್ಮ ನಾನು ಅಧಿಕಾರದಲ್ಲಿದ್ದರೆ ನಿನಗೆನಮ್ಮ ಹೊಟ್ಟೆಕಿಚ್ಚು ?" ಎನ್ನ ಬೇಕೇ?. " ಹೌದು ಸರ್ , ನೀವು ಇನ್ನೊಂದೆರಡು ವರ್ಷ ಮೊದಲೇ ಬಿಟ್ಟಿದ್ದಾರೆ ಇನ್ನೆರಡು ವರ್ಷ ಹೆಚ್ಚಾಗಿ ಬದುಕುತ್ತೀರಿ ಅದಕ್ಕೇ ಹೇಳಿದೆ . ಎಷ್ಟು ವರ್ಷ ಬೇಕಾದರೂ ಇರಿ ನನಗೇನಾಗಬೇಕು ಎಂದೇ ".

"ಅಧಿಕಾರ ಬಿಟ್ಟ ಮೇಲೆ ಸಮಯ ಹೇಗೆ ಕಳೆಯುತ್ತೀರಿ ?" ಎಂದೆ .
"ಅಮ್ಮ ನಾನು ಎಷ್ಟೋ ವರ್ಷಗಳಿಂದ ಓದುವುದು ನಿಂತು ಹೋಗಿದೆ . ಓದುವುದು ಬೇಕಾದಷ್ಟಿದೆ ನೆಮ್ಮದಿಯಾಗಿ ಕುಳಿತು ಓದುತ್ತೆನೆ". ಎಂದರು .
ಅನಂತರದಲ್ಲಿ ಅಧಿಕಾರ ತ್ಯಜಿಸುವುದನ್ನು ರೆಕಾರ್ಡ್ ಮಾಡಿಸಿದ ಕಿಲಾಡಿ ತಾತ .
ಆದರೆ ಅಧ್ಯಕ್ಷರಾಗಿದ್ದಾಗಲೇ , ದೆಹಾಂತ್ಯವಾಗಿದ್ದು (31-1-2005) ಸಾವು ನಮ್ಮ ಕೈಯ್ಯಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ . 



ಸ್ಥೂಲ ಜೀವನ ಚಿತ್ರ
-----------------------
ನರಸಿಂಹಯ್ಯ ನವರಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ .
ಆದರೆ ಆ ವ್ಯಕ್ತಿ ಒಂದು ವಿಶ್ವ ಕೋಶ , ಅಕ್ಷಯ ಪಾತ್ರೆ . ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ .

ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು .
ಎಂಟನೇ ತರಗತಿಗೆ ಶಾಲೆಗೇ ಸೇರಲು ಅಲ್ಲಿನದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ .

9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧಿಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ .
ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ , BSc ಕೊನೆ ವರ್ಷದಲ್ಲಿ ಎಲ್ಲವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾದಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು . ಮದುವೆಯಬಗ್ಗೆ ನಿರ್ಲಿಪ್ತರಾಗಿದ್ದರು .
MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳುವಳಿಗೆ ಧುಮುಕಿದರು .

ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಪಲಿತಾಂಶ ದಿಂದ ರಾಂಕು (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ ,ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ .

ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು .

ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟುಹೊತ್ತಿಗೆ ಅವರು ಸಂಪಾದಿಸಿದ್ದ "ಆಸ್ತಿ"ಯನ್ನು ಸೂಚಿಸುತ್ತ ದೆ .

ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು .

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ .

ನಂತರದ ದಿನಗಳಲ್ಲಿ ಕಾಲೇಜು ಅದ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಂತರ ಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳ ಬಹುದಾದ ಸಾಧನೆ .

ಸಾಯಿ ಭಾಭಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಡನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ .

ಹಳ್ಳಿಗಳಲ್ಲಿ ಕಾಲೇಜು ಸ್ಥಾಪನೆ , K R V P ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವದಿಕ್ಕಿನಲ್ಲಿ ಒಟ್ಟು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು .
ಇದೆಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು . ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಭಂದ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ .
ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Stye of Administration ಎಂದು ಒಂದು ಪಾಠ ಸೇರಿಸಬಹುದು . ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು .
ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ .
ಇನ್ನು ಪ್ರಶಸ್ತಿ ,ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .
ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದೆಸಿಬರಲು ಹೇಳಿದ್ದರು !!!!!!!!!!!

ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .

ಇಂದು ಅವರ ಜನ್ಮದಿನವಾಗಿದ್ದು ಅವರಂತಹ ನಾಯಕರುಗಳು ಸಮಾಜಕ್ಕೆ ಪ್ರಸ್ತುತ ಮತ್ತು ಬೇಕು ಎಂದು ಹೇಳುವುದು ತೋರಿಕೆಯ ಮಾತಲ್ಲ ಬದಲಿಗೆ ಅವರನ್ನು ಕಂಡು ಅವರ ಒಡನಾಡಿಗಳಾಗಿದ್ದ ನಮ್ಮ ಅನುಭವದ ಮಾತು .

Saturday 1 June 2013

ನಾನು ಅಂಬಿಕ ಮತ್ತು ಚಿತ್ರಾನ್ನ .




ನೀನು ಚಿತ್ರಾನ್ನ ಉಪ್ಪಿಟ್ಟು ಎಂದೆಲ್ಲಾ ಬರೆಯಲು ಶುರು ಮಾಡಿದೆಯಾ ? ನಮ್ಮ ಗತಿ ಏನಾಗಬೇಡ ? ಎಂದು ಸಿಟ್ಟಾಗಬೇಡಿ . ಅದಕ್ಕೊಂದು ಕಾರಣ ಇದೆ ಮುಂದೆ ಓದಿ . ಇದರ ಬಗ್ಗೆ ಬಹಳ ಹಿಂದೆಯೇ ಬರೆಯಬೇಕೆಂದು ಕೊಂಡಿದ್ದೆ . ಆದರೆ ಸ್ಯಾಂಡು ಕುಟ್ಟುವ ಕೆಲಸ ನಡೆಯುತ್ತಿತ್ತು . ಇಂದು ಅದಕ್ಕೆ ಬಿಡುವು . ಆದ್ದರಿಂದ ಇದನ್ನು ಬರೆದು ಮುಗಿಸುತ್ತಿದ್ದೇನೆ .

ಅಂಬಿಕ ಮೊದಲಿಗೆ ನನಗೆ PUC ಮತ್ತು BSc ಯಲ್ಲಿ ರಸಾಯನ ಶಾಸ್ತ್ರ ಪಾಠ ಹೇಳಿದ ಮೇಡಂ ,ನಂತರದಲ್ಲಿ ನನ್ನ ಸಹೋದ್ಯೋಗಿ , ಮೂರನೇ ಹಂತದಲ್ಲಿ ಪ್ರಾಂಶುಪಾಲೆಯಾಗಿ ನನಗೆ ಅಧಿಕಾರಿಣಿ . ಆದರೆ ಇವೆಲ್ಲವನ್ನೂ ಮೀರಿದ್ದು ಅವರು (ಆಕೆ!!! ನನಗೆಷ್ಟು ಧೈರ್ಯ ?) ನನ್ನ ಆತ್ಮೀಯ ಸ್ನೇಹಿತೆ .
ನಮ್ಮಿಬ್ಬರ ಸ್ನೇಹದ ಮಾತುಕತೆಗಳು ನಡೆಯುವುದು ನಾನೇನಾದರೂ ಬೆಳಗ್ಗೆ 5 30ಕ್ಕೆ ಪಾರ್ಕಿಗೆ ವಾಕಿಂಗ್ ಹೋದಾಗ . ಅಂಬಿಕ ಒಂದು ದಿನವೂ ವಾಕಿಂಗ್ ತಪ್ಪಿಸುವುದಿಲ್ಲ . ಆದರೆ ನಮ್ಮದು if but ಕಂಡಿಶನ್ ಗೆ ಒಳಪಟ್ಟಿರುತ್ತದೆ ಎನ್ನಿ ,ಏಕೆಂದರೆ ಮಕ್ಕಳಿನ್ನು ಚಿಕ್ಕವರಲ್ಲವೇ? . ನಾನು ಎಂದು ವಾಕಿಂಗ್ ಹೋದರೂ ಅಂದು, ಇಂದು ನೀನು ಸಿಕ್ಕುತ್ತೀಯ ಎಂದುಕೊಂಡು ಮನೆಯಿಂದ ಬಂದೆ ಎಂದು ಹೇಳಿಯೇ ಆತ್ಮೀಯವಾಗಿ ಸ್ವಾಗತಿಸುವ ಅಂಬಿಕಾ ಮೇಡಂ ಆಮೇಲೆ ಒಂದು ಗಂಟೆ ಹೇಗೆ ಹೋಯಿತು ಇಬ್ಬರಿಗೂ ತಿಳಿಯುವುದಿಲ್ಲವೆನ್ನಿ .
ನ್ಯಾಷನಲ್ ಕಾಲೇಜಿನಿಂದ ಒಂದಿಡೀ ವಿಶ್ವ ನಮ್ಮ ಮಾತುಕತೆಯಲ್ಲಿ ಮುಳುಗಿಹೋಗುತ್ತದೆ .

ಅಂಬಿಕಾ ಮೇಡಂ ವಿಶಿಷ್ಟ ವ್ಯಕ್ತಿತ್ವದ ಮಹಿಳೆ . ಮೊದಲಿಗೆ ಅಪ್ಪಟ ಗೃಹಿಣಿ , ನಂತರದಲ್ಲಿ ಅಧಿಕಾರಿಣಿ , ಬಿಡುವಿನವೇಳೆಯಲ್ಲಿ ವಿಜ್ಞಾನ ಮತ್ತು ಸಾಹಿತ್ಯ ಎರಡನ್ನೂ ಬರೆಯುತ್ತಾರೆ . ಕನ್ನಡ ಇಂಗ್ಲಿಷ್ ಎರಡೂ ಭಾಷೆಯಮೆಲಿನ ಅವರ ಹಿಡಿತ ಬಹಳ ಚೆನ್ನಾಗಿದೆ . ಅವರ ಸಮಗ್ರ ಬರವಣಿಗೆಯ ಮೂರು ಸಂಪುಟಗಳು ಬಿಡುಗಡೆಗೆ ಸಿದ್ದವಾಗಿವೆ . ಅಂಬಿಕ ಮೇಡಂ ಅತ್ಯುತ್ತಮ ಅಡುಗೆಕಾರ್ತಿ . ಅವರ ಕೈಯ್ಯಲ್ಲಿನ ಅಡುಗೆರುಚಿ ತಿಂದವರಿಗೆ ಗೊತ್ತು . ಅವರು ಏನೇ ವಿಶೇಷ ಅಡುಗೆ ಮಾಡಿದರೂ ಡಬ್ಬಿಯಲ್ಲಿ ತಂದು ಚೇಂಬರಿಗೆ ಕರೆದು (ಬಿಡುವಿನ ವೇಳೆಯಲ್ಲಿ) ಮಕ್ಕಳಿಗೆ ತಿನ್ನಿಸುವಂತೆ ನನಗೆ ಕೊಡುವ ಅಂಬಿಕ ಮೇಡಂ, ನಂತರ ಅದರಬಗ್ಗೆ ನಮ್ಮಿಬ್ಬರಿಗೂ ಚರ್ಚೆಯಾಗುತ್ತದೆ . ಅದರ technicality, methodology ಎಲ್ಲವೂ ಚರ್ಚೆಯಾಗುತ್ತದೆಯೇನ್ನಿ .

ಇಷ್ಟಕ್ಕೆ ಮುಗಿಯಲಿಲ್ಲ ಅವರ ವಿಶೇಷ , ಎಲ್ಲ ಹಬ್ಬಗಳನ್ನೂ ಸಮರ್ಪಕವಾಗಿ ಮಾಡುವ ಮೇಡಂ ಕಾಲೇಜಿಗೆ ಒಂದು ದಿನವೂ ತಡವಾಗಿ ಬರುವುದಿಲ್ಲ . ಅದು ಸಂಕ್ರಾಂತಿಯ ಸಕ್ಕರೆ ಅಚ್ಚು ಮಾಡುವುದಿರಲಿ , ದಸರಾ ಗೊಂಬೆ ಕೂರಿಸುವುದಿರಲಿ ಎಲ್ಲವೂ ಆಗಬೇಕು . ದಸರಾ ಹಬ್ಬದಲ್ಲಿ ಮನೆಗೆ ಕರೆದು ಉಪಚರಿಸುವ ಅಂಬಿಕಾ ಅವರ ಉತ್ಸಾಹಕ್ಕೆ ಅವರೇ ಸಾಟಿ . ಮೇಡಂ ಇಬ್ಬರು ಯಶಸ್ವೀ ಗಂಡುಮಕ್ಕಳ ತಾಯಿ . ಸಕ್ಕರೆ ಗೊಂಬೆಯಂತ ಮಾಡ್ರನ್ ಸೊಸೆಯಂದಿರು . ಆ ಸೊಸೆಯಂದಿರನ್ನು ultra modern ಬುದ್ದಿವಂತಿಕೆಯಿಂದ ಒಲಿಸಿಕೊಂಡಿರುವ ಅತ್ತೆ . ಎಲ್ಲರನೂ ವಿದೇಶಕ್ಕೆ ದತ್ತು ಕೊಟ್ಟಿದ್ದಾರೆನ್ನಿ .
ಇಂತಿಪ್ಪ ಮೇಡಂ ಈಗ್ಗೆ ಕೆಲದಿನಗಳ ಹಿಂದೆ ಫೋನು ಮಾಡಿ ಚೇಂಬರಿಗೆ ಬಾ ಎಂದರು . ಆಯಿತು ಎಂದು ಹೋದೆ . ಆಗ " ಕಮಲಾ ಮನೆ ಕ್ಲೀನು ಮಾಡುವಾಗ 1886 ರರಲ್ಲಿ ಪ್ರಿಂಟು ಆಗಿರುವ ಅರಮನೆಯ ಪಾಕಶಾಸ್ತ್ರದ ಪುಸ್ತಕ ಸಿಕ್ಕಿದೆ ಯಾರಿಗೆ ಕೊಡುವುದು ಎಂದು ಬಹಳ ಯೋಚಿಸಿದೆ , ನಿನಗೇ ಕೊಡಬೇಕು ಅನ್ನಿಸಿತು ಸ್ವೀಕರಿಸುವೆಯಾ?" ಎಂದಾಗ ಬಹಳ ಸಂತೋಷವಾಗಿ ಸಮ್ಮತಿಸಿದ್ದೆ . ದಾಕ್ಷಾಯನಮ್ಮನ ಗೊಂಬೆ ಗಳು , ಅಯ್ಯಂಗಾರ್ ಅಜ್ಜಿಯ ಈಳಿಗೆಮಣೆ ಗಿಫ್ಟು ಪಡೆದ ನನಗೆ ಇದೇನು ಹೊಸದೆನ್ನಿಸಲಿಲ್ಲ .(ಇದರಬಗ್ಗೆ ಮತ್ತೊಮ್ಮೆ ಬರೆಯುವೆ) ಈ ಪ್ರೀತಿ ಯಾರಿಗುಂಟು ಯಾರಿಗಿಲ್ಲ ಎಲ್ಲಾ ನಿಮ್ಮ ಆಶೀರ್ವಾದ ಎಂದು ಸ್ವೀಕರಿಸಿ ಇತ್ತುಕೊಳ್ಳುತ್ತೇನೆನ್ನಿ . (ನನ್ನ ಗಂಡ ಊರ ಕಸವೆಲ್ಲಾ ನಿನಗೆ ಗಿಫ್ತುಗಳೋ , ಎಂದು ಬೈದರೂ ,ಆ ಗಿಫ್ಟಿನ ಹಿಂದಿರುವ ಪ್ರೀತಿಯ ಆರ್ದ್ರತೆಯಿಂದ ಅವುಗಳನ್ನು ಸ್ವೀಕರಿಸುತ್ತೇನೆ ).

ಮಾರನೇ ದಿನ ಕರೆದು, ಮನೆಯಿಂದ ತಂದ ಪುಸ್ತಕ ನೀಡಿದ ಅಂಬಿಕಾ ಮೇಡಂ, ಇದರಲ್ಲಿರುವ ಅಡುಗೆ ಮಾಡಿದಾಗ ನನಗೆ ತಪ್ಪದೇ ತಲುಪಿಸಬೇಕೆಂದು ಕಂಡಿಶನ್ ಹಾಕಿದರು . ಆಯಿತು ಎಂದು ಹೇಳಿ ಮನೆಗೆ ತಂದೆ . ಪುಸ್ತಕ ಬಹಳ ಚೆನ್ನಾಗಿದೆ . ಅನ್ನ ಮಾಡುವ ವಿಧಾನನ್ನೇ ಹತ್ತಾರು ತರಹ ವರ್ಣಿಸಿದ್ದಾರೆ . ಸಾರುಗಳು , ಬಾತುಗಳು ತರಹೇವಾರಿ ಅಡುಗೆಯ ಲೋಕವೇ ಇದರಲ್ಲಿದೆ . ಈ ಪುಸ್ತಕ ಮನೆಗೆ ಬರುವುದಕ್ಕೂ ತೋತಾಪುರಿ ಮಾವಿನಕಾಯಿ ತರುವುದಕ್ಕೂ ಸರಿಹೋಯಿತೆನ್ನಿ . ಆಗ ಈ ಬಾರಿ ಈ ಪುಸ್ತಕದ ಮೆಥಡ್ ನಲ್ಲಿ ಚಿತ್ರಾನ್ನ ಮಾಡೋಣವೆಂದು ಮಾಡಿದೆ ಚೆನ್ನಾಗಿ ಆಗಿತ್ತು . ಅಂಬಿಕ ಮೇಡಂಗೆ ತಲುಪಿಸುವುದನ್ನು ಮರೆಯಲಿಲ್ಲವೆನ್ನಿ . ಮತ್ತೊಂದು ದಿನ ಈ ಪುಸ್ತಕದ ಬಗ್ಗೆಯೇ ತಿಳಿಸುತ್ತೇನೆ . ಏಕೆಂದರೆ ಅದರಲ್ಲಿನ ವಿಧಾನಗಳು ನಿಜಕ್ಕೂ ಚೆನ್ನಾಗಿವೆ . ನಾವೂ ರಾಜ ಭೋಜನವನ್ನು ಸವಿಯೋಣ ಅಲ್ಲವೇ?
ಕಮಲಾ
INSPIRE Oct.2012, National College Basavanagudi.
In the capacity of ORGANISING SECRETARY.