Wednesday 27 February 2019

ವಿಜ್ಞಾನದಲ್ಲಿ ನಾವಿನ್ನೂ ಸಾಧಿಸಬೇಕು

ವಿಜ್ಞಾನದಲ್ಲಿ ನಾವಿನ್ನೂ ಸಾಧಿಸಬೇಕು

An article published in Vijayavani

| ಡಾ.ವೈ.ಸಿ.ಕಮಲಾ
ಪದ್ಮಶ್ರೀ, ಪದ್ಮಭೂಷಣ ಹಾಗೂ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ಪ್ರೊ. ಗೋವಿಂದರಾಜನ್ ಪದ್ಮನಾಭನ್ ಈ ನಾಡು ಕಂಡ ಒಬ್ಬ ಅತ್ಯುತ್ತಮ ಜೀವರಸಾಯನ ವಿಜ್ಞಾನಿ. ಯಕೃತ್ತಿನಲ್ಲಿ ಔಷಧಗಳನ್ನು ಸಂಸ್ಕರಿಸುವಲ್ಲಿ ನೆರವಾಗುವ ಕಿಣ್ವಗಳು ನಮ್ಮ ವಂಶವಾಹಿಗಳಲ್ಲಿರುವ ಮಾಹಿತಿಯಿಂದ ಉತ್ಪಾದನೆಯಾಗುವ ಹಂತದವರೆಗಿನ ಹಾದಿಯನ್ನು ಅರ್ಥೈಸಿಕೊಳ್ಳುವ, ಅದನ್ನು ನಿಯಂತ್ರಿಸುವ ಮಹತ್ವದ ಸಂಶೋಧನೆಯನ್ನು ಮಾಡಿದ್ದಾರೆ. ದೇಶದಲ್ಲಿ ಜೀನ್​ಕ್ಲೊನಿಂಗ್​ನ್ನು ಅನ್ನು ಮೊಟ್ಟಮೊದಲ ಬಾರಿ ಇವರ ಪ್ರಯೋಗಶಾಲೆಯಲ್ಲಿ ಮಾಡಲಾಯಿತು. ಇವರು ಮಲೇರಿಯಾ ರೋಗಕ್ಕೆ ಅರಿಶಿಣದಲ್ಲಿನ ಕರ್​ಕುಮಿನ್ ಆಧಾರಿತ ಔಷಧವನ್ನು ಕಂಡುಹಿಡಿದಿದ್ದಾರೆ. ಅದು ಪ್ರಾಯೋಗಿಕ ಹಂತದಲ್ಲಿದೆ. ಇದರೊಂದಿಗೆ ಆಧುನಿಕ ಲಸಿಕೆಗಳು ಜೈವಿಕತಂತ್ರಜ್ಞಾನ, ಜೀನ್​ಥೆರಪಿ ಇನ್ನೂ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಪ್ರೊ.ಪದ್ಮನಾಭನ್ ದೇಶದ ಜೈವಿಕವಿಜ್ಞಾನ ಜೈವಿಕತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಯುವ ವಿಜ್ಞಾನಿಗಳ ಮತ್ತು ಉದ್ಯಮಿಗಳ ಒಂದು ಪೀಳಿಗೆಯನ್ನೇ ತಯಾರು ಮಾಡಿದ್ದಾರೆ. ಪ್ರಸ್ತುತ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್​ನ ಪ್ಲಾಟಿನಂ ಜುಬಿಲಿ ಫೆಲೋಶಿಪ್ ಹಿರಿಯ ವಿಜ್ಞಾನಿ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಜೈವಿಕವಿಜ್ಞಾನ ವಿಭಾಗದಲ್ಲಿ ಗೌರವ ಪ್ರೊಫೆಸರ್. ಕೇಂದ್ರ ಸರ್ಕಾರದ ಜೈವಿಕತಂತ್ರಜ್ಞಾನ ವಿಭಾಗದ, ಜೈವಿಕತಂತ್ರಜ್ಞಾನ ಕೈಗಾರಿಕೆಗೆ ಸಂಶೋಧನಾ ಸಹಾಯಕ ಕೋಶ ಇದರ ಸೈನ್ಸ್ ಅಂಡ್ ಇನ್ನೋವೇಷನ್ ಸಲಹಾಗಾರರು. ಅವರಿಗೀಗ 80 ವರ್ಷ. ಮಾರ್ಚ್ 20ರಂದು ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಸಹ ಪ್ರಾಧ್ಯಾಪಕರಾಗಿರುವ ಡಾ.ವೈ.ಸಿ. ಕಮಲಾ ಅವರೊಂದಿಗೆ ಒಂದಿಷ್ಟು ಮಾತು.
ಜೈವಿಕ ವಿಜ್ಞಾನದ ಹಿನ್ನೆಲೆಯಲ್ಲಿ ಹೇಳುವುದಾದರೆ, ಜಾಗತಿಕ ವಿಜ್ಞಾನಕ್ಕಿಂತ ನಾವು 5-10 ವರ್ಷಗಳಷ್ಟು ಹಿಂದಿದ್ದೇವೆ. ಈ ದೇಶದ ಅಸ್ತಿತ್ವ ಸುಸ್ಥಿರ ಅಭಿವೃದ್ಧಿ ಮತ್ತು ಅಭ್ಯುದಯಕ್ಕೆ ನಮ್ಮಲ್ಲೇ ಅಭಿವೃದ್ಧಿಗೊಂಡ ಮೂಲಭೂತ ವಿಜ್ಞಾನ ಮತ್ತು ತಂತ್ರಜ್ಞಾನ ಅಗತ್ಯ ಎಂಬ ಅಂಶ ನಮ್ಮನ್ನಾಳುವವರಿಗೆ ಮನವರಿಕೆಯಾಗಿಲ್ಲ. ಈಗಲೂ ನಾವು ನಮ್ಮ ಜಿಡಿಪಿಯ ಶೇ.0.8ರಷ್ಟು ಹಣವನ್ನು ಮಾತ್ರ ವಿಜ್ಞಾನಕ್ಕೆ ವಿನಿಯೋಗಿಸುತ್ತಿದ್ದೇವೆ. ಇದು ವಿಜ್ಞಾನಿಗಳು ಕೇಳುವ ಶೇ.3ಕ್ಕಿಂತ ಕಡಿಮೆ ಇದೆ. ಹಲವು ದೇಶಗಳಲ್ಲಿ ಇದು ಶೇ.2ಕ್ಕಿಂತ ಹೆಚ್ಚಿದೆ. ಬಾಹ್ಯಾಕಾಶ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದಂತೆ ಮೂಲಭೂತ ವಿಜ್ಞಾನವನ್ನೂ ಸರ್ಕಾರ ಮತ್ತು ಜನ ಬೆಂಬಲಿಸಬೇಕು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು. ರಾಷ್ಟ್ರ ನಿರ್ವಣಕ್ಕೆ ಅದು ಅಗತ್ಯ ಎಂಬುದು ಜನರಿಗಿನ್ನೂ ಮನವರಿಕೆಯಾಗಿಲ್ಲ. ಸ್ಟಾರ್ಟ್​ಅಪ್ ಯೋಜನೆಗಳು ಯುವ ಉದ್ಯಮಿಗಳ ಪಡೆಯನ್ನೇ ಸೃಷ್ಟಿಸುತ್ತಿದೆ. ಆದರೆ, ಇದರ ಆಗುಹೋಗುಗಳನ್ನು ಗಮನಿಸಬೇಕಿದೆ.
ನಿಮ್ಮ ಸಂಶೋಧನೆಗಳ ಬಗ್ಗೆ ತಿಳಿಸಿ.
ಕೆಂಪು ತೊಗರಿಬೇಳೆಯಲ್ಲಿದ್ದ ವಿಷದ ಅಂಶ ಪತ್ತೆಹಚ್ಚಿ ಬೇರ್ಪಡಿಸುವುದು ನನ್ನ ಮೊದಲ ಸ್ವತಂತ್ರ ಸಂಶೋಧನೆ. ಇದರಿಂದಾಗಿ ನಾವು ಕೆಂಪು ತೊಗರಿಬೇಳೆಯಲ್ಲಿದ್ದ ಪ್ರೊಟೀನ್ ಸಮರ್ಥವಾಗಿ ಬೇರ್ಪಡಿಸಲು ಸಾಧ್ಯವಾಯಿತು. ನಂತರದ್ದೇ ಇಢಠಿಟ್ಚಜ್ಟಟಞಛಿ ಕ50 ಕಿಣ್ವದ ಸಂಶೋಧನೆ. ಇದು ಸೈಟೋಕ್ರೋಮ್ ಪಿ 450 ಕಿಣ್ವವು, ಯಕೃತ್ತಿನಲ್ಲಿ ಹೆಚ್ಚಾಗಿ ಕಂಡುಬರುವುದಾದರೂ ಇತರೆಡೆಗಳಲ್ಲೂ ಇರುತ್ತದೆ. ನಾವು ಸೇವಿಸುವ ಔಷಧಗಳನ್ನು ಶುದ್ಧೀಕರಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ.
ತಮ್ಮ ಅಧ್ಯಯನದ ‘ಹೀಮ್ ಅಣುವಿನ ಬಗ್ಗೆ ಹೇಳಿ.
ಹೀಮ್ ಎಂಬುದು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರೊಟೀನ್​ನಲ್ಲಿರುವ ಕೆಂಪು ಬಣ್ಣಕ್ಕೆ ಕಾರಣವಾಗುವ ಅಂಶ. ಇದು ರಕ್ತದಲ್ಲಷ್ಟೇ ಅಲ್ಲದೆ ಮಯೋಗ್ಲೋಬಿನ್, ಸ್ಟುಟೋಕ್ರೋಮ್ ಹೀಮ್ ಪರಾಕ್ಸೈಡ್ ಮುಂತಾದವುಗಳಲ್ಲೂ ಕಂಡುಬರುವುದು.
1966ರಲ್ಲಿ ಪಿಎಚ್.ಡಿ ಪೂರೈಸಿ ಕೆಲಸಕ್ಕೆ ಸೇರಿದ ದಿನಗಳಲ್ಲಿ ದೇಶದ ವಿಜ್ಞಾನ ಕ್ಷೇತ್ರದ ಸ್ಥಿತಿ?
ಮುಂಚೂಣಿ ಕ್ಷೇತ್ರದ ಪ್ರಯೋಗಗಳನ್ನು ಮಾಡಲು ಹರಸಾಹಸ ಪಡಬೇಕಾಗಿತ್ತು. ಏಕೆಂದರೆ, ಅತ್ಯಾಧುನಿಕ ಉಪಕರಣಗಳು ನಮ್ಮಲ್ಲಿ ಲಭ್ಯವಿರಲಿಲ್ಲ. ಕೇವಲ ಐವತ್ತು ಸಾವಿರ ರೂಪಾಯಿಗಳವರೆಗೆ ಮಾತ್ರ ಯಂತ್ರಗಳನ್ನು ಆಮದು ಮಾಡಿಕೊಳ್ಳಬಹುದಿತ್ತು. ಮುಂದೆ ಅದು ಐದು ಲಕ್ಷಕ್ಕೆ ವಿಸ್ತರಣೆಯಾಯಿತು. ಈಗ ಯಾವುದೇ ಮಿತಿಯಿಲ್ಲ. ಇಂದು ಶೇ. 80ರಷ್ಟು ಉಪಕರಣಗಳು ಆಮದಾದವುಗಳು.
ನಿಮ್ಮ ಬಾಲ್ಯ, ಶಿಕ್ಷಣ ಹೇಗಿತ್ತು?
ನಮ್ಮ ತಾತ ಆಗಿನ ಕಾಲದಲ್ಲೇ ಬಿ.ಇ. ಪದವೀಧರರು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಚೀಫ್ ಇಂಜಿನಿಯರ್. ನಮ್ಮ ಚಿಕ್ಕಪ್ಪ, ತಂದೆ ಎಲ್ಲರೂ ಇಂಜಿನಿಯರುಗಳೆ. ತಂದೆ ವಿ.ಗೋವಿಂದರಾಜನ್ ‘ಶೆಲ್’ (ಖಜಛ್ಝಿ್ಝ ಣಜ್ಝಿ) ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ತಾಯಿ ಜಾನಕಿ ಗೃಹಿಣಿ. ನಾನು ಓದು ಆರಂಭಿಸಿದ್ದು ಬೆಂಗಳೂರು ಮೆಜೆಸ್ಟಿಕ್​ನ ‘ತುಳಸೀವನ’ದ ಬಳಿಯ ಶಾಲೆಯಲ್ಲಿ. ಮೂರನೇ ತರಗತಿ ನಂತರ ಒಮ್ಮೆಗೇ ಆರನೇ ತರಗತಿಗೆ ಬಡ್ತಿ ಪಡೆದೆ. ಹೈಸ್ಕೂಲ್ ಓದುವಾಗ ವಿಜ್ಞಾನ ಅಧ್ಯಾಪಕ ನರಸಿಂಹ ಅವರ ಬೋಧನೆ ವಿಧಾನ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿತು.
ನಮ್ಮದು ಇಂಜಿನಿಯರುಗಳ ಕುಟುಂಬವಾದ್ದರಿಂದ ಅವರೆಲ್ಲರಿಗೂ ನಾನು ಇಂಜಿನಿಯರ್ ಆಗಬೇಕೆಂಬ ಅಪೇಕ್ಷೆಯಿತ್ತು. ಅದರಂತೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದರು. ಆದರೆ, ಅಲ್ಲಿ ನನಗೆ ಮೂರು ದಿನವೂ ಇರಲಾಗಲಿಲ್ಲ. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಮುಗಿಸಿ ‘ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್​ಸ್ಟಿಟ್ಯೂಟ್’ (ಐಅಐ) ಸಂಸ್ಥೆಯಲ್ಲಿ ಆಗತಾನೆ ಆರಂಭವಾಗಿದ್ದ ‘ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಜ್ಞಾನ’ದ ಎಂಎಸ್ಸಿ ಕೋರ್ಸಿಗೆ ಸೇರಿದೆ. ಅಲ್ಲೇ ಪ್ರಾಜೆಕ್ಟ್ ಗಾಗಿ ‘ಜೀವರಸಾಯನ ವಿಜ್ಞಾನ’ ಅಧ್ಯಯನ ಮಾಡಿದೆ. ಅದೇ ನನ್ನ ಜೀವನದ ತಿರುವು. ಬೆಂಗಳೂರಿನ ಐಐಎಸ್ಸಿ ಸೇರುವಂತೆ ನನ್ನ ಗುರು ಡಾ. ಎನ್.ಬಿ. ದಾಸ್ ದಾರಿ ತೋರಿದರು. ಪಿಎಚ್​ಡಿ ಅಧ್ಯಯನಕ್ಕೆ ಐಐಎಸ್ಸಿ ಸೇರಿದೆ. ಅಲ್ಲಿಂದ ಈವರೆಗೂ ಇದೇ ಸಂಸ್ಥೆಯಲ್ಲಿದ್ದೇನೆ. ಪಿಎಚ್​ಡಿ ಪದವಿ ಮುಗಿಸಿದ ಬಳಿಕ (1966) ಅಂದು ರೂಢಿಯಲ್ಲಿದ್ದಂತೆ ವಿದೇಶಕ್ಕೆ ತೆರಳಲಿಲ್ಲ. ಆದರೆ ಉದ್ಯೋಗದ ಸಮಸ್ಯೆ ಎದುರಾಯಿತು. ಈ ಸನ್ನಿವೇಶದಲ್ಲಿ ಸತೀಶ್ ಧವನ್ ಅವರು ಐಐಎಸ್ಸಿ ನಿರ್ದೇಶಕರಾಗಿ ನಿಯೋಜನೆಗೊಂಡರು. ಆಗ ನಾನು ‘ಉಪನ್ಯಾಸಕ’ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಅಷ್ಟು ಹೊತ್ತಿಗಾಗಲೇ ನನ್ನ 24 ಸಂಶೋಧನಾ ಪ್ರಬಂಧಗಳು ಜಾಗತಿಕಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇದನ್ನು ಗಮನಿಸಿದ ಸತೀಶ್ ಧವನ್ ಅವರು ಒಮ್ಮೆಗೇ, ‘ಅಸಿಸ್ಟೆಂಟ್ ಪ್ರೊಫೆಸರ್’ ಹುದ್ದೆ ನೀಡಿದರು.
ನಿರ್ದೇಶಕರಾಗಿ ನಿಮ್ಮ ಅನುಭವ?
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹುದ್ದೆ ಬಹು ಜವಾಬ್ದಾರಿಯುತವಾದದ್ದು. ಯಾವಾಗ ಬೇಕಾದರೂ ಸಿಬ್ಬಂದಿ ನನ್ನನ್ನು ಭೇಟಿಯಾಗಬಹುದಿತ್ತು. ಅದು ಅವರ ಸಮಸ್ಯೆಯನ್ನು ಅರ್ಧದಷ್ಟು ನಿವಾರಿಸುತ್ತಿತ್ತು. ಐಐಎಸ್ಸಿಯ ವಿವಿಧ ವಿಭಾಗಗಳವರು ಕೈಗಾರಿಕೆಗಳೊಂದಿಗೆ ಸಂಬಂಧ ಹೊಂದುವಲ್ಲಿ ಹೆಚ್ಚಿನ ಒತ್ತು ನೀಡಿದೆ.
ಯಾವ ಪ್ರಶಸ್ತಿ ನಿಮಗೆ ಹೆಚ್ಚಿನ ಸಾರ್ಥಕತೆ ನೀಡಿತು?
ಪ್ರಶಸ್ತಿಗಳೆಡೆಗೆ ನನ್ನದು ನಿರ್ಲಿಪ್ತ ಭಾವ. ನನ್ನ ಅಂತರಂಗವು ಅವುಗಳಿಂದ ಹಿಗ್ಗುವಿಕೆಯನ್ನಾಗಲೀ, ಕುಗ್ಗುವಿಕೆಯನ್ನಾಗಲೀ ಅನುಭವಿಸಿಲ್ಲ. ನಿವೃತ್ತಿ ನಂತರವೂ ಸಂಶೋಧನೆಯನ್ನು ನಿರಂತರವಾಗಿ ನಡೆಸುತ್ತಿರುವೆ. ಸುಮಾರು 700ಕ್ಕೂ ಹೆಚ್ಚು ಯೋಜನೆಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ಆಯ್ಕೆ ಮಾಡಿದ್ದೇನೆ. ಅವುಗಳಲ್ಲಿ 500ಕ್ಕೂ ಹೆಚ್ಚು ಭಾರತೀಯ ಯೋಜನೆ ಗಳು ಕಾರ್ಯಗತಗೊಂಡು ಸುಮಾರು 100ಕ್ಕೂ ಹೆಚ್ಚು ಉತ್ಪನ್ನಗಳು ಸಮಾಜಕ್ಕೆ ಲಭ್ಯವಾಗಿವೆ.
ಮಲೇರಿಯಾಗೆ ಅರಿಶಿಣ ಮದ್ದು
ಮಲೇರಿಯಾ ಜಗತ್ತಿನಾದ್ಯಂತ ವ್ಯಾಪಕವಾಗಿದ್ದರೂ, ಭಾರತ, ನೈಜೀರಿಯಾಗಳಲ್ಲಿ ಇದು ಪ್ರಮುಖವಾಗಿ ಬಾಧಿಸುತ್ತದೆ. ಶೇ.80 ಪ್ರಕರಣಗಳು ಭಾರತ ಸೇರಿ 15 ದೇಶಗಳಲ್ಲಿ ವರದಿಯಾಗುತ್ತಿವೆ. ಮಲೇರಿಯಾ ನಿಯಂತ್ರಿಸಲು ಹಲವು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಈ ರೋಗ ಹರಡುವ ಸೊಳ್ಳೆಗಳು ಅನೇಕ ಔಷಧಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬಲಿಷ್ಠವಾಗಿವೆ. ಈಗ ಸದ್ಯದ ಪರಿಸ್ಥಿತಿಯಲ್ಲಿ ‘ಆರ್​ಟಿಮಿಸಿನಿನ್’ (Artemisinin) ರಾಸಾಯನಿಕ ಆಧಾರಿತ ಔಷಧವು ಹೆಚ್ಚು ಪರಿಣಾಮಕಾರಿಯಾಗಿದೆ. ಅರಿಶಿಣದಲ್ಲಿರುವ ಕರ್​ಕ್ಯುಮಿನ್ (Curcumin)ಗೆ ರೋಗ ನಿರೋಧಕ ಶಕ್ತಿಯಿದ್ದು, ಅದಕ್ಕೆ ‘ಹೀಮ್ ಅಣುವನ್ನು ಸೂಕ್ತವಾಗಿ ಸಂಯೋಜಿಸಿದಾಗ ಮಲೇರಿಯಾ ರೋಗಕ್ಕೆ ಅದು ಪರಿಣಾಮಕಾರಿ ಔಷಧ ಆಗಬಲ್ಲದು ಎಂಬುದನ್ನು ಪ್ರಯೋಗಗಳಿಂದ ಕಂಡಿದ್ದೇನೆ. ಇದಿನ್ನೂ ಪ್ರಯೋಗದ ಹಂತಗಳಲ್ಲಿದೆ. ಮನುಷ್ಯನ ಮೇಲೆ ಪ್ರಯೋಗಿಸಿ ಅಧ್ಯಯನವಾಗಬೇಕು. ಅದಕ್ಕೆ ಅನುಮತಿ ಸಿಕ್ಕಿಲ್ಲ.
ನಾನು ವಿಶೇಷವಾಗಿ ಆಧುನಿಕ ಲಸಿಕೆಗಳ ತಯಾರಿಕೆ, ಜೈವಿಕ ತಂತ್ರಜ್ಞಾನ, ವಂಶವಾಹಿಗಳ ಇಂಜಿನಿಯರಿಂಗ್ ಅಂದರೆ ಜಿನೆಟಿಕ್ ಇಂಜಿನಿಯರಿಂಗ್ ಮತ್ತು ಜೀನ್ ಥೆರಪಿ ಕ್ಷೇತ್ರಗಳಲ್ಲಿ ವಿಸõತವಾಗಿ ತೊಡಗಿಸಿ ಕೊಂಡಿದ್ದೇನೆ.
ಸಂಗೀತದಿಂದ ನೆಮ್ಮದಿ
ಸಂಗೀತ ನನ್ನ ವೈಯಕ್ತಿಕ ತುಡಿತ. ವಿದ್ವಾನ್ ಎಂ.ಟಿ. ಸೆಲ್ವನಾರಾಯಣ ಅವರ ಬಳಿ ಹದಿಮೂರು ವರ್ಷ ವಾರಕ್ಕೆರಡು ದಿನ ರಾತ್ರಿ 9ರಿಂದ 10.30ರವರೆಗೆ ಅಭ್ಯಾಸ ಮಾಡಿದ್ದೇನೆ. ಒಮ್ಮೊಮ್ಮೆ ಸಂಗೀತ ಕಛೇರಿಗೂ ಕರೆದೊಯ್ಯುತ್ತಿದ್ದರು. ಅಲ್ಲಿ ಹಾಡುತ್ತಿದ್ದೆ. ಸಂಗೀತ ನನಗೆ ನೆಮ್ಮದಿ ಕೊಟ್ಟಿದೆ. ತತ್ವಶಾಸ್ತ್ರದ ಓದು ನನ್ನನ್ನು ಸ್ಥಿತಪ್ರಜ್ಞನನ್ನಾಗಿಸಿದೆ. ಇಂದಿಗೂ ನಾನು ಭಗವದ್ಗೀತೆ ಓದದೆ ಮಲಗಲಾರೆ.
ಪತ್ನಿಯ ಬೆಂಬಲ ಅನುಗಾಲ
ನನ್ನ ಪತ್ನಿ ಮೈಥಿಲಿ. ಮಕ್ಕಳಾದ ಲೀಲಾ, ಶಿವಕುಮಾರ ಮತ್ತು ಡಾ. ಗಾಯತ್ರಿ. ಎಲ್ಲರೂ ಉತ್ತಮ ಶಿಕ್ಷಣ ಪಡೆದು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಮೈಥಿಲಿ ನನಗೆ ಅನುಗಾಲವೂ ಬೆಂಬಲವಾಗಿದ್ದಾಳೆ. ನನ್ನೆಲ್ಲಾ ವೈಯಕ್ತಿಕ ಕೆಲಸಗಳನ್ನೂ ನನ್ನ ಪತ್ನಿಯೇ ನಡೆಸಿಕೊಂಡು ಬಂದಿದ್ದಾಳೆ. ನಾನೆಂದೂ ಬ್ಯಾಂಕು, ಅಂಗಡಿ ಇತರೆಡೆಗೆ ಹೋದವನಲ್ಲ. ಮೊದಲೆಲ್ಲ ನಾನು ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೂ ಕಾರ್ಯನಿರತನಾಗಿರುತ್ತಿದ್ದೆ. ಈಗ ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡುವೆ.

https://www.vijayavani.net/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BE%E0%B2%B5%E0%B2%BF%E0%B2%A8%E0%B3%8D%E0%B2%A8%E0%B3%82-%E0%B2%B8%E0%B2%BE/

No comments:

Post a Comment