Sunday 10 February 2013

Universe through Time Line - kaalayaanadalli vishwa. Puataka Parichaya

       ಭೂಮಿಯಿಂದ ಬಾನಿನತ್ತ - ವಿಶ್ವದ ಅನುಭಾವದತ್ತ.











ಪಾಲಹಳ್ಳಿ ವಿಶ್ವನಾಥ್  ಅಪ್ಪಟ ಭೌತವಿಜ್ಞಾನಿಯಾಗಿ ಪ್ರಪಂಚದ ವಿವಿಧ ಊರು ಹಾಗೂ ವಿವಿಧ ಪ್ರಯೋಗಶಾಲೆಗಳಲ್ಲಿ  ವಿಜ್ಞಾನದ ಸೇವೆಸಲ್ಲಿಸಿದ್ದಾರೆ. ಈಗ ನಿವೃತ್ತಿಯನಂತರ ಬೆಂಗಳೂರಿನ ಬಸವನಗುಡಿಯಲ್ಲಿ ನೆಲೆನಿಂತು ಕನ್ನಡಮ್ಮನ ಸೇವೆಗಾಗಿ ಟೊಂಕಕಟ್ಟಿದ್ದಾರೆ .ಭೌತ ವಿಜ್ಞಾನದ ಅನೇಕ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದಾರೆ . ಮೊದಲಿಗೆ ಅವರಿಗೊಂದು ಶಹಬ್ಬಾಸ್ ಹೇಳಿ ನಂತರ ನಾವೂ ಸಹ ಭೂಮಿಯಲ್ಲಿ ಕುಳಿತು  ಬಾನಿನನಲ್ಲಿ ಏನೇನಿದೆ ಎಂದು ಕತ್ತೆತ್ತಿನೂಡೋಣ ಬನ್ನಿ. ಅರ್ಥಾತ್ ಅವರ ಪುಸ್ತಕ "ಭೂಮಿಯಿಂದ ಬಾನಿನತ್ತ" ಇದರ ಸಿಂಹಾವಲೋಕನ ಮಾಡೋಣ.

     ವಿಜ್ಞಾನದ  ಪಿಹೆಚ್ ಡಿ ಪ್ರಬಂಧದ ಮಾದರಿಯ ಪರಿವಿಡಿಯೊಂದಿಗೆ ಪುಸ್ತಕ ತೆರೆದು ಕೊಳ್ಳುತ್ತದೆ. ಮೊದಲಿಗೆ ಸೌರಮಂಡಲದ ಕಥೆ ಹೇಳುವ ಲೇಖಕರು,ಅನೇಕ ಸಂಸ್ಕೃತಿಗಳಲ್ಲಿ ಸೌರಮಂಡಲದಿಂದ ವಿಶ್ವದ ಪರಿಕಲ್ಪನೆಯನ್ನು ವಿಸ್ತರಣ ವಾದದ್ದನ್ನು  ವಿಶಿಷ್ಟವಾಗಿ ಹೇಳುತ್ತಾರೆ. ಆ ಮೂಲಕ ವಿಜ್ಞಾನದ ಪರಿಕಲ್ಪನೆಯ ಬೆಳವಣಿಗೆಯನ್ನು ಗುರುತಿಸುತ್ತಾರೆ.  ವಿಶ್ವದ ಬಗೆಗಿನ ಎಲ್ಲ ಪುಸ್ತಕಗಳಂತೆ ಟಾಲೆಮಿ ,ಕೊಪೆರ್ನಿಕಸ್ ,ಗೆಲಿಲಿಯೋ, ಟೈಕೊಬ್ರಾಹೆ, ಕೆಪ್ಲರ್ ಮತ್ತು ಕೊನೆಗೆ ನ್ಯೂಟನ್ ಕಥೆಯನ್ನೇ ವಿಶ್ವನಾಥ್ ಹೇಳಿದರೂ  ಇತಿಹಾಸದ ಸೂಕ್ಷ್ಮ ಅಂಶಗಳು ಚೆನ್ನಾಗಿ ಮೂಡಿಬಂದಿವೆ.


ಪ್ರಾಸ್ತಾವಿಕ ಅಧ್ಯಾಯದ ನಂತರ ೧೯೦೦-೧೯೩೦ ಅವಧಿಯ ಕ್ವಾಂಟಮ್ ಕ್ರಾಂತಿಯ ಕಥೆ ಕನ್ನಡದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ. ಜೊತೆಗೆ  ಉಪಕರಣಗಳ ಪ್ರಗತಿಯಿಂದಾಗಿ ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರ ಕ್ಷೇತ್ರಗಳ ಪ್ರಗತಿಯ ವಿವರಣೆ ನಕ್ಷತ್ರಲೋಕ ಅಧ್ಯಾಯದಲ್ಲಿ ಪರಿಣಾಮಕಾರಿಯಾಗಿದೆ.೧೯೩೦ರ  ಸೈದ್ದಾಂತಿಕ ಪರಿಕಲ್ಪನೆಗಳಿಗೆ ಪೂರಕವಾಗಿ ನಂತರದ ದಶಕಗಳಲ್ಲಿ  ನಡೆದ  ಕೆಲವು ಬಾನಂಗಳದ ಘಟನೆಗಳಾದ ಸೂಪೆರ್ನೊವ , ಗಾಮವಿಕಿರಣ ಸಿಡಿತ,ಮುಂತಾದ ಘಟನೆಗಳು ನಮ್ಮ ಕೆಲವು ಊಹೆಗಳನ್ನು ಸತ್ಯದನೆಲೆಗೆ ತಂದುನಿಲ್ಲಿಸಲು ಸಾದ್ಯವಾದದ್ದನ್ನು ವಿಶ್ವನಾಥ್ ಸೋದಾಹರಣವಾಗಿ ನಿರೂಪಿಸಿದ್ದಾರೆ.ಇದೇ ಅಧ್ಯಾಯದಲ್ಲಿ ಸಿದ್ದಾಂತ ಮತ್ತು ಪ್ರಯೋಗದ ಗಟ್ಟಿ ಸಂಭಂಧಗಳನ್ನೂ ವಿಷದವಾಗಿ ತಿಳಿಸಿದ್ದಾರೆ.ಈ ನಿರೂಪಣೆಗಳ  ನಂತರ ಬರುವುದೇ "ಅಂಧರು ಮತ್ತು ಆನೆಯ ಕಥೆ".

   ಭೂಮಿಯೆಲ್ಲೆಡೆಯ ವಿವಿಧ ಪ್ರಯೋಗಾಲಯಗಳಿಂದ  ವಿಜ್ಞಾನಿ ಸಮೂಹವು ಆಕಾಶದಲ್ಲಿ ನಾನಿದನ್ನು ಕಂಡೆ ನಾನದನ್ನು ಕಂಡೆ ಎಂದು ದಿನಕ್ಕೊಂದು ಹೊಸ ಆವಿಷ್ಕಾರಗಳನ್ನು ವರದಿಮಾಡಿದಾಗ ಈ ವಿಶ್ವ ನಿಜಕ್ಕೂ ಹೇಗಿದೆ?ಎಂಬ ಅನುಮಾನ ನಮ್ಮನ್ನು ಕಾಡಿದರೆ ಆಶ್ಚರ್ಯವಿಲ್ಲ . ಆದ್ದರಿಂದಲೇ ಲೇಖಕರು "ಅಂಧರು ಮತ್ತು ಆನೆಯ ಕಥೆಗೆ" ವಿಜ್ಞಾನಿಗಳು ಮತ್ತು ವಿಶ್ವವನ್ನು ಹೋಲಿಸಿರುವುದು.

 ಇಷ್ಟೆಲ್ಲಾ ಅನುಮಾನಗಳು ತೀರಿದನಂತರ ಈ ವಿಶ್ವದ ನಿಜಸ್ವರೂಪದ ಅನಾವರಣವನ್ನು  "ವಿಶ್ವ"ಎಂಬ ಅಧ್ಯಾಯದಲ್ಲಿ ಎಳೆ ಎಳೆಯಾಗಿ  ಚಿತ್ರಿಸಿದ್ದಾರೆ.ಈ ಅಧ್ಯಾಯದಲ್ಲಿ ವಿಶ್ವದ ಗಾತ್ರ,ಸಾಂದ್ರತೆ,ವಿಶ್ವದ ಈಗಿನ ಸ್ಥಿತಿ, ವಿಶ್ವದ ಹಿಗ್ಗುವಿಕೆ, ಅದನ್ನು ಕಂಡುಹಿಡಿದಬಗೆ ಅಷ್ಟೇ ಅಲ್ಲದೆ, ಇತ್ತೀಚಿನ ಸಂಶೋಧನೆಗಳಾದ ಅಗೋಚರ ದ್ರವ್ಯ ಮತ್ತು ಅಗೋಚರ ಶಕ್ತಿ (Dark matter and Dark energy)ಇವುಗಳಬಗ್ಗೆಯೂ ಸ್ಥೂಲವಾಗಿ ತಿಳಿಸಿದ್ದಾರೆ.ಇನ್ನು ಎಲ್ಲ ಪುಸ್ತಕಗಳಂತೆ ವಿಶ್ವದ ವಿವಿಧ ಸಿದ್ದಾಂತಗಳು ಅಂದರೆ ಮಹಾಸ್ಪೋಟ ಸಿದ್ದಾಂತ,ಸಮಸ್ಥಿತಿ ಸಿದ್ದಾಂತ (Big Bang theory, Steady State theory) ಇವುಗಳಬಗ್ಗೆ  ತಿಳಿಸಿ,ಕೊನೆಗೆ ವಿಶ್ವದ ಅಂತ್ಯ ಹೇಗಾಗುವುದೆಂಬುದರಬಗ್ಗೆ  ಚರ್ಚಿಸಿದ್ದಾರೆ.

    ವಿಶ್ವದ ಅಂತ್ಯದಲ್ಲಿ ಪುಸ್ತಕ ಮುಗಿಯುವುದಿಲ್ಲ ,ಬದಲಿಗೆ ಪರಿಶಿಷ್ಟದಲ್ಲಿ ಇತರೆ ಸೌರಮಂಡಲಗಳು, ಬಾಹ್ಯಗ್ರಹಗಳು ಮತ್ತು ಬಾಹ್ಯಜೀವಿಗಳು ಈ ವಿಶ್ವದಲ್ಲಿವೆಯೇ? ಇದ್ದರೆ ಅವುಗಳನ್ನು ಕಂಡುಹಿಡಿಯುವ ವೈಜ್ಞಾನಿಕ ವಿಧಾನಗಳೇನು? ಎಂಬ ವಿವರ ತಿಳಿಸುವ ಲೇಖಕರು, ಮುಂದಿನ ಓದಿಗಾಗಿ ಹಲವಾರು ಜನಪ್ರಿಯ ಪುಸ್ತಕಗಳನ್ನು ಉಲ್ಲೇಖಿಸುತ್ತಾರೆ.ಅಂತ್ಯದಲ್ಲಿ ಭಾರತದಲ್ಲಿರುವ ಉತ್ತಮ ಸಂಶೋಧನಾ ಸಂಸ್ಥೆಗಳು ಮತ್ತು ಲಭ್ಯವಿರುವ ದೂರದರ್ಶಕಗಳ ಬಗ್ಗೆ ತಿಳಿಸಿ ಬರವಣಿಗೆಯನ್ನು ಪರಿಸಮಾಪ್ತಿಗೊಳಿಸುತ್ತಾರೆ.

     ಪುಸ್ತಕವನ್ನು ಓದಿದನಂತರ ಹಲವಾರು ಉತ್ತಮ ಅಂಶಗಳು ಓದಿದವರ ಮನಸೆಳೆಯುತ್ತವೆ.ಅವುಗಳಲ್ಲಿ ಮುಖ್ಯವಾದವು ಹೀಗಿವೆ.
     ೧.ಈ ಪುಸ್ತಕವು ಗಣಿತದ  ಯಾವುದೇ ದೊಡ್ಡ ದೊಡ್ಡ ಸಮೀಕರಣಗಳಿಲ್ಲದೆವಿಶ್ವದ ಪರಿಕಲ್ಪನೆಗಳನ್ನು ಪೂರ್ವೀತಿಹಾಸದ ಕಾಲದಿಂದ (ಕ್ರಿ.ಪೂ.೮೦೦೦) ದಿಂದ ಇಲ್ಲಿಯವರೆಗೆ,ಅಲ್ಲಲ್ಲಿ ತೆಳುಹಾಸ್ಯದ ಲೇಪನದೊಂದಿಗೆ ನಿರೂಪಿಸಿದ್ದಾರೆ.
      ೨. ವಿಜ್ಞಾನ-ವಿಜ್ಞಾನಿ-ಸಮಾಜದ ಸಂಬಂಧಗಳು ಚೆನ್ನಾಗಿ ಮೂಡಿಬಂದಿವೆ.ಉದಾಹರಣೆಗೆ,ಪುಟ ೧೨೩ ರರಲ್ಲಿ ಬೆಲ್ ಪ್ರಯೋಗಶಾಲೆಯ ಬಗ್ಗೆ ಬರೆಯುವ  (BELL Laboratory,USA) ಲೇಖಕರು "...... ಆ ಸಂಸ್ಥೆಗೆ ಮೂಲಭೂತ ಸಂಶೋಧನೆಗಳಿಲ್ಲದಿದ್ದರೆ ಪ್ರಗತಿಯೂ ಇಲ್ಲ ಹಣಕಾಸೂ ಇಲ್ಲ, ಎಂದು ತಿಳಿದಿರುವ ಪ್ರಬುದ್ದತೆ ಇರುವುದರಿಂದಲೇ, ಅಲ್ಲಿಯ ವಿಜ್ಞಾನಿಗಳು ಮುಖ್ಯ ಸಂಶೋಧನೆ ನಡೆಸಲು ಸಾಧ್ಯವಾಗಿರುವುದು". ಹಾಗಾಗಿ "ರೇಡಿಯೋ,ಲೇಸರ್ " ಇವೆಲ್ಲವೂ ಅಲ್ಲಿ ಆವಿಷ್ಕಾರ ಗೊಂಡವು".ಈ ಆವಿಷ್ಕಾರಗಳು ಸಮಾಜ ಪರಿವರ್ತನೆಯಲ್ಲಿ ಯಾವ ರೀತಿಯಲ್ಲಿ ನೆರವಾದವು ಎಂದು ಉಲ್ಲೇಖಿಸಿದ್ದಾರೆ.
      ೩.ವಿಜ್ಞಾನದ ಇತ್ತೀಚಿನ ಬೆಳವಣಿಗೆಗಳಾದ ಅಗೋಚರ ದ್ರವ್ಯ ಮತ್ತು ಅಗೋಚರ ಶಕ್ತಿಯ (Dark Matter, Dark Energy) ಅಸ್ತಿತ್ವವನ್ನು ೧೯೭೦ರ ವೇರ ರುಬಿನ್ (Vera Rubin) ರವರ ಸಂಶೋಧನೆಗಳಿಂದ ಮೊದಲುಗೊಂಡು ಇಲ್ಲಿನವರೆಗೆ ಬಹಳ ನವಿರಾಗಿ ನಿರೂಪಿಸಿದ್ದಾರೆ.
 ಇದೇರೀತಿ ಇನ್ನೂ ಹಲವಾರು ಉತ್ತಮ ಅಂಶಗಳನ್ನು ಪಟ್ಟಿ ಮಾಡಬಹುದು. ಇಷ್ಟೆಲ್ಲಾ ಉತ್ತಮ ಅಂಶಗಳಿದ್ದಾಗ್ಯು ಪುಸ್ತಕದಲ್ಲಿ ಹಲವಾರು ಋಣಾತ್ಮಕ ಅಂಶಗಳೂ ಕಂಡು ಬರುತ್ತವೆ.ಕೆಲವನ್ನು ಈಗ  ನೋಡೋಣ .

   ೧.ಪುಸ್ತಕದಲ್ಲಿನ ಕನ್ನಡ ಭಾಷೆಯ ಬಳಕೆ ಮತ್ತಷ್ಟು ಉತ್ತಮವಾಗಿ ಮೂಡಿಬರಬಹುದಾಗಿತ್ತು.ಉದಾಹರಣೆಗೆ ಪುಟ ೪೮ರಲ್ಲಿ "ಗ್ರೀಕರು ಭೂಮಿಗೆ ಕೊಟ್ಟ ಸ್ಥಳದಲ್ಲಿ  ಕೊಪರ್ನಿಕಸ್ ಸೂರ್ಯನನ್ನಿರಿಸಿದ್ದ " ಎಂಬಂತಹ ವಾಕ್ಯಗಳು ಇನ್ನೂ ಸಮರ್ಥವಾಗಿ ಮೋದಿ ಬರಬಹುದಿತ್ತು.

    ೨.ಪರಿಕಲ್ಪನೆಯ ಹಿನ್ನಲೆಯಲ್ಲಿ ನೋಡಿದಾಗ ಲೇಖಕರು ದ್ರವ್ಯರಾಶಿ ಮತ್ತು ತೂಕ (Mass and Weight)ಎರಡನ್ನೂ ಒಂದೇ ರೀತಿಯಲ್ಲಿ ಬಳಸಿದ್ದಾರೆ. ಪುಟ ೮೪ರಲ್ಲಿ  "ತೂಕ ಮತ್ತು ಶಕ್ತಿಯನ್ನು ಒಂದೇ ತಕ್ಕಡಿಯಲ್ಲಿ ಇಟ್ಟಿದ್ದು ಐನ್ ಸ್ಟೀ ನರ  ಪ್ರಖ್ಯಾತ ಸಂಶೋಧನೆಗಳಲ್ಲಿ  ಒಂದು ". ಇಂಥಹ ಹಲವಾರು ಸಣ್ಣ ಪುಟ್ಟ ದೋಷಗಳನ್ನು ಗುರುತಿಸಬಹುದಾದರೂ, ಇವು ಕನ್ನದಲ್ಲಿ ವಿಜ್ಞಾನ ಸಾಹಿತ್ಯ ಕೃಷಿಮಾಡುವಾಗ ಎದುರಾಗುವ ಸಾಮಾನ್ಯ ಎಡರು ತೊಡರು ಎಂದು ತಿಳಿಯಬಹುದು.

      ಈ ಎಲ್ಲಾ  ವಿಶ್ಲೇಷಣೆಗಳ ಹೊರತಾಗಿಯೂ ಈ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಎನ್ನುವುದೇ ಈ ಪುಸ್ತಕದ ಹೆಗ್ಗಳಿಕೆ.
        ಕೇವಲ ೧೮೦ ಪುಟಗಳಲ್ಲಿ ಈ ವಿಶ್ವದ ಆದಿಯಿಂದ  ಅಂತ್ಯದವರೆಗಿನ ಕಥೆಯನ್ನು ವೈಜ್ಞಾನಿಕ ತಳಹದಿಯಮೇಲೆ ಕಟ್ಟಿಕೊಟ್ಟಿರುವುದಕ್ಕೆ ಲೇಖಕರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗುತ್ತದೆ.

        ವಿಜ್ಞಾನಿ, ವಿಜ್ಞಾನ  ಸಂವಹನ ಮಾಡಿದಾಗ ಇರಬಹುದಾದ ಪಕ್ವತೆ ಈ ಪುಸ್ತಕದಲ್ಲಿ ಎದ್ದುಕಾಣುವ ಅಂಶ .

      ಈ ಪುಸ್ತಕ ರಚನೆಯಲ್ಲಿ ಲೇಖಕರೊಂದಿಗೆ ಅವರ ಪತ್ನಿ ಶ್ರೀಮತಿ ಗಾಯತ್ರಿ ಅವರೂ  ಮೆಚ್ಚುಗೆಗೆ ಪಾತ್ರರಾಗುತ್ತಾರೆ . ಏಕೆಂದರೆ ಲೇಖಕರೇ ಹೇಳಿರುವಂತೆ ಕನ್ನಡದಲ್ಲಿ ಪುಸ್ತಕ ಬರೆಯುವಂತೆ  ಅವರ ಪತ್ನಿಯು ಪ್ರೀತಿಪೂರ್ವಕ ಒತ್ತಾಯ ಮಾಡುತ್ತಿದ್ದುದರಿಂದ ಈ ಪುಸ್ತಕ ಬರೆದೆ ಎಂದಿದ್ದಾರೆ.

ಒಟ್ಟಾರೆಯಾಗಿ ನಮ್ಮನ್ನು "ಭೂಮಿಯಿಂದ ಬಾನಿನಂಗಳ'ಕ್ಕೆ ಕರೆದೊಯ್ದು ಈ" ವಿಶ್ವದ ಅನುಭಾವವ"ನ್ನು ಉಂಟುಮಾಡಿದ ಈ ಪುಸ್ತಕ ವಿಜ್ಞಾನಾಸಕ್ತರೆಲ್ಲರೂ ಓದಬೇಕಾದ ಪುಸ್ತಕ.

Sunday 3 February 2013

Dr H ನರಸಿಂಹಯ್ಯ ಮತ್ತು ಮಹಿಳಾ ಸಬಲೀಕರಣ






 Dr. ಹೆಚ್ . ನರಸಿಂಹಯ್ಯ  ಮತ್ತು ಮಹಿಳಾ  ಸಬಲೀಕರಣ 




ಮಹಿಳೆಯರ ಬಗೆಗೆ ಡಾ .ಎಚ್ . ಏನ್ .ಅವರಿಗೆ ವಿಶೇಷ ಕಾಳಜಿಯಿತ್ತು.
ಎಂದೆಂದಿಗೂ ಮಹಿಳೆಯರನ್ನು ವರ್ಗಾಯಿಸಬೇಡಿ ಎನ್ನುತ್ತಿದ್ದರು.
ಒಬ್ಬ ಮಹಿಳೆಗೆ ತೊಂದರೆಕೊಟ್ಟರೆ ಒಂದು ಕುಟುಂಬಕ್ಕೆ ತೊಂದರೆ ಕೊಟ್ಟಂತೆ ಎಂದು ಯಾವಾಗಲೂ ಹೇಳುತ್ತಿದ್ದರು.

ನಮ್ಮ ಮಕ್ಕಳಿಗೆ ನ್ಯಾಷನಲ್ ಕಾಲೇಜು = ನರಸಿಂಹಯ್ಯ ತಾತನಮನೆ ಎಂದಾಗಿತ್ತು .
ಮಹಿಳ ಸಬಲೀಕರಣದ ಅತ್ಯಂತ ಸಶಕ್ತವಾದ ವಿಭಾಗ ಎಂದರೆ ಆಕೆಯ ಭಾವನಾತ್ಮಕ ಸಬಲೀಕರಣ.
ನಮಗೆ " ಅಮ್ಮ ಕೆಲಸ ಬಿಡಬೇಡಿ , ಮಕ್ಕಳು ಮರಿಯನ್ನು ಹೇಗಾದರೂ ಕಷ್ಟಪಟ್ಟು ಸಾಕಿ ,ಒಳ್ಳೆಯಕೆಲಸ ಸಿಕ್ಕುವುದು ಕಷ್ಟ .ನಿಮಗೆ ಎನುಬೇಕೊ ಅನುಕೂಲ ಮಾಡಿಕೊಡೋಣ" .ಎಂದು ತಂದೆಯ ಸ್ಥಾನದಲ್ಲಿ ನಿಂತು ಮಹಿಳಾ ಉದ್ಯೋಗಿಗಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡುತ್ತಿದ್ದರು.ಬೆಂಬಲ ಬಾಯಿಮಾತಿನದಾಗಿರಲಿಲ್ಲ ಕೃತಿಯಲ್ಲಿ ಇತ್ತು ಎನ್ನುವುದು ವಿಶೇಷ.

ಇಂದು ನಾವು ಯಶಸ್ವಿಯಾಗಿಯಾಗಿದ್ದಾರೆ ಅದರಲ್ಲಿ ನಿಮ್ಮ ಪಾಲು ಇದೆ ಮೇಷ್ಟ್ರೇ.
ನಿಮಗೊಂದು ದೊಡ್ಡ ನಮಸ್ಕಾರ.
ಹೇಳಲು ಬಹಳ ವಿಷಯವಿದೆ.ಆದರೆ ಓದಲು ಬೇಸರವಾಗಬರದಲ್ಲವೇ?
ಇವತ್ತಿಗೆ ಇಷ್ಟುಸಾಕು.
H  N  ಅವರ ಪುಣ್ಯ ಸ್ಮರಣೆಯ ನೆನಪಿನಲ್ಲಿ ಬರೆದದ್ದು...
DOD :31-1-2005