Wednesday 27 February 2019

Book release at Udayabhaanu Kalaasangha

ವಿಜ್ಞಾನ,‌ ಗಣಿತ ಕಲಿಯದಿದ್ರೆ ಮಾರಕ

    
image: https://www.udayavani.com/sites/default/files/styles/article_new_image/public/images/articles/2015/04/13/gnta.jpg?itok=6f3Z89ij
ಬೆಂಗಳೂರು: ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಹಿಂದೇಟು ಹಾಕುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಉದಯಭಾನು ಕಲಾ ಸಂಘ ಭಾನುವಾರ ಆಯೋಜಿಸಿದ್ದ "ಸುವರ್ಣ ಪುಸ್ತಕಮಾಲೆ' 7ನೇ ಕಂತಿನ ಕೃತಿಗಳ ಲೋಕಾರ್ಪಣೆ' ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಹಾಗೂ ಗಣಿತ ಕ್ಷೇತ್ರಗಳು ದೇಶವನ್ನು ಅಭಿವೃದ್ಧಿಯತ್ತ ಕೊಂಡಯ್ಯಲಿವೆ. ಈ ಎರಡು ವಿಷಯಗಳು ಕಷ್ಟದಾಯಕ ಎಂಬ ಮನೋಭಾವನೆ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಹಾಗೆಯೇ, ವಿದ್ಯಾರ್ಥಿಗಳ ಆಸಕ್ತಿ ಕೊರತೆಯಿಂದ ಶಾಲೆಗಳಲ್ಲಿಯೂ ಈ ಎರಡೂ ವಿಷಯಗಳ ಭೋಧನೆಗೆ ಹಿನ್ನಡೆ ಉಂಟುಮಾಡಿದೆ. ವಿಜ್ಞಾನ ಹಾಗೂ ಗಣಿತ ಬೆಳವಣಿಗೆ ಆಗದಿದ್ದರೆ ಅದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಮೂಲ ವಿಜ್ಞಾನ ಹೊರತುಪಡಿಸಿ ಅನ್ವಯಿಕ ವಿಜ್ಞಾನವನ್ನೇ ಹೆಚ್ಚು ಭೋದಿಸಲಾಗುತ್ತಿದೆ. ಇದರಿಂದ ಮೂಲ ವಿಜ್ಞಾನ ನಶಿಸುತ್ತಿದೆ. ಅಲ್ಲದೆ, ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆಗಳ ಪ್ರಮಾಣವೂ ಕುಸಿಯಲಿದೆ. ಭವಿಷ್ಯವನ್ನು ದೃಷ್ಟಿಯಲ್ಲಿಸಿಕೊಂಡು ಶಾಲೆ-ಕಾಲೇಜುಗಳಲ್ಲಿ ಮೂಲ ವಿಜ್ಞಾನ ಭೋದಿಸಲು ಶಿಕ್ಷಕರು ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವೆ ಡಾ. ಲೀಲಾದೇವಿ ಆರ್‌.ಪ್ರಸಾದ್‌ ಮಾತನಾಡಿ, ಯಾವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸದ ಸಂಘ-ಸಂಸ್ಥೆಗಳಿಗೆ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿದೆ. ಆದರೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸುತ್ತಿರುವ ಪ್ರಮಾಣಿಕ ಸಂಘ-ಸಂಸ್ಥೆಗಳಿಗೆ ಅನುದಾನ ಮೀಸಲಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ. ಸುರೇಶ್‌ ಅವರ "ಸುರೇಂದ್ರ ಕೌಲಗಿ', ದೀಪಿಕ ಸಾವಿತ್ರಿ ಅವರ "ಕೆ.ವಿ. ರಮೇಶ್‌', ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರ "ಮುದೇನೂರು ಸಂಗಣ್ಣ', ಡಾ.ವೈ.ಸಿ. ಕಮಲಾ ಅವರ "ಡಾ. ಲೀಲಾದೇವಿ ಆರ್‌.ಪ್ರಸಾದ್‌' ಹಾಗೂ ಸುಮಂಗಲ ಎಸ್‌.ಮುಮ್ಮಿಗಟ್ಟಿ ಅವರ ರಚನೆಯ "ಆರ್‌.ಎಲ್‌. ನರಸಿಂಹಯ್ಯ' ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಉದಯಭಾನು ಕಲಾ ಸಂಘದ ಗೌರವಾಧ್ಯಕ್ಷ ನ್ಯಾ.ಎ.ಜೆ. ಸದಾಶಿವ, ಅಧ್ಯಕ್ಷ ಬಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Read more at https://www.udayavani.com/kannada/news/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/54743/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%C2%AE%E2%80%8C-%E0%B2%97%E0%B2%A3%E0%B2%BF%E0%B2%A4-%E0%B2%95%E0%B2%B2%E0%B2%BF%E0%B2%AF%E0%B2%A6%E0%B2%BF%E0%B2%A6%E0%B3%8D%E0%B2%B0%E0%B3%86-%E0%B2%AE%E0%B2%BE%E0%B2%B0%E0%B2%95#RjgEvEZGByH6cJEq.99

Book Release program at Hubli


ಡಾ. ಗುರುರಾಜ್ ದೇಶಪಾಂಡೆ ವಿರಚಿತ 'ದೇಶಾವಲೋಕನ' ಲೋಕಾರ್ಪಣೆ
 By Madhusoodhan | Updated: Friday, July 8, 2016, 20:03 [IST] ಹುಬ್ಬಳ್ಳಿ, ಜುಲೈ, 08: 

ಸಮಸ್ಯೆಯನ್ನು ಗುರುತಿಸಿ ಪರಿಹರಿಸಬೇಕು ಬೇಕಾದರೆ ಅದನ್ನು ಪ್ರೀತಿಸಬೇಕು ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು. ಅವರು ಗುರುವಾರ ಸ್ಥಳೀಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿರುವ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ "ದೇಶಾವಲೋಕನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.[ದೇಶಾವಲೋಕನ ಸಮಾನ ಸಮಾಜದ ಕನಸಿಗೊಂದು ಮುನ್ನುಡಿ] ಸಮಸ್ಯೆಯನ್ನು ಗುರುತಿಸಬೇಕಾದರೆ ಅದನ್ನು ಪ್ರೀತಿಸಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ರೀತಿಯ ಹಲವಾರು ವಿಷಯಗಳನ್ನು ದೇಶಾವಲೋಕನ ಪುಸ್ತಕದಲ್ಲಿ ನಾನು ಬರೆದಿದ್ದೇನೆ ಎಂದರು. ಉದ್ಯಮಿಗಳಾಗಬೇಕಾದರೆ ಮೊದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಏಕೆಂದರೆ ನಮ್ಮ ನಡುವೆ ಮೂರು ತರಹದ ವ್ಯಕ್ತಿತ್ವ ಹೊಂದಿರುವ ಜನರಿದ್ದಾರೆ. ಆರಾಮಾಗಿ ಇದ್ದರಾಯಿತು ಎನ್ನುವವರು, ಸಮಸ್ಯೆ ಬಂದರೆ ಏಕೆ ಬಂತು ಎಂದು ಚಿಂತಿಸುತ್ತ ಕುಳಿತುಕೊಳ್ಳುವವರು ಮತ್ತು ಮೂರನೇಯವರು ಸಮಸ್ಯೆ ಬಂದರೆ ಧೈರ್ಯವಾಗಿ ಎದುರಿಸಬೇಕೆನ್ನುವವರು. ಹೀಗಾಗಿ ನಾವು ಮೂರನೇ ತರಹದ ವ್ಯಕ್ತಿತ್ವವನ್ನು ಹೊಂದಿದ್ದರೆ ಮಾತ್ರ ಯಶಸ್ಸು ಪಡೆಯಬಹುದು ಎಂದರು.[ದೇಶಾವಲೋಕನ ಕುರಿತು ಗುರುರಾಜ್ ದೇಶಪಾಂಡೆ ನುಡಿ] ಲೇಖಕರೊಂದಿಗೆ ಸಂವಾದ: ಪುಸ್ತಕವನ್ನು ಶ್ರೀನಿವಾಸ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ ಬಿಡುಗಡೆ ಮಾಡಿದ ನಂತರ ಲೇಖಕರೊಂದಿಗೆ ಸಂವಾದ ನಡೆಯಿತು. ಸತೀಶ ಚಪ್ಪರಿಕೆಯವರು ಲೇಖಕರಾದ ಗುರುರಾಜ ದೇಶಪಾಂಡೆ ಮತ್ತು ಕನ್ನಡ ಅನುವಾದಕಿ ಬೆಂಗಳೂರು ನ್ಯಾಶನಲ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ವೈ.ಸಿ. ಕಮಲಾ ಅವರನ್ನು ಸಂವಾದದಲ್ಲಿ ಪುಸ್ತಕ ಬರೆಯುವಾಗಿನ ಅನುಭವಗಳನ್ನು ಹಂಚಿಕೊಂಡರು. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ] ಖ್ಯಾತ ಕವಿ ಚನ್ನವೀರ ಕಣವಿ ಅವರ ಪುತ್ರ ಪತ್ರಕರ್ತ ಬಿಸಿನೆಸ್ ಇಂಡಿಯಾ ಪತ್ರಿಕೆಯ ಸಂಪಾದಕ ಶಿವಾನಂದ ಕಣವಿ ಮತ್ತಿತರರು ಉಪಸ್ಥಿತರಿದ್ದರು. ಸಂವಾದದ ನಂತರ ಗುರುರಾಜ ದೇಶಪಾಂಡೆ ಅವರನ್ನು ಪುಸ್ತಕ ಪಡೆದುಕೊಂಡವರಿಗೆ ಆಟೋಗ್ರಾಫ್ ನೀಡಿ ಶುಭ ಹಾರೈಸಿದರು.

Read more at: https://kannada.oneindia.com/news/dharwad/hubballi-dr-gururaj-deshpande-deshavalokana-book-released-104892.html

ಅಲೆಯ ಲೀಲೆ ತೋರಿದವರು - On Gravitational Waves in Aniketana online magazine.

ಅಲೆಯ ಲೀಲೆ ತೋರಿದವರು…

-ಡಾ. ವೈ.ಸಿ.ಕಮಲಾ
gpb_circling_earthವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ವಿಜ್ಞಾನಿಗಳಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದೆ. ವಿಶ್ವ ರಚನೆಗೆ ಸಂಬಂಧಿಸಿದಂತೆ ‘ಮಿಸ್ಸಿಂಗ್ ಲಿಂಕ್’ಗಳನ್ನು ಜೋಡಿಸುವಲ್ಲಿ ಒಂದು ಪ್ರಮುಖ ಕೊಂಡಿ. ಅದುವೇ ಗುರುತ್ವದ ಅಲೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಕ್ಷ್ಯ ಸಮೇತ ಖಚಿತಪಡಿಸಿರುವುದು. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮುನ್ನ ಹೊರಟ ಗುರುತ್ವ ಅಲೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶ-ಕಾಲದ ಹರವಿನಲ್ಲಿ (Space-Time),  ಗುರುತ್ವದ ಅಲೆಗಳ (Gravitational Waves) ಇರುವಿಕೆಯನ್ನು ಪತ್ತೆ ಮಾಡಿದ ಕೀರ್ತಿ ಅಮೆರಿಕ, ಭಾರತದ ವಿಜ್ಞಾನಿಗಳೂ ಸೇರಿದಂತೆ ಇಡೀ ವಿಶ್ವದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮೂಲಕ ವಿಶ್ವ ರಚನೆ ಕುರಿತಾದ ಪುರಾವೆಗಳ ಕ್ರೋಡೀಕರಣಕ್ಕೆ ಗಟ್ಟಿ ಪುರಾವೆಯೇ ಸಿಕ್ಕಿದೆ. ಇದರಿಂದ ಭವಿಷ್ಯದಲ್ಲಿ ಖಗೋಳಶಾಸ್ತ್ರದ ಅಧ್ಯಯನಕ್ಕೆ ಅದರಲ್ಲೂ ವಿಶ್ವದ ರಚನೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಿದೆ.
1990ರ ದಶಕದಲ್ಲಿ The LIGO Scientific Collaboration (LSC) ಗೆ ಚಾಲನೆ ಸಿಕ್ಕಿತು. 15 ದೇಶಗಳ ಬಹಳಷ್ಟು ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು, ವಿದ್ಯಾರ್ಥಿ ಸಮೂಹ ಈ ಸಾಹಸದಲ್ಲಿ ತೊಡಗಿಸಿಕೊಂಡಿತ್ತು. ಗುರುತ್ವದ ಅಲೆಗಳನ್ನು ಪತ್ತೆ ಮಾಡುವ ಭೌತವಿಜ್ಞಾನದ ಅತ್ಯಂತ ಮಹತ್ವದ ಪ್ರಯೋಗವನ್ನು Laser Interferometer Gravitational – Wave Observatory (LIGO)  ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. 1.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಒಂದರಸುತ್ತ ಮತ್ತೊಂದು ಸುತ್ತುವ ಎರಡು ಕಪ್ಪುರಂದ್ರಗಳು ಪರಸ್ಪರ ಸಮಾಗಮಗೊಂಡಾಗ ಅವುಗಳಿಂದ ಸೃಷ್ಟಿಯಾದ ಗುರುತ್ವದ ಅಲೆಗಳೇ ಈಗ ಸಿಕ್ಕಿರುವುದು. 2015ರ ಸೆಪ್ಟೆಂಬರ್ 14 ರಂದು ಅಮೆರಿಕದ ಲಿವಿಂಗ್​ಸ್ಟನ್ ಮತ್ತು ಹ್ಯಾನ್​ಫೋರ್ಡ್ ನಲ್ಲಿರುವ ಪ್ರಯೋಗಶಾಲೆಗಳಲ್ಲಿ ಗುರುತ್ವದ ಅಲೆಗಳನ್ನು ದಾಖಲಿಸಲಾಯಿತು.
ಲಿಗೊ ವೀಕ್ಷಣಾಲಯ ಪಾತ್ರವೇನು: ಲಿಗೊ ಕೇಂದ್ರಗಳು ವಿಶ್ವದ ಹಲವೆಡೆ ಇವೆ. ಭಾರತದ ಪುಣೆಯಲ್ಲೂ ಲಿಗೊ ಸ್ಥಾಪನೆಗೊಳ್ಳಲಿದೆ. ಅಮೆರಿಕದಲ್ಲಿ ಎರಡು ವೀಕ್ಷಣಾಲಯಗಳು ಇವೆ. ಅವುಗಳೆಂದರೆ, ಲಿವಿಂಗ್ಟನ್​ನಲ್ಲಿರುವ ವೀಕ್ಷಣಾಲಯ ಮತ್ತು ವಾಷಿಂಗ್ಟನ್​ನ ಸಮೀಪದ ರಿಚ್​ಲೆಂಡ್​ನಲ್ಲಿರುವ ಹ್ಯಾನ್​ಫೋರ್ಡ್ ವೀಕ್ಷಣಾಲಯ. ಇವೆರಡೂ ವೀಕ್ಷಣಾಲಯಗಳ ಮಧ್ಯೆ ಇರುವ ಅಂತರ 3,002 ಕಿ.ಮೀ.ಗಳು. ಗುರುತ್ವದ ಅಲೆಗಳನ್ನು ಖಚಿತಪಡಿಸಲು ಇವರೆಡೂ ವೀಕ್ಷಣಾಲಯಗಳ ಪಾತ್ರ ಮಹತ್ವದ್ದು.
ಗುರುತ್ವ ಅಲೆಗಳು ಇವೆರಡೂ ವೀಕ್ಷಣಾಲಯಗಳನ್ನು ಪ್ರವೇಶಿಸಿದ ಅಂತರವು ಕೇವಲ 7 ಮಿಲಿ ಸೆಕೆಂಡ್​ಗಳಷ್ಟು. ಮುಮ್ಮೂಲೆಯ (triangulation)  ಬಳಕೆಯಿಂದಾಗಿ, ಅಲೆಗಳ ಆಗಮನ ಮತ್ತು ವೀಕ್ಷಣಾಲಯವನ್ನು ತಲುಪಿದ ಸಮಯದ ಅಂತರವನ್ನು ಮತ್ತು ಅಲೆಯ ಮೂಲವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ. ವಿಶ್ವದಲ್ಲೇ ಅತ್ಯಂತ ಕಿರುಮಾಪನ ಮಾಡಲು ಸಾಧ್ಯವಾಗಿರುವುದೂ ಇದೇ ಪ್ರಥಮ, ಅಂದರೆ, ಒಂದು ಪರಮಾಣು ಬೀಜಕೇಂದ್ರಕ್ಕಿಂತಲೂ 10,000 ಪಟ್ಟು ಚಿಕ್ಕದಾದ ಚಲನೆಯನ್ನು ಮಾಪನ ಮಾಡಲಾಗಿದೆ. ಈ ಪ್ರಯೋಗದ ಸೂಕ್ಷ್ಮತೆಗೆ ಒಂದು ಉದಾಹರಣೆ. ಸಹಸ್ರ ಕೋಟಿ ರಾಗಿ ಕಾಳುಗಳ ಮಧ್ಯೆ ಒಂದು ಸಾಸಿವೆ ಕಾಳು ಹುಡುಕಿದಷ್ಟು ಸೂಕ್ಷ್ಮ.
ಭಾರತೀಯ ವಿಜ್ಞಾನಿಗಳ ಪಾತ್ರ: ಈ ಐತಿಹಾಸಿಕ ಯೋಜನೆಯಲ್ಲಿ ಭಾರತೀಯ ವಿಜ್ಞಾನಿಗಳೂ ಮಹತ್ವದ ಪಾತ್ರವಹಿಸಿದ್ದಾರೆ. ಇದು ವಿವಿಧ ದೇಶಗಳ ಸಾಮೂಹಿಕ ಪ್ರಯತ್ನವಾಗಿದ್ದರೂ, ಗಾಂಧಿನಗರದ ಇನ್ಸ್​ಟಿಟ್ಯೂಟ್ ಆಫ್ ಪ್ಲಾಸ್ಮಾ ರೀಸರ್ಚ್, ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೊನಮಿ ಮತ್ತು ಆಸ್ಟ್ರೋ ಫಿಸಿಕ್ಸ್ (ಐಯುಸಿಎಎ), ಇಂದೋರಿನ ರಾಜಾರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ, ಬೆಂಗಳೂರಿನ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಮುಂತಾದ ಸಂಸ್ಥೆಗಳು ಬಹುಕಾಲದಿಂದ ಗುರುತ್ವ ಅಲೆಯ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಭಾರತಕ್ಕೇನು ಪ್ರಯೋಜನ
ಭಾರತದಲ್ಲಿ ಲಿಗೊ ಸ್ಥಾಪನೆಯಿಂದ ಮೂರು ಬಗೆಯ ಪ್ರಯೋಜನಗಳಿವೆ.
1 ಭವಿಷ್ಯದಲ್ಲಿ ಭಾರತೀಯ ಖಗೋಳಶಾಸ್ತ್ರದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಗುರುತ್ವದ ಅಲೆಯನ್ನು ಆಧರಿಸಿದ ವಿನೂತನ ಸಂಶೋಧನೆಗಳಿಗೆ ಅನುಕೂಲವಾಗಲಿದೆ. ಇದಕ್ಕೆ ಪೂರಕವಾಗಿ ಹಲವು ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶವಿದೆ. ಖಗೋಳ ವಿಜ್ಞಾನಿಗಳಲ್ಲದೆ, ಆಪ್ಟಿಕ್ಸ್, ಲೇಸರ್ಸ್, ಗುರುತ್ವ ಭೌತಶಾಸ್ತ್ರ, ಜ್ಯೋತಿರ್ವಿಜ್ಞಾನ, ಖಭೌತಶಾಸ್ತ್ರ, ಕಾಸ್ಮಾಲಜಿ, ಗಣಕ ವಿಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್​ನ ವಿವಿಧ ಶಾಖೆಗಳ ತಜ್ಞರು ಒಟ್ಟಾಗಿ ಕೆಲಸ ಮಾಡುವ ಅವಕಾಶ ಒದಗಿ ಬರಲಿದೆ.
2 ಉದ್ಯಮಕ್ಕೆ ಬಲ: ಉನ್ನತ ಮಟ್ಟದ ಇಂಜಿನಿಯರಿಂಗ್ ಬೆಳವಣಿಗೆಗೆ ಸಹಾಯಕವಾಗಲಿದೆ. ವಿಶ್ವದ ಅತ್ಯಂತ ದೊಡ್ಡ ನಿರ್ವಾತ ಕೊಳವೆಯನ್ನು ನಿರ್ವಿುಸಲು ಇದರ ಅವಶ್ಯಕತೆ ಇದೆ. ವಿವಿಧ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಜತೆಗಿನ ಸಹಯೋಗಕ್ಕೆ ಉದ್ಯಮಗಳಿಗೆ ಅವಕಾಶವಿದೆ.
3 ಶಿಕ್ಷಣಕ್ಕೆ ಉಪಯೋಗ: ಮೂಲ ವಿಜ್ಞಾನದತ್ತ ಯುವ ಮನಸ್ಸುಗಳನ್ನು ಸೆಳೆಯಲು ಇಂತಹ ಯೋಜನೆಗಳು ಉಪಯುಕ್ತ. ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಕಾರಣವೆಂದರೆ, ಈ ವೀಕ್ಷಣಾಲಯದಲ್ಲಿ ಬಳಸಲ್ಪಡುವ ತಂತ್ರಜ್ಞಾನ, ಉಪಕರಣಗಳು ಅತ್ಯುನ್ನತ್ತ ಮಟ್ಟದ್ದಾಗಿದ್ದು, ಇವು ಯುವಜನರಲ್ಲಿ ಸಹಜವಾಗಿ ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್ ಫಿಸಿಕ್ಸ್​ನಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತವೆ. ಪರಿಣಾಮ ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಬೇರೆ ದೇಶಗಳಲ್ಲೂ ಇಂತಹ ಯೋಜನೆಗಳಿಂದ ಭೌತಶಾಸ್ತ್ರದತ್ತ ಆಕರ್ಷಿತರಾಗಿದ್ದಾರೆ. ಈ ವೀಕ್ಷಣಾಲಯವು ಪೂರ್ಣಗೊಂಡಾಗ ಭಾರತದಲ್ಲಿ ಕೆಲವೇ ಕೆಲವು ಅಂತಾರಾಷ್ಟ್ರೀಯ ಮಹತ್ವದ ಅತ್ಯುನ್ನತ ವೈಜ್ಞಾನಿಕ ಸೌಲಭ್ಯಗಳ ಪೈಕಿ ಇದೂ ಒಂದಾಗಲಿದೆ. ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆಗೆ ಇದೂ ನೆರವಾಗಲಿದೆ.
ಹೊಸ ಯುಗದ ಆರಂಭ
ಗುರುತ್ವದ ಅಲೆಯ ಪತ್ತೆಯು ಭೌತಶಾಸ್ತ್ರ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿಶ್ವದ ರಚನೆ, ಅಸ್ತಿತ್ವದ ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಅಂದರೆ, ಈ ಗುರುತ್ವದ ಅಲೆಗಳ ಮೂಲಕ ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ ಸಂಭಾಷಿಸಿದೆ. ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು, ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪವನ್ನು ನಮಗೆ ನೀಡಿರುವುದಲ್ಲದೆ, ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ. ಗುರುತ್ವದ ಅಲೆಯ ಪತ್ತೆ ಕಪ್ಪುರಂದ್ರ ಇರುವಿಕೆಯನ್ನು ಸಾಬೀತು ಮಾಡಿದೆ.

One of the Report on Digital Kranti mattu Bhaarata Book release program

ಬೆಂಗಳೂರಿನಲ್ಲಿ ಡಿಜಿಟಲ್‌ ತಂತ್ರಜ್ಞಾನದ ಹೃದಯ

kಬೆಂಗಳೂರು: ‘ಡಿಜಿಟಲ್‌ ತಂತ್ರಜ್ಞಾನದ ಹೃದಯ ಇರುವುದು ಬೆಂಗಳೂರಿನಲ್ಲಿ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಶ್ವದ ಪ್ರಮುಖ ಕಂಪೆನಿಗಳೇ ಈ ಮಾತನ್ನು ಒಪ್ಪಿಕೊಂಡಿವೆ’ ಎಂದು ಲೇಖಕ ಶಿವಾನಂದ ಕಣವಿ ಅಭಿಪ್ರಾಯಪಟ್ಟರು.
ತಮ್ಮ ‘ಸ್್ಯಾಂಡ್‌ ಟು ಸಿಲಿಕಾನ್‌: ದಿ ಅಮೇಜಿಂಗ್‌ ಸ್ಟೋರಿ ಆಫ್‌ ಡಿಜಿಟಲ್‌ ಟೆಕ್ನಾಲಜಿ’ ಕೃತಿಯ ಕನ್ನಡಾನುವಾದ ‘ಡಿಜಿಟಲ್‌ ಕ್ರಾಂತಿ ಮತ್ತು ಭಾರತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃತಿಯನ್ನು ಡಾ.ವೈ.ಸಿ.ಕಮಲಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
‘ಡಿಜಿಟಲ್ ಕ್ರಾಂತಿ ಭಕ್ತಿ ಚಳವಳಿ ಇದ್ದಂತೆ. ಕುಲ, ಹಳ್ಳಿ, ರಾಷ್ಟ್ರಗಳನ್ನು ಮೀರಿ ಇದು ವ್ಯಾಪಿಸಿದೆ. ಇದಕ್ಕೆ ಜಾತಿ, ಮತ ಪಂಥಗಳ ಬೇಧವೂ ಇಲ್ಲ. ಜನರ ಒಳಿತಿಗಾಗಿ ಇದನ್ನು ಯಾರು ಬೇಕಾದರೂ ಬಳಸಬಹುದು. ಯಾರು ಬೇಕಾದರೂ ಬೆಳೆಸಬಹುದು’ ಎಂದು ಕಣವಿ ವಿಶ್ಲೇಷಿಸಿದರು.
‘ಭಾರಿ ಪ್ರಮಾಣದ ಸಮಗ್ರ ಸರ್ಕ್ಯೂಟ್‌ (ವೆರಿ ಲಾರ್ಜ್‌ ಸ್ಕೇಲ್‌ ಇಂಟೆಗ್ರೇಟೆಡ್‌ ಸರ್ಕ್ಯೂಟ್‌) ರೂಪಿಸುವ ತಂತ್ರಜ್ಞಾನ ಹೊಂದಿರುವ ವಿಶ್ವದ ಮೂರು ಮುಂಚೂಣಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಈ ತಂತ್ರಜ್ಞಾನದಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದರೆ, ಇಸ್ರೇಲ್‌ ನಂತರದ ಸ್ಥಾನದಲ್ಲಿದೆ. ಫೈಬರ್‌ ಆಪ್ಟಿಕ್ಸ್‌, ಎಂಪಿ3, ಎಚ್‌ಡಿಟಿವಿ, ಮೊಬೈಲ್‌ ಫೋನ್‌ಗಳಲ್ಲಿ ಬಳಸುವ ಕೋಡಿಂಗ್‌ ತಂತ್ರಜ್ಞಾನಗಳ ಮೂಲಕರ್ತೃಗಳು ಭಾರತೀಯರು ಎಂಬುದು ಬಹುತೇಕರಿಗೆ ತಿಳಿದಿಲ್ಲ’ ಎಂದರು.
‘ದೇವಾಲಯವನ್ನು ನಿರ್ಮಿಸುವಾಗ ಯಾರೋ ಕಲ್ಲು ಕಟ್ಟುತ್ತಾರೆ. ಇನ್ನೊಬ್ಬರು ಕಲಶ ಇಡುತ್ತಾರೆ. ಕಲಶ ಇಟ್ಟವರೇ ದೇವಾಲಯ ನಿರ್ಮಿಸಿದರು ಎನ್ನಲಾಗದು. ತಂತ್ರಜ್ಞಾನದ ಕೊಡುಗೆಯೂ ಅದೇ ರೀತಿ. ತಂತ್ರಜ್ಞಾನಗಳ ಅಭಿವೃದ್ಧಿ ನಿಟ್ಟಿನಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಅನೇಕ ಕೆಲಸಗಳು ನಡೆಯುತ್ತಿರುತ್ತವೆ’ ಎಂದು ವಿವರಿಸಿದರು.
ಜವಹರಲಾಲ್‌ ನೆಹರೂ ವೈಜ್ಞಾನಿಕ ಉನ್ನತ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡಾ.ರೊದ್ದಂ ನರಸಿಂಹ ಮಾತನಾಡಿ, ‘ಬೆಂಗಳೂರು ಹಿಂದೆ ವಿಜ್ಞಾನ ನಗರ, ವೈಮಾಂತರಿಕ್ಷ ನಗರ ಎಂದು ಖ್ಯಾತವಾಗಿತ್ತು. ಈಗ ಮಾಹಿತಿ ತಂತ್ರಜ್ಞಾನದ ನಗರ ಎಂದು ಗುರುತಿಸಿಕೊಂಡಿದೆ. ನಗರದ ಮಾತೃ ಭಾಷೆಯಾದ ಕನ್ನಡದಲ್ಲಿ ಇಂತಹ ಕೃತಿಯ ಅಗತ್ಯ ಇತ್ತು’ ಎಂದರು.
‘ಕಿಸೆಯಲ್ಲಿ ಮೊಬೈಲ್‌ ಇಟ್ಟುಕೊಳ್ಳುವ ಕಾಲ ಬರುತ್ತದೆ ಎಂದು 25 ವರ್ಷ ಹಿಂದೆ ಯಾರೂ ಯೋಚಿಸಿಯೂ ಇರಲಿಲ್ಲ. ತಂತ್ರಾಂಶವನ್ನು ಚೆನ್ನಾಗಿ ರೂಪಿಸಬಲ್ಲೆವು ಎಂಬುದನ್ನು ನಾವೇ ಮೊದಲು ಗ್ರಹಿಸಿದ್ದರಿಂದ ಈ ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಸಾಧನೆ ಮಾಡಲು ಸಾಧ್ಯವಾಯಿತು. 1,500 ವರ್ಷಗಳಿಗೂ ಹಿಂದೆ ಗಣಿತಕ್ಕೂ ನಮ್ಮ ಕೊಡುಗೆ ಮಹತ್ತರವಾದುದು. ವಿಜ್ಞಾನದ ಬೆಳವಣಿಗೆಗೆಲ್ಲಾ ಅದೇ ತಳಹದಿ’ ಎಂದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ.ಡಾ.ಎ.ಎಸ್‌.ಕಿರಣ್‌ ಕುಮಾರ್‌ ಮಾತನಾಡಿ, ‘ಡಿಜಿಟಲ್‌ ಕ್ರಾಂತಿಯಿಂದ ತರಕಾರಿ ಮಾರುವವರಿಂದ ಹಿಡಿದು ಬಡಗಿವರೆಗೆ ಎಲ್ಲರ ಬದುಕಿನಲ್ಲೂ ಬದಲಾವಣೆಗಳಾಗಿವೆ. ಮೊಬೈಲ್‌ ಬರುವ ಮುನ್ನ ಬಹುಮಹಡಿ ಕಟ್ಟಡದಲ್ಲಿದ್ದವರು ಒಂದು ಗ್ಲಾಸ್‌ ಚಹ ಬೇಕಿದ್ದರೂ ಇನ್ನೊಬ್ಬರನ್ನು ಚಹಾ ಮಾರುವವನ ಬಳಿ ಕಳುಹಿಸಬೇಕಿತ್ತು’ ಎಂದರು.
ತಂದೆಗೆ ಸಲ್ಲಿಸಿದ ಗೌರವ
‘ಸ್ಯಾಂಡ್‌ ಟು ಸಿಲಿಕಾನ್‌: ದಿ ಅಮೇಜಿಂಗ್‌ ಸ್ಟೋರಿ ಆಫ್‌ ಡಿಜಿಟಲ್‌ ಟೆಕ್ನಾಲಜಿ’ ಕೃತಿಯ ಲೇಖಕ ಶಿವಾನಂದ ಕಣವಿ ಅವರ ತಂದೆ ಚೆನ್ನವೀರ ಕಣವಿ ಹಾಗೂ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಡಾ.ವೈ.ಸಿ.ಕಮಲಾ ಅವರ ತಂದೆ ಪಂಡಿತ ಚನ್ನಪ್ಪ ಎರೋಶೀಮೆ ಅವರಿಬ್ಬರೂ ಕನ್ನಡದ ಹೆಸರಾಂತ ಸಾಹಿತಿಗಳು. ಕೃತಿಯ ಲೇಖಕ ಹಾಗೂ ಅನುವಾದಕಿ ಸೇರಿ ತಂದೆಯಂದಿರ ದಿನ ತಂದೆ ಗೌರವ ಪಡುವಂಥ ಕಾರ್ಯ ಮಾಡಿದ್ದಾರೆ’ ಎಂದು ಸಭಿಕರೊಬ್ಬರು ಹೇಳಿದರು.

ರಾಜ್ಯಮಟ್ಟದ ಕನ್ನಡಲ್ಲಿ ವಿಜ್ಞಾನ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭ - ಮಂಗಳೂರು 15th Feb 2015

411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್: ಶಂಕರಪ್ಪ

ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.

sarakari
ಮಂಗಳೂರು: ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಸಮರ್ಥರಾಗುವ ಉದ್ದೇಶದಿಂದ ರಾಜ್ಯದ 411 ಸರಕಾರಿ ಕಾಲೇಜುಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸುವ ಗುರಿಯಿದ್ದು, ಬಜೆಟ್‌ನಲ್ಲಿ ನೆರವು ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷೃಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.

ಕಂಕನಾಡಿಯ ಫಾತಿಮಾ ರಿಟ್ರೀಟ್ ಹೌಸ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ 100 ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 80 ಕಾಲೇಜುಗಳಿಗೆ ಈಗಾಗಲೇ ಬೋಧನಾ ವೀಡಿಯೊಗಳನ್ನು ನೀಡಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪನ್ಯಾಸವನ್ನು ವೀಡಿಯೊ ಚಿತ್ರೀಕರಿಸಿ ಅದನ್ನು ಎಲ್ಲ ಕಾಲೇಜುಗಳಿಗೂ ನೀಡಲಾಗುವುದು. ಅನುದಾನಿತ ಕಾಲೇಜುಗಳಿಗೂ ಇದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿರುವ ಸಹಜ ಕುತೂಹಲವನ್ನು ಶಾಲೆಗಳು ಮೊಟಕುಗೊಳಿಸಬಾರದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮೂಡಿಸಬೇಕು. ಶಿಕ್ಷೃಣದಿಂದ ಸಾಮಾಜಿಕ ಪ್ರಜ್ಞೆ ಜಾಗೃತವಾಗಬೇಕು ಎಂದವರು ನುಡಿದರು.

ಕಾಲೇಜು ಶಿಕ್ಷೃಣ ಇಲಾಖೆ ಶೈಕ್ಷೃಣಿಕ ಸಂಯೋಜಕಿ ಡಾ.ವೈ.ಸಿ.ಕಮಲಾ ಮಾತನಾಡಿ, ವಿಜ್ಞಾನ ಮತ್ತು ಸಮಾಜ ಬೇರ್ಪಡಿಸಲಾಗದಷ್ಟು ಸಂಬಂಧ ಹೊಂದಿವೆ. ವಿಜ್ಞಾನವನ್ನು ಮಾತೃಭಾಷೆಯಲ್ಲಿ ತಲುಪಿಸುವ ಸಂವಹನಕಾರರಾಗಬೇಕು ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಆರ್. ಸ್ವಾಮಿ ಅಧ್ಯಕ್ಷೃತೆ ವಹಿಸಿದ್ದರು.

ಕಾರ್ಯಕಾರಿ ಮಂಡಳಿ ಸದಸ್ಯ ಆರ್.ನಾಗೇಶ್ ಅರಳಕುಪ್ಪೆ, ಕಾಲೇಜು ಶಿಕ್ಷೃಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ಬಿ.ಎ.ಪಾಟೀಲ, ಸೇಂಟ್ ಆಗ್ನೆಸ್ ಕಾಲೇಜು ಪ್ರಾಧ್ಯಾಪಕ ಡಾ.ಜಯಂತ್ ಎಚ್., ವಿಜ್ಞಾನ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೃ ಕಡಮಜಲು ಸುಭಾಸ್ ರೈ, ಕಾರ್ಯದರ್ಶಿ ಅನಂತರಾಮ ಹೇರಳೆ, ಕೋಶಾಧಿಕಾರಿ ರೆನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

'ಬೆಂಗಳೂರು ಬಗ್ಗೆ ಅಭಿಮಾನದ ಕೊರತೆ' - Report of my lecture atChamaraja pete Kannada Saahitya sammeLana 28th Ocober 2017

Sunday, 29 Oct, 1.22 amಪ್ರಜಾವಾಣಿ

ಬೆಂಗಳೂರು
'ಬೆಂಗಳೂರು ಬಗ್ಗೆ ಅಭಿಮಾನದ ಕೊರತೆ'





ಬೆಂಗಳೂರು: 'ಬೆಂಗಳೂರು ನನ್ನೂರು ಎಂಬ ಅಭಿಮಾನದ ಕೊರತೆ ನಗರದ ಜನರಲ್ಲಿ ಢಾಳಾಗಿ ಕಾಣುತ್ತಿದೆ' ಎಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುರೇಶ್ ಮೂನ ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಕೂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ '3ನೇ ಕನ್ನಡ ಸಾಹಿತ್ಯ ಸಮ್ಮೇಳನ' ಉದ್ಘಾಟಿಸಿ ಅವರು ಮಾತನಾಡಿದರು.
'ನಗರದ ಸ್ಮಾರಕಗಳ ಹಿಂದೆ ಅದರ ಇತಿಹಾಸ ತಿಳಿಸುವ ಫಲಕಗಳನ್ನು ಅಳವಡಿಸಿ, ಮಕ್ಕಳಿಗೆ ಬೆಂಗಳೂರಿನ ಪರಿಚಯ ಮಾಡಿಸಬೇಕು. ಆಗ ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ' ಎಂದು ವಿವರಿಸಿದರು.
'ಚಾಮರಾಜಪೇಟೆಯಲ್ಲಿ ಐದು ಮುಖ್ಯ ರಸ್ತೆಗಳಿವೆ. ಎಲ್ಲವೂ ಒಂದೊಂದು ಪುಸ್ತಕವಾಗುವಷ್ಟು ಇತಿಹಾಸವನ್ನು ಹೊಂದಿವೆ. ಮಕ್ಕಳ ಕೂಟ ಸ್ಥಾಪನೆ, ಸಾಹಿತ್ಯ ಪರಿಷತ್ತಿನ ಹುಟ್ಟು ಹೀಗೆ ಅವುಗಳ ಹಿನ್ನಲೆ ತಿಳಿದರೆ, ಸಹಜವಾಗಿ ಪ್ರೀತಿ ಹುಟ್ಟುತ್ತದೆ.'




ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು)
'ಬೆಂಗಳೂರು ಎನ್ನುವ ಪದಕ್ಕೆ 1,000 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರಿಂದ ಸ್ಥಾಪನೆಯಾದ ಈ ನಗರವು ಮರಾಠರು, ಮೊಘಲರು, ಮುಸ್ಲಿಮರು, ಮೈಸೂರು ಅರಸರು, ಬ್ರಿಟಿಷರು, ದಿವಾನರು... ಹೀಗೆ ಎಲ್ಲರ ಆಡಳಿತದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಈ ರೀತಿ ನಗರದ ಇತಿಹಾಸವನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು.'
'ಚಾಮರಾಜಪೇಟೆಯಲ್ಲಿ ವಿವಿಧ ದೇವಾಲಯ, ಮಸೀದಿ, ಚರ್ಚ್, ಜೈನ ಮಂದಿರ ಎಲ್ಲವೂ ಇದೆ. ಇದೊಂದು ಕೋಮುಸೌಹಾರ್ದಕ್ಕೆ ಮಾದರಿ ಪ್ರದೇಶ. ಇಲ್ಲಿ ಉತ್ಕೃಷ್ಟ ಸಂಸ್ಕೃತಿ ಇದೆ. ಭವ್ಯ ಪರಂಪರೆ ಇದೆ. ಇಂದು ಕಾಣುವ ಬದಲಾವಣೆ ತಾತ್ಕಾಲಿಕ. ಪರಿವರ್ತನೆಯ ಕಾಲ ಅಂತಾರಲ್ಲ ಹಾಗೆ. ಹೊಸ ತಂತ್ರಜ್ಞಾನ ರೂಪಿಸಿಕೊಂಡು ಮುಂದೆ ಸೊಗಸಾದ ನಗರವಾಗುತ್ತದೆ' ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, 'ಕನ್ನಡದ ವಾತಾವರಣ ಹಬ್ಬಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ 1.15 ಕೋಟಿ ಮಕ್ಕಳಲ್ಲಿ 75 ಲಕ್ಷ ಮಕ್ಕಳು ಕನ್ನಡದಲ್ಲಿಯೇ ಕಲಿಯುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯ ನೀಡುವು ಮೂಲಕ ಹೆಚ್ಚು ಮಕ್ಕಳನ್ನು ಕನ್ನಡದೆಡೆಗೆ ಆಕರ್ಷಿಸಬೇಕು' ಎಂದು ತಿಳಿಸಿದರು.
ಸಂಸದ ಪಿ.ಸಿ. ಮೋಹನ್, 'ಎಲ್ಲಾ ಭಾಷೆಗಳನ್ನೂ ಮಾತನಾಡಲು ಸಾಧ್ಯವಾಗುವ ಏಕೈಕ ತಾಣವೆಂದರೆ ಅದು ಬೆಂಗಳೂರು. ಹೊರ ರಾಜ್ಯಗಳಿಂದ ಬಂದವರನ್ನು ಅವರ ಭಾಷೆಯಲ್ಲಿಯೇ ಮಾತನಾಡಿಸಿ, ಕನ್ನಡ ಕಲಿಯದಂತೆ ಮಾಡುತ್ತಿದ್ದೇವೆ' ಎಂದು ಹೇಳಿದರು.




ಸಮ್ಮೇಳನಾಧ್ಯಕ್ಷ ಸುರೇಶ್ ಮೂನ ಅವರು ಕನ್ನಡ ಬಾವುಟವನ್ನು ಬೀಸಿದರು. ಎಂ.ಎನ್.ವ್ಯಾಸರಾವ್, ಮಾಯಣ್ಣ, ಹಿಂದಿನ ಸಮ್ಮೇಳನದ ಅಧ್ಯಕ್ಷೆ ನಾಗಮಣಿ ಎಸ್.ರಾವ್ ಹಾಗೂ ಪಿ.ಸಿ.ಮೋಹನ್ ಇದ್ದರು)
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, 'ಸ್ಮಾರಕ, ಪ್ರಮುಖ ಕಟ್ಟಡಗಳ ಬಳಿ ಅವುಗಳ ಇತಿಹಾಸ ಕುರಿತ ಫಲಕ ಹಾಕಬೇಕೆಂದು ನಾನೂ ಆಲೋಚಿಸಿದ್ದೆ. ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ನಗರದಲ್ಲಿ ಸುಮಾರು 5,000 ಫಲಕಗಳನ್ನು ಹಾಕಿಸಲು ಅವಕಾಶವಿದೆ' ಎಂದು ಹೇಳಿದರು.
'ಈಗ ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರ ಹೀಗೆ ದಕ್ಷಿಣ ಬೆಂಗಳೂರಿನಲ್ಲಿ ಮಾತ್ರ ಬಹುಸಂಖ್ಯೆಯಲ್ಲಿ ಕನ್ನಡಿಗರನ್ನು ಕಾಣುತ್ತೇವೆ. ಉಳಿದಂತೆ ಕನ್ನಡಿಗರನ್ನು ಹುಡುಕಬೇಕಾದ ಸ್ಥಿತಿ ಇದೆ. ಹೊರರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವವರು ನೆಲ, ಜಲ, ಆಹಾರ ಹಾಗೂ ಕನ್ನಡದ ಋಣ ತೀರಿಸಬೇಕು. ಇಲ್ಲದಿದ್ದರೆ, ಅವರು ಉದ್ಧಾರವಾಗುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಚಾಮರಾಜಪೇಟೆ ಕ.ಸಾ.ಪ ಅಧ್ಯಕ್ಷ ಶ್ರೀಧರ್ ಧ್ವಜಾರೋಹಣ ಕನ್ನಡ ಧ್ವಜಾರೋಹಣ ನೆರವೇರಿಸಿದರು.
**
'ಕಸಾಪ ಕಟ್ಟಡ ನವೀಕರಣಕ್ಕೆ ₹50 ಲಕ್ಷ'
'1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) 100 ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯದ ಪ್ರತಿರೂಪವಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆ ರಾಜ್ಯ, ಹೊರ ರಾಜ್ಯ, ವಿದೇಶದಲ್ಲಿಯೂ ಹೆಸರು ಮಾಡಿದೆ. ಹಾಗಾಗಿ ಇದರ ಕೇಂದ್ರ ಕಚೇರಿಯನ್ನು ಸುಸ್ಥಿರವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಕಟ್ಟಡದ ನವೀಕರಣಕ್ಕೆ ಹಾಗೂ ಪೀಠೋಪಕರಣಗಳ ಖರೀದಿಗಾಗಿ ಸಂಸದರ ನಿಧಿಯಿಂದ ₹ 50 ಲಕ್ಷ ನೀಡುತ್ತೇನೆ' ಎಂದು ಸಂಸದ ಪಿ.ಸಿ. ಮೋಹನ್ ಭರವಸೆ ನೀಡಿದರು.




ಮೆರವಣಿಗೆಗೆ ಮೆರಗು ನೀಡಿದ ಡೊಳ್ಳು ಕುಣಿತ -ಪ್ರಜಾವಾಣಿ ಚಿತ್ರಗಳು)
ಮೊದಲ ಬಾರಿ ವಿಜ್ಞಾನ ಗೋಷ್ಠಿ
ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಸಂವಹನದ ವಿವಿಧ ರೂಪಗಳು ಹಾಗೂ ಕನ್ನಡ ಗ್ರಂಥಗಳ ಅಂಕೀಕರಣ ವಿಷಯದ ಕುರಿತು ಗೋಷ್ಠಿಗಳು ನಡೆದವು.
ವಿಜ್ಞಾನ ಸಂವಹನ ಕುರಿತು ಮಾತನಾಡಿದ ಪ್ರಾಧ್ಯಾಪಕಿ ವೈ.ಸಿ. ಕಮಲಾ, 'ಸಾಕ್ಷರತೆಯಲ್ಲಿ ನಮ್ಮ ದೇಶ 92ನೇ ಸ್ಥಾನದಲ್ಲಿದೆ. ಇನ್ನು ವಿಜ್ಞಾನ ಸಾಕ್ಷರತೆಯನ್ನಂತೂ ಕೇಳುವುದೇ ಬೇಡ. ಹೀಗೆಂದ ಮಾತ್ರಕ್ಕೆ ನಾವು ವಿಜ್ಞಾನದ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿಲ್ಲ ಎಂದಲ್ಲ. ವಿಜ್ಞಾನಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ದೇಶಗಳ ಸಾಲಿನಲ್ಲಿ ಭಾರತ 8ನೇ ಸ್ಥಾನದಲ್ಲಿದೆ' ಎಂದು ಹೇಳಿದರು.
'ವಿಜ್ಞಾನದ ಶಿಕ್ಷಣ, ಅಭಿವೃದ್ಧಿ, ಸಾಕ್ಷರತೆಗೆ ಹೆಚ್ಚು ಒತ್ತು ನೀಡಬೇಕು. ಮಾತೃಭಾಷೆಯಲ್ಲಿ ವಿಜ್ಞಾನವನ್ನು ಕಲಿಸಿದರೆ ಹೆಚ್ಚು ಜನರನ್ನು ತಲುಪಬಹುದು. ವಿಜ್ಞಾನದ ಪರಿಕಲ್ಪನೆಯನ್ನು ಇಂಗ್ಲಿಷ್ನಲ್ಲಷ್ಟೇ ವಿವರಿಸಲು ಸಾಧ್ಯ ಎನ್ನುವ ಮೌಢ್ಯ ನಮ್ಮಲ್ಲಿದೆ. ನ್ಯೂಟನ್ ಚಲನೆಯ ನಿಯಮಗಳನ್ನು ಮೊದಲು ಬರೆದಿದ್ದು, ಮಾತೃಭಾಷೆ ಲ್ಯಾಟಿನ್ನಲ್ಲಿ. ಐನ್ಸ್ಟೀನ್ ಸಾಪೇಕ್ಷತಾ ಸಿದ್ಧಾಂತವನ್ನು ವಿವರಿಸಿದ್ದು ಜರ್ಮನ್ ಭಾಷೆಯಲ್ಲಿ. ನಮ್ಮ ಮಾತೃಭಾಷೆಯ ಮೂಲಕವೂ ವಿಜ್ಞಾನದ ಸಂವಹನ ಸಾಧ್ಯ' ಎಂದರು.
'ಕಥೆ, ಕಾದಂಬರಿ, ಕವನ, ಪ್ರಬಂಧ, ಲೇಖನ, ಬ್ಲಾಗ್ನಲ್ಲಿ ಬರೆದುಕೊಳ್ಳುವುದು, ವಿಡಿಯೊ ರೂಪಿಸುವುದು, ಧ್ವನಿ ಪ್ರಸಾರದ ಮೂಲಕ ವಿಜ್ಞಾನ ಸಂವಹನ ನಡೆಸಬಹುದು. ಪಶ್ಚಿಮ ರಾಷ್ಟ್ರಗಳಲ್ಲಿ ಇದು ಹೆಚ್ಚು ಪ್ರಖ್ಯಾತಿ ಪಡೆದಿದೆ' ಎಂದು ವಿವರಿಸಿದರು.
ಗಣಕ ಪರಿಷತ್ತಿನ ಅಧ್ಯಕ್ಷ ನರಸಿಂಹಮೂರ್ತಿ ಅವರು ಕನ್ನಡ ಗ್ರಂಥಗಳ ಅಂಕೀಕರಣದ ಕುರಿತು ಮಾತನಾಡಿದರು.
**
ಗಮನ ಸೆಳೆದ ಮೆರವಣಿಗೆ
ಬೆಳ್ಳಿ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಾಗಿ ಮಕ್ಕಳ ಕೂಟದಲ್ಲಿ ಮುಕ್ತಾಯಗೊಂಡಿತು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿದ್ಯಾರ್ಥಿಗಳ ಬ್ಯಾಂಡ್ಸೆಟ್ ಗಮನ ಸೆಳೆಯಿತು.

ವಿಜ್ಞಾನದಲ್ಲಿ ನಾವಿನ್ನೂ ಸಾಧಿಸಬೇಕು

ವಿಜ್ಞಾನದಲ್ಲಿ ನಾವಿನ್ನೂ ಸಾಧಿಸಬೇಕು

An article published in Vijayavani

| ಡಾ.ವೈ.ಸಿ.ಕಮಲಾ
ಪದ್ಮಶ್ರೀ, ಪದ್ಮಭೂಷಣ ಹಾಗೂ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ಪ್ರೊ. ಗೋವಿಂದರಾಜನ್ ಪದ್ಮನಾಭನ್ ಈ ನಾಡು ಕಂಡ ಒಬ್ಬ ಅತ್ಯುತ್ತಮ ಜೀವರಸಾಯನ ವಿಜ್ಞಾನಿ. ಯಕೃತ್ತಿನಲ್ಲಿ ಔಷಧಗಳನ್ನು ಸಂಸ್ಕರಿಸುವಲ್ಲಿ ನೆರವಾಗುವ ಕಿಣ್ವಗಳು ನಮ್ಮ ವಂಶವಾಹಿಗಳಲ್ಲಿರುವ ಮಾಹಿತಿಯಿಂದ ಉತ್ಪಾದನೆಯಾಗುವ ಹಂತದವರೆಗಿನ ಹಾದಿಯನ್ನು ಅರ್ಥೈಸಿಕೊಳ್ಳುವ, ಅದನ್ನು ನಿಯಂತ್ರಿಸುವ ಮಹತ್ವದ ಸಂಶೋಧನೆಯನ್ನು ಮಾಡಿದ್ದಾರೆ. ದೇಶದಲ್ಲಿ ಜೀನ್​ಕ್ಲೊನಿಂಗ್​ನ್ನು ಅನ್ನು ಮೊಟ್ಟಮೊದಲ ಬಾರಿ ಇವರ ಪ್ರಯೋಗಶಾಲೆಯಲ್ಲಿ ಮಾಡಲಾಯಿತು. ಇವರು ಮಲೇರಿಯಾ ರೋಗಕ್ಕೆ ಅರಿಶಿಣದಲ್ಲಿನ ಕರ್​ಕುಮಿನ್ ಆಧಾರಿತ ಔಷಧವನ್ನು ಕಂಡುಹಿಡಿದಿದ್ದಾರೆ. ಅದು ಪ್ರಾಯೋಗಿಕ ಹಂತದಲ್ಲಿದೆ. ಇದರೊಂದಿಗೆ ಆಧುನಿಕ ಲಸಿಕೆಗಳು ಜೈವಿಕತಂತ್ರಜ್ಞಾನ, ಜೀನ್​ಥೆರಪಿ ಇನ್ನೂ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಪ್ರೊ.ಪದ್ಮನಾಭನ್ ದೇಶದ ಜೈವಿಕವಿಜ್ಞಾನ ಜೈವಿಕತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಯುವ ವಿಜ್ಞಾನಿಗಳ ಮತ್ತು ಉದ್ಯಮಿಗಳ ಒಂದು ಪೀಳಿಗೆಯನ್ನೇ ತಯಾರು ಮಾಡಿದ್ದಾರೆ. ಪ್ರಸ್ತುತ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್​ನ ಪ್ಲಾಟಿನಂ ಜುಬಿಲಿ ಫೆಲೋಶಿಪ್ ಹಿರಿಯ ವಿಜ್ಞಾನಿ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಜೈವಿಕವಿಜ್ಞಾನ ವಿಭಾಗದಲ್ಲಿ ಗೌರವ ಪ್ರೊಫೆಸರ್. ಕೇಂದ್ರ ಸರ್ಕಾರದ ಜೈವಿಕತಂತ್ರಜ್ಞಾನ ವಿಭಾಗದ, ಜೈವಿಕತಂತ್ರಜ್ಞಾನ ಕೈಗಾರಿಕೆಗೆ ಸಂಶೋಧನಾ ಸಹಾಯಕ ಕೋಶ ಇದರ ಸೈನ್ಸ್ ಅಂಡ್ ಇನ್ನೋವೇಷನ್ ಸಲಹಾಗಾರರು. ಅವರಿಗೀಗ 80 ವರ್ಷ. ಮಾರ್ಚ್ 20ರಂದು ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿರುವ ಡಾ.ವೈ.ಸಿ. ಕಮಲಾ ಅವರೊಂದಿಗೆ ಒಂದಿಷ್ಟು ಮಾತು.
ಜೈವಿಕ ವಿಜ್ಞಾನದ ಹಿನ್ನೆಲೆಯಲ್ಲಿ ಹೇಳುವುದಾದರೆ, ಜಾಗತಿಕ ವಿಜ್ಞಾನಕ್ಕಿಂತ ನಾವು 5-10 ವರ್ಷಗಳಷ್ಟು ಹಿಂದಿದ್ದೇವೆ. ಈ ದೇಶದ ಅಸ್ತಿತ್ವ ಸುಸ್ಥಿರ ಅಭಿವೃದ್ಧಿ ಮತ್ತು ಅಭ್ಯುದಯಕ್ಕೆ ನಮ್ಮಲ್ಲೇ ಅಭಿವೃದ್ಧಿಗೊಂಡ ಮೂಲಭೂತ ವಿಜ್ಞಾನ ಮತ್ತು ತಂತ್ರಜ್ಞಾನ ಅಗತ್ಯ ಎಂಬ ಅಂಶ ನಮ್ಮನ್ನಾಳುವವರಿಗೆ ಮನವರಿಕೆಯಾಗಿಲ್ಲ. ಈಗಲೂ ನಾವು ನಮ್ಮ ಜಿಡಿಪಿಯ ಶೇ.0.8ರಷ್ಟು ಹಣವನ್ನು ಮಾತ್ರ ವಿಜ್ಞಾನಕ್ಕೆ ವಿನಿಯೋಗಿಸುತ್ತಿದ್ದೇವೆ. ಇದು ವಿಜ್ಞಾನಿಗಳು ಕೇಳುವ ಶೇ.3ಕ್ಕಿಂತ ಕಡಿಮೆ ಇದೆ. ಹಲವು ದೇಶಗಳಲ್ಲಿ ಇದು ಶೇ.2ಕ್ಕಿಂತ ಹೆಚ್ಚಿದೆ. ಬಾಹ್ಯಾಕಾಶ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದಂತೆ ಮೂಲಭೂತ ವಿಜ್ಞಾನವನ್ನೂ ಸರ್ಕಾರ ಮತ್ತು ಜನ ಬೆಂಬಲಿಸಬೇಕು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು. ರಾಷ್ಟ್ರ ನಿರ್ವಣಕ್ಕೆ ಅದು ಅಗತ್ಯ ಎಂಬುದು ಜನರಿಗಿನ್ನೂ ಮನವರಿಕೆಯಾಗಿಲ್ಲ. ಸ್ಟಾರ್ಟ್​ಅಪ್ ಯೋಜನೆಗಳು ಯುವ ಉದ್ಯಮಿಗಳ ಪಡೆಯನ್ನೇ ಸೃಷ್ಟಿಸುತ್ತಿದೆ. ಆದರೆ, ಇದರ ಆಗುಹೋಗುಗಳನ್ನು ಗಮನಿಸಬೇಕಿದೆ.
ನಿಮ್ಮ ಸಂಶೋಧನೆಗಳ ಬಗ್ಗೆ ತಿಳಿಸಿ.
ಕೆಂಪು ತೊಗರಿಬೇಳೆಯಲ್ಲಿದ್ದ ವಿಷದ ಅಂಶ ಪತ್ತೆಹಚ್ಚಿ ಬೇರ್ಪಡಿಸುವುದು ನನ್ನ ಮೊದಲ ಸ್ವತಂತ್ರ ಸಂಶೋಧನೆ. ಇದರಿಂದಾಗಿ ನಾವು ಕೆಂಪು ತೊಗರಿಬೇಳೆಯಲ್ಲಿದ್ದ ಪ್ರೊಟೀನ್ ಸಮರ್ಥವಾಗಿ ಬೇರ್ಪಡಿಸಲು ಸಾಧ್ಯವಾಯಿತು. ನಂತರದ್ದೇ ಇಢಠಿಟ್ಚಜ್ಟಟಞಛಿ ಕ50 ಕಿಣ್ವದ ಸಂಶೋಧನೆ. ಇದು ಸೈಟೋಕ್ರೋಮ್ ಪಿ 450 ಕಿಣ್ವವು, ಯಕೃತ್ತಿನಲ್ಲಿ ಹೆಚ್ಚಾಗಿ ಕಂಡುಬರುವುದಾದರೂ ಇತರೆಡೆಗಳಲ್ಲೂ ಇರುತ್ತದೆ. ನಾವು ಸೇವಿಸುವ ಔಷಧಗಳನ್ನು ಶುದ್ಧೀಕರಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ.
ತಮ್ಮ ಅಧ್ಯಯನದ ‘ಹೀಮ್ ಅಣುವಿನ ಬಗ್ಗೆ ಹೇಳಿ.
ಹೀಮ್ ಎಂಬುದು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರೊಟೀನ್​ನಲ್ಲಿರುವ ಕೆಂಪು ಬಣ್ಣಕ್ಕೆ ಕಾರಣವಾಗುವ ಅಂಶ. ಇದು ರಕ್ತದಲ್ಲಷ್ಟೇ ಅಲ್ಲದೆ ಮಯೋಗ್ಲೋಬಿನ್, ಸ್ಟುಟೋಕ್ರೋಮ್ ಹೀಮ್ ಪರಾಕ್ಸೈಡ್ ಮುಂತಾದವುಗಳಲ್ಲೂ ಕಂಡುಬರುವುದು.
1966ರಲ್ಲಿ ಪಿಎಚ್.ಡಿ ಪೂರೈಸಿ ಕೆಲಸಕ್ಕೆ ಸೇರಿದ ದಿನಗಳಲ್ಲಿ ದೇಶದ ವಿಜ್ಞಾನ ಕ್ಷೇತ್ರದ ಸ್ಥಿತಿ?
ಮುಂಚೂಣಿ ಕ್ಷೇತ್ರದ ಪ್ರಯೋಗಗಳನ್ನು ಮಾಡಲು ಹರಸಾಹಸ ಪಡಬೇಕಾಗಿತ್ತು. ಏಕೆಂದರೆ, ಅತ್ಯಾಧುನಿಕ ಉಪಕರಣಗಳು ನಮ್ಮಲ್ಲಿ ಲಭ್ಯವಿರಲಿಲ್ಲ. ಕೇವಲ ಐವತ್ತು ಸಾವಿರ ರೂಪಾಯಿಗಳವರೆಗೆ ಮಾತ್ರ ಯಂತ್ರಗಳನ್ನು ಆಮದು ಮಾಡಿಕೊಳ್ಳಬಹುದಿತ್ತು. ಮುಂದೆ ಅದು ಐದು ಲಕ್ಷಕ್ಕೆ ವಿಸ್ತರಣೆಯಾಯಿತು. ಈಗ ಯಾವುದೇ ಮಿತಿಯಿಲ್ಲ. ಇಂದು ಶೇ. 80ರಷ್ಟು ಉಪಕರಣಗಳು ಆಮದಾದವುಗಳು.
ನಿಮ್ಮ ಬಾಲ್ಯ, ಶಿಕ್ಷಣ ಹೇಗಿತ್ತು?
ನಮ್ಮ ತಾತ ಆಗಿನ ಕಾಲದಲ್ಲೇ ಬಿ.ಇ. ಪದವೀಧರರು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಚೀಫ್ ಇಂಜಿನಿಯರ್. ನಮ್ಮ ಚಿಕ್ಕಪ್ಪ, ತಂದೆ ಎಲ್ಲರೂ ಇಂಜಿನಿಯರುಗಳೆ. ತಂದೆ ವಿ.ಗೋವಿಂದರಾಜನ್ ‘ಶೆಲ್’ (ಖಜಛ್ಝಿ್ಝ ಣಜ್ಝಿ) ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ತಾಯಿ ಜಾನಕಿ ಗೃಹಿಣಿ. ನಾನು ಓದು ಆರಂಭಿಸಿದ್ದು ಬೆಂಗಳೂರು ಮೆಜೆಸ್ಟಿಕ್​ನ ‘ತುಳಸೀವನ’ದ ಬಳಿಯ ಶಾಲೆಯಲ್ಲಿ. ಮೂರನೇ ತರಗತಿ ನಂತರ ಒಮ್ಮೆಗೇ ಆರನೇ ತರಗತಿಗೆ ಬಡ್ತಿ ಪಡೆದೆ. ಹೈಸ್ಕೂಲ್ ಓದುವಾಗ ವಿಜ್ಞಾನ ಅಧ್ಯಾಪಕ ನರಸಿಂಹ ಅವರ ಬೋಧನೆ ವಿಧಾನ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿತು.
ನಮ್ಮದು ಇಂಜಿನಿಯರುಗಳ ಕುಟುಂಬವಾದ್ದರಿಂದ ಅವರೆಲ್ಲರಿಗೂ ನಾನು ಇಂಜಿನಿಯರ್ ಆಗಬೇಕೆಂಬ ಅಪೇಕ್ಷೆಯಿತ್ತು. ಅದರಂತೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದರು. ಆದರೆ, ಅಲ್ಲಿ ನನಗೆ ಮೂರು ದಿನವೂ ಇರಲಾಗಲಿಲ್ಲ. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಮುಗಿಸಿ ‘ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್​ಸ್ಟಿಟ್ಯೂಟ್’ (ಐಅಐ) ಸಂಸ್ಥೆಯಲ್ಲಿ ಆಗತಾನೆ ಆರಂಭವಾಗಿದ್ದ ‘ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಜ್ಞಾನ’ದ ಎಂಎಸ್ಸಿ ಕೋರ್ಸಿಗೆ ಸೇರಿದೆ. ಅಲ್ಲೇ ಪ್ರಾಜೆಕ್ಟ್ ಗಾಗಿ ‘ಜೀವರಸಾಯನ ವಿಜ್ಞಾನ’ ಅಧ್ಯಯನ ಮಾಡಿದೆ. ಅದೇ ನನ್ನ ಜೀವನದ ತಿರುವು. ಬೆಂಗಳೂರಿನ ಐಐಎಸ್ಸಿ ಸೇರುವಂತೆ ನನ್ನ ಗುರು ಡಾ. ಎನ್.ಬಿ. ದಾಸ್ ದಾರಿ ತೋರಿದರು. ಪಿಎಚ್​ಡಿ ಅಧ್ಯಯನಕ್ಕೆ ಐಐಎಸ್ಸಿ ಸೇರಿದೆ. ಅಲ್ಲಿಂದ ಈವರೆಗೂ ಇದೇ ಸಂಸ್ಥೆಯಲ್ಲಿದ್ದೇನೆ. ಪಿಎಚ್​ಡಿ ಪದವಿ ಮುಗಿಸಿದ ಬಳಿಕ (1966) ಅಂದು ರೂಢಿಯಲ್ಲಿದ್ದಂತೆ ವಿದೇಶಕ್ಕೆ ತೆರಳಲಿಲ್ಲ. ಆದರೆ ಉದ್ಯೋಗದ ಸಮಸ್ಯೆ ಎದುರಾಯಿತು. ಈ ಸನ್ನಿವೇಶದಲ್ಲಿ ಸತೀಶ್ ಧವನ್ ಅವರು ಐಐಎಸ್ಸಿ ನಿರ್ದೇಶಕರಾಗಿ ನಿಯೋಜನೆಗೊಂಡರು. ಆಗ ನಾನು ‘ಉಪನ್ಯಾಸಕ’ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಅಷ್ಟು ಹೊತ್ತಿಗಾಗಲೇ ನನ್ನ 24 ಸಂಶೋಧನಾ ಪ್ರಬಂಧಗಳು ಜಾಗತಿಕಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇದನ್ನು ಗಮನಿಸಿದ ಸತೀಶ್ ಧವನ್ ಅವರು ಒಮ್ಮೆಗೇ, ‘ಅಸಿಸ್ಟೆಂಟ್ ಪ್ರೊಫೆಸರ್’ ಹುದ್ದೆ ನೀಡಿದರು.
ನಿರ್ದೇಶಕರಾಗಿ ನಿಮ್ಮ ಅನುಭವ?
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹುದ್ದೆ ಬಹು ಜವಾಬ್ದಾರಿಯುತವಾದದ್ದು. ಯಾವಾಗ ಬೇಕಾದರೂ ಸಿಬ್ಬಂದಿ ನನ್ನನ್ನು ಭೇಟಿಯಾಗಬಹುದಿತ್ತು. ಅದು ಅವರ ಸಮಸ್ಯೆಯನ್ನು ಅರ್ಧದಷ್ಟು ನಿವಾರಿಸುತ್ತಿತ್ತು. ಐಐಎಸ್ಸಿಯ ವಿವಿಧ ವಿಭಾಗಗಳವರು ಕೈಗಾರಿಕೆಗಳೊಂದಿಗೆ ಸಂಬಂಧ ಹೊಂದುವಲ್ಲಿ ಹೆಚ್ಚಿನ ಒತ್ತು ನೀಡಿದೆ.
ಯಾವ ಪ್ರಶಸ್ತಿ ನಿಮಗೆ ಹೆಚ್ಚಿನ ಸಾರ್ಥಕತೆ ನೀಡಿತು?
ಪ್ರಶಸ್ತಿಗಳೆಡೆಗೆ ನನ್ನದು ನಿರ್ಲಿಪ್ತ ಭಾವ. ನನ್ನ ಅಂತರಂಗವು ಅವುಗಳಿಂದ ಹಿಗ್ಗುವಿಕೆಯನ್ನಾಗಲೀ, ಕುಗ್ಗುವಿಕೆಯನ್ನಾಗಲೀ ಅನುಭವಿಸಿಲ್ಲ. ನಿವೃತ್ತಿ ನಂತರವೂ ಸಂಶೋಧನೆಯನ್ನು ನಿರಂತರವಾಗಿ ನಡೆಸುತ್ತಿರುವೆ. ಸುಮಾರು 700ಕ್ಕೂ ಹೆಚ್ಚು ಯೋಜನೆಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ಆಯ್ಕೆ ಮಾಡಿದ್ದೇನೆ. ಅವುಗಳಲ್ಲಿ 500ಕ್ಕೂ ಹೆಚ್ಚು ಭಾರತೀಯ ಯೋಜನೆ ಗಳು ಕಾರ್ಯಗತಗೊಂಡು ಸುಮಾರು 100ಕ್ಕೂ ಹೆಚ್ಚು ಉತ್ಪನ್ನಗಳು ಸಮಾಜಕ್ಕೆ ಲಭ್ಯವಾಗಿವೆ.
ಮಲೇರಿಯಾಗೆ ಅರಿಶಿಣ ಮದ್ದು
ಮಲೇರಿಯಾ ಜಗತ್ತಿನಾದ್ಯಂತ ವ್ಯಾಪಕವಾಗಿದ್ದರೂ, ಭಾರತ, ನೈಜೀರಿಯಾಗಳಲ್ಲಿ ಇದು ಪ್ರಮುಖವಾಗಿ ಬಾಧಿಸುತ್ತದೆ. ಶೇ.80 ಪ್ರಕರಣಗಳು ಭಾರತ ಸೇರಿ 15 ದೇಶಗಳಲ್ಲಿ ವರದಿಯಾಗುತ್ತಿವೆ. ಮಲೇರಿಯಾ ನಿಯಂತ್ರಿಸಲು ಹಲವು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಈ ರೋಗ ಹರಡುವ ಸೊಳ್ಳೆಗಳು ಅನೇಕ ಔಷಧಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬಲಿಷ್ಠವಾಗಿವೆ. ಈಗ ಸದ್ಯದ ಪರಿಸ್ಥಿತಿಯಲ್ಲಿ ‘ಆರ್​ಟಿಮಿಸಿನಿನ್’ (Artemisinin) ರಾಸಾಯನಿಕ ಆಧಾರಿತ ಔಷಧವು ಹೆಚ್ಚು ಪರಿಣಾಮಕಾರಿಯಾಗಿದೆ. ಅರಿಶಿಣದಲ್ಲಿರುವ ಕರ್​ಕ್ಯುಮಿನ್ (Curcumin)ಗೆ ರೋಗ ನಿರೋಧಕ ಶಕ್ತಿಯಿದ್ದು, ಅದಕ್ಕೆ ‘ಹೀಮ್ ಅಣುವನ್ನು ಸೂಕ್ತವಾಗಿ ಸಂಯೋಜಿಸಿದಾಗ ಮಲೇರಿಯಾ ರೋಗಕ್ಕೆ ಅದು ಪರಿಣಾಮಕಾರಿ ಔಷಧ ಆಗಬಲ್ಲದು ಎಂಬುದನ್ನು ಪ್ರಯೋಗಗಳಿಂದ ಕಂಡಿದ್ದೇನೆ. ಇದಿನ್ನೂ ಪ್ರಯೋಗದ ಹಂತಗಳಲ್ಲಿದೆ. ಮನುಷ್ಯನ ಮೇಲೆ ಪ್ರಯೋಗಿಸಿ ಅಧ್ಯಯನವಾಗಬೇಕು. ಅದಕ್ಕೆ ಅನುಮತಿ ಸಿಕ್ಕಿಲ್ಲ.
ನಾನು ವಿಶೇಷವಾಗಿ ಆಧುನಿಕ ಲಸಿಕೆಗಳ ತಯಾರಿಕೆ, ಜೈವಿಕ ತಂತ್ರಜ್ಞಾನ, ವಂಶವಾಹಿಗಳ ಇಂಜಿನಿಯರಿಂಗ್ ಅಂದರೆ ಜಿನೆಟಿಕ್ ಇಂಜಿನಿಯರಿಂಗ್ ಮತ್ತು ಜೀನ್ ಥೆರಪಿ ಕ್ಷೇತ್ರಗಳಲ್ಲಿ ವಿಸõತವಾಗಿ ತೊಡಗಿಸಿ ಕೊಂಡಿದ್ದೇನೆ.
ಸಂಗೀತದಿಂದ ನೆಮ್ಮದಿ
ಸಂಗೀತ ನನ್ನ ವೈಯಕ್ತಿಕ ತುಡಿತ. ವಿದ್ವಾನ್ ಎಂ.ಟಿ. ಸೆಲ್ವನಾರಾಯಣ ಅವರ ಬಳಿ ಹದಿಮೂರು ವರ್ಷ ವಾರಕ್ಕೆರಡು ದಿನ ರಾತ್ರಿ 9ರಿಂದ 10.30ರವರೆಗೆ ಅಭ್ಯಾಸ ಮಾಡಿದ್ದೇನೆ. ಒಮ್ಮೊಮ್ಮೆ ಸಂಗೀತ ಕಛೇರಿಗೂ ಕರೆದೊಯ್ಯುತ್ತಿದ್ದರು. ಅಲ್ಲಿ ಹಾಡುತ್ತಿದ್ದೆ. ಸಂಗೀತ ನನಗೆ ನೆಮ್ಮದಿ ಕೊಟ್ಟಿದೆ. ತತ್ವಶಾಸ್ತ್ರದ ಓದು ನನ್ನನ್ನು ಸ್ಥಿತಪ್ರಜ್ಞನನ್ನಾಗಿಸಿದೆ. ಇಂದಿಗೂ ನಾನು ಭಗವದ್ಗೀತೆ ಓದದೆ ಮಲಗಲಾರೆ.
ಪತ್ನಿಯ ಬೆಂಬಲ ಅನುಗಾಲ
ನನ್ನ ಪತ್ನಿ ಮೈಥಿಲಿ. ಮಕ್ಕಳಾದ ಲೀಲಾ, ಶಿವಕುಮಾರ ಮತ್ತು ಡಾ. ಗಾಯತ್ರಿ. ಎಲ್ಲರೂ ಉತ್ತಮ ಶಿಕ್ಷಣ ಪಡೆದು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಮೈಥಿಲಿ ನನಗೆ ಅನುಗಾಲವೂ ಬೆಂಬಲವಾಗಿದ್ದಾಳೆ. ನನ್ನೆಲ್ಲಾ ವೈಯಕ್ತಿಕ ಕೆಲಸಗಳನ್ನೂ ನನ್ನ ಪತ್ನಿಯೇ ನಡೆಸಿಕೊಂಡು ಬಂದಿದ್ದಾಳೆ. ನಾನೆಂದೂ ಬ್ಯಾಂಕು, ಅಂಗಡಿ ಇತರೆಡೆಗೆ ಹೋದವನಲ್ಲ. ಮೊದಲೆಲ್ಲ ನಾನು ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೂ ಕಾರ್ಯನಿರತನಾಗಿರುತ್ತಿದ್ದೆ. ಈಗ ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡುವೆ.

https://www.vijayavani.net/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BE%E0%B2%B5%E0%B2%BF%E0%B2%A8%E0%B3%8D%E0%B2%A8%E0%B3%82-%E0%B2%B8%E0%B2%BE/

ಅರಿವಿನ ಪಥದ ಅನ್ವೇಷಕಿಯರು

ಕಣ ಭೌತ ವಿಜ್ಞಾನಿ ರೋಹಿಣಿ

ಅರಿವಿನ ಪಥದ ಅನ್ವೇಷಕಿಯರು

An article published in Vijayavani
ನಮ್ಮ ದೇಶದ ಸಾಕಷ್ಟು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಫೆ. 28 ರಾಷ್ಟ್ರೀಯ ವಿಜ್ಞಾನ ದಿನ. ಇದರ ಅಂಗವಾಗಿ ಇಬ್ಬರು ಮಹಿಳಾ ವಿಜ್ಞಾನಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ. ಒಬ್ಬರು ಅಪ್ಪಟ ಕನ್ನಡತಿಯಾದರೆ, ಇನ್ನೊಬ್ಬರು ಕಳೆದ 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆ ನಿಂತವರು. ಇಬ್ಬರ ಸಾಧನೆಯೂ ಅನನ್ಯ. ಇಬ್ಬರ ಸೇವೆಯೂ ದೇಶಕ್ಕೆ ಮುಡಿಪು.
| ವೈ.ಸಿ. ಕಮಲಾ

2019ರ ಪದ್ಮಶ್ರೀ ಪುರಸ್ಕೃತ ಮಹಿಳಾ ವಿಜ್ಞಾನಿ ಪ್ರೊಫೆಸರ್ ರೋಹಿಣಿ ಗೋಡಬೋಲೆ. ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ‘ಕಬ್ಬಿಣದ ಕಡಲೆ’ ಎಂದೇ ಪರಿಗಣಿಸುವ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ಪರಿಣತಿ ಪಡೆದು ಸಾಧನೆ ಮಾಡಿದವರು. ಕಳೆದ 25 ವರ್ಷಗಳಿಂದ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸೆಂಟರ್ ಫಾರ್ ಹೈ ಎನರ್ಜಿ ಫಿಸಿಕ್ಸ್ ಅಂದರೆ ತಾತ್ವಿಕವಾಗಿ ಕಣ ಭೌತವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತ ವಿಶ್ವಾದ್ಯಂತ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮೂಲತಃ ಪುಣೆಯವರಾದ ರೋಹಿಣಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯವರು. ಬಾಲ್ಯದಿಂದಲೂ ಗಣಿತ, ವಿಜ್ಞಾನದೆಡೆಗೆ ಆಸಕ್ತಿ. ತಮ್ಮ ಅಧ್ಯಾಪಕಿ ಆಗಿದ್ದ ಸೋಹನಿ ಅವರನ್ನು ವಿಶೇಷವಾಗಿ ನೆನೆಯುತ್ತಾರೆ. ಸೋಹನಿ ಅವರ ಪತಿ ತಮಗೆ ಗಣಿತವನ್ನು ವಿನೂತನವಾಗಿ ಬೋಧಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತಾರೆ. ಪಠ್ಯವಷ್ಟೇ ಅಲ್ಲದೆ ನಿಯತಕಾಲಿಕಗಳನ್ನು ಓದುವ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ವಿಜ್ಞಾನ ಕಲಿತಿದ್ದನ್ನು ವಿಶೇಷವಾಗಿ ಸ್ಮರಿಸುತ್ತಾರೆ. ಜ್ಞಾನದ ಅನ್ವೇಷಣೆಯಲ್ಲಿ ಪಠ್ಯದ ಹೊರಗಿನ ಕಲಿಕೆ ಮಹತ್ವದ ಪಾತ್ರ ವಹಿಸುವುದನ್ನು ಒತ್ತಿ ಹೇಳುತ್ತಾರೆ. ಕೇಂದ್ರ ಸರ್ಕಾರದ ಎನ್​ಟಿಎಸ್​ಇ ಪರೀಕ್ಷೆ ಪಾಸು ಮಾಡಿ ಸ್ಕಾಲರ್​ಷಿಪ್ ಗಳಿಸಿದ ರೋಹಿಣಿ ಪುಣೆ ವಿಶ್ವವಿದ್ಯಾಲಯದ ಮೊದಲ ರ್ಯಾಂಕ್​ನೊಂದಿಗೆ ಬಿಎಸ್ಸಿ ಪಾಸು ಮಾಡಿದ ಪ್ರತಿಭಾನ್ವಿತೆ. ಈ ಮಧ್ಯೆ ಬೇಸಿಗೆ ರಜೆಗಳಲ್ಲಿ ಐಐಟಿ ದೆಹಲಿ, ಕಾನ್ಪುರಗಳಲ್ಲಿ ಅಧ್ಯಯನ ಮಾಡುತ್ತ ತಮ್ಮ ಗಮನವನ್ನು ಭೌತವಿಜ್ಞಾನದ ಕಡೆಗೆ ಕೇಂದ್ರೀಕರಿಸಿದರು. ಐಐಟಿ ಮುಂಬೈನಲ್ಲಿ ಎಂಎಸ್ಸಿ ಮುಗಿಸಿದ ನಂತರ ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ ತಮ್ಮ ನೆಚ್ಚಿನ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ಪಿಎಚ್​ಡಿ ಅಧ್ಯಯನ ಮಾಡಿ ಭಾರತಕ್ಕೆ ವಾಪಸಾದರು.
ಮೊದಲ ಮೂರು ವರ್ಷಗಳ ಕಾಲ ಟಿಐಎಫ್​ಆರ್ ಸಂಸ್ಥೆಯಲ್ಲೂ ಅನಂತರ ಮುಂಬೈ ವಿಶ್ವವಿದ್ಯಾಲಯದಲ್ಲೂ ತಮ್ಮ ಕಾರ್ಯ ಮುಂದುವರಿಸಿದರು. ಇದರ ಜತೆಜತೆಗೆ ಸಂಶೋಧನಾ ಅಧ್ಯಯನವನ್ನು ಮುಂದುವರಿಸುತ್ತ ಕಣ ಭೌತವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡರು. ಈ ಮಧ್ಯೆ, ಬೆಂಗಳೂರಿನ ಐಐಎಸ್​ಸಿ ಸಂಸ್ಥೆ ಸೇರಿದ ರೋಹಿಣಿ, ಇಂದು ಜಿನೇವಾದಲ್ಲಿರುವ ಸಿಇಆರ್​ಎನ್​ನ ಲಾರ್ಜ್ ಹೇಡ್ರನ್ ಕೊಲೈಡರ್​ನ ಪ್ರಯೋಗಗಳಿಗೆ ಅಗತ್ಯವಿರುವ ಸೈದ್ಧಾಂತಿಕ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಭೌತವಿಜ್ಞಾನವಷ್ಟೇ ಅಲ್ಲದೆ, ‘ಮಹಿಳೆ ಮತ್ತು ವಿಜ್ಞಾನ’ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳ ವಿಜ್ಞಾನ ಅಕಾಡೆಮಿ ಫೆಲೋ, ಭಾರತದ ವಿವಿಧ ಅಕಾಡೆಮಿಗಳ ಸದಸ್ಯತ್ವ, ಅಂತಾರಾಷ್ಟ್ರೀಯ ಸೈದ್ಧಾಂತಿಕ ಭೌತವಿಜ್ಞಾನ ಸಂಸ್ಥೆಯ ಸದಸ್ಯತ್ವ ಪಡೆದಿರುವ ರೋಹಿಣಿ, 280ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಪುಸ್ತಕಗಳನ್ನೂ ರಚಿಸಿದ್ದಾರೆ. ಕೆಲವನ್ನು ಸಂಪಾದಿಸಿದ್ದಾರೆ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಮುಖ ಭಾಷಣಕಾರ್ತಿಯಾಗಿ ಭಾಷಣಗಳನ್ನೂ ಮಾಡಿದ್ದಾರೆ. ರೋಹಿಣಿ ಮತ್ತವರ ಸಹವರ್ತಿ ನಿರೂಪಿಸಿರುವ ಸಿದ್ಧಾಂತ ‘ಗೋಡಬೋಲೆ-ಪಂಚೇರಿ ಮಾಡೆಲ್’ ಎಂದು ವಿಜ್ಞಾನ ಕ್ಷೇತ್ರದಲ್ಲಿ ನೆಲೆ ನಿಂತಿದೆ. ‘ಇದು ನನಗೆ ಸಂತೋಷ ಮತ್ತು ಸಂತೃಪ್ತಿ ನೀಡಿದೆ’ ಎಂದು ಹೇಳುತ್ತಾರೆ ರೋಹಿಣಿ. ಅಧ್ಯಯನ ಮಾಡಿದ ಮುಂಬೈ ಐಐಟಿ ನೀಡಿದ ‘ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಹೃದಯಕ್ಕೆ ಹೆಚ್ಚು ಅಪ್ಯಾಯಮಾನವಾದದ್ದು’ ಎನ್ನುತ್ತಾರೆ. ತಮ್ಮ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದಾಗ್ಯೂ, ‘ಮಹಿಳೆಯಾಗಿ ವೃತ್ತಿ ಮತ್ತು ಕುಟುಂಬ ಎರಡೂ ಕಡೆ ಯಶಸ್ವಿಯಾಗಲು ಕುಟುಂಬದ ಸಹಕಾರವಷ್ಟೆ ಅಲ್ಲದೆ ಅದೃಷ್ಟವೂ ಇರಬೇಕು’ ಎನ್ನುತ್ತಾರೆ.
ಅಭಿವೃದ್ಧಿಗೆ ಮೂಲವಿಜ್ಞಾನ ಅಗತ್ಯ
ಮೂಲವಿಜ್ಞಾನ ಕ್ಷೇತ್ರ ಯಾವುದೇ ದೇಶದ ಅಭಿವೃದ್ಧಿಗೆ ಅಗತ್ಯ ಎಂದು ನಂಬಿರುವ ಇವರು, ಶಿಕ್ಷಣ ಕ್ಷೇತ್ರದಲ್ಲಿ ಮೂಲವಿಜ್ಞಾನ ಬಲಗೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ವಿಜ್ಞಾನದ ಯಾವುದೇ ಸಂಶೋಧನೆಯು ತತ್​ಕ್ಷಣದಲ್ಲಿ ಅನುಕೂಲಕ್ಕೆ ಬಳಸುವಂತೆ ಅನ್ವಯಿಸಲು ಆಗದಿರಬಹುದು. ಆದರೆ, ಅವು ಒಂದಿಲ್ಲೊಂದು ದಿನ ಪ್ರಯೋಜನಕ್ಕೆ ಬಂದೇ ಬರುತ್ತದೆ ಎನ್ನುತ್ತಾರೆ. ಮ್ಯಾಕ್ಸ್​ವೆಲ್​ನ ವಿದ್ಯುತ್ಕಾಂತೀಯ ಸಿದ್ಧಾಂತವನ್ನು ನಿರಂತರವಾಗಿ ಅನ್ವಯಿಸುವ ಸಂವಹನ ಕ್ಷೇತ್ರವು ನಾವು ಇಂದು ಬದುಕುವ ರೀತಿಯನ್ನೇ ಬದಲಾಯಿಸಿರುವುದನ್ನು ಉದಾಹರಿಸುತ್ತಾರೆ.
(ಲೇಖಕರು ಭೌತಶಾಸ್ತ್ರದ ಸಹ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು)
ಇಸ್ರೋ ಕನ್ನಡತಿ ವಸಂತಕುಮಾರಿ
‘ಸಂಸ್ಥೆಯ ಎಲ್ಲರ ಪರಿಶ್ರಮದಿಂದ ಸಂಯೋಜನೆಗೊಂಡು, ಪರೀಕ್ಷಿಸಲ್ಪಟ್ಟು ಆಕಾಶಕ್ಕೆ ಹಾರಿ ಕಕ್ಷೆಯಲ್ಲಿ ಪ್ರತಿಷ್ಠಾಪನೆಯಾದ ಉಪಗ್ರಹವೊಂದು ತನ್ನ ಕೆಲಸ ಪ್ರಾರಂಭಿಸಿದಾಗ ಆಗುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎನ್ನುವುದು ಇಸ್ರೋದ ಸ್ಪೇಸ್ ಕ್ರಾಫ್ಟ್ ಚೆಕ್ ಔಟ್ ಗ್ರೂಪ್ (ಉಪಗ್ರಹ ಪರಿವೀಕ್ಷಣಾ ಸಮೂಹ)ನ ಸಮೂಹ ನಿರ್ದೇಶಕಿ ಆಗಿರುವ ಯು. ಎನ್. ವಸಂತಕುಮಾರಿ ಅಭಿಪ್ರಾಯ.
ಬೆಂಗಳೂರಿನ ಎನ್. ಆರ್. ಕಾಲನಿಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ವಸಂತಕುಮಾರಿ ಬಾಲ್ಯದಿಂದಲೂ ಪ್ರತಿಭಾವಂತೆ. ಗಣಿತ-ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದ ಇವರು, ಮುಂದೆ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿಎಸ್ಸಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಎರಡನ್ನೂ ಉನ್ನತ ಶ್ರೇಣಿಯ ರ್ಯಾಂಕುಗಳೊಂದಿಗೆ ಪಾಸು ಮಾಡಿದರು. 1984ರಲ್ಲಿ ವಿಜ್ಞಾನಿಯಾಗಿ ಇಸ್ರೋ ಸಂಸ್ಥೆ ಸೇರಿದರು.
ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿಯೇ ಐಆರ್​ಎಸ್ ಸರಣಿಯ ಉಡಾವಣೆಗಾಗಿ ರಷ್ಯಾ ದೇಶಕ್ಕೆ ಹೋಗಿ ಬಂದರು. ಮುಂದೆ ಐಆರ್​ಎಸ್-ಐಡಿ, ಇನ್ಸಾಟ್-3ಇ ಉಪಗ್ರಹಗಳ ಪ್ರಾಜೆಕ್ಟ್ ಮ್ಯಾನೇಜರ್, ಕಾಟೋಸ್ಯಾಟ್ ಸರಣಿಯ ಉಪಗ್ರಹಗಳಿಗೆ ಉಪನಿರ್ದೇಶಕಿಯಾಗಿದ್ದು ಈಗ ಪ್ರಸ್ತುತ ಎಸ್​ಸಿಜಿ ಸಮೂಹಕ್ಕೆ ನಿರ್ದೇಶಕರಾಗಿದ್ದಾರೆ. ಇಷ್ಟೇ ಹೇಳಿದರೆ ಸಾಲದು, ಆಕಾಶಕ್ಕೆ ಹಾರಬೇಕಾದ ಪ್ರತಿಯೊಂದು ಉಪಗ್ರಹವೂ ಇವರ ಅಂಕಿತ ಬೀಳದೆ ಇಸ್ರೋ ಗೇಟನ್ನು ದಾಟುವಂತಿಲ್ಲ.
ವಸಂತಕುಮಾರಿ, ತಮ್ಮ ದೈನಂದಿನ ಕರ್ತವ್ಯದ ಜತೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಅಧ್ಯಯನಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಮ್ಮೇಳನಗಳಲ್ಲೂ ಉಪಗ್ರಹಕ್ಕೆ ಸಂಬಂಧಿಸಿದ ಭಾಷಣಗಳನ್ನು ಮಾಡಿದ್ದಾರೆ. ಅನೇಕ ಸಮಿತಿಗಳ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಸ್ರೋ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಮಿತಿಗಳ ಅಧ್ಯಕ್ಷೆಯಾಗಿ, ನಾಡಹಬ್ಬವನ್ನು ಆಚರಿಸಿಯೂ ಸಂತೋಷಪಡುತ್ತಾರೆ ಈ ಅಪ್ಪಟ ಕನ್ನಡತಿ.
ಮನೆಯಲ್ಲಿ ಸಿಕ್ಕ ಗೌರವ ಹೆಚ್ಚಿನ ಆತ್ಮಸಂತೋಷ ಕೊಡುತ್ತದೆಯಲ್ಲವೇ? ಮಹಿಳಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್್ಸ, ಕಲ್ಪನಾ ಚಾವ್ಲಾ ಮತ್ತಿತರರ ಸಹಚರ್ಯವೂ ಇವರಿಗೆ ಸಿಕ್ಕಿತ್ತು. ‘ದೇಶದ ವಿವಿಧ ಸಂಸ್ಥೆಗಳು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿದಾಗ ಭಾರತವೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ನಮ್ಮಲ್ಲಿ ಅಪಾರ ಸಂಖ್ಯೆಯ ಬುದ್ಧಿವಂತ ಯುವ ಜನರಿದ್ದಾರೆ’ ಎಂದು ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಾರೆ. ‘ನಾವೆಲ್ಲರೂ ಸೋಮಾರಿತನವನ್ನು ಕೊಡವಿ ಮೇಲೆದ್ದು, ಕಾರ್ಯತತ್ಪರರಾಗಬೇಕು. ಮಹಿಳೆಯರಲ್ಲಿ ಸಾಧಿಸಬೇಕು ಎನ್ನುವ ಛಲ ಮೂಡಬೇಕು. ಆಗ ಸಾಧಿಸುವ ದಾರಿಗಳು ತಮ್ಮಿಂದ ತಾವೇ ತೆರೆದುಕೊಳ್ಳುತ್ತವೆ. ಕೈಲಾಗದು ಎಂದು ಕೈಕಟ್ಟಿ ಕೂರಬಾರದು’ ಎನ್ನುತ್ತಾರೆ. ಇಸ್ರೋದಡಿ ಇರುವ ಅನೇಕ ಸಂಸ್ಥೆಗಳಲ್ಲಿ ಉಪಗ್ರಹ ಪರಿವೀಕ್ಷಣಾ ಸಮೂಹವೂ ಒಂದು. ಇಸ್ರೋ ಇತಿಹಾಸದಲ್ಲೇ, ಅಂಗಸಂಸ್ಥೆಯೊಂದರ ನಿರ್ದೇಶಕಿ ಸ್ಥಾನ ಅಲಂಕರಿಸಿರುವ ಮೊದಲ ಮಹಿಳೆ ಇವರು. ಮುಂಬರುವ ದಿನಗಳಲ್ಲಿ ಇಸ್ರೋ ನಿರ್ದೇಶಕ ಸ್ಥಾನವನ್ನು ಸಹ ಸಮರ್ಥ ಮಹಿಳೆಯರು ಅಲಂಕರಿಸುವಂತಾಗಬೇಕು ಎಂಬ ಆಶಯ ನಮ್ಮದು.
ಕುಟುಂಬದ ಸಹಕಾರ
ಮನೆ ಮಕ್ಕಳನ್ನು ನಿಭಾಯಿಸುತ್ತಲೇ, ವೃತ್ತಿ ಜೀವನದ ಮೆಟ್ಟಿಲುಗಳನ್ನು ಮೇಲೇರಿರುವ ವಸಂತಕುಮಾರಿಯವರು ‘ಸಾಧನೆಗೆ ಹೆಣ್ಣು-ಗಂಡೆಂಬ ಭೇದವಿಲ್ಲ. ಪದೋನ್ನತಿಯ ಸಂದರ್ಭದಲ್ಲಿ ನಮ್ಮ ಸಾಧನೆಯೇ ನಮಗೆ ಶಿಫಾರಸು’ ಎನ್ನುತ್ತಾರೆ. ಹೆಣ್ಣೊಬ್ಬಳು ಯಶಸ್ವಿಯಾಗಬೇಕಾದಲ್ಲಿ ಕುಟುಂಬದ ಸಹಕಾರ ಅತ್ಯಗತ್ಯ ಎಂದು ಹೇಳಲು ಮರೆಯುವುದಿಲ್ಲ. ಅನೇಕ ಹಬ್ಬಗಳನ್ನು ರಾಕೆಟ್ ಉಡಾವಣಾ ಕೇಂದ್ರಗಳಲ್ಲೇ ಆಚರಿಸಿದ್ದೇವೆ. ಕೆಲಸವೇ ನಮ್ಮ ಸರ್ವಸ್ವ. ಕೆಲವು ಬಾರಿ ತಲೆಯ ತುಂಬ ಉಪಗ್ರಹದ ಚಿಂತೆಯೇ ತುಂಬಿಕೊಂಡಾದ ನಿದ್ರೆಯೇ ಮಾಡದ ದಿನಗಳೂ ಇವೆ’ ಎಂದು ವೃತ್ತಿ ಜೀವನವನ್ನು ಮೆಲುಕು ಹಾಕುತ್ತಾರೆ. ವಸಂತಕುಮಾರಿ ಅವರನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಅನೇಕ ಉಪಗ್ರಹಗಳ ಯಶಸ್ವಿ ಉಡಾವಣೆ ಬಳಿಕ ರಾಷ್ಟ್ರಪತಿ, ಪ್ರಧಾನಿಗಳು ತಂಡವನ್ನು ಅಭಿನಂದಿಸಿದ್ದಾರೆ. ಇವೆಲ್ಲವುಗಳ ಮಧ್ಯೆ ‘ಇಸ್ರೋ ಮೆರಿಟ್ ಅವಾರ್ಡ್’ ಇವರಿಗೆ ಹೆಚ್ಚು ಪ್ರಿಯವಾದದ್ದು.
ನಮಗೆ ಕೆಲಸ ಎಂದರೆ ದೇಶಸೇವೆ. ನಮ್ಮ ಒಂದೊಂದು ನಿಮಿಷವನ್ನೂ ದೇಶಕ್ಕಾಗಿ ವಿನಿಯೋಗಿಸುತ್ತಿದ್ದೇವೆ ಎನ್ನುವ ಭಾವನೆ ನಮ್ಮಲ್ಲಿ ಶಕ್ತಿ ತುಂಬುತ್ತದೆ.
| ಯು. ಎನ್. ವಸಂತಕುಮಾರಿ
ಸಮೂಹ ನಿರ್ದೇಶಕಿ, ಉಪಗ್ರಹ ಪರಿವೀಕ್ಷಣಾ ಸಮೂಹ, ಇಸ್ರೋ, ಬೆಂಗಳೂರು

Link: https://www.google.com/search?q=%E0%B2%B5%E0%B3%88.%E0%B2%B8%E0%B2%BF.+%E0%B2%95%E0%B2%AE%E0%B2%B2%E0%B2%BE&rlz=1C1AVNG_enIN699IN699&oq=%E0%B2%B5%E0%B3%88.%E0%B2%B8%E0%B2%BF.+%E0%B2%95%E0%B2%AE%E0%B2%B2%E0%B2%BE&aqs=chrome..69i57&sourceid=chrome&ie=UTF-8