Thursday 27 June 2013

ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಹಾಗೂ (ಮಹಾಕೊಳಕಿಯೂ ).

ನಾನು ಮುಂಬೈಗೆ ಮೊತ್ತಮೊದಲ ಭೇಟಿಕೊಟ್ಟದ್ದು 1995 ರಲ್ಲಿ . ಸೌದಿಅರೆಬಿಯ ಹೋಗುವ ದಾರಿಯಲ್ಲಿ ವಿಮಾನ ನಿಲ್ದಾಣದ ನೆಲವನ್ನಷ್ಟೇ ಸ್ಪರ್ಶಿಸಿ ಮತ್ತೆ ಮೇಲೆ ಹಾರಿದ್ದೆ . ಅನಂತರದ ವರ್ಷಗಳಲ್ಲಿ ಹಲವಾರು ಬಾರಿ ಈ ಬೆಡಗಿಯ ಬಳಿ ಬಂದಿದ್ದೆನಾದರೂ ಕೆಲವು ಸನ್ನಿವೇಶಗಳು ಮಾತ್ರ ಸ್ವಾರಸ್ಯಕರ ವಾಗಿವೆ . ಅದರಲ್ಲಿ TIFR ನವರು YISC Young Indian Scientist Colloquium ಆಹ್ವಾನಿಸಿದಾಗ ಬಂದದ್ದೂ ಒಂದು . ಈಗ್ಗೆ ಕೆಲವರ್ಷಗಳ ಹಿಂದೆ YISC ಎಂಬ ಕಾರ್ಯಕ್ರಮ ನಡೆಸಿ ದೇಶಾದ್ಯಂತ ನೂರುಜನ ಕಾಲೇಜು ಅಧ್ಯಾಪಕರನ್ನು ಇದರಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು . ಅದರಲ್ಲಿ ನಾನೂ ಒಬ್ಬಳಾಗಿದ್ದೆ . ನನಗೆ ಪತ್ರಬಂದ ಕೂದಲೆ TIFRಗೆ ಮೇಲ್ ಮಾಡಿದ ನಾನು ಬೆಂಗಳೂರಿನಿಂದ ಬೇರೆಯಾರನ್ನು ಅಹ್ವಾನಿಸಿದ್ದೀರಿ ? ಎಂದು ಕೇಳಿದಾಗ ಶೋಭಾ ಮತ್ತು ಶರ್ಮಿಷ್ಠ ಎಂಬ ಹೆಸರನ್ನು ಕಳುಹಿಸಿದರು . ಅರೆರೆ ಈ TIFR ನವರಿಗೆ ನಮ್ಮ ಹೆಸರನ್ನು ಕೊಟ್ಟವರಾರು? ಅದರಲ್ಲೂ ನಾವು ಮೂವರೂ ಸ್ನೇಹಿತೆಯರೆಂದು ಇವರಿಗೆ ಹೇಳಿದವರಾರು ? (ಗೊತ್ತಿದ್ದರೆ ಕಳಿಸುತ್ತಿರಲಿಲ್ಲ ಬಿಡಿ ) ಎಂದೆಲ್ಲಾ ಯೊಚಿಸಿದೆವರಾದರೂ ಅದನ್ನು ಅಲ್ಲಿಗೆ ಬಿಟ್ಟು ಒಂದೇ ರೈಲಿಗೆ ಮತ್ತು ವಾಪಸು ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದೆವು . ಪ್ರಯಾಣಕ್ಕೆ ಅಗತ್ಯ ವಾದ ತಿಂಡಿ ತೀರ್ಥಗಳನ್ನು ಕಟ್ಟಿಕೊಂಡೆವು (ಹೇಳಿ ಕೇಳಿ ಮೂವರು ಹೆಂಗಸರು ). ಅನಂತರ ರೈಲನ್ನೇರಿದನಾವು ಅದೆಷ್ಟು ಮಾತನಾಡಿದ್ದೇವೆಂದರೆ ನಮ್ಮ "ಬಾಯಿ ಬೊಂಬಾಯಿ " ಯಾ ಮಾತು ನಡೆಯುತ್ತಿರುವಂತೆ ಮುಂಬೈ VT ನಿಲ್ದಾಣ ಬಂದೇ ಬಿಟ್ಟಿತು . ಅಲ್ಲಿನಂದ ನಮಗೆ ಗೊತ್ತು ಮಾಡಿದ್ದ ಮೇಡಂ ಕಾಮ ರಸ್ತೆಯ (ಚರ್ಚ್ ಗೇಟ್ ಪ್ರದೇಶ ) ವಸತಿಯಲ್ಲಿ ಉಳಿದೆವು . ಮಾರನೆಯದಿನ ಕೊಲಾಬದಲ್ಲಿರುವ TIFR ತಲುಪಿ ಉಪನ್ಯಾಸಗಳನ್ನು ಕೇಳಲು ಶುರುಮಾಡಿದೆವು . ಭಾರತದಲ್ಲಿ ಅತ್ಯುತ್ತಮವಾಗಿ ಸಂಶೂದನೆ ಮಾಡುತ್ತಿರುವ ಯುವ ವಿಜ್ಞಾನಿಗಳು 5 ದಿನಗಳ ಕಾಲ ಅವ್ಯಾಹತವಾಗಿ ನೀಡಿದ ಉತ್ತಮೋತ್ತಮ ಉಪನ್ಯಾಸಗಳು ಅವಾಗಿದ್ದವು . ಉಪನ್ಯಾಸದಬಗ್ಗೆ ಹೇಳಿ ನಿಮ್ಮತಲೆ ಕೊರೆಯಲಾರೆ , ಬದಲಿಗೆ ಮುಂಬೈನ ಬೇರೆ ಅನುಭವಗಳನ್ನು ನಿಮಗೆ ಹೇಳುತ್ತೇನೆ . ಅಲ್ಲಿದ್ದ ಐದೂ ದಿನವೂ ಬೆಳಗ್ಗೆ 5ಗಂಟೆಗೆ ಕಾಲಿಗೆ ಬೂಟು ಕಟ್ಟಿಕೊಂಡು ನಾನು ಶೋಭಾ ಊರು ಸುತ್ತಲು ಪ್ರಾರಂಬಿಸಿದರೆ (ಶರ್ಮಿಷ್ಠೆಗೆ ಅದರಲ್ಲಿ ಆಸಕ್ತಿಯಿಲ್ಲ ) 7 ಕ್ಕೆ ವಾಪಸು ಬಂದು ಉಪನ್ಯಾಸಕ್ಕೆ ಹೊರಡುವುದು ದಿನಚರಿಯಾಗಿತ್ತು . ಮುಂಬೈನ ಎಡ ಬಲ ಗಲೆಲ್ಲವನ್ನೂ ಸುತ್ತಿ ಮುಗಿಸಿದೆವು . ಇದೇನೂ ವಿಶೇಷವಲ್ಲ ಬಿಡಿ ಮುಂಬೈಗೆ ಬಂದವರೆಲ್ಲರೂ ನೋಡುತ್ತಾರೆ . ಆದರೆ ಕೆಲ ವಿಶೇಷವಿದೆ ಅದನ್ನು ಮಾತ್ರ ಹೇಳುತ್ತೇನೆ .

 Sea Link ಮತ್ತು ಬಾಂದ್ರ - ಕುರ್ಲಾ ಕಾಂಪ್ಲೆಕ್ಸು . 
------------------------------------------

ಕೊನೆಯದಿನ TIFR ನಲ್ಲಿ ಮದ್ಯಾನ್ಹಕ್ಕೆ ಕೆಲಸ ಮುಗಿಯಿತು . ನಮ್ಮ ವಿಮಾನ ಮರುದಿನ ಬೆಳಗ್ಗೆ ಇದ್ದುದರಿಂದ ಪೂರ ಅರ್ಧದಿನ ನಮ್ಮ ಕೈಯ್ಯಲ್ಲಿತ್ತು . ಶೋಭಾ "ಕಮಲಾ ಏನು ಮಾಡೋಣ ಎಂದರು ?". ಅದಾಗ ತಾನೇ ಕುರ್ಲಾ ಯಿಂದ ಬಾಂದ್ರಾ ಗೆ ಹೋಗುವ ಸಮುದ್ರ ಸೇತುವೆ ಉದ್ಘಾಟನೆ ಗೊಂಡಿದ್ದು ಬೆಂಗಳೂರಿನ ಪೇಪರ್ ಗಳಲ್ಲಿ ಮತ್ತು ಅಂತರಜಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು . ಆದ್ದರಿಂ"ದ "ನಡೆಯಿರಿ ಸಮುದ್ರದ ಸೇತುವೆಮೇಲೆ ಹೋಗೋಣ" ಎಂದೆ . ಕೊಲಬದ TIFR ಮುಂಬಾಗದಲ್ಲಿ ಟ್ಯಾಕ್ಸಿ ಹತ್ತಿ ಸ್ಟೈಲ್ಆಗಿ "ಬಾಂದ್ರಾಗೆ ಸೇತುವೆಮೇಲೆ ಹೋಗು" ಎಂದೆವು .ಆತ "ಸೇತುವೆ ಫೀಸು ನಿಮ್ಮದೇ " ಎಂದ . "ಆಯಿತಪ್ಪ ನಡಿ " ಎಂದು ಮಾತನಾಡುತ್ತಾ ಕುಳಿತೆವು . ಸೇತುವೆಯಮೇಲೆ ಹೋಗುವಾಗ ಮಜಾ ಎನಿಸಿತು . ಬಾಂದ್ರಾ ಬಂದ ಕೂಡಲೆ ಆತ "ಬಾಂದ್ರದಲ್ಲಿ ಎಲ್ಲಿಗೆ ಹೋಗಬೇಕು" ಎಂದ . "ಒಂದು ಕಾಂಪ್ಲೆಕ್ಸ್ ಗೆ ಬಿಡು ಎಂದೆವು "(ಎಲ್ಲಿಗೆ ಹೋಗಬೇಕು ಎಂದು ಯೋಚಿಸಿದ್ದರೆ ತಾನೇ?). ಆತ ಸೀದಾ ತಂದು "ಬಾಂದ್ರಾ - ಕುರ್ಲಾ ಕಾಂಪ್ಲೆಕ್ಸ್ " ಬಳಿ ನಿಲ್ಲಿಸಿ "ಯೇ ಮುಂಬೈ ಕೆ ಸಬ್ ಸೆ ಬಡಾ ಕಾಂಪ್ಲೆಕ್ಸ್ ಹೈ . ಇಸ್ ಕಾ ನಮ್ ಹೈ ಬಾಂದ್ರಾ -ಕುರ್ಲಾ ಕಾಂಪ್ಲೆಕ್ಸ್ ಹೈ " ಎಂದು ಹೇಳಿ ದುಡ್ಡು ಪಡೆದು ಹೋದ . ಇತ್ತ ಶೋಭಾ "ಕಮಲಾ ಇದೇನಿದು ಕಾಂಕ್ರೀಟ್ ಕಾಡು , ಎನೂ ಅಂಗಡಿ ಮುಂಗಟ್ಟು ಕಾಣುತ್ತಿಲ್ಲ ಎಂದರು". ನಾನು ಕತ್ತೆತ್ತಿ ನೋಡಿದೆ National Stock Exchange(NSE) ಬೋರ್ಡ್ ದೊಡ್ಡ ಕಟದದ ಮೇಲೆ ಕಾಣಿಸಿತು . ಇತರೆ ಬ್ಯಾಂಕು ಆಫೀಸು ಗಳ ಬೋರ್ಡು ಕಂಡವು . ಆಗ ಶೋಭಾಗೆ ಹೇಳಿದೆ " ಶೋಭಕ್ಕ ನೀನು ಬ್ಯಾಂಕ್ ಆಫಿಸರನ ಹೆಂಡತಿಯಲ್ಲವೋ ಅದು ಡ್ರೈವರನಿಗೆ ಕನಸು ಬಿದ್ದಿರಬೇಕು ,ಆದ್ದರಿಂದಲೇ ಈ ಲಕ್ಷ್ಮೀ ಪೀಠದ ಮುಂದೆ ತಂದು ನಿಲ್ಲಿಸಿದ್ದಾನೆ , ಬಾ ಈ ಕಾಂಪ್ಲೆಕ್ಸ್ ನಲ್ಲಿ ಏನಿದೆ ನೋಡಿ ಬರೋಣ " ಎಂದೇ . ಆದರೆ ಅಂದು ಕಟ್ಟಡದಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಹುಸಿ ಕರೆ ಬಂದಿತ್ತಂತೆ ಹಾಗಾಗಿ ನಾವು ಒಳ ಹೋಗುವ ಬದಲು ಅಲ್ಲಿದ್ದವರನ್ನೇ ಹೊರ ಕಳುಹಿಸುತ್ತಿದ್ದರು . ಸೇತುವೆ ಮೇಲೆ ಬಂದದ್ದಷ್ಟೆ ಲಾಭ ಎಂದು ಕೊಂಡು ವಾಪಾಸು ಹೊರಟೆವು . 


ಮೊತ್ತಮೊದಲ ಲೋಕಲ್ ಟ್ರೈನ್ ಪ್ರಯಾಣ 
-------------------------------------
 ಮುಂಬೈ ಲೋಕಲ್ ಟ್ರೈನ್ ಬಗ್ಗೆ ಸಾಕಷ್ಟು ಕಥೆ ಕೇಳಿದ್ದೆವಾದರೂ ಅನುಭವ ಇರಲಿಲ್ಲ . ಆದ್ದರಿಂದ " ಶೋಭಾ ನಮಗೆ ಊರು 
 ಕೇರಿ ಸರಿಯಾಗಿ ಗೊತ್ತಿಲ್ಲ , ಆದ್ದರಿಂದ ಸುಮ್ಮನೆ ಬಾಂದ್ರಾದಿಂದ ರೈಲು ಹತ್ತಿ ಚರ್ಚ್ ಗೇಟ್ ಗೆ ಹೋಗೋಣ " ಎಂದೆ . ಶೋಭಾ ಸುಮ್ಮನೆ ತಲೆ ಆಡಿಸಿದರು (ಬೇರೆನು ಮಾಡಲು ಸಾಧ್ಯ ಹೇಳಿ ?). ಬಾಂದ್ರ ನಿಲ್ದಾಣಕ್ಕೆ ಬಂದು ಒಬ್ಬರಿಗೆ 6 ರುಪಾಯಿ ಕೊಟ್ಟು ಚರ್ಚ್ ಗೇಟ್ ರೈಲು ಹತ್ತಿದೆವು . ಕೇವಲ ಹದಿನೈದು ನಿಮಿಷದಲ್ಲಿ ಚರ್ಚ್ ಗೇಟ್ ಗೆ ಬಂದು ಇಳಿದದ್ದು ಬೆಂಗಳೂರಿನ ನಮಗೆ ಸೋಜಿಗದಂತೆ ಕಂಡಿತು . (ಏಕೆಂದರೆ ಬೆಂಗಳೂರಿನಲ್ಲಿ ಕೆಲವೊಮ್ಮೆ 4 ಕಿ ಮಿ ದಾರಿ ಒಂದು ಗಂಟೆ ತೆಗೆದು ಕೊಳ್ಳುತ್ತದೆ!!!!!!!!!! ). ನಾವು ರಾತ್ರಿ ರೂಮಿಗೆ ಬಂದು ಫೋನು ಮಾಡಿ ಹೇಳಿದ್ದೆ ಹೇಳಿದ್ದು (ಕಂಡಿರಲಿಲ್ಲ ವಲ್ಲ ಅದಕ್ಕೆ . ಈಗ ಬಿಡಿ ವಿವಿದ ಲೈನುಗಳು ಸ್ಟೇಷನ್ ಗಳು ಅಲ್ಪ ಸ್ವಲ್ಪ ಗೊತ್ತಾಗಿದೆ ). ಅನಂತರ ನಿದ್ದೆ ಮಾಡಿ ಮೇಲೆದ್ದು ದಡಬಡಾಯಿಸಿ ಪ್ಯಾಕ್ ಮಾಡಿಕೊಂಡು ವಿಮಾನವೇರಿ ಬೆಂಗಳೂರಿಗೆ ಬಂದೆವು . ಹೀಗಿತ್ತು ನಮ್ಮ ವಿಶೇಷ ಅನುಭವ . ಇದೆಲ್ಲಾ ಯಾಕೆ ಜ್ಞಾಪಕಕ್ಕೆ ಬಂತು ಎಂದರೆ ಮುಂಬೈ ಎಂಬ ಬೆಡಗಿಯೂ , ಸಾಂಪ್ರದಾಯಿಕ ಸುಂದರಿಯೂ ಮತ್ತು (ಮಹಾಕೊಳಕಿಯ ) ಬಳಿ ಹೋಗುವ ದಿನ ಮತ್ತೆ ಬಂದಿದೆ ಅದಕ್ಕೆ . ದೇಶದ ವಿವಿದ ಪ್ರದೇಶದಿಂದ ಬರುವ ಅಕಾಡೆಮಿಕ್ ಸ್ನೇಹಿತರು , ಬೆಂಗಳೂರಿನ ಸ್ನೇಹಿತರು ಎಲ್ಲರೂ ಸೇರಿ ಕೆಲಸ ಮುಗಿಸಿ ಹರಟೆ ಕೊಚ್ಚುವುದು ಇಲ್ಲಿಯೇ . ಆದ್ದರಿಂದಲೇ ಮುಬೈಗೆ ಬರುವುದೆಂದರೆ ನಮಗೆ ಅಪ್ಯಾಯಮಾನ . ಮುಂಬೈ ಬಗೆಗಿನ ಇನ್ನೂ ಹಲವಾರು ವಿಶೇಷ ಕಥೆಗಳಿವೆ , ಅಮಿತಾಭ್ ಬಚ್ಚನ್ ಮನೆ , ಮುಂಬೈ ಮಳೆ , ಜುಹೂ ಬೀಚು ಇತ್ಯಾದಿ ಇತ್ಯಾದಿ ಮುಂದೊಮ್ಮೆ ಯಾವಾಗಲಾದರೂ ಬರೆಯೋಣ . ಈಗ ಇಷ್ಟೇ ಟೈಪಿಸಲು ಆಗುತ್ತಿರುವುದು . ಟೈಮಾಯಿತ. 











No comments:

Post a Comment