Saturday 1 June 2013

ನಾನು ಅಂಬಿಕ ಮತ್ತು ಚಿತ್ರಾನ್ನ .




ನೀನು ಚಿತ್ರಾನ್ನ ಉಪ್ಪಿಟ್ಟು ಎಂದೆಲ್ಲಾ ಬರೆಯಲು ಶುರು ಮಾಡಿದೆಯಾ ? ನಮ್ಮ ಗತಿ ಏನಾಗಬೇಡ ? ಎಂದು ಸಿಟ್ಟಾಗಬೇಡಿ . ಅದಕ್ಕೊಂದು ಕಾರಣ ಇದೆ ಮುಂದೆ ಓದಿ . ಇದರ ಬಗ್ಗೆ ಬಹಳ ಹಿಂದೆಯೇ ಬರೆಯಬೇಕೆಂದು ಕೊಂಡಿದ್ದೆ . ಆದರೆ ಸ್ಯಾಂಡು ಕುಟ್ಟುವ ಕೆಲಸ ನಡೆಯುತ್ತಿತ್ತು . ಇಂದು ಅದಕ್ಕೆ ಬಿಡುವು . ಆದ್ದರಿಂದ ಇದನ್ನು ಬರೆದು ಮುಗಿಸುತ್ತಿದ್ದೇನೆ .

ಅಂಬಿಕ ಮೊದಲಿಗೆ ನನಗೆ PUC ಮತ್ತು BSc ಯಲ್ಲಿ ರಸಾಯನ ಶಾಸ್ತ್ರ ಪಾಠ ಹೇಳಿದ ಮೇಡಂ ,ನಂತರದಲ್ಲಿ ನನ್ನ ಸಹೋದ್ಯೋಗಿ , ಮೂರನೇ ಹಂತದಲ್ಲಿ ಪ್ರಾಂಶುಪಾಲೆಯಾಗಿ ನನಗೆ ಅಧಿಕಾರಿಣಿ . ಆದರೆ ಇವೆಲ್ಲವನ್ನೂ ಮೀರಿದ್ದು ಅವರು (ಆಕೆ!!! ನನಗೆಷ್ಟು ಧೈರ್ಯ ?) ನನ್ನ ಆತ್ಮೀಯ ಸ್ನೇಹಿತೆ .
ನಮ್ಮಿಬ್ಬರ ಸ್ನೇಹದ ಮಾತುಕತೆಗಳು ನಡೆಯುವುದು ನಾನೇನಾದರೂ ಬೆಳಗ್ಗೆ 5 30ಕ್ಕೆ ಪಾರ್ಕಿಗೆ ವಾಕಿಂಗ್ ಹೋದಾಗ . ಅಂಬಿಕ ಒಂದು ದಿನವೂ ವಾಕಿಂಗ್ ತಪ್ಪಿಸುವುದಿಲ್ಲ . ಆದರೆ ನಮ್ಮದು if but ಕಂಡಿಶನ್ ಗೆ ಒಳಪಟ್ಟಿರುತ್ತದೆ ಎನ್ನಿ ,ಏಕೆಂದರೆ ಮಕ್ಕಳಿನ್ನು ಚಿಕ್ಕವರಲ್ಲವೇ? . ನಾನು ಎಂದು ವಾಕಿಂಗ್ ಹೋದರೂ ಅಂದು, ಇಂದು ನೀನು ಸಿಕ್ಕುತ್ತೀಯ ಎಂದುಕೊಂಡು ಮನೆಯಿಂದ ಬಂದೆ ಎಂದು ಹೇಳಿಯೇ ಆತ್ಮೀಯವಾಗಿ ಸ್ವಾಗತಿಸುವ ಅಂಬಿಕಾ ಮೇಡಂ ಆಮೇಲೆ ಒಂದು ಗಂಟೆ ಹೇಗೆ ಹೋಯಿತು ಇಬ್ಬರಿಗೂ ತಿಳಿಯುವುದಿಲ್ಲವೆನ್ನಿ .
ನ್ಯಾಷನಲ್ ಕಾಲೇಜಿನಿಂದ ಒಂದಿಡೀ ವಿಶ್ವ ನಮ್ಮ ಮಾತುಕತೆಯಲ್ಲಿ ಮುಳುಗಿಹೋಗುತ್ತದೆ .

ಅಂಬಿಕಾ ಮೇಡಂ ವಿಶಿಷ್ಟ ವ್ಯಕ್ತಿತ್ವದ ಮಹಿಳೆ . ಮೊದಲಿಗೆ ಅಪ್ಪಟ ಗೃಹಿಣಿ , ನಂತರದಲ್ಲಿ ಅಧಿಕಾರಿಣಿ , ಬಿಡುವಿನವೇಳೆಯಲ್ಲಿ ವಿಜ್ಞಾನ ಮತ್ತು ಸಾಹಿತ್ಯ ಎರಡನ್ನೂ ಬರೆಯುತ್ತಾರೆ . ಕನ್ನಡ ಇಂಗ್ಲಿಷ್ ಎರಡೂ ಭಾಷೆಯಮೆಲಿನ ಅವರ ಹಿಡಿತ ಬಹಳ ಚೆನ್ನಾಗಿದೆ . ಅವರ ಸಮಗ್ರ ಬರವಣಿಗೆಯ ಮೂರು ಸಂಪುಟಗಳು ಬಿಡುಗಡೆಗೆ ಸಿದ್ದವಾಗಿವೆ . ಅಂಬಿಕ ಮೇಡಂ ಅತ್ಯುತ್ತಮ ಅಡುಗೆಕಾರ್ತಿ . ಅವರ ಕೈಯ್ಯಲ್ಲಿನ ಅಡುಗೆರುಚಿ ತಿಂದವರಿಗೆ ಗೊತ್ತು . ಅವರು ಏನೇ ವಿಶೇಷ ಅಡುಗೆ ಮಾಡಿದರೂ ಡಬ್ಬಿಯಲ್ಲಿ ತಂದು ಚೇಂಬರಿಗೆ ಕರೆದು (ಬಿಡುವಿನ ವೇಳೆಯಲ್ಲಿ) ಮಕ್ಕಳಿಗೆ ತಿನ್ನಿಸುವಂತೆ ನನಗೆ ಕೊಡುವ ಅಂಬಿಕ ಮೇಡಂ, ನಂತರ ಅದರಬಗ್ಗೆ ನಮ್ಮಿಬ್ಬರಿಗೂ ಚರ್ಚೆಯಾಗುತ್ತದೆ . ಅದರ technicality, methodology ಎಲ್ಲವೂ ಚರ್ಚೆಯಾಗುತ್ತದೆಯೇನ್ನಿ .

ಇಷ್ಟಕ್ಕೆ ಮುಗಿಯಲಿಲ್ಲ ಅವರ ವಿಶೇಷ , ಎಲ್ಲ ಹಬ್ಬಗಳನ್ನೂ ಸಮರ್ಪಕವಾಗಿ ಮಾಡುವ ಮೇಡಂ ಕಾಲೇಜಿಗೆ ಒಂದು ದಿನವೂ ತಡವಾಗಿ ಬರುವುದಿಲ್ಲ . ಅದು ಸಂಕ್ರಾಂತಿಯ ಸಕ್ಕರೆ ಅಚ್ಚು ಮಾಡುವುದಿರಲಿ , ದಸರಾ ಗೊಂಬೆ ಕೂರಿಸುವುದಿರಲಿ ಎಲ್ಲವೂ ಆಗಬೇಕು . ದಸರಾ ಹಬ್ಬದಲ್ಲಿ ಮನೆಗೆ ಕರೆದು ಉಪಚರಿಸುವ ಅಂಬಿಕಾ ಅವರ ಉತ್ಸಾಹಕ್ಕೆ ಅವರೇ ಸಾಟಿ . ಮೇಡಂ ಇಬ್ಬರು ಯಶಸ್ವೀ ಗಂಡುಮಕ್ಕಳ ತಾಯಿ . ಸಕ್ಕರೆ ಗೊಂಬೆಯಂತ ಮಾಡ್ರನ್ ಸೊಸೆಯಂದಿರು . ಆ ಸೊಸೆಯಂದಿರನ್ನು ultra modern ಬುದ್ದಿವಂತಿಕೆಯಿಂದ ಒಲಿಸಿಕೊಂಡಿರುವ ಅತ್ತೆ . ಎಲ್ಲರನೂ ವಿದೇಶಕ್ಕೆ ದತ್ತು ಕೊಟ್ಟಿದ್ದಾರೆನ್ನಿ .
ಇಂತಿಪ್ಪ ಮೇಡಂ ಈಗ್ಗೆ ಕೆಲದಿನಗಳ ಹಿಂದೆ ಫೋನು ಮಾಡಿ ಚೇಂಬರಿಗೆ ಬಾ ಎಂದರು . ಆಯಿತು ಎಂದು ಹೋದೆ . ಆಗ " ಕಮಲಾ ಮನೆ ಕ್ಲೀನು ಮಾಡುವಾಗ 1886 ರರಲ್ಲಿ ಪ್ರಿಂಟು ಆಗಿರುವ ಅರಮನೆಯ ಪಾಕಶಾಸ್ತ್ರದ ಪುಸ್ತಕ ಸಿಕ್ಕಿದೆ ಯಾರಿಗೆ ಕೊಡುವುದು ಎಂದು ಬಹಳ ಯೋಚಿಸಿದೆ , ನಿನಗೇ ಕೊಡಬೇಕು ಅನ್ನಿಸಿತು ಸ್ವೀಕರಿಸುವೆಯಾ?" ಎಂದಾಗ ಬಹಳ ಸಂತೋಷವಾಗಿ ಸಮ್ಮತಿಸಿದ್ದೆ . ದಾಕ್ಷಾಯನಮ್ಮನ ಗೊಂಬೆ ಗಳು , ಅಯ್ಯಂಗಾರ್ ಅಜ್ಜಿಯ ಈಳಿಗೆಮಣೆ ಗಿಫ್ಟು ಪಡೆದ ನನಗೆ ಇದೇನು ಹೊಸದೆನ್ನಿಸಲಿಲ್ಲ .(ಇದರಬಗ್ಗೆ ಮತ್ತೊಮ್ಮೆ ಬರೆಯುವೆ) ಈ ಪ್ರೀತಿ ಯಾರಿಗುಂಟು ಯಾರಿಗಿಲ್ಲ ಎಲ್ಲಾ ನಿಮ್ಮ ಆಶೀರ್ವಾದ ಎಂದು ಸ್ವೀಕರಿಸಿ ಇತ್ತುಕೊಳ್ಳುತ್ತೇನೆನ್ನಿ . (ನನ್ನ ಗಂಡ ಊರ ಕಸವೆಲ್ಲಾ ನಿನಗೆ ಗಿಫ್ತುಗಳೋ , ಎಂದು ಬೈದರೂ ,ಆ ಗಿಫ್ಟಿನ ಹಿಂದಿರುವ ಪ್ರೀತಿಯ ಆರ್ದ್ರತೆಯಿಂದ ಅವುಗಳನ್ನು ಸ್ವೀಕರಿಸುತ್ತೇನೆ ).

ಮಾರನೇ ದಿನ ಕರೆದು, ಮನೆಯಿಂದ ತಂದ ಪುಸ್ತಕ ನೀಡಿದ ಅಂಬಿಕಾ ಮೇಡಂ, ಇದರಲ್ಲಿರುವ ಅಡುಗೆ ಮಾಡಿದಾಗ ನನಗೆ ತಪ್ಪದೇ ತಲುಪಿಸಬೇಕೆಂದು ಕಂಡಿಶನ್ ಹಾಕಿದರು . ಆಯಿತು ಎಂದು ಹೇಳಿ ಮನೆಗೆ ತಂದೆ . ಪುಸ್ತಕ ಬಹಳ ಚೆನ್ನಾಗಿದೆ . ಅನ್ನ ಮಾಡುವ ವಿಧಾನನ್ನೇ ಹತ್ತಾರು ತರಹ ವರ್ಣಿಸಿದ್ದಾರೆ . ಸಾರುಗಳು , ಬಾತುಗಳು ತರಹೇವಾರಿ ಅಡುಗೆಯ ಲೋಕವೇ ಇದರಲ್ಲಿದೆ . ಈ ಪುಸ್ತಕ ಮನೆಗೆ ಬರುವುದಕ್ಕೂ ತೋತಾಪುರಿ ಮಾವಿನಕಾಯಿ ತರುವುದಕ್ಕೂ ಸರಿಹೋಯಿತೆನ್ನಿ . ಆಗ ಈ ಬಾರಿ ಈ ಪುಸ್ತಕದ ಮೆಥಡ್ ನಲ್ಲಿ ಚಿತ್ರಾನ್ನ ಮಾಡೋಣವೆಂದು ಮಾಡಿದೆ ಚೆನ್ನಾಗಿ ಆಗಿತ್ತು . ಅಂಬಿಕ ಮೇಡಂಗೆ ತಲುಪಿಸುವುದನ್ನು ಮರೆಯಲಿಲ್ಲವೆನ್ನಿ . ಮತ್ತೊಂದು ದಿನ ಈ ಪುಸ್ತಕದ ಬಗ್ಗೆಯೇ ತಿಳಿಸುತ್ತೇನೆ . ಏಕೆಂದರೆ ಅದರಲ್ಲಿನ ವಿಧಾನಗಳು ನಿಜಕ್ಕೂ ಚೆನ್ನಾಗಿವೆ . ನಾವೂ ರಾಜ ಭೋಜನವನ್ನು ಸವಿಯೋಣ ಅಲ್ಲವೇ?
ಕಮಲಾ
INSPIRE Oct.2012, National College Basavanagudi.
In the capacity of ORGANISING SECRETARY.

No comments:

Post a Comment