Sunday, 13 March 2016

ಗುರುತ್ವದ ಅಲೆಗಳು - Gravitational waves

ವಿಜ್ಞಾನಿಗಳು    ' ಕಾಲ - ದೇಶದ ಹರವಿನಲ್ಲಿ' (Space-Time), ಗುರುತ್ವ ಅಲೆಗಳು(Gravitational Waves) ಇರುವಿಕೆಯನ್ನು ಪ್ರಯೋಗಗಳು ಸಾಬೀತು ಪಡಿಸಿರುವ ವಿಷಯವನ್ನು, 11/2/2015 ರಾತ್ರಿ ಕಿಕ್ಕಿರಿದು ತುಂಬಿದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸುವ ಮೂಲಕ   ವಿಶ್ವದ ರಚನೆ ಅಸ್ತಿತ್ವದ  ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆಯನ್ನು ಒದಗಿಸಿದರು  . ಅರ್ಥಾತ್ ಈ ಗುರುತ್ವದ  ಅಲೆಗಳು   ಮೂಲಕ  ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ  ಸಂಭಾಷಿಸಿದೆ.   


 ಐನ್ಸ್ಟೀನ್ ರವರು  1916ನೇ ಇಸವಿಯಲ್ಲಿ ಮಂಡಿಸಿದ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತ , ಕಾಲ -ದೇಶ ಬೇರೆ ಬೇರೆಯಲ್ಲ ಬದಲಿಗೆ ಅವೆರಡೂ ಒಂದರೊಳಗೊಂದು ಹೆಣೆದುಕೊಂಡಿವೆ ಎಂಬ ಸತ್ಯವನ್ನು ನಮ್ಮೆದುರು ತೆರೆದಿಟ್ಟಿತು . ಇದು ಅದುವರೆಗೂ ಅಸ್ತಿತ್ವದಲ್ಲಿದ್ದ  ಕಾಲ-ದೇಶಗಳು ವಿಭಿನ್ನ ಎಂಬ  ಹದಿನೇಳನೆ ಶತಮಾನದಲ್ಲಿ  ಐಸ್ಯಾಕ್ ನ್ಯೂಟನ್  ಮಂಡಿಸಿದ ಸಿದ್ದಾಂತವನ್ನು ಮೇಲ್ದರ್ಜೆಗಗೇರಿಸಿತು . ವಿಶ್ವದ ಬಗೆಗೆ ಹೊಸ ಹೊಳಹುಗಳನ್ನು ನಮಗೆ ನೀಡಿತ್ತು . 1919ರ ಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು  ಆರ್ಥರ್ ಎಡ್ಡಿಂಗ್ಟನ್ ಸಾಬೀತು ಪಡಿಸಿದಾಗ ಐನ್ಸ್ಟೀನ್ ಅವರ ಸಿದ್ಧಾಂತಕ್ಕೆ ಮೊತ್ತಮೊದಲ ಪ್ರಾಯೋಗಿಕ ಪುರಾವೆ ದೊರಕಿತ್ತು .  ಇದಾದ ಸುಮಾರು ಒಂದು ಶತಮಾನದ ನಂತರ ಗುರುತ್ವ ಅಲೆಗಳ ಇರುವಿಕೆಯು  ಸಾಬೀತಾಗಿರುವುದು ಈ ಸಿದ್ದಾಂತಕ್ಕೆ ಸಿಕ್ಕಿರುವ ಎರಡನೇ ಪ್ರಾಯೋಗಿಕ ಪುರಾವೆ . 

The LIGO Scientific collaboration(LSC)    ಹದಿನೈದು ದೇಶಗಳ ಹನ್ನೆರಡಕ್ಕೂ ಹೆಚ್ಚು ಸಂಸ್ಥೆಗಳ ಸಾವಿರಾರು ವಿಜ್ಞಾನಿಗಳ ಒಂದು ಸಮೂಹವಾಗಿದ್ದು 1990ರ ದಶಕದಲ್ಲಿ ರಲ್ಲಿ ಪ್ರಾರಂಭವಾಯಿತು . ಭಾರತವೂ ಈ ಸಮೂಹದಲ್ಲಿ ಭಾಗಿಯಾಗಿದೆ .   ಗುರುತ್ವ ಅಲೆಗಳನ್ನು ಕಂಡು ಹಿಡಿಯುವ   ಭೌತವಿಜ್ಞಾನದ ಬಹು ದೊಡ್ದ  ಮತ್ತು ಸೂಕ್ಷ್ಮ ಪ್ರಯೋಗವನ್ನು  ಪ್ರಯೋಗವನ್ನು ತನ್ನ  Laser Interferometer Gravitational-Wave Observatory (LIGO)ಗಳ ಮೂಲಕ ನಡೆಸುತ್ತಾ ಬಂದಿದೆ.   ಒಂದರಸುತ್ತ ಮತ್ತೊಂದು ಸುತ್ತುವ  ಎರಡು   ಕಪ್ಪುಕುಳಿಗಳು  ಪರಸ್ಪರ ಸಂಯೋಗಗೊಂಡಾಗ ಅವುಗಳು ಸೃಷ್ಟಿಸಿದ ಗುರುತ್ವದ ಅಲೆಗಳು 2015ರ ಸೆಪ್ಟೆಂಬರ್ ಹದಿನಾಲ್ಕರಂದು ಅಮೆರಿಕದ Hanford ನಲ್ಲಿರುವ LIGO ವೇದಶಾಲೆಯಲ್ಲಿ ತಮ್ಮ 'ಸಹಿ ಮೂಡಿಸಿದವು'.  ಈ  ಕಪ್ಪುಕುಳಿಗಳು  ನಮ್ಮಿಂದ 1.3 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ , ಹಾಗಾಗಿ ಈ ಘಟನೆ ನಡೆದು 1.3 ಬಿಲಿಯನ್ ವರ್ಷಗಳಾಗಿವೆ . ಅಂದರೆ ಭೂಮಿಯಮೇಲೆ ಜೀವಿಯ ಉಗಮಕ್ಕೂ ಮುಂಚಿತವಾಗಿ ಜರುಗಿದೆ ! 

ಒಟ್ಟಾರೆಯಾಗಿ ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು , ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪ ನಮಗೆ ನೀಡಿರುವುದಲ್ಲದೆ , ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ .  

ಹೆಚ್ಚಿನ ವಿವರಗಳು :
https://www.theguardian.com/science/across-the-universe/live/2016/feb/11/gravitational-wave-announcement-latest-physics-einstein-ligo-black-holes-live

http://physics.aps.org/articles/v9/17

http://journals.aps.org/prl/abstract/10.1103/PhysRevLett.116.061102

http://journals.aps.org/prl/pdf/10.1103/PhysRevLett.116.061102

Saturday, 23 January 2016

ಶಿಕ್ಷಣ ಕ್ಷೇತ್ರದ ಮೇರು ಸಾಧಕ ಡಾ.ಎಂ . ಷಡಾಕ್ಷರ ಸ್ವಾಮಿ








                            ಡಾ . ಎಂ . ಷಡಾಕ್ಷರ ಸ್ವಾಮಿ 

ಬೆಂಗಳೂರಿನ ಹೃದಯಭಾಗದಲ್ಲಿರುವ ಐತಿಹಾಸಿಕ ಕಟ್ಟಡ 'ಸೆಂಟ್ರಲ್ ಕಾಲೇಜು '.  ನೊಬೆಲ್ ಪ್ರಶಸ್ತಿ ವಿಜೇತ ಸಿ ವಿ ರಾಮನ್ ತಮ್ಮ ಸಂಶೋಧನೆಯನ್ನುಸಾರ್ವಜನಿಕವಾಗಿ ಉದ್ಘೋಷಿಸಿದ್ದು  ಇದೇ ಸೆಂಟ್ರಲ್ ಕಾಲೇಜಿನಲ್ಲಿ . ಭಾರತದ ಹಲವಾರು ಪ್ರತಿಭೆಗಳು ಅರಳಿರುವ ಜಾಗ ಈ ಸೆಂಟ್ರಲ್ ಕಾಲೇಜು .ಈ ಸಂಸ್ಥೆಗೆ 12/10/1917ರಲ್ಲಿ ಜನಿಸಿದ ಷಡಾಕ್ಷರ ಸ್ವಾಮಿ  ಸುಮಾರು ಹದಿನೈದು ವರುಷಗಳಿಗೂ ಹೆಚ್ಚು  ಕಾಲ( 1962 - 1977) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು   12/1/2016 ರಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು . ಅವರಿಗೆ 99 ವರ್ಷ ವಯಸ್ಸಾಗಿತ್ತು . 

ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ  ಎಂಎಸ್ಸಿ ಪದವಿ ಪಡೆದಿದ್ದ ಶ್ರೀಯುತರು , ಏಡಿನ್ಬರೋ (Edinburgh) ವಿಶ್ವವಿದ್ಯಾಲಯದಿಂದ  ಪಿಎಚ್. ಡಿ ಪದವಿ ಪಡೆದಿದ್ದರು . 1962 ರಲ್ಲಿ ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರವಹಿಸಿಕೊಂಡರು . 1964ರಲ್ಲಿ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ಅಂಗವಾಯಿತು . ಉನ್ನತಶಿಕ್ಷಣದ ಸಂಸ್ಥೆಯಾಗಿದ್ದ ಸೆಂಟ್ರಲ್ ಕಾಲೇಜನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಸ್ವಾಮಿಯವರ ಪಾತ್ರ ಅನನ್ಯವಾದದ್ದು . ಆದಾಗ್ಯೂ ಸ್ವಂತಂತ್ರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನ ಅವರ ಕೈತಪ್ಪಿ, ಡಾ ಎಚ್ ನರಸಿಂಹಯ್ಯ ನವರ ಪಾಲಾದದ್ದಕ್ಕೆ ಇವರಿಬ್ಬರೂ ಕಾರಣರಲ್ಲವಾದರೂ , ಅಷ್ಟರ ಮಟ್ಟಿಗೆ ಸ್ವಾಮಿಯವರಿಗಾದ ನಷ್ಟ ಎಂದಷ್ಟೇ ಹೇಳಬಹುದು.  ನರಸಿಂಹಯ್ಯನವರು ಉಪಕುಲಪತಿಗಳಾಗಿದ್ದಾಗ್ಯೂ ಸಹ ವಿಶ್ವವಿದ್ಯಾಲಕ್ಕೆ ಸಂಭಂಧಿಸಿದ ಎಲ್ಲ ಆಡಳಿತಾತ್ಮಕ ವಿಷಯಗಳನ್ನೂ ಸ್ವಾಮಿಯವರೊಂದಿಗೆ ಚರ್ಚಿಸಿದ ನಂತರವೇ ನಿರ್ಧಾರ ಕೈಗೊಳುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ವಾಮಿಯವರ ದೀರ್ಘಕಾಲದ ಒಡನಾಡಿ ಪ್ರೊ . ಜೆ.  ಅರ್ . ವಿಶ್ವನಾಥ್ ಲೇಖಕಿಗೆ  ತಿಳಿಸಿದರು . ಈ ನಡೆ ಈ ಇಬ್ಬರೂ ವ್ಯಕ್ತಿಗಳ ಮಾನಸಿಕ ಪ್ರಭುದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ .ಇವರಿಬ್ಬರೂ ತಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ಸೇವೆಗಾಗಿ ಭಿನ್ನಾಭಿಪ್ರಾಯವನ್ನೂ ಮೀರಿ ಸ್ನೇಹಪರರಾಗಿದ್ದದ್ದನ್ನು ಇವರಿಬ್ಬರೊಂದಿಗೂ ಬಹುಕಾಲ ಕಾರ್ಯನಿರ್ವಹಿಸಿರುವ  ನಾನು  ಕಂಡಿದ್ದೇನೆ .  ಆಡಳಿತದ ನೆಲೆಯಲ್ಲಿ ಮಾದರಿ ಎನಿಸಬಹುದಾದ ಉದಾಹರಣೆ ಇದಾಗಿದ್ದು , ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ . 

ಮೈಸೂರು ಮೂಲದ ಸ್ವಾಮಿಯವರ ಹೆಗ್ಗಳಿಕೆ ಇದ್ದದ್ದು ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ನೀಡಬೇಕೆಂಬ ಅವರ ಕಳಕಳಿ ಮತ್ತು ಬದ್ಧತೆಯಲ್ಲಿ .  ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲ ವೃತ್ತಿಯಿಂದ ವಿಶ್ರಾಂತರಾದ ಮೇಲೆ ಕೆಲವು ವರ್ಷಗಳ  ಕಾಲ ವಿಶ್ರಾಂತ ಜೀವನ ನಡೆಸಿದ ಅವರು, ತಮ್ಮ ಎರಡನೇ ಇನ್ನಿಂಗ್ಸ್ಅನ್ನು 1984ರಲ್ಲಿ  ಏಸ್ . ಜೆ . ಅರ್  ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆರಂಭಿಸಿದರು, ಆಗ ಅವರ ವಯಸ್ಸು ಅರವತ್ತೆಳು ! ಆ ದಿನಗಳಲ್ಲಿ  'ಪುಂಡರ ಕಾಲೇಜು ' ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನ ಆನಂದ ರಾವ್ ವೃತ್ತದ ಏಸ್ . ಜೆ  . ಆರ್ . ಕಾಲೇಜನ್ನು ಅಂದಿನ  ಪ್ರಿನ್ಸಿಪಾಲರಾಗಿದ್ದ ದಿವಂಗತ  ಆರ್  ರಾಚಪ್ಪನವರ ನೇತೃತ್ವದಲ್ಲಿ ಸಂಪೂರ್ಣವಾಗಿ ಪರಿವರ್ತಿಸಿ ಅದನ್ನು ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದರು . ಅನಂತರ ಸಂಸ್ಥೆಯ ಅಡಳಿತ ಮಂಡಳಿಯಲ್ಲಿ ಬಹುಸಂಖೆಯಲ್ಲಿದ್ದ ವ್ಯಾಪಾರಿ ಹಿನ್ನೆಲೆಯ ಸದಸ್ಯರುಗಳು  ಹಾಗೂ ಅಧ್ಯಕ್ಷಸ್ಥಾನದ ಮೇಲಿದ್ದ 'ಪೀಠಸ್ಥರನ್ನು' ನಯವಾಗಿ ಒಲಿಸಿಕೊಂಡು , ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿ, ಖಜಾನೆಯನ್ನು ತುಂಬಿದ್ದು  ಸ್ವಾಮಿಯವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇಪ್ಪತ್ತೆಂಟು ವರುಷಗಳ ಯಶಸ್ವೀ ಆಡಳಿತ ನೀಡಿ  2012ರಲ್ಲಿ ಯಾವುದೇ 'ಸದ್ದುಗದ್ದಲ' ವಿಲ್ಲದೆ, 'ಬಹುಪರಾಕ್'' ಗಳಿಲ್ಲದೆ  ಅಧ್ಯಕ್ಷ ಪೀಠದಿಂದ ನಿರ್ಗಮಿಸಿದರು . 

ಡಾ ಸ್ವಾಮಿ ಹಲವು ವಿಶ್ವ ವಿದ್ಯಾಲಯಗಳ ಸೆನೆಟ್ , ಸಿಂಡಿಕೇಟ್ ಸದಸ್ಯರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ . ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಇವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು  2007ನೇ   ವರ್ಷದಲ್ಲಿ   ಡಾ . ರಾಜಾ ರಾಮಣ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ . 

ಮಹಿಳೆಯರ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸ್ವಾಮಿ , ಮೊದಲಿಗೆ ರಾಜಾಜಿನಗರದಲ್ಲಿ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು , 1989ರಲ್ಲಿ ನಾನು ಆ ಸಂಸ್ಥೆಯನ್ನು ಸೇರಿದಾಗ ಸ್ವಾಮಿಯವರ ದೂರದರ್ಶಿತ್ವ ನನಗೆ ಸ್ಪಷ್ಟವಾಗಿ ತಿಳಿಯಿತು . ಸಂಸ್ಥೆ ಎಂದರೆ ಕೇವಲ ಕಟ್ಟಡವಲ್ಲ , ಬದಲಿಗೆ ಅದರಲ್ಲಿರುವ ಕ್ರಿಯಾಶೀಲ ವ್ಯಕ್ತಿಗಳು ಎಂಬುದನ್ನರಿತಿದ್ದ ಸ್ವಾಮಿ , ಕಾಲೇಜಿಗೆ ಅಧ್ಯಾಪಕರನ್ನು ನೇಮಿಸಿಕೊಳ್ಳುವಲ್ಲಿ ಜಾಹಿರಾತನ್ನು ನೀಡಿದ್ದರಾದರೂ , ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ತಮಗೆ ತಿಳಿದಿದ್ದ ಅಧ್ಯಾಪಕರುಗಳ ಮೂಲಕ ಕಣ್ಣಿಟ್ಟಿದ್ದರು . ಕೆಲವರನ್ನು ಅವರ ಸ್ನಾತಕೋತ್ತರ ಪದವಿ ಫಲಿತಾಂಶ ಬರುವ ಮೊದಲೇ ಭೇಟಿಮಾಡಿ ಸೂಕ್ತರು ಎಂದು ಕಂಡುಬಂದರೆ , ಅವರ ಫಲಿತಾಂಶ ಬರುವವರೆಗೂ ಕಾದು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳುತ್ತಿದ್ದುದು ಇಂದಿನ ಕಾರ್ಪೊರೆಟ್ ನಡೆಯನ್ನೂ ಮೀರಿದ್ದಾಗಿತ್ತು . ಮಹಿಳಾ ಕಾಲೇಜನ್ನಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಶಾಲೆಗಳನ್ನೂಸ್ವಾಮಿಯವರು ಸ್ಥಾಪಿಸಿದರು.  ತಮ್ಮ ಸಂಸ್ಥೆಯಲ್ಲಿ ಉದ್ಭವಿಸುತ್ತಿದ್ದ  ಸಮಸ್ಯೆ- ಭಿನ್ನಾಭಿಪ್ರಾಯಗಳನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸುತ್ತಿದ್ದ ಅವರ ಜಾಣ್ಮೆ ಅವರ ವಿಶೇಷ ಗುಣವೂ ಆಗಿತ್ತು. 

ಪಾರದರ್ಶಕತೆ , ಪ್ರಾಮಾಣಿಕತೆ ,ಶಿಸ್ತು ,ನೇರವಾಗಿ ನಿಷ್ಟುರವಾಗಿ ಹೇಳುವಿಕೆ , ಜಾತಿ - ಕುಲ ಯಾವುದನ್ನೂ ಗಮನಿಸದೆ ನಿಜವಾದ  'ಪ್ರತಿಭೆ'ಗೆ  ಸೂಕ್ತ ಮನ್ನಣೆ ನೀಡುವುದು ಷಡಾಕ್ಷರ ಸ್ವಾಮಿಯವರ ವ್ಯಕ್ತಿತ್ವ ,ಆಡಳಿತದಲ್ಲೂ ಇವುಗಳನ್ನು ಅವರು ಅಳವಡಿಸಿಕೊಂಡಿದ್ದರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ . ಎಂ . ಎಸ್ . ತಿಮ್ಮಪ್ಪ ಲೇಖಕಿಯೊಂದಿಗಿನ ಸಂಭಾಷಣೆಯಲ್ಲಿ ನೆನೆದರು . 

ಒಟ್ಟಾರೆಯಾಗಿ ಒಬ್ಬ ವಿದ್ವಾಂಸ , ಉತ್ತಮ ಆಡಳಿತಗಾರ , ಸಾಮಾಜಿಕ ಕಳಕಳಿಯುಳ್ಳ ,ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕ್ಷೇತ್ರದ ಮೇರು ಸಾಧಕ ಷಡಾಕ್ಷರ ಸ್ವಾಮಿಯವರ ನಿಧನ ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎನ್ನುವ  ಮಾತು ಉಪಚಾರಕ್ಕೆ ಹೇಳುವುದಲ್ಲ  ಬದಲಿಗೆ ಮೌಲ್ಯಯುತವಾದದ್ದು .

Saturday, 14 March 2015

ಎಲ್ಲರನ್ನೂ ಹುರಿದುಂಬಿಸುವುದಷ್ಟೇ ಸಂಯೋಜಕಿಯ ಕೆಲಸ.


ನ್ಯಾಷನಲ್ ಕಾಲೇಜಿನಲ್ಲಿ ಸುಮಾರು ೨೦ ವರ್ಷಗಳ ನಂತರ ಮಾರ್ಚ್ ೬ ಮತ್ತು ೭ನೇ ತಾರೀಖು (೨೦೧೫) ವಿಜ್ಞಾನ ವಸ್ತುಪ್ರದರ್ಶನ ಆಯೋಜನೆಗೊಂಡು ಯಶಸ್ವಿಯಾದದ್ದು ಅತ್ಯಂತ ಸಂತೋಷದ ವಿಚಾರ . ಈ ಯಶಸ್ಸಿಗೆ ಪದವಿ ಕಾಲೇಜು , ಪದವಿ ಪೂರ್ವ ಕಾಲೇಜು , ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ  ಪ್ರಾಂಶುಪಾಲರುಗಳು ,ಅಧ್ಯಾಪಕರು ಮತ್ತು ವಿದ್ಯಾರ್ಥಿ ವೃಂದ ಒಟ್ಟಾಗಿ ದುಡಿದದ್ದು ಕಾರಣ . ವಸ್ತುಪ್ರದರ್ಶನ ಮತ್ತು ಉತ್ಸವ ಒಂದು ನಿಮಿತ್ತ ಮಾತ್ರ ಕಾರಣವಾಗಿ , ಸುಮಾರು ೧೦೦ಕ್ಕೂ ಹೆಚ್ಚು PPT ಗಳು , ೧೦೦ಕ್ಕೂ ಹೆಚ್ಛು ವಿಜ್ಞಾನ ಮಾದರಿಗಳು ೨೦ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಭಿತ್ತಿ ಚಿತ್ರಗಳು ಇತ್ಯಾದಿ ಇತ್ಯಾದಿ ತಯಾರಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡು  ಹಲವಾರು ವಿದ್ಯಾರ್ಥಿಗಳು ಬಹುಮಾನ ಪಡೆದದ್ದು ಸಂತಸದ ವಿಷಯ . ಒಟ್ಟಾರೆಯಾಗಿ ಎರಡು ತಿಂಗಳುಗಳ ಕಾಲೇಜಿನ ವಾತಾವರಣವನ್ನು ವಿಜ್ಞಾನಮಯಗೊಳಿಸಿದ ಸಾರ್ಥಕ ಭಾವ ಸಂಯೋಜಕಿಯಾಗಿ ಕೆಲಸ ಮಾಡಿದ ನನ್ನದಾಗಿದೆ .ನಮ್ಮೊಂದಿಗೆ ಸಹಕರಿಸಿದ ,
ಜವಾಹರ್ಲಾಲ್ ನೆಹರು ತಾರಾಲಯ , ಬೆಂಗಳೂರು ಆಸ್ಟ್ರೋನೊಮಿಕಲ್ ಸೊಸೈಟಿ , ನಿಮ್ಹಾನ್ಸ್ ಸಂಸ್ಥೆಯವರಿಗೂ ಧನ್ಯವಾದಗಳು 
 ಸಂಸ್ಥೆಯ ಆಡಳಿತವರ್ಗ ಮತ್ತು ಇತರೆ ಎಲ್ಲರನ್ನೂ ಸಂಭಾಳಿಸುವುದು ಸುಲಭವಲ್ಲದಿದ್ದರೂ , ಕಾರ್ಯ ಯಶಸ್ವಿಯಾದಾಗ ಸಿಗುವ  ಸಾರ್ಥಕ ಭಾವಕ್ಕೆ ಸಂಭಾವನೆಯಿಂದ ಬೆಲೆಕಟ್ಟಲಾಗದು ಎಂದಷ್ಟೇ ಹೇಳಬಲ್ಲೆ . 












Tuesday, 6 January 2015

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ ಎಂದು ಭಾಷಣ ಮಾಡಿ ಬಹುಮಾನಗಿಟ್ಟಿಸಿದ್ದು .

ಈಗ್ಗೆ ಮೂವತ್ತೆರಡು ವರುಷಗಳ ಹಿಂದೆ 1982ರ ಒಂದು ದಿನ (33) ಅಂತರಶಾಲಾ ಚರ್ಚಾಸ್ಪರ್ದೆ ಏರ್ಪಟ್ಟಾಗ ನಮ್ಮ ಶಾಲೆಯಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆರಿಸಿದ್ದರು (ಹಾಳೂರಿಗೆ ಉಳಿದವ ........)!!!. ಸ್ಪರ್ದೆಗೆ ಒಂದೇ ದಿನ ಬಾಕಿಯಿದ್ದಾಗ, ನಮ್ಮಪ್ಪನಿಗೆ ವಿಷಯ ತಿಳಿಸಿ ಪುಸ್ತಕ ಬೇಕೆಂದು ಕೇಳಿದೆ . ನಾನು ಹೇಳಿದ್ದನ್ನು ಕೇಳಿಸಿಕೊಂಡ ಅವರು ತಮ್ಮ ಲೈಬ್ರರಿಯ ಶೆಲ್ಫಿನ ಕಡೆಗೆ ಕೈ ತೋರಿಸಿ ಅಲ್ಲಿ ಸಣ್ಣ ಪುಸ್ತಕವಿರುವುದಾಗಿ ಹೇಳಿ ಓದಿಕೊಂಡು ಹೋಗುವಂತೆ ಹೇಳಿದರು . ಅಬ್ಬಾ!!!!!!! ಅದೊಂದು ಅದ್ಭುತವಾದ ರೆಫರೆನ್ಸ್ ಆಗಿತ್ತು , ಯಾರುಬರೆದದ್ದೆಂದು ನನಗೀಗ ನೆನಪಿಲ್ಲ , ಆದರೆ ಬೀ ಎಮ್ ಶ್ರೀ ಅವರ "ಮೊದಲ ತಾಯ ಹಾಲ ಕುಡಿದು ......."ಕವನದಿಂದ ಪ್ರಾರಂಭವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪ್ರಾಮುಖ್ಯತೆಯ ಎಲ್ಲ ಮಗ್ಗುಲುಗಳನ್ನು ವಿಶ್ಲೇಷಣೆ ಮಾಡಿತ್ತು . ಅಂದು ನನಗೆ ಅದಾವುದೂ ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿರಲಿಲ್ಲ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ . ಆದರೆ ನನ್ನ ಭಾಷಣ ಕೇಳಿದ ಜಡ್ಜುಗಳು ಬೆಕ್ಕಸ ಬೆರಗಾಗಿ ಬಿಟ್ಟಿದ್ದರು . ನನಗೆ ಪ್ರಥಮ ಬಹುಮಾನಕ್ಕೂ ಮಿಗಿಲಾದ "ವಿಶೇಷ ಬಹುಮಾನವನ್ನು" ಸೃಷ್ಟಿಸಿ ನೀಡಿದ್ದರು . ಇಂದು ಈ ಫೋಟೋ ನನ್ನ ಕೈಗೆ ಸಿಕ್ಕಾಗ ಅಂದು ನನಗಾದ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನ್ನಿಸಿತು . 



Monday, 24 February 2014

Friday, 25 October 2013

ಸಂದರ್ಶನ ಮಾಡುವುದು ಒಂದು ಕುಶಲ ಕಲೆ . - Interviewing is an Art and Craft .


ಹಲವಾರು ದಿನಗಳಿಂದ ಕಾರಣಾಂತರಗಳಿಂದ ವಿಜ್ಞಾನ ಸಂವಹನೆಗಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರು ನೀಡುವ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಮೂವರನ್ನು(ಒಟ್ಟು ಎಂಟು ಜನ ಇದ್ದಾರೆ )  ಸಂದರ್ಶಿಸುವ ಅಫೀಷಿಯಲ್ ಕೆಲಸ ಬಾಕಿ ಉಳಿದುಬಿಟ್ಟಿತ್ತು . ಮೂವರ ಅಪಾಯಿಂಟ್ ಮೆಂಟ್ ಅನ್ನು ಸಿನ್ಕ್ರೋನೈಸ್ ಮಾಡಿ ಒಂದೇ ದಿನದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಒಂದು ಸಾಧನೆಯೇ ಸೈ .
 ಈ ಮೂವರು ಹಿರಿಯರ ಮತ್ತು ಅವರ ಡಾಕ್ಟರುಗಳ ಅಪಾಯಿಂಟ್ಮೆಂಟ್ ಅನ್ನು ಅನುಸರಿಸಿ ನಿನ್ನೆಗೆ ಸಮಯ ಹೊಂದಿಕೆಯಾಯಿತು (25-10-2003).  ಭಟ್ಟರು (AKB) 24-10-2013 ರರ ಸಂಜೆ ಫೋನುಮಾಡಿ ಕಮಲಾ ಶನಿವಾರ  (26-10-2013) ನನಗೆ ಸ್ವಲ್ಪ ತೊಂದರೆಯಿದೆ ಶುಕ್ರವಾರವೇ  ಬಂದುಬಿಡು ಉಳಿದ ಇಬ್ಬರನ್ನು ಒಪ್ಪಿಸುವುದು ನನ್ನ ಕೆಲಸ ಎಂದಾಗ , ನನ್ನ ಕೆಲಸ ಸುಲಭವಾಯಿತು ಎಂದುಕೊಂಡು ಮನೆಕಡೆಗೆ ಎಲ್ಲ ವ್ಯವಸ್ಥೆಮಾಡಿ (ದೋಸೆಹಿಟ್ಟು,ಪಲ್ಯ , ಸಾರು ಇತ್ಯಾದಿ ) ಮೈಸೂರಿನ ಬಸ್ಸು ಹತ್ತಿ ಶುಕ್ರವಾರ  ಅಲ್ಲಿದ್ದೆ.

ರಾಯರು, ಭಟ್ಟರು ಮತ್ತು ಶ್ರೀಮತಿ ಇವರುಗಳು ಬರೆದ ವಿಜ್ಞಾನ ಸಾಹಿತ್ಯ ಓದುತ್ತಾ ಬೆಳೆದಿದ್ದ ನನಗೆ ಇದೊಂದು ಸುವರ್ಣ ಅವಕಾಶವಾಗಿತ್ತು .
ಜೆ ಎಲ್ ಲಕ್ಷ್ಮಣ ರಾವ್
ಕನ್ನಡದಲ್ಲಿ ವಿಜ್ಞಾನ ಸಂವಹನೆ ಯಾವ ಸನ್ನಿವೇಶದಲ್ಲಿ ಪ್ರಾರಂಭವಾಯಿತು ? ಆರಂಭದ ದಿನಗಳ ಕಷ್ಟನಷ್ಟಗಳು ಏನು ? ಕನ್ನಡದಲ್ಲಿ ವಿಜ್ಞಾನ ಪ್ರಸಾರದ   ಸಾಂಸ್ಥಿಕರಣವಾದ ಬಗೆ ಇತ್ಯಾದಿ ಇತ್ಯಾದಿ ಕೇಳುತ್ತಾ ಹೋದಂತೆ ನನಗೆ ಬೇಕು ಬೇಕಾದ ಅನೇಕ ವಸ್ತುನಿಷ್ಠ ವಿಷಯಗಳು ಸ್ಪಷ್ಟವಾಗಿ ಮೂಲ ಪುರುಷರಿಂದ ತಿಳಿಯುತ್ತಾ ಹೋಯಿತು . 
ಆದರೆ ಸಂದರ್ಶನ ಮಾಡುವಾಗ ಎಚ್ಚರಿಕೆಯಿಂದ ಚರ್ಚೆಯನ್ನು ಟ್ರಾಕ್ ಮೇಲೆ ಇಡದಿದ್ದರೆ ಸಂದರ್ಶಿಸುವವರಿಗೆ  ಅಷ್ಟರಮಟ್ಟಿಗೆ ಲಾಸ್ ಎಂದೇ ಹೇಳಬಹುದು . ನನ್ನ ಉಪನ್ಯಾಸಕ ವೃತ್ತಿ , ನಿರೂಪಕಿಯ ಪ್ರವೃತ್ತಿ , ಬರವಣಿಗೆಯ ಒಳತುಡಿತ ಇವೆಲ್ಲವೂ ಸೇರಿ ನಾನು ನಡೆಸಿದ ಮೊಟ್ಟ ಮೊದಲ "ಸರಣಿ ಸಂದರ್ಶನ"ದಲ್ಲಿ ಪರವಾಗಿಲ್ಲ ಎನಿಸಬಹುದಾಷ್ಟು ವಿಷಯ ಸಂಗ್ರಹಣೆ  ಮತ್ತು ತೃಪ್ತಿ ಪಡೆದಿದ್ದೇನೆ . 
ಶ್ರೀಮತಿ ಹರಿಪ್ರಸಾದ್


ಅಡ್ಯನಡ್ಕ ಕೃಷ್ಣಭಟ್
ಇನ್ನು ಈ ಮೂವರ ವಿಷಯದಲ್ಲೂ ಸಮಾನವಾಗಿ ಕಂಡ ಅಂಶವೆಂದರೆ ಜೀವನದಲ್ಲಿ ತಮಗೆದುರಾದ ಅನೇಕ ವೈಯುಕ್ತಿಕ ಏರುಪೇರುಗಳ ನಡುವೆಯೂ, ಕನ್ನಡದ ಕಂದಮ್ಮಗಳಿಗೆ , ಕನ್ನಡಿಗರಿಗೆ ವಿಜ್ಞಾನ ಸಾಹಿತ್ಯವನ್ನು ಒದಗಿಸಬೇಕೆಂಬ ಇವರುಗಳ ಕಳಕಳಿ ಮತ್ತು ಬದ್ದತೆ ಅನನ್ಯವಾದದ್ದು . ಇಂತಹ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ನಿಜವಾದರೂ , ಅವರು ಇದನ್ನೆಂದೂ ಕನಸಿನಲ್ಲಿಯೂ ಬಯಸಿ ಕೆಲಸ ಮಾಡಿದವರಲ್ಲ ಎಂಬುದೂ ಸಹ ಅಷ್ಟೇ ನಿಜವಾದುದು . 
ಹಲವುಬಾರಿ ಕ್ಯಾಮೆರಾ ಮುಂದೆ ಸ್ಟೈಲ್ ಆಗಿ ಕುಳಿತು ಸಂದರ್ಶನ ನೀಡಿದ್ದ ನನಗೆ ,ಕೊನೆಗೆ ಅನ್ನಿಸಿದ್ದು ಸಂದರ್ಶಿಸುವುದು ಒಂದು ಕುಶಲಕಲೆ ಎಂದು .

Sunday, 1 September 2013

ಶಿಕ್ಷಕರ ದಿನಾಚರಣೆಯಂದು ನಿಮಗಿದೋ ನಮಸ್ಕಾರ ಮೇಷ್ಟ್ರೇ ........


ಪಾಠ ಹೇಳಿಕೊಟ್ಟ ಗುರುಗಳನ್ನು ನೆನೆಯಲು ಪ್ರತಿದಿನವೂ ಶಿಕ್ಷಕರ ದಿನಾಚರಣೆಯೇ ಎಂದರೆ ಅತಿಶಯೋಕ್ತಿಯೇನಿಲ್ಲ ಬಿಡಿ .  ಆದರೆ ಸೆಪ್ಟೆಂಬರ್   ಐದರಂದು   ಅದಕ್ಕಾಗೆ ಮೀಸಲಿರುವುದರಿಂದ ಎಂದೋ ಬರೆಯಬೇಕಾಗಿದ್ದ ಈ ವಿಷಯವನ್ನು ಇಂದು ಬರೆಯುತ್ತಿದ್ದೇನೆ ಅಷ್ಟೇ .
ನಮ್ಮ ಕಲಿಕೆಯ ವಿವಿದ ಹಂತಗಳಲ್ಲಿ ಹಲವಾರು ಗುರುಗಳು ನಮಗೆ ನೆರವಾಗಿರುತ್ತಾರೆ ಅವರೆಲ್ಲರಿಗೂ ಮೊದಲಿಗೆ ಕೃತಜ್ಞತೆಗಳನ್ನು ಅರ್ಪಿಸಿಬಿಡುತ್ತೇನೆ . ಅನಂತರ ಇಬ್ಬರು ವಿಶೇಷವಾದ ಗುರುಗಳಬಗ್ಗೆ ನಿಮಗೆ ತಿಳಿಸುತ್ತೇನೆ .
ಡಾ . ಸಿ.  ಅರ್.   ರಾಮಸ್ವಾಮಿ  ಮತ್ತು ಡಾ .  ಎಂ.  ಜಿ.   ನರಸಿಂಹನ್ ಅವರೇ ಈ ಇಬ್ಬರು ಗುರುಗಳು . 

PhD ಮಹಾಪ್ರಬಂದವನ್ನು ಸಮರ್ಥಿಸಿಕೊಂಡ ದಿನ (2000,ಸೆಪ್ಟೆಂಬರ್ ), ನನ್ನ ಕುಟುಂಬ, ಗುರುಗಳಾದ  ರಾಮಸ್ವಾಮಿ ಮತ್ತು ನರಸಿಂಹನ್ ಅವರೊಂದಿಗೆ ,ಹಂಪಿ ವಿ ವಿ ಯಲ್ಲಿ . ಅಪ್ಪನ ಹೆಗಲಲ್ಲಿರುವ ಪಲ್ಲವಿ ನಾಲ್ಕು ತಿಂಗಳ ಮಗು .

ರಾಮಸ್ವಾಮಿ ಬೆಂಗಳೂರು ವಿಶ್ವವಿದ್ಯಾಲದಲ್ಲಿ ನ್ಯೂಕ್ಲಿಯಾರ್ ಪಿಸಿಕ್ಸ್ ನ ಪ್ರೊಫೆಸರ್ ಆಗಿದ್ದರೆ  ನರಸಿಂಹನ್ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವವರು . 

1996 ರ ಒಂದುದಿನ .
**********************
1996 ರ ಒಂದು ದಿನ ಕೈಯ್ಯಲ್ಲಿ ಅರ್ಜಿಯೊಂದನ್ನು ಹಿಡಿದ ನಾನು ಬೆಂಗಳೂರು ವಿಶ್ವವಿದ್ಯಾಲಯದ ರಾಮಸ್ವಾಮಿಯವರ ಕೊಠಡಿಗೆ ತೆರಳಿ "ಮೇಷ್ಟ್ರೇ ಇದಕ್ಕೆ ಸೈನು ಮಾಡಿ" ಎಂದೆ . ಅವಕ್ಕಾದ ಮೇಷ್ಟ್ರು "ಏನದು "ಎಂದರು "PhD ಗೆ ಅಪ್ಲೈ ಮಾಡಲು ಅರ್ಜಿ" ಎಂದೆ ." ಯಾವ ವಿಷಯ ,ಯಾವ ವಿಶ್ವವಿದ್ಯಾಲಯ ,ಏನುಕತೆ" ಎಂದು ವಿಚಾರಿಸಿದರು .
"ಹಂಪಿ ಕನ್ನಡ ವಿಶ್ವವಿದ್ಯಾಲಯ , ಭೌತಶಾಸ್ತ್ರ ಮತ್ತು ಇತಿಹಾಸ ಸಮ್ಮಿಲನಗೊಂಡ ವಿಷಯ" ಎಂದೆ . "ನನಗಿದು ಹೊಸದು ಅಷ್ಟಾಗಿ ತಿಳಿಯದು" ಎಂದು ಪ್ರಾಂಜಲ ಮನಸ್ಸಿನಿಂದ ಹೇಳಿದರು . ಆಗ ನಾನು "ಮೇಷ್ಟ್ರೇ ನನಗೂ ಅಷ್ಟಾಗಿ ತಿಳಿಯದು ಅಧ್ಯಯನ ಮಾಡುತ್ತಾ ಸಾಗೋಣ , ಮುಂದಿನದನ್ನು ನೋಡೋಣ" ಎಂದೆ . "ಅಕಸ್ಮಾತ್ ನಿನ್ನ ಕೆಲಸಕ್ಕೆ PhD ಬರದಿದ್ದರೆ" ಎಂದರು ," ಪರವಾಗಿಲ್ಲ"  ಎಂಬ ಉತ್ತರ ಕೊಟ್ಟ ಮೇಲೆ ಅರ್ಜಿಗೆ ಸಹಿ ಮಾಡಿದರು . ವಿಶ್ವವಿದ್ಯಾಲಯಕ್ಕೆ ಅಪ್ಲೈ ಮಾಡಿ ನನ್ನ ಹೆಸರನ್ನು ನೊಂದಾಯಿಸಿ ಕೊಂಡೆ ( ಈ ರಾಮಾಯಣಕ್ಕೆ ಮುಂಚೆ ಪ್ರವೇಶ ಪರೀಕ್ಷೆ ಬರೆದು ಪಾಸು ಮಾಡಿದ್ದೆ ). 


ಹಿನ್ನಲೆ
***********
ನಾನು MSc ಪಾಸು (ಫಸ್ಟ್ ಕ್ಲಾಸು )ಮಾಡಿದ ತರುವಾಯದಲ್ಲಿ ಆಗಾಗ ಸಿಕ್ಕಾಗಲೆಲ್ಲ ರಾಮಸ್ವಾಮಿ ಮೇಷ್ಟ್ರು "ಕಮಲಾ ನೀನು ಇನ್ನೂ ಏಕೆ PhD ಮಾಡಿಲ್ಲ ಬೇಗನೆ ಮಾಡು" ಎಂದು ಹೇಳುತ್ತಿದ್ದರು . ಆಗೆಲ್ಲಾ ನಾನು "ಮೇಷ್ಟ್ರೇ ನೀವು ಗೈಡ್ ಮಾಡುವುದಾದರೆ ನಾನು ಮಾಡುತ್ತೇನೆ" ಎನ್ನುತ್ತಿದ್ದೆ . ಆದರೆ ಮದುವೆ ಮಕ್ಕಳು ಸಂ-ಸಾರ ಎಂದೆಲ್ಲಾ ಸಿಕ್ಕಿಹಾಕಿಕೊಂಡಮೇಲೆ (ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಮಾಡುವ ತಪ್ಪು /ಸರಿ ?)  ಅಧ್ಯಯನಕ್ಕೆ ಪುರುಸೊತ್ತೇ ಸಿಕ್ಕಿರಲಿಲ್ಲ . ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅಧ್ಯಯನದ ಬಗ್ಗೆ ತೀವ್ರ ಆಸಕ್ತಿ ವಹಿಸಿ ನನ್ನ ಫೀಲ್ಡ್ಅನ್ನು ಗುರುತಿಸಿಕೊಂಡು ಅದಕ್ಕೆ ಸ್ಪಂದಿಸಿದ ವಿಶ್ವವಿದ್ಯಾಲಯವನ್ನು ಹುಡುಕಿ ಪ್ರವೇಶ ಪರೀಕ್ಷೆ ಬರೆದು ಪಾಸುಮಾಡಿ ಓದಲು ತಯಾರಾಗಿ ನಿಂತುಬಿಟ್ಟೆ . ಆಗಲೇ ನಾನು ಅರ್ಜಿ ಹಿಡಿದು ಮೇಷ್ಟ್ರ ಬಳಿ ಓಡಿದ್ದು . ನನ್ನ ಹುಂಬತನ ಹುಚ್ಚು ಯಾವುದನ್ನೂ ಪರಿಗಣಿಸದೆ ಈಕೆ ಮಾಡಬಲ್ಲಳು ಎಂಬ ನಂಬುಗೆಯಿಂದ ಒಮ್ಮೆಗೇ ಅರ್ಜಿಗೆ ಸಹಿ ಹಾಕಿದರಲ್ಲ ಅದು ರಾಮಸ್ವಾಮಿ ಮೇಷ್ಟ್ರ ದೊಡ್ಡತನ . 


ಮುನ್ನಲೆ
***********
ಅರ್ಜಿ ಹಾಕಿದರೆ ಮುಗಿಯಿತೇ ? ಇಲ್ಲ ಅದು ಪ್ರಾರಂಭವಷ್ಟೇ .
ಒಂದೆರಡು ಬಾರಿ ನಾನು ಮತ್ತು ರಾಮಸ್ವಾಮಿ ಮೇಷ್ಟ್ರು ಭೇಟಿಯಾಗಿ  ವಿಷಯವನ್ನು ಚರ್ಚಿಸತೊಡಗಿದೆವು .
ಕೊನೆಗೆ ವಸಾಹತುಶಾಹಿ ಸನ್ನಿವೇಶದ ವಿಜ್ಞಾನ ಅದರಲ್ಲೂ ವಿಶೇಷವಾಗಿ ಭೌತಶಾಸ್ತ್ರದ ಬೆಳವಣಿಗೆಯ ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು . ಆಗ ಮೇಷ್ಟ್ರು ವೃತ್ತಿನಿರತ ವಿಜ್ಞಾನ ಇತಿಹಾಸಕಾರ ಮತ್ತು ತತ್ವಶಾಸ್ತ್ರಜ್ಞರೊಬ್ಬರು ಜೊತೆಗಿದ್ದರೆ ಒಳ್ಳೆಯದು ಎಂದರು . ನನಗೂ ಸರಿ ಎನ್ನಿಸಿತು . ಆಗ ದುರ್ಬೀನು ಹಾಕಿಕೊಂಡು ಇವರನ್ನು ಹುಡುಕಲು ಶುರುಮಾಡಿದೆ . 


1997 ರ ಒಂದುದಿನ
********************

ಬಸವನಗುಡಿಯ ಬಿ ಪಿ ವಾಡಿಯ ರಸ್ತೆಯಲ್ಲಿರುವ Indian Institute Of World Culture ನಲ್ಲಿ Great Experiments In Science ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಜನ ಉತ್ತಮೋತ್ತಮ ವಿಜ್ಞಾನಿಗಳು ಭಾಷಣ ಮಾಡಿದರು . ಆ ದಿನದ ಒಂದು ಭಾಷಣ "ಕ್ವಾಂಟಮ್ ಭೌತಶಾಸ್ತ್ರ" ದ ಬೆಳವಣಿಗೆಯ  ಬಗೆಗೆ ವಿಶ್ಲೇಷಣಾತ್ಮಕವಾದ ಭಾಷಣವಾಗಿತ್ತು . ಅದನ್ನು ಕೇಳಿದ ಕೂಡಲೇ ನಾನು ಹುಡುಕುತ್ತಿರುವ ಗುರು ಈ ಭಾಷಣಕರ್ತ ಎಂಬುದು ಸ್ಪಷ್ಟವಾಗಿ ಹೋಯಿತು . ಕಾರ್ಯಕ್ರಮ ಮುಗಿಯುವವರೆಗೂ ಕಾದಿದ್ದ ನಾನು , ಮುಗಿದ ಕೂಡಲೇ ಅವರ ಬಳಿ ತೆರಳಿ ನನ್ನ ಪ್ರವರ ಹೇಳಿಕೊಂಡೆ . ನನ್ನ ಸಂಶೋಧನಾ ಅಭಿಯಾನಕ್ಕೆ ತಾವೂ ಸಹ ಮಾರ್ಗದರ್ಶಕರಾಗಬೇಕು ಎಂದು ವಿನಂತಿಸಿದೆ . ಹೆಚ್ಚಿನದೇನನ್ನೂ ಕೇಳದೆ ನಿಂತನೆಲದಲ್ಲೇ ಆಯಿತು ಮಾರ್ಗದರ್ಶನ ಮಾಡುತ್ತೇನೆ ಎಂದುಬಿಟ್ಟರು ಡಾ ಎಂ ಜಿ  ನರಸಿಂಹನ್ . ನನಗೆ ಬೇಕಾದ ಗುರು ಯಾವ ವಶೀಲಿ ಬಾಜಿ ಇಲ್ಲದೆ ಗುರುತು ಪರಿಚಯವೂ ಇಲ್ಲದೆ ಸಿಕ್ಕಿಬಿಟ್ಟಿದ್ದರು .
"ಆದರೆ" ಎಂದರು ನರಸಿಂಹನ್  , "ಏನು ಮೇಷ್ಟ್ರೇ", ಎಂದೆ  "ನಾನು Junior college ನಲ್ಲಿ ಪಾಠ ಮಾಡುತ್ತಿರುವ ಮೇಷ್ಟ್ರು ನೀವು Degree College ನಲ್ಲಿ ಪಾಠ ಮಾಡುತ್ತಿದ್ದೀರಿ ಪರವಾಗಿಲ್ಲವೋ" ಎಂದರು . "ನಿಮ್ಮಲ್ಲಿ ವಿದ್ವತ್ತು ಇದೆ ನನಗೆ ಕಲಿಯುವ ಆಸಕ್ತಿಯಿದೆ ಅಲ್ಲಿಗೆ ಮುಗಿಯಿತು" ಎಂದೆ . "ವಿಶ್ವವಿದ್ಯಾಲಯದವರು ಒಪ್ಪುತ್ತಾರೊ ?" ಎಂದರು "ಅದು ನನಗಿರಲಿ" ಎಂದು ಹೇಳಿ ಮನೆಗೆ ಬಂದೆ .  ಇದಾದ ಕೆಲವೇ ದಿನಗಳಲ್ಲಿ ನರಸಿಂಹನ್ National Institute Of Advance Studies ಇಲ್ಲಿಗೆ ನಿಯೋಜನೆಗೊಂಡರು . ಅಲ್ಲಿಂದಾಚೆಗೆ ಎಲ್ಲ ಸಂಕಷ್ಟಗಳೂ ಪರಿಹಾರವಾದವು . 

1997 ರಿಂದ  PhD ಪದವಿಯವರೆಗೆ
************************
ಇಬ್ಬರೂ ಗುರುಗಳು ಸಿಕ್ಕಿದ ಮೇಲೆ ಸಾಕಷ್ಟು ವಿಸ್ತೃತವಾದ ಚರ್ಚೆ ಆದನಂತರ "ಪ್ರಬಂದದ ಸಾರಾಂಶ" ವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಯಿತು . ವಿ ವಿ ಯವರು ನಡೆಸುವ ಸಂಶೋಧನಾ ಕಮ್ಮಟಗಳಲ್ಲಿ ಭಾಗವಹಿಸಿ ಸಣ್ಣ ಪುಟ್ಟ ಪ್ರಭಂದಗಳನ್ನು ಮಂಡಿಸಿ ಆಸ್ತಿತ್ವ ಸ್ಥಾಪಿಸಿದ್ದಾಯಿತು . ನಿದ್ದೆ ಎಂಬುದು ಕನಸಿನ ಗಂಟಾಗಿ ಹೋಗಿತ್ತು . ಒಂದೆಡೆ ಮನೆ ಕೆಲಸ ,ಮತ್ತೊಂದೆಡೆ ಕಾಲೇಜು ಕೆಲಸ ಇದರ ಜೊತೆಗೆ U  K G ಓದುತ್ತಿದ್ದ ನನ್ನ ಪುಟ್ಟ ಕೂಸು ನಿರಂಜನ ಇವೆಲ್ಲದರ ಜೊತೆಗೆ PhD ಅಧ್ಯಯನ ಸಾಗಿತ್ತು . ಹೀಗಿರಲಾಗಿ ಒಂದು ದಿನ ನಾನು  NIAS ಗೆ ತೆರಳಿದ್ದಾಗ ನನ್ನ ಪರಿಪಾಟಲು ಕಂಡು ಮೇಷ್ಟ್ರಿಗೆ ಏನನ್ನಿಸಿತೋ ಏನೋ "ಕಮಲಾ  ಇನ್ನು ಮುಂದೆ ನೀನಿರುವಲ್ಲಿಗೆ ಬಂದು ನಾನು ಪಾಠ ಹೇಳುತ್ತೇನೆ , ನೀನು ಇಷ್ಟೊಂದು ಕಷ್ಟ ಪಡುವುದು ಬೇಡ " ಎಂದು ಬಿಟ್ಟರು . ಒಂದು ಕ್ಷಣ ನನಗೆ ಮಾತು ಹೊರಡದಾಯಿತಾದರೂ , " ಮೇಷ್ಟ್ರೇ ನಿಮಗೇಕೆ ಕಷ್ಟ ಇದು ನನ್ನ ಕೆಲಸ  ನನಗೆ ಯಾವ ತೊಂದರೆಯೂ ಇಲ್ಲ ನಾನೇ ಬಂದು ಪಾಠ ಹೇಳಿಸಿಕೊಳ್ಳುತ್ತೇನೆ " ಎಂದೆ .
ಅದಕ್ಕೆ ಮೇಷ್ಟ್ರು " ಅದು ಹಾಗಲ್ಲ ಕಮಲಾ ಅವರೇ , PhD ಅಧ್ಯಯನ ಎಂಬುದು ಒಂದು ಸೃಜನಶೀಲ ಚಟುವಟಿಕೆ , ಇದಕ್ಕೆ ಮನಸ್ಸು ಆರಾಮವಾಗಿರಬೇಕು , ಓಡಾಡಿಕೊಂಡು ಹೆಚ್ಚು ಸಮಯವನ್ನು ವ್ಯಯಮಾಡಿ ಮಾಡತಕ್ಕದ್ದಲ್ಲ, ನಿಮ್ಮ ಸಮಯವನ್ನು ಅಧ್ಯಯನಕ್ಕೆ ವಿನಿಯೋಗಿಸಿ" ಎಂದು ಖಂಡಿತವಾಗಿ ಹೇಳಿಬಿಟ್ಟರು . ಇದಾದ ನಂತರ ಮುಂದೆ ಪದವಿ ಪಡೆಯುವ ವರೆಗೂ, ಅನಂತರವೂ, ಇಬ್ಬರೂ ಗುರುಗಳು ನಾನು ಓದುವಂತೆ ನೋಡಿಕೊಂಡರು . 

               ಪದವಿ ಪ್ರಧಾನ ಸಮಾರಂಭದ ದಿನ (2000,ಡಿಸೆಂಬರ್ ),ಪಲ್ಲವಿ ಏಳು ತಿಂಗಳ ಮಗು . 

PhD ಎಂಬುದು ಕೆಲವರಿಗೆ ದುಃಸ್ವಪ್ನ ದಂತೆ ಕಾಡಿ ಅಧ್ಯಯನ ಮುಗಿದ ಮೇಲೆ ಇನ್ನೆಂದಿಗೂ ಆ ದಿಕ್ಕಿನಲ್ಲಿ ತಲೆಹಾಕಿ ಮಲಗುವುದಿಲ್ಲ ಎಂಬ ಶಪಥವನ್ನು ಮಾಡಿಸಿಬಿಡುತ್ತದೆ . ಆದರೆ ಈ ಇಬ್ಬರೂ ಗುರುಗಳು ಅದಕ್ಕೆ ವಿರುದ್ದವಾಗಿ PhD ಅಧ್ಯಯನ ಮಾಡುವುದು ದೊಡ್ಡದಲ್ಲ , ಅನಂತರ ಅದರ ಪ್ರಯೋಜನ ಸಮಾಜಕ್ಕೆ ದಕ್ಕಬೇಕು ಎಂಬ ಉದಾತ್ತ ಆಶಯದೊಂದಿಗೆ ಶಿಷ್ಯರ ಮನಸ್ಸನ್ನು ಕಾದು ಅವರನ್ನು ಸಮಾಜಮುಖಿಯಾಗಿ ಆಲೋಚನೆ ಮಾಡುವಂತೆ ಮಾಡಿದ್ದಾರೆ . ಇದಕ್ಕಾಗಿ ಇವರಿಬ್ಬರೂ ಅಭಿನಂದನಾರ್ಹರು .
ನಿಮ್ಮಂತಹ ಗುರುಗಳ ಸಂತತಿ ಹೆಚ್ಚಾಗಲಿ ಎಂದು ಆಶಿಸುತ್ತಾ , ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ನಿಮಗೆ ಮತ್ತೊಮ್ಮೆ ನಮಸ್ಕರಿಸುತ್ತಾ ಈ ಲೇಖನ ಮುಗಿಸಲು ಇಚ್ಚಿಸುತ್ತೇನೆ .

Comments to this article can be sent at my email:yckamala@gmail.com