Monday 10 June 2013

ಚಂದ್ರಿಕಾ ಒಂದು ಆಪ್ತ ನೆನಪು

ನಿನ್ನೆ ಸಂಜೆ( 9-6-2013) 6 30 ರಿಂದ 7 ಗಂಟೆ
-----------------------------------------

ನಿನ್ನೆ ಸಂಜೆ (9-6-2013) K R ಆಸ್ಪತ್ರೆಯ I C U ನಲ್ಲಿ ನಿಸ್ತೇಜವಾಗಿದ್ದ ಚಂದ್ರಿಕಳ ಕೈಗಳನ್ನು ಮುಟ್ಟಿ ನೋಡಿದೆ ತಣ್ಣಗಾಗಿತ್ತು . ಹಣೆಯಮೇಲೆ ಕೈಯಿಟ್ಟೆ ಬೆಚ್ಚಗಿತ್ತು . B P 51/33, Pulse 104, ಎಂದು ಮೆಶಿನು ತೋರಿಸುತ್ತಿತ್ತು . ಶೋಭಾ ಕೂಡ ನೋಡಿಬಂದರು . ಶೋಭಾ, ಚಂದ್ರಿಕಾ ನಾಳಿನ "ಬೆಳಕು ಕಾಣುವುದಿಲ್ಲ " ಎಂದೆ . "ಹಾಗೆಲ್ಲ ಅನ್ನಬೇಡಿ ಕಮಲಾ" ಎಂದರು ಶೋಭಾ . ಮನೆಯವರನ್ನು ಮಾತನಾಡಿಸಿ ಹೊರಬಂದೆವು . ಅದೂ ಇದೂ ಮಾತನಾಡಿದೆವು . ಇಬ್ಬರೂ ನಮ್ಮ ನಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಹೊರಟೆವು . ಗಾಡಿನಿಲ್ಲಿಸಿದ ನಾನು ಶೋಭಾ ವಿಷಯಗೊತ್ತಾದರೆ ಕೂಡಲೆ ತಿಳಿಸಿ ಎಂದು ಹೇಳಿ ಮುಂದುವರೆದೆ . ಮನೆಗೆ ಬಂದು ಎಲ್ಲ ಕೆಲಸ ಮುಗಿಸುವ ಹೊತ್ತಿಗೆ ಚಂದ್ರಿಕಾ ಇನ್ನಿಲ್ಲ ಎಂಬ ಸುದ್ದಿ ಅಲೆಯಲ್ಲಿ ತೇಲಿ ಬಂದೇಬಿಟ್ಟಿತು .

ಮಳವಳ್ಳಿ ಯಿಂದ ಬೆಂಗಳೂರಿಗೆ
----------------------------------------

ಚಂದ್ರಿಕಾ ನ್ಯಾಷನಲ್ ಕಾಲೇಜಿನಲ್ಲಿ BSc ಓದಿದ ನಂತರ ಸೆಂಟ್ರಲ್ ಕಾಲೇಜಿನಲ್ಲಿ MSc ಭೌತಶಾಸ್ತ್ರ ಪದವಿ ಪಡೆದ ತರುವಾಯದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕಿಯ ಕೆಲಸ ಪ್ರಾರಂಭಿಸಿದರು . ತಂದೆ ತಾಯಿ , ತಮ್ಮ ತಂಗಿಯರ ದೊಡ್ಡ ಕುಟುಂಬದ ಹಿರಿಯ ಮಗಳಾಗಿ ಮನೆಗೆ ಆಸರೆಯಾಗಿ ನಿಂತರು .
ಉತ್ತಮ ಅಧ್ಯಾಪಕಿಯಾಗಿ ಹೆಸರು ಮಾಡಿದ ಚಂದ್ರಿಕಾ ವಿದ್ಯಾರ್ಥಿ ಮತ್ತು ಅಧ್ಯಾಪಕವರ್ಗ ಇಬ್ಬರಿಗೂ ಸಹಾಯ ವಾಗುವಂತಹ ಕೆಲಸಗಳಲ್ಲಿ ಅಲ್ಲಿಂದಲೇ ತೊಡಗಿಕೊಂಡರು . 1990 ರ ದಶಕದಲ್ಲಿ ದಾ. ಗುರುರಾಜ ಕರಜಗಿ ಯವರ ಕಣ್ಣಿಗೆಬಿದ್ದ ಚಂದ್ರಿಕಾ ಅನಂತರ ಬೆಂಗಳೂರಿನ V V S ಕಾಲೇಜಿನಲ್ಲಿ ಪ್ರತಿಷ್ಟಾಪಿತರಾದರು .

ಬೆಂಗಳೂರಿನಿಂದ ಭಾರತಾದ್ಯಂತ ಚಟುವಟಿಕೆ ವಿಸ್ತರಿಸಿ ಕೊಂಡ ಚಂದ್ರಿಕಾ .
----------------------------------------------------------------------------------

V V S ಕಾಲೇಜಿಗೆ ಬಂದದ್ದು ಚಂದ್ರಿಕಳಿಗೆ ನಾಲ್ಕು ಕೈ ಕಾಲುಗಳು ಹೆಚ್ಚಾಗಿ ಬಂದಂತಾದುವು . ಅದಕ್ಕೆ ಪೂರಕವಾಗಿ ಆಕೆಯ ಕಾರ್ಯಚಟುವಟಿಕೆಯನ್ನು ಅಂದಿನ ಪ್ರಾಂಶುಪಾಲರಾಗಿದ್ದ ಕರಜಗಿಯವರೂ ಪ್ರೋತ್ಸಾಹಿಸಿದರು . ಅದರ ಪರಿಣಾಮವಾಗಿ ಬಸವೇಶ್ವರನಗರ ವಸತಿ ಪ್ರದೇಶದ ಒಂದು ಎಕರೆ ಜಾಗದಲ್ಲಿರುವ ಸಣ್ಣದಾದ V V S ಕಾಲೇಜಿನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳು ಆಯೊಜನೆಗೊಳ್ಳ ತೊಡಗಿದವು . ಆ ಮೂಲಕ ಅಧ್ಯಾಪಕರುಗಳು ಒಂದೆಡೆ ಕಲೆತು ಚರ್ಚಿಸಲು ವೇದಿಕೆ ರೂಪುಗೊಳ್ಳ ತೊಡಗಿತು . ತದನಂತರದ ದಿನಗಳಲ್ಲಿ IAPT ಸಂಘಟನೆಗೆ ಚಳುವಳಿಯ ಮಾದರಿಯಲ್ಲಿ ಸದಸ್ಯತ್ವವನ್ನು ಮಾಡಿಸಿದರು .

IAPT ಯ ರಾಷ್ಟ್ರೀಯ ಅಧಿವೇಶನಗಲ್ಲಿ ಪಾಲ್ಗೊಳ್ಳುವಂತೆ ಅಧ್ಯಾಪಕರನ್ನು ಹುರಿದುಂಬಿಸುತ್ತಿದ್ದ ಚಂದ್ರಿಕಾ , ಅವರಿಂದ ಪ್ರೀತಿಯಿಂದಲೇ ಸಂಶೋಧನಾ ಪ್ರಭಂಧ ಮಂಡಿಸುವಂತೆ ಒತ್ತಾಯಿಸುತ್ತಿದ್ದರು .
ಬೆಂಗಳೂರಿನಿಂದ ಹತ್ತರಿಂದ ಹದಿನೈದು ಪ್ರಭಂದ,ಪೋಸ್ಟರ್ , ಪ್ರಯೋಗಗಳು ಪಾಲ್ಗೊಳ್ಳುವಂತೆ ಮಾಡಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದಿಂದ ಒಳ್ಳೆಯ ಸ್ಫರ್ಧೆಯನ್ನು ಒಡ್ಡುತ್ತಿದ್ದರು .

ಇದರ ಜೊತೆಗೆ IAPT ವಿಧ್ಯಾರ್ಥಿಗಳಿಗೆ ಆಯೋಜಿಸುವ National Graduate Physics Examination, Olympiad ಪರೀಕ್ಷೆಗಳನ್ನು ರಾಷ್ಟ್ರಾದ್ಯಂತ ಆಯೋಜಿಸಿ ಹೆಚ್ಚು ವಿಧ್ಯಾರ್ಥಿಗಳು ಪಾಲ್ಗೊಳ್ಳಲು ಅನೇಕ ಅಧ್ಯಾಪಕರ ಜೊತೆ ಸಂಪರ್ಕದಲ್ಲಿದ್ದು ಸಾಕಷ್ಟು ಕೇಂದ್ರಗಳನ್ನು ತೆರೆಯುವಂತೆ ನೋಡಿಕೊಳ್ಳುತ್ತಿದ್ದರು . IAPT ಯ ಹಲವು ರಾಷ್ಟ್ರಮಟ್ಟದ ಪರೀಕ್ಷೆಗಳು ಪ್ರಾಯೋಗಿಕವಾಗಿದ್ದು ಪ್ರಯೋಗಶಾಲೆ ಬೇಕಾಗುತ್ತಿತ್ತು . ಜೊತೆಗೆ ಸಾಕಷ್ಟು ಅಧ್ಯಾಪಕರ ಉಚಿತ ಸೇವೆಯೂ ಬೇಕಾಗುತ್ತಿತ್ತು . ಇದೆಲ್ಲವನ್ನು ತಮ್ಮ ಕಾಲೇಜಿನಲ್ಲಿ ಮಾಡುತ್ತಿದ್ದ ಚಂದ್ರಿಕಾ ನಂತರ ಬೆಂಗಳೂರಿನ ಇತರೆ ಅಧ್ಯಾಪಕರನ್ನು ಮತ್ತು ಕಾಲೇಜನ್ನು ಇದಕ್ಕೆ ತಯಾರು ಮಾಡಿದರು .

ಚಂದ್ರಿಕಾ ಕಾಲೇಜಿನೊಳಗೆ ಮಾದುವಕೆಲಸವಿದಾದರೆ , ಇನ್ನು ಕಾರ್ಯ ಕಾರಣ ಸಂಭಂಧ ದೇಶ ಸುತ್ತ ಬೇಕಾಗುತ್ತಿತ್ತು . ಆಗೆಲ್ಲಾ ತನ್ನ ಪಾಠ ಪ್ರವಚನಗಳನ್ನು ಮುಗಿಸಿ ಕಾಲೇಜಿನವರ ಜೊತೆ ಮಾತುಕತೆನಡೆಸಿ ರಜೆಹೊಂದಿಸಿಕೊಂಡು ವಯೋವೃದ್ಧ ತಾಯಿಗೆ ನೋಡಿಕೊಳ್ಳುವವರ ವ್ಯವಸ್ಥೆ ಮಾಡಿ ಮೀಟಿಂಗು ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಿದ್ದರು . ಆದರೂ ಭೌತಶಾಸ್ತ್ರ ಸಂಭಂದಿಸಿದ ಯಾವುದೇ ಕೆಲಸವಾದರೂ ಉತ್ಸಾಹದಿಂದ ಪುಟಿದೇಳುತ್ತಿದ್ದರು .

ಹೊಸದಾಗಿ ಕಾರ್ಯಕ್ರಮ ಆಯೋಜಿಸುವ ಯಾರಿಗೇ ಆದರೂ ಮುಂದೆ ನಿಂತು ಎಲ್ಲಾ ರೀತಿಯ ಸಹಾಯ ಒದಗಿಸಿ ಕೊಡುತ್ತಿದ್ದರು . ಒಟ್ಟಾರೆಯಾಗಿ ಇಂದು ಬೆಳಗ್ಗೆ ನಮ್ಮ ರಾಘವೇಂದ್ರ (IISc)
ಹೇಳಿದಂತೆ She was resource person for resource persons.

ನಾನು ಚಂದ್ರಿಕಾ ಮತ್ತು ದೆಹಲಿ
------------------------------------
ನಾನು ಮತ್ತು ಚಂದ್ರಿಕಾ 2009 ರಲ್ಲಿ ಕಾನ್ಪುರಕ್ಕೆ ಒಟ್ಟಿಗೇ ಹೋಗಿದ್ದೆವು( conference ಮತ್ತು ಕೆಲಸದ ಸಂಭಂದ) . ಒಂದುವಾರ ಇಬ್ಬರೂ ಒಂದೇ ರೂಮಿನಲ್ಲಿದ್ದು ಸುತ್ತಾಡಿದ್ದು ಜೀವಂತ ಅನುಭವ . ಕಾನ್ಪುರದಿಂದ ದೆಹಲಿಗೆ ಬಂದ ನಾವಿಬ್ಬರೂ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೆವು . 2012 ರಲ್ಲಿ ನಡೆಯಲಿದ್ದ ಏಶಿಯನ್ ಫಿಸಿಕ್ಸ್ ಒಲಿಂಪಿಯಾಡ್ ನಡೆಸುವ ಸಂಭಂಧದಲ್ಲಿ DST ಯಲ್ಲಿ ಹಣಕಾಸು ಸಂಭಂಧದ ಫೈಲು ಮೂವ್ ಮಾಡಿಸಬೇಕಿತ್ತು . ಕಪಿಲ್ ಸಿಬಲ್ ಅವರ ಕಚೇರಿಗೆ ತೆರಳಿದವು . ಅದಕ್ಕೂ ಮುನ್ನ ದೆಹಲಿಯಲ್ಲಿದ್ದ ನನ್ನ ದೊಡ್ಡಣ್ಣ ನಾನೇನಾದರೂ ಸಹಾಯ ಮಾಡಲೇ ಎಂದು ಚಂದ್ರಿಕಳನ್ನು ಕೇಳಿದಾಗ ಬೇಡ ಸರ್ ನಾನೆಲ್ಲಾ ವ್ಯವಸ್ಥೆ ಮಾದಿದ್ದೇನೆನ್ದರು . ಕೇಂದ್ರ ಸರ್ಕಾರಿ ಕಚೇರಿ ಯೊಳಗೆ ಸಲೀಸಾಗಿ ಓಡಾಡ ಬಲ್ಲವರನ್ನು ಮೊದಲೇ ಗೊತ್ತುಮಾಡಿದ್ದ ಚಂದ್ರಿಕಾ ಅರ್ಧ ದಿನದೊಳಗೆ ಎಲ್ಲ ಕೆಲಸ ಮುಗಿಸಿ ಕೊಂಡರು . ಆಗಲೇ ನನಗೆ ಚಂದ್ರಿಕಳ ಬುದ್ದಿವಂತಿಕೆ ಮತ್ತು ಪವರ್ ಅರ್ಥವಾಗಿದ್ದು . "ಕಮಲಾ ದೂರದ ಊರಿನಿಂದ ಬಂದಿರುತ್ತೇವೆ ಕೆಲಸ ಮುಗಿಸಿಕೊಂಡು ಹೋಗಬೇಕಾಗುತ್ತದೆ ಅದಕ್ಕಾಗಿ ಗೊತ್ತಾದವರನ್ನು ಹಣಕೊಟ್ಟದರೂ ಹೊಂದಿಸಿಕೊಳ್ಳಬೇಕು "ಎಂದು ಹೇಳಿದ್ದು ಇನ್ನು ನನ್ನ ಕಿವಿಯಲ್ಲಿದೆ .
ಚಂದ್ರಿಕಾ ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದರು . ನಿವೃತ್ತಿಯನಂತರ ಪ್ರವೃತ್ತಿಯನ್ನೇ ಪೂರ್ಣ ವೃತ್ತಿಯನ್ನಾಗಿಸಿಕೊಳ್ಳುವ ತಯಾರಿಯಲ್ಲಿದ್ದ ಚಂದ್ರಿಕಾ ಅಕಾಲ ಮರಣವನ್ನಪ್ಪಿದ್ದು ಇದು ಯಾವ ನ್ಯಾಯ ಎಂದು ಕೇಳುವಂತಾಗಿದೆ . ಆದರೆ ಯಾರನ್ನು ಕೇಳೋಣ ?
ಚಂದ್ರಿಕಾ ಮನಸ್ಸು ಮಾಡಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಯಿಯನ್ನು ಪಾಠ ಮಾಡಿ ಸಂಪಾದಿಸ ಬಹುದಾಗಿತ್ತು . ಅದಕ್ಕೆ ಅವರಿಗೆ ಹಲವು corporate tuition center ಗಳಿಂದ ಆಹ್ವಾನವು ಇತ್ತು .

ಚಂದ್ರಿಕಾ ಕಾಫಿ ಕುಡಿಯಲಿಲ್ಲ .
---------------------------------
ಈಗ್ಗೆ ಹತ್ತು ದಿನಗಳ ಹಿಂದೆ ರಾತ್ರಿ ಶೋಭಾ, ಚಂದ್ರಿಕಾಳ ಮನೆಗೆ ತೆರಳಿ, ಚಂದ್ರಿಕಾರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿ, B positive ರಕ್ತ ಬೇಕೆಂದು ನನಗೆ ಬೆಳಗ್ಗೆ ಫೋನು ಮಾಡಿದರು . ಬೆಳಗ್ಗೆ 7 ಗಂಟೆ ಹೊತ್ತಿಗೆ ನನ್ನ ಮಗನನ್ನು ಕರೆದುಕೊಂಡು ಆಸ್ಪತ್ರೆಯಲ್ಲಿದ್ದೆ . ಅಷ್ಟು ಹೊತ್ತಿಗೆ ಸ್ವಲ್ಪ ಚೇತರಿಸಿ ಕೊಂಡಿದ್ದರು . ಈಗಾಗಲೇ ರಕ್ತ ಕೊಟ್ಟಿದ್ದಾರೆ ಬೇಕಾದ ತಕ್ಷಣ ತಿಳಿಸುತ್ತೇನೆ ಎಂದರು . ಸರಿ ಎಂದೆ . ಒಂದು ಗಂಟೆ ಅವರ ಬಳಿ ಕುಳಿತೆ . ಉತ್ಸಾಹ ತುಂಬುವ ಮಾತನಾಡಿದೆ . ಆಕೆ ನನಗೆ "ಕಮಲಾ ಓಡಾಡಿಕೊಂಡಿರಿ ಇದರಿಂದ ಸಂಪರ್ಕ ಇರುತ್ತದೆ ಕೆಲಸ ಕಾರ್ಯಗಳಿಗೆ ಸಂಪರ್ಕ ಬೇಕು " ಎಂದು ನನಗೇ ಉತ್ಸಾಹ ತುಂಬುವ ಮಾತನ್ನು ಹೇಳಿದರು . "ಅದಿರಲಿ ನೀವು ಮೊದಲು ಹುಷಾರಾಗಿ , ಇನ್ನುಮುಂದೆ ದಿನವೂ ಬೆಳಗ್ಗೆ ನಾನು ಕಾಫಿ ಕಳಿಸುತ್ತೇನೆ . ಹೋಟೆಲಿನ ಕಾಫಿ ಕುಡಿಯಬೇಡಿ . ನಿಮ್ಮ ಮನೆಯಿಂದ ಬರುವವರು ಒಟ್ಟಿಗೇ ಉಪಹಾರ ತರಲಿ ಎಂದೆ ". "ಆಗಲಿ, ನನ್ನ ತಮ್ಮ ಜೊತೆಯಲ್ಲಿರುತ್ತಾನೆ ಅವನು ಹಾಲು ಕುಡಿಯುತ್ತಾನೆ ಎಂದರು "." ಆಯಿತು ಅದನ್ನೂ ಕಳಿಸುತ್ತೇನೆ" ಎಂದು ಹೇಳಿದೆ , ನನ್ನ ಮಗನಿಗೆ ಮಗನೆ ದಿನವೂ ಬೆಳಗ್ಗೆ ಬೇಗ ಎದ್ದು ಆಸ್ಪತ್ರೆ ಕಾಫಿ ಸಪ್ಲೈ ಮಾಡು ಎಂದೆ . ಆತನೂ ಒಪ್ಪಿದ . ಆದರೆ ಅಂದು ಮಧ್ಯಾನ್ಹ ಸಂಕೀರ್ಣತೆಗೊಳಗಾದ ಆಕೆಯ ಆರೋಗ್ಯದಿಂದಾಗಿ I C U ಸೇರಿದರು . ನಂತರದ್ದೆಲ್ಲ ಬರೀ ಔಷಧಿ . ನಾನು ಕಾಫಿ ಕಳಿಸುವ ಪ್ರಮೇಯವೇ ಬರಲಿಲ್ಲ. . ಚಂದ್ರಿಕಾ ಕಾಫಿ ಕುಡಿಯಲಿಲ್ಲ .

ವಿಧಿಯೋ ವಿಪರ್ಯಾಸವೋ ?
----------------------------------

ಒಂದು ವರ್ಷದಿಂದ ಆಸ್ಪತ್ರೆಗೆ ತೋರಿಸುತ್ತಲೇ ಇದ್ದ ಚಂದ್ರಿಕಾಳಿಗೆ ಏನಾಗಿತ್ತು ಎಂಬುದು ನಿಖರವಾಗಿ ಗೊತ್ತಾಗಲೇ ಇಲ್ಲ . ಆಸ್ಪತ್ರೆಯ ಫೈಲು ಮಾತ್ರ ದಪ್ಪಗಾಗಿತ್ತು . ಎಲ್ಲವೂ ಸರಿ ಎಂದು ಬರುತ್ತಿತ್ತು .
ಕೊನೆಗಾದದ್ದು ಮಾತ್ರ ಮಲ್ಟಿಪಲ್ ಆರ್ಗನ್ ಫೇಲ್ಯೂರ್ .

ಚಂದ್ರಿಕಳನ್ನು ಮೊದಲದಿನ ಆಸ್ಪತ್ರೆಯಲ್ಲಿ ಮಾತನಾಡಿಸಿದ್ದು ನಾನು ಮತ್ತು ಶೋಭಾ , ಕೊನೆಯ ದಿನ ಕಳಿಸಿಬಂದದ್ದೂ ನಾವಿಬ್ಬರೇ . ಇದು ಇದೆಂಥಹ ವಿಪರ್ಯಾಸ?

ಚಂದ್ರಿಕಾಳ ಸಾವು ನಮ್ಮೆಲ್ಲರಿಗೂ ತುಂಬಲಾರದ ನಷ್ಟ ನಿಜ . ಆದರೆ ತೊಂಭತ್ತರ ವಯೋವೃದ್ಧ ತಾಯಿ ಈ ಹೊತ್ತಲ್ಲಿ ಭಾವನಾತ್ಮಕವಾಗಿ ಅನಾಥಳಾದದ್ದು ಯಾವ ತಂದೆ ತಾಯಿಗೂ ಬರಬಾರದ ಕಷ್ಟ . ಅದನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ದೇವರು ನೀಡಲಿ .

ಇಂದು ಬೇರಾವ ಕೆಲಸವೂ ಮಾಡಲಾಗದ ನನಗೆ , ಚಂದ್ರಿಕಳ ಬಗ್ಗೆ ತೋಚಿದಷ್ಟು ಬರೆದಿದ್ದೇನೆ . ಇದೊಂದು ಆಪ್ತಬರಹವಷ್ಟೇ . ಚಂದ್ರಿಕಾ ಇದಕ್ಕೂ ಮೀರಿದವರು ಎಂಬುದು ನಮ್ಮೆಲ್ಲರ ಅನಿಸಿಕೆ .
ಕಮಲಾ .

No comments:

Post a Comment