Wednesday 29 March 2017

ಯುಗಾದಿ ಒಂದು ಸಂಕ್ಷಿಪ ನೆನಪು

ಕಲಿಕೆ
******
ಹಬ್ಬ ಯುಗಾದಿಯೇ ಆದರೂ ಇಂದು ಬೆಳಗ್ಗೆ(೨೯/೩/೨೦೧೭) ಬೇಗನೆದ್ದು ವಾಕಿಂಗ್ ಮಾಡುವಾಗ ಮೊದಲಿಗೆ ಅಂಬಿಕಾ ಮೇಡಮ್  ಅವರ ಭೇಟಿ, ಮನೆಗೆ ಬಂದು 'ತೋರಣ  ಕಟ್ಟಿಸಿ', ಸ್ನಾನ -ಪೂಜೆ, ಅಡುಗೆ ನೈವೇದ್ಯ , ಎಲ್ಲ ಮುಗಿಸಿ ಹೆಗಲಿಗೆ ಚೀಲ ಏರಿಸಿ ನನಗೆ ಅತ್ಯಂತ ಪ್ರಿಯವಾದ ವಿಷಯ  "ವಿಜ್ಞಾನ ಚಲನಚಿತ್ರ ನಿರ್ಮಾಣ " ಕಲಿಯಲು 'ನಿಯಾಸ್ 'ಗೆ   ಹೊರಟುನಿಂತಾಗ ಮಿಶ್ರ ಅನುಭವ . ಕಲಿಕೆ ಎಂಬ ದಾಹಕ್ಕೆ ಮನಸ್ಸನ್ನು 'ಸಂಯಮ'ಗೊಳಿಸುವ  ಜಗತ್ತನ್ನು ಗೆಲ್ಲುಬಲ್ಲೆನೆಂಬ ಮನೋಶಕ್ತಿಯನ್ನು ನೀಡಬಲ್ಲ ಸಾದ್ಯತೆಯಿರುವುದು ಗೋಚರಿಸಿತು. 
ವಿಜ್ಞಾನ ಚಲನಚಿತ್ರಗಳು ವಿಜ್ಞಾನ ಸಂವಹನೆಯ ಒಂದು ಸಾಧ್ಯತೆ -ಮಜಲು -ಮತ್ತು ಶಕ್ತಿ, ಈ ಕಲೆಯನ್ನು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳು ಮನೆಬಾಗಿಲಿನಲ್ಲಿ ಹೇಳಿಕೊಡುತ್ತಿರುವುದು(ಬೆಂಗಳೂರು )  ನಮ್ಮಂತಹವರಿಗೆ ಸಿಕ್ಕ ಉತ್ತಮ ಅವಕಾಶವೇ ಸೈ. 
ನೆನಪು 
*********
ನೆನಪಿನ ವಿಚಾರಕ್ಕೆ ಬಂದಾಗ ತಕ್ಕ ಮಟ್ಟಿಗೆ ಅತ್ಯುತ್ತಮ ನೆನಪುಗಳು ಬದುಕಿನಲ್ಲಿವೆ, ಅದಕ್ಕೆ ಕಾರಣ, ಅತ್ಯುತ್ತಮ ರೀತಿಯಲ್ಲಿ ಸಾಮರಸ್ಯದ ದಾಂಪತ್ಯ ನಿರ್ವಹಿಸಿದ ನನ್ನ ತಂದೆ-ತಾಯಿ ಯವರು . 
ಯುಗಾದಿಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಬಟ್ಟೆ ತರುತ್ತಿದ್ದ ಅಪ್ಪ , ಪ್ರತಿಯೊಬ್ಬರೂ ಅಂದು ಹೊಸಬಟ್ಟೆ ಧರಿಸುವಂತೆ ನೋಡಿಕೊಳ್ಳುತ್ತಿದ್ದರು . ಹಬ್ಬ ಎಂದರೆ ಅಥಿತಿಗಳು ಇರಲೇಬೇಕು , ದಾವಣಗೆರೆಯ 'ಧವಳಗಿ ಸಿದ್ದಮ್ಮ ' ಪ್ರತಿಹಬ್ಬಕ್ಕೂ ನಮ್ಮ ಮನೆಯ ಅಥಿತಿ ಅವರ ಮನೆಯ ತೋಟದಲ್ಲಿ ಬೆಳೆದ ಕಡ್ಡಿ ದಾಸವಾಳ, ಅಗಲ  ದಾಸವಾಳ ,  ಮಲ್ಲಿಗೆ, ಚೆಂಡುಹೂವು, ಜರ್ಬೆರಾ , ಸೌಂಗಾಂಧಿಕಾ ಪುಷ್ಪ ,ಬಸವನಪಾದ , ತುಂಬೆಹೂವು ಇನ್ನೂ ಮತ್ತಿತರ ಹೂವುಗಳನ್ನು ಬೆಳಗ್ಗೆಯೇ ಕಿತ್ತುತಂದು ದೇವರ ಕೋಣೆಯನ್ನು ಅಣಿಮಾಡುವುದು ನನ್ನ ಕೆಲಸ . ಹಿತ್ತಾಳೆ ,ತಾಮ್ರದ (ಬೆಳ್ಳಿ ಇರಲಿಲ್ಲ) ಪೂಜಾ ಪಾತ್ರೆಗಳನ್ನು ಹುಣಿಸೇಹಣ್ಣು -ರಂಗೋಲಿಪುಡಿ ಹಾಕಿ ಥಳ -ಥಳ ಎನ್ನುವಂತೆ ಬೆಳಗಿ , ದೀಪಕ್ಕೆಎಣ್ಣೆ  ಬತ್ತಿ ಹಾಕಿ, ನೆಲಕ್ಕೆ ಕಂಬಳಿ ಹಾಸಿ , ಸ್ನಾನದ  ಮನೆಯಲ್ಲಿ ಕೆಂಪು ಮಡಿಯನ್ನಿಟ್ಟು ಅಪ್ಪಾಜಿಯವರನ್ನು ಸ್ನಾನಕ್ಕೆ ಕರೆಯುತ್ತಿದ್ದೆವು . ಸ್ನಾನ ಮಾಡಿ ಮಡಿಯುಟ್ಟು ಮೈತುಂಬಾ ವಿಭೂತಿ ಧರಿಸಿ ಮಂತ್ರ -ಗಾಯನ ಸಹಿತವಾಗಿ(ಕೊನೆಯಲ್ಲಿ ಜ್ಯೋತಿ ಬೆಳಗುತಿದೆ , ವಿಮಲಾ ಪರಂ ಜ್ಯೋತಿ ಬೆಳಗುತಿದೆ ಹಾಡು ಇರಲೇ ಬೇಕು https://www.youtube.com/watch?v=mHUeODjPA70 ಇನ್ನೂ ಉತ್ತಮವಾಗಿ ಹಾಡುತ್ತಿದ್ದರು) ಲಿಂಗ ಪೂಜೆ ಮಾಡುತ್ತಿದ್ದ ದೃಶ್ಯಗಳು ಇಂದು ನನ್ನ ನೆನಪಿನ ವೈಭವವಷ್ಟೇ . ಪೂಜೆಯಾಗುವ ಹೊತ್ತಿಗೆ ಎರಡು ತಟ್ಟೆಯಲ್ಲಿ ನೈವೆದ್ಯ (ಎಡೆ ) ದೇವರ ಕೊಣೆ  ತಲುಪುತ್ತಿತ್ತು . ಹೋಳಿಗೆ , ಕಾಯಿಹಾಲು , ಚಿತ್ರಾನ್ನ , ಪಲ್ಯ ,ಕೋಸಂಬರಿ ,ಅನ್ನ - ಸಾರು, ಸೊಂಡಿಗೆ ,ಹಪ್ಪಳ , ಬಳಕದ ಮೆಣಸಿನಕಾಯಿ ಇತ್ಯಾದಿ ಗಳು ಇರಲೇಬೇಕು . ಒಮ್ಮೊಮ್ಮೆ ಗೋಧಿ ಹುಗ್ಗಿ , ಮಾಲ್ದಿ -ರವೆ ಪಾಯಸ , ಗುಳಿಗೆ - ಗೌಲಿ ಪಾಯಸಗಳೂ ಆಗುತ್ತಿದ್ದವು . ಊಟವಾದ ನಂತರ ತಾಂಬೂಲ ಸೇವನೆ , ಅವರು ತಮ್ಮದೇ ಒಂದು ತಾಂಬೂಲ ಡಬ್ಬಿಯನ್ನಿಟ್ಟಿದ್ದರು , ಅದರಲ್ಲಿ ಇಂದು 'ಪಾನ್-ಬೀಡಾ ' ಮಾಡುವವನು ನಾಚಬೇಕು ಅಷ್ಟೊಂದು ವೈವಿಧ್ಯಮಯ ಪರಿಕರಗಳನ್ನು ಜೋಡಿಸಿಕೊಂಡಿದ್ದರು. 'ಜಫರಾನಿ ಜರ್ದಾ ' ಡಬ್ಬಿ ಅದರಲ್ಲಿ ಒಂದು.   ತಾಂಬೂಲ  ಸೇವನೆಯ  ಸಮಯದಲ್ಲಿ ಅಪ್ಪ ನಡುಮನೆಯಲ್ಲಿ ಕೂತು ಎಲ್ಲರೊಂದಿಗೂ ಹರಟುತ್ತಿದ್ದುದು ಇಂದು ನೆನಪಷ್ಟೇ . ತಮ್ಮ ನೆನಪಿನ ಬುತ್ತಿ ಬಿಚ್ಚಿಡುತ್ತಿದ್ದ ಅವರು ಬಾಲ್ಯದಲ್ಲಿ ಅನುಭವಿಸಿದ ಬಡತನ , ಒಮ್ಮೆ ಯುಗಾದಿಯಂದು ನವಣಕ್ಕಿ ಅನ್ನ ಸೇವನೆಮಾಡಿದ್ದನ್ನು ತಪ್ಪದೆ ನೆನಪಿಸುತ್ತಿದ್ದರು . ಆಹಾರವನ್ನು ಪ್ರಸಾದ ಎಂದು ಹೇಳುವುದಷ್ಟೇಅಲ್ಲದೆ , ಅದನ್ನು ತಮ್ಮ ಕೊರಳಿನಲ್ಲಿದ್ದ ಶಿವಲಿಂಗಕ್ಕೆ ಅರ್ಪಿಸಿ ಕಣ್ಣಿಗೊತ್ತಿಕೊಂಡು ಸೇವಿಸುತ್ತಿದ್ದರು. 
ಪೂಜೆ ಆದನಂತರ ಸರ್ವಾಲಂಕೃತ ಸುಗಂಧ ಭರಿತ  ದೇವರ ಕೋಣೆ ನೋಡುವುದೇ ಕಣ್ಣಿಗೆ ಹಬ್ಬ .  
ಸರ್ಪಭೂಷಣ ಮಠ -ಬಸವರಾಜ ರಾಜಗುರು 
***************************************
ಪ್ರತಿವರ್ಷ ಯುಗಾದಿ ಹಬ್ಬದದಿನ ಸಂಜೆ ಮನೆಮಂದಿಯನ್ನೆಲ್ಲಾ ನಮ್ಮ ತಂದೆಯವರು  ಸರ್ಪಭೂಷಣ ಮಠಕ್ಕೆ (ಮೆಜೆಸ್ಟಿಕ್ ನಲ್ಲಿದೆ) ಕರೆದುಕೊಂಡು ಹೋಗುತ್ತಿದ್ದರು. ಅಂದು ಅಲ್ಲಿ ಪ್ರವಚನದ ಜೊತೆಗೆ ಸಂಗೀತ ಕಾರ್ಯಕ್ರಮವಿರುತ್ತಿತ್ತು (ಈಗಲೂ ಸಹ ಮಲ್ಲಿಕಾರ್ಜುನ ಸ್ವಾಮಿಗಳು ನಡೆಸಿ ಕೊಂಡು ಹೋಗುತ್ತಿದ್ದಾರೆ) . ಬಸವರಾಜ ರಾಜಗುರು ಅವರ ಸಂಗೀತದ ಸವಿಯನ್ನು ಸವಿದದ್ದು ಅಲ್ಲಿಯೇ .
Photocredit:By Anupa4 - Sh. Nachiketa Sharma, CC BY-SA 3.0, https://commons.wikimedia.org/w/index.php?curid=6525022

 ಕರಿಕೋಟು , ಕೆಂಪು ರುಮಾಲು , ತುಟಿ ಕೆಂಪಗಾಗುವಂತೆ  ತಾಂಬೂಲ ಜಗಿದು . ವೇದಿಕೆ ಏರುತ್ತಿದ್ದ ಕಲಾವಿದ ರಸಸಾಗರದಲ್ಲಿ ನಮ್ಮನ್ನು ಮುಳುಗಿಸುತ್ತಿದ್ದರು . ರಾತ್ರಿಯ ಪ್ರಸಾದ ಅಲ್ಲಿಯೇ ಮುಗಿಸಿ ಮನೆಗೆ ಬರುವುದು ಸಂಪ್ರದಾಯ . ಆಗ ಇದ್ದ ಸದಾ ಮಂದಸ್ಮಿತರಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನನ್ನ ಸ್ಮೃತಿಪಟಲದ ಮೇಲೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ(ಅನೇಕ ಬಾರಿ ನಮ್ಮ ಮನೆಗೆ ಅಪ್ಪನ ಆಹ್ವಾನದ ಮೇಲೆ ಶಿವಪೂಜೆಗೆ ಬರುತ್ತಿದ್ದರು ) . ಇಂದಿಗೂ ಒಮ್ಮೊಮ್ಮೆ ಸರ್ಪಭೂಷಣ ಮಠಕ್ಕೆ ಹೋಗಿಬರುತ್ತೇವೆ . ಈ ಬಾರಿ ಆಗಲಿಲ್ಲ . ಆದರೆ ಆ ನೆನಪುಗಳು ಜೀವಂತವಾಗಿವೆ. 

ಬದುಕಿನಲ್ಲಿ ಭೌತಿಕ ಶ್ರೀಮಂತಿಕೆ ಇರದಿದ್ದರೂ(ಆಗ), ನಮ್ಮ ಜೀವನ ಅತ್ಯಂತ ಶ್ರೀಮಂತ ಭಾವನೆಗಳಿಂದ ತುಂಬುವಂತೆ ಬಾಳಿ ಬದುಕಿದ ಅವರಿಂದು ನಿಜಕ್ಕೂ ಆದರ್ಶ ದಂಪತಿಗಳು . ಅಪ್ಪಾಜಿ ಪಂಡಿತನಾಗಿದ್ದರೂ ಕೇವಲ ಎರಡನೇ ತರಗತಿ ಓದಿದ್ದ ನನ್ನ ತಾಯಿಯವರನ್ನು ಪತ್ನಿಯಾಗಿ ಗೌರವದಿಂದ ಬಾಳಿಸಿದ್ದೇ ಅಲ್ಲದೇ , ಆಕೆ ಸತ್ತಾಗ  ಮದುವೆಯಾಗದ ನಾಲ್ವರು ಮಕ್ಕಳಿದ್ದ  ಸಂಸಾರದ ರಥವನ್ನು ಒಬ್ಬನೇ ಎಳೆದರು , ಬದುಕನ್ನು ಎದುರಿಸುವ  ಆದರ್ಶಕ್ಕೆ ಒಂದು ನಿದರ್ಶನವಾಗಿ ನಿಲ್ಲುತ್ತಾರೆ .  
ಅತ್ಯಂತ ಸಂಕ್ಷಿಪವಾಗಿ ಬರೆದ ನೆನಪುಗಳಿವು . ವಿಸ್ತರಿಸಿದರೆ ಹಲವು ಪುಟಗಳೇ ಆದೀತು.  

No comments:

Post a Comment